varthabharthi


ರಾಷ್ಟ್ರೀಯ

​20 ರಾಜ್ಯಗಳಲ್ಲಿ ಹೊಸ ಕೊರೋನ ಸೋಂಕು ಪ್ರಕರಣ

ವಾರ್ತಾ ಭಾರತಿ : 26 Mar, 2020

ಹೊಸದಿಲ್ಲಿ : ಗೋವಾದಲ್ಲಿ ಮೂರು ಹಾಗೂ ಮಣಿಪುರ ಮತ್ತು ಮಿಜೋರಾಂಗಳಲ್ಲಿ ತಲಾ ಒಂದು ಕೊರೋನ ವೈರಸ್ ಸೋಂಕು ಪ್ರಕರಣಗಳು ಬೆಳಕಿಗೆ ಬಂದಿವೆ.

ಬುಧವಾರ ದೇಶದ 20 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಂದೇ ದಿನ 94 ಹೊಸ ಸೋಂಕು ಪ್ರಕರಣ ದೃಢಪಟ್ಟಿದೆ. ಭಾರತಕ್ಕೆ ಕೊರೋನ ಸೋಂಕು ವ್ಯಾಪಿಸಿದ ಬಳಿಕ ಸೋಮವಾರ (99) ಹೊರತುಪಡಿಸಿದರೆ ಗರಿಷ್ಠ ಸಂಖ್ಯೆಯ ಪ್ರಕರಣ ಬುಧವಾರ ದಾಖಲಾದಂತಾಗಿದೆ.

ಅಹ್ಮದಾಬಾದ್‌ನಲ್ಲಿ 85 ವರ್ಷದ ವೃದ್ಧೆ ಹಾಗೂ ತಮಿಳುನಾಡಿನಲ್ಲಿ ಒಬ್ಬ ವ್ಯಕ್ತಿ ಬುಧವಾರ ಬಲಿಯಾಗುವ ಮೂಲಕ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 13ಕ್ಕೇರಿದೆ. ಹೊಸದಿಲ್ಲಿಯಲ್ಲಿ ಮಂಗಳವಾರ ಸಂಭವಿಸಿದ ಸಾವು ಕೋವಿಡ್-19 ಪ್ರಕರಣ ಅಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.

ದೇಶದಲ್ಲಿ ಒಟ್ಟು 656 ಕೊರೋನ ಪ್ರಕರಣಗಳು ವರದಿಯಾಗಿದ್ದು, ಕಳೆದ ಐದು ದಿನಗಳಲ್ಲಿ ತಲಾ ಕನಿಷ್ಠ 60 ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದುವರೆಗೆ 56 ರೋಗಿಗಳು ಗುಣಮುಖರಾಗಿದ್ದು, ಬುಧವಾರ ಎಂಟು ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಆರೋಗ್ಯ ಸಚಿವಾಲಯ ಇದುವರೆಗೆ 606 ಪ್ರಕರಣಗಳನ್ನು ಮತ್ತು 10 ಸಾವು ದೃಢಪಡಿಸಿದೆ. ಗೋವಾದಲ್ಲಿ 25, 29 ಮತ್ತು 55 ವರ್ಷದ ವ್ಯಕ್ತಿಗಳಿಗೆ ಸೋಂಕು ಪತ್ತೆಯಾಗಿದೆ. ಇವರು ಇತ್ತೀಚೆಗೆ ಸ್ಪೇನ್, ಆಸ್ಟ್ರೇಲಿಯಾ ಹಾಗೂ ಅಮೆರಿಕದಿಂದ ವಾಪಸ್ಸಾದವರು.

ಮಹಾರಾಷ್ಟ್ರದಲ್ಲಿ ಬುಧವಾರ 15 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಗರಿಷ್ಠ ಸಂಖ್ಯೆಯ (122) ಪ್ರಕರಣಗಳು ಈ ರಾಜ್ಯದಲ್ಲೇ ವರದಿಯಾದಂತಾಗಿದೆ. ಕೇರಳದಲ್ಲಿ 118, ಕರ್ನಾಟಕದಲ್ಲಿ 51, ತೆಲಂಗಾಣ-41, ಉತ್ತರ ಪ್ರದೇಶ, ಗುಜರಾತ್ ಹಾಗೂ ರಾಜಸ್ಥಾನ (ತಲಾ 38) ಪಟ್ಟಿಯಲ್ಲಿ ನಂತರದ ಸ್ಥಾನಗಳಲ್ಲಿವೆ. ಹಿಂದಿನ ಎರಡು ದಿನಗಳಲ್ಲಿ ಯಾವುದೇ ಹೊಸ ಪ್ರಕರಣ ವರದಿಯಾಗಿರದ ದೆಹಲಿಯಲ್ಲಿ ಬುಧವಾರ ಐದು ಹೊಸ ಪ್ರಕರಣಗಳು ದೃಢಪಟ್ಟಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 35ಕ್ಕೇರಿದೆ.

ಈ ಮಧ್ಯೆ ಮಣಿಪುರದಲ್ಲಿ ಮೊದಲ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ನೆದರ್‌ಲ್ಯಾಂಡ್ಸ್‌ನಿಂದ ಮಾರ್ಚ್ 16ರಂದು ವಾಪಸ್ಸಾಗಿರುವ 50 ವರ್ಷದ ಪಾದ್ರಿಗೆ ಸೋಂಕು ತಗುಲಿದೆ. ಮಿಜೋರಾಂ ಬ್ಯಾಪ್ಟಿಸ್ಟ್ ಚರ್ಚ್‌ನ ಧರ್ಮಗುರುವಾಗಿರುವ ಇವರ ಪತ್ನಿ ಹಾಗೂ ಮಕ್ಕಳನ್ನು ಕೂಡಾ ಜೋರಾಂ ಮೆಡಿಕಲ್ ಕಾಲೇಜಿನ ಐಸೊಲೇಶನ್ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)