varthabharthi


ರಾಷ್ಟ್ರೀಯ

1.7 ಲಕ್ಷ ಕೋ.ರೂ. ಪರಿಹಾರ ಪ್ಯಾಕೇಜ್ ಘೋಷಿಸಿದ ಕೇಂದ್ರ ಸರಕಾರ

ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಿಲಿಂಡರ್, 80 ಕೋಟಿ ಜನರಿಗೆ 5 ಕೆಜಿ ಅಕ್ಕಿ, ಗೋಧಿ

ವಾರ್ತಾ ಭಾರತಿ : 26 Mar, 2020

► ಮೂರು ತಿಂಗಳವರೆಗೆ ಬಡವರಿಗೆ ಹೆಚ್ಚುವರಿಯಾಗಿ ತಲಾ 5 ಕೆ.ಜಿ ಗೋಧಿ ಅಥವಾ ಅಕ್ಕಿ

► ವೈದ್ಯರು,ಶುಶ್ರೂಷಕಿಯರು, ಆರೋಗ್ಯ ವಲಯದ ಸಿಬ್ಹಂದಿಗೆ 50 ಲಕ್ಷ ರೂ. ವೈದ್ಯಕೀಯ ವಿಮೆ

► ಜನಧನ ಖಾತೆಗಳಿಗೆ 3 ತಿಂಗಳವರೆಗೆ ತಲಾ 500 ರೂ. ಹೆಚ್ಚುವರಿ ಪಾವತಿ

► 8.3 ಕೋಟಿ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ವಿತರಣೆ ಹೊಸದಿಲ್ಲಿ 

ಮಾ.26: ಶರವೇಗದಿಂದ ಹರಡುತ್ತಿರುವ ಕೊರೊನಾ ವೈರಸ್ ಹಾವಳಿಯನ್ನು ತಡೆಯಲು ದೇಶಾದ್ಯಂತ ಘೋಷಿಸಲಾಗಿರುವ ಲಾಕ್‌ಡೌನ್ ನಿಂದಾಗಿ ಸಂಕಷ್ಟಕ್ಕೀಡಾಗಿರುವ ದುರ್ಬಲ ವರ್ಗಗಳ ನೆರವಿಗೆ ಧಾವಿಸಿರುವ ಕೇಂದ್ರ ಸರಕಾರವು ಬುಧವಾರ 1.7 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿದೆ. ಹೊಸದಿಲ್ಲಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ‘ಗರೀಬ್ ಕಲ್ಯಾಣ್ ಯೋಜನಾ’ ಪ್ಯಾಕೇಜನ್ನು ಪ್ರಕಟಿಸಿದ್ದಾರೆ. ಈ ಯೋಜನೆಯಡಿ ಬಡವರು ಹಾಗೂ ಅಪೇಕ್ಷಿತರು ಮುಂದಿನ ಮೂರು ತಿಂಗಳುಗಳ ಕಾಲ ತಮ್ಮ ಪಡಿತರದಲ್ಲಿ ಹೆಚ್ಚುವರಿಯಾಗಿ 5 ಕೆ.ಜಿ. ಗೋಧಿ ಅಥವಾ ಅಕ್ಕಿಯನ್ನು ಪಡೆಯಲಿದ್ದಾರೆ. ಜೊತೆಗೆ 1 ಕೆ.ಜಿ. ಬೇಳೆಯನ್ನು ಕೂಡಾ ನೀಡಲಾಗುವುದು. ದೇಶಾದ್ಯಂತದ 80 ಕೋಟಿಗೂ ಅಧಿಕ ಪಡಿತರಚೀಟಿದಾರರು ಈ ಯೋಜನೆಯ ಸೌಲಭ್ಯ ಪಡೆಯಲಿದ್ದಾರೆ. ಇದರ ಜೊತೆಗೆ ಅವರು ಪಿಂಚಣಿದಾರರು, ಮಹಿಳೆಯರು ಹಾಗೂ ದಿವ್ಯಾಂಗರು ಸಹಿತ ಸಮಾಜದ ಎಲ್ಲಾ ವರ್ಗದ ಜನತೆಗೆ ನಗದು ಪರಿಹಾರ ಕೂಡಾ ಪ್ರಕಟಿಸಿದ್ದಾರೆ.

ಕೊರೋನ ಪೀಡಿತರ ಶುಶ್ರೂಷೆಯಲ್ಲಿ, ಚಿಕಿತ್ಸೆಯಲ್ಲಿ ನಿರತರಾಗಿರುವ ವೈದ್ಯರು, ನರ್ಸ್‌ಗಳು,ಶುಶ್ರೂಷಕರು ಮತ್ತಿತರಿಗೆ 50 ಲಕ್ಷ ರೂ.ಗಳ ವಿಶೇಷ ವೈದ್ಯಕೀಯ ವಿಮೆ ಸೌಲಭ್ಯವನ್ನು ಕೂಡಾ ಪ್ರಕಟಿಸಿದ್ದಾರೆ.

ದೇಶಾದ್ಯಂತ ಸುಮಾರು ಮೂರು ಕೋಟಿ ವಿಧವೆಯರು, ಪಿಂಚಣಿದಾರರು ಹಾಗೂ ಭಿನ್ನಸಾಮರ್ಥ್ಯದವರು ಒಂದು ಸಲಕ್ಕೆ 1 ಸಾವಿರ ರೂ.ಗಳ ಹೆಚ್ಚುವರಿ ಹಣವನ್ನು ಪಡೆಯಲಿದ್ದಾರೆ ಎಂದು ನಿರ್ಮಲಾತಿಳಿಸಿದರು.

ಜನಧನ ಖಾತೆಗಳನ್ನು ಹೊಂದಿರುವ ಸುಮಾರು 20 ಕೋಟಿ ಮಹಿಳೆಯರು, ಮುಂದಿನ ಮೂರು ತಿಂಗಳುಗಳವರೆಗೆ ಪ್ರತಿ ತಿಂಗಳು ತಲಾ 500 ರೂ. ಹೆಚ್ಚುವರಿ ಹಣವನ್ನು ಪಡೆಯಲಿದ್ದಾರೆ. ಬಡತನದ ರೇಖೆಗಿಂತ ಕೆಳಗಿರುವ ಸುಮಾರು 8.3 ಕೋಟಿ ಕುಟುಂಬಗಳು ಮುಂದಿನ ಮೂರು ತಿಂಗಳುಗಳವರೆಗೆ ಉಚಿತವಾಗಿ ಅಡುಗೆ ಅನಿಲದ ಸಿಲಿಂಡರ್‌ಗಳನ್ನು ಪಡೆಯಲಿದ್ದಾರೆ. ದೀನದಯಾಳ್ ಉಪಾಧ್ಯಾಯ ಯೋಜನೆಯ ಸ್ವಸಹಾಯ ಗುಂಪುಗಳ ಸಹಕಾರಿ ಸಾಲದ ಮಿತಿಯನ್ನು 10 ಲಕ್ಷ ರೂ.ಗಳಿಂದ 20 ಲಕ್ಷ ರೂ.ಗಳವರೆಗೆ ಏರಿಸಲಾಗಿದೆ.

ಕೊರೋನ ಪಿಡುಗಿನ ವಿರುದ್ಧ ಸಮರದ ಅಂಗವಾಗಿ ಕೇಂದ್ರ ಸರಕಾರವು ಜಿಲ್ಲಾ ಗಣಿ ನಿಧಿಯನ್ನು ಬಳಸಿಕೊಳ್ಳಲು ರಾಜ್ಯ ಸರಕಾರಗಳಿಗೆ ಅನುಮತಿ ನೀಡಿರುವುದಾಗಿ ಸಚಿವೆ ಹೇಳಿದರು. ಕೊರೋನಾ ವೈರಸ್ ಸೋಂಕಿನ ತಪಾಸಣೆ ಮತ್ತಿತರ ಕ್ರಮಗಳಿಗಾಗಿ ಈ ನಿಧಿಯನ್ನು ಉಪಯೋಗಿಸಬಹುದಾಗಿದೆ ಎಂದು ಅವರು ಹೇಳಿದರು. ಸಹಾಯಕ ವಿತ್ತ ಸಚಿವ ಅನುರಾಗ್ ಠಾಕೂರ್ ಕೂಡಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಕೊರೋನಾ ಭೀತಿಯಿಂದ ಮಹಾನಗರಗಳಿಂದ ತಮ್ಮ ಊರುಗಳಿಗೆ ಗುಳೇ ಹೋಗುತ್ತಿರುವ ವಲಸಿಗ ಕಾರ್ಮಿಕರಿಗೂ ಸರಕಾರವು ವಿಶೇಷವಾದ ಪಾರುಗಾಣಿಕೆ (ಬೇಲ್ ಔಟ್) ಪ್ಯಾಕೇಜ್ ಅನ್ನು ಘೋಷಿಸಿದೆ. ದಿಲ್ಲಿ, ಕೇರಳ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳು ಈಗಾಗಲೇ ಯೋಜನೆಗಳನ್ನು ಘೋಷಿಸಿವೆ ಹಾಗೂ ನಿರ್ಗತಿಕರಿಗೆ ಆಹಾರ ನೀಡಲು ವಿವಿಧ ಯೋಜನೆಗಳನ್ನು ಪ್ರಕಟಿಸಿವೆ.

 ಅಧಿಕೃತ ದತ್ತಾಂಶದ ಪ್ರಕಾರ ಭಾರತೀಯ ಆಹಾರ ನಿಗಮದ ಗೋದಾಮುಗಳಲ್ಲಿ 5.88 ಕೋಟಿ ಟನ್‌ಗಳಷ್ಟು ಆಹಾರಧಾನ್ಯಗಳ ದಾಸ್ತಾನಿದೆ. ಆ ಪೈಕಿ 3 ಕೋಟಿ ಟನ್ ಅಕ್ಕಿಯು ಹಾಗೂ ಗೋಧಿಯು 2.75 ಕೋಟಿ ಟ ಗೋಧಿ ದಾಸ್ತಾನಿದೆ.

ಮಾಲಕ, ನೌಕರರ 3 ತಿಂಗಳುಗಳ ಇಪಿಎಫ್ ದೇಣಿಗೆ ಸರಕಾರದಿಂದಲೇ ಪಾವತಿ

ಕೊರೋನಾ ವೈರಸ್‌ನ ಅಟ್ಟಹಾಸದಿಂದ ತತ್ತರಿಸಿರುವ ದೇಶದ ಸಂಘಟಿತ ವಲಯದ ಕಾರ್ಮಿಕರಿಗೆ ಸಹಾಯ ಹಸ್ತ ಚಾಚಿರುವ ಕೇಂದ್ರ ಸರಕಾರವು ಸಂಘಟಿತ ವಲಯ ಉದ್ಯೋಗಿಗಳಿಗೆ ಭರಪೂರ ಕೊಡುಗೆಗಳನ್ನು ಪ್ರಕಟಿಸಿದೆ.

ಮುಂದಿನ ಮೂರು ತಿಂಗಳುಗಳವರೆಗೆ ಭವಿಷ್ಯ ನಿಧಿಗೆ ಉದ್ಯೋಗಿ ಹಾಗೂ ಉದ್ಯೋಗದಾತರ ದೇಣಿಗೆ (ತಲಾ ಶೇ.12)ಯನ್ನು ಮುಂದಿನ ಮೂರು ತಿಂಗಳುಗಳವರೆಗೆ ಕೇಂದ್ರ ಸರಕಾರವೇ ಭರಿಸಲಿದೆ.

ಇದರಿಂದಾಗಿ ಸಂಘಟಿತ ವಲಯದ 4.8 ಕೋಟಿ ಕಾರ್ಮಿಕರು ಪ್ರಯೋಜನ ಪಡೆಯಲಿದ್ದಾರೆ. ಉದ್ಯೋಗಿಗಳ ಇಪಿಎಫ್ ಪಾವತಿಯು ನಿರಂತರವಾಗಿರುವುದನ್ನು ಖಾತರಿಪಡಿಸುವುದಕ್ಕಾಗಿ ಕೇಂದ್ರ ಸರಕಾರ ಈ ಕ್ರಮ ಕೈಗೊಂಡಿದೆ ಎಂದು ಸೀತಾರಾಮನ್ ತಿಳಿಸಿದ್ದಾರೆ. ನೌಕರರ ಭವಿಷ್ಯ ನಿಧಿ (ಇಪಿಎಫ್)ಯಿಂದ ಶೇ.75ರಷ್ಟು ಹಣವನ್ನು ಅಥವಾ ಮೂರು ತಿಂಗಳ ವೇತನದಷ್ಟು ಮೊತ್ತ ಇವೆರಡವುಗಳಲ್ಲಿ ಕನಿಷ್ಠವಾದುದನ್ನು ಮುಂಗಡವಾಗಿ ಪಡೆಯಲು ಅವಕಾಶ ನೀಡಲಾಗುವುದು ಎಂದವರು ತಿಳಿಸಿದರು.100ರಷ್ಟು ಉದ್ಯೋಗಿಗಳಿರುವ ಹಾಗೂ ಶೇ.90ರಷ್ಟು ಉದ್ಯೋಗಿಗಳು 15 ಸಾವಿರಕ್ಕೂ ಪಡೆಯುತ್ತಿರುವ ಕಂಪೆನಿಗಳಿಗೆ ಈ ಸೌಲಭ್ಯಗಳು ಅನ್ವಯವಾಗಲಿವೆ.

ಎಪ್ರಿಲ್‌ನಲ್ಲಿ ಕಿಸಾನ್ ಸಮ್ಮಾನ್‌ನ 2 ಸಾವಿರ ರೂ.ಗಳ ಮೊದಲ ಕಂತು ಪಾವತಿ

ಕೊರೋನಾ ಲಾಕ್‌ಡೌನ್‌ನಿಂದಾಗಿ ಕಂಗಾಲಾಗಿರುವ ರೈತರು ತುಸು ಸಮಾಧಾನದ ನಿಟ್ಟುಸಿರೆಳೆಯುವಂತೆ ಮಾಡುವ ಕ್ರಮವಾಗಿ ಕೇಂದ್ರ ಸರಕಾರವು ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಮೊದಲ ಕಂತಿನ 2 ಸಾವಿರ ರೂ.ಗಳನ್ನು ಎಪ್ರಿಲ್ ತಿಂಗಳ ಮೊದಲ ವಾರದಲ್ಲಿ ಪಾವತಿಸಲಿದೆ.

ಇದರಿಂದಾಗಿ ದೇಶದ 8.69 ಕೋಟಿ ರೈತರು ಇದರ ಪ್ರಯೋಜನ ಪಡೆಯಲಿದ್ದಾರೆಂದು ಅವರು ಹೇಳಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್)ಯೋಜನೆಯಡಿ ಕೇಂದ್ರ ಸರಕಾರವು ಪ್ರತಿ ವರ್ಷ 6 ಸಾವಿರ ರೂ. ಮೊತ್ತವನ್ನು ಮೂರು ಸಮಾನ ಕಂತುಗಳಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪಾವತಿಸಲಿದೆ.

ಯಾರೂ ಹಸಿವಿನಿಂದ ನರಳದಂತೆ ನೋಡಿಕೊಳ್ಳುವೆವು

ಕೊರೋನಾ ವೈರಸ್ ಸೋಂಕು ತಡೆಗಟ್ಟಲು ಪ್ರಧಾನಿ ಮೋದಿ ಘೋಷಿಸಿರುವ 21 ದಿನಗಳ ಲಾಕ್‌ಡೌನ್‌ನಿಂದಾಗಿ, ಯಾರೂ ಕೂಡಾ ಹಸಿವೆಗೆ ತುತ್ತಾಗದಂತೆ ನೋಡಿಕೊಲಾಗುವುದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ.

ಲಾಕ್‌ಡೌನ್‌ನ ಈ ಸಂದರ್ಭದಲ್ಲಿ ಬಡವರನ್ನು ಹಿತಾಸಕ್ತಿಯನ್ನು ಕಾಪಾಡುವುದು ಸರಕಾರದ ಆದ್ಯತೆಯಾಗಿದೆ ಎಂದವರು 1.70 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸುತ್ತಾ ಹೇಳಿದರು. ಲಾಕ್‌ಡೌನ್‌ನಿಂದಾಗಿ ಎದುರಾಗಿರುವ ಇತರ ಸಮಸ್ಯೆಗಳನ್ನು ಕೂಡಾ ಪ್ರತ್ಯೇಕವಾಗಿ ಪರಿಗಣಿಸಲಾಗುವುದು ಎಂದವರು ಹೇಳಿದರು.

ಕೊರೋನಾ ವೈರಸ್ ಹಾವಳಿಯಿಂದ ದೇಶದಲ್ಲಿ ಉಂಟಾಗಿರುವ ಆರ್ಥಿಕ ದುಷ್ಪರಿಣಾಮದ ವೌಲ್ಯಮಾಪನ ನಡೆಸಲು ರಚನೆಯಾಗಿರುವ ಕ್ರಿಯಾಪಡೆ (ಟಾಸ್ಕ್‌ಫೋರ್ಸ್)ಯ ನೇತೃತ್ವವನ್ನು ನಿರ್ಮಲಾ ಸೀತಾರಾಮನ್ ವಹಿಸಿದ್ದಾರೆ.

ಎಂನರೇಗಾ ವೇತನ 202 ರೂ.ಗೆ ಹೆಚ್ಚಳ

ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ಎಂನರೇಗಾ) ಯೋಜನೆಯ ದಿನಗೂಲಿಯ ಮೊತ್ತವನ್ನು 182 ರೂ.ಗಳಿಗೆ 202 ರೂ.ಗಳಿಗೆ ಹೆಚ್ಟಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಇದರಿಂದಾಗಿ ಸುಮಾರು 5 ಕೋಟಿ ಕುಟುಂಗಳು ಇದರಿಂದ ಪ್ರಯೋಜನ ಪಡೆಯಲಿದ್ದು, ಅವರ ಆದಾಯದಲ್ಲಿ ತಲಾ 2 ಸಾವಿರ ರೂ. ಹೆಚ್ಚಳವಾಗಲಿದೆ ಎಂದು ಅವರು ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)