varthabharthi

ಬೆಂಗಳೂರು

ಕೊರೋನ ವೈರಸ್ ಭೀತಿ

ಬೆಂಗಳೂರಿನ 200ಕ್ಕೂ ಅಧಿಕ ಗ್ರಂಥಾಲಯಗಳಿಗೆ ಪ್ರವೇಶ ನಿಷೇಧ: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ಮೇಲೆ ಪರಿಣಾಮ

ವಾರ್ತಾ ಭಾರತಿ : 26 Mar, 2020

ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.26: ರಾಜ್ಯದಲ್ಲಿ ಕೊರೋನ ಮಹಾಮಾರಿ ದಿನದಿಂದ ದಿನಕ್ಕ ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿರುವುದು ಸತ್ಯ. ಹೀಗಾಗಿ, ಸಿಲಿಕಾನ್ ಸಿಟಿಯಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ 200ಕ್ಕೂ ಅಧಿಕ ಗ್ರಂಥಾಲಯಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.

ಗ್ರಂಥಾಲಯಗಳಿಗೆ ಪ್ರವೇಶಕ್ಕೆ ನಿರ್ಬಂಧ ಹೇರಿದ ಪರಿಣಾಮ ಇಂದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸಾವಿರಾರು ಜನರ ಮೇಲೆ ಪರಿಣಾಮ ಬೀರಿದೆ. ದೂರದ ಊರುಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್‍ಗಾಗಿ ನಗರಕ್ಕೆ ಆಗಮಿಸಿರುವವರು ಆತಂಕದ ಸ್ಥಿತಿಯಲ್ಲಿ ಜೀವನ ನಡೆಸುವಂತಾಗಿದ್ದು, ಈಗ ಅವರು ಅತ್ಯಂತ ಸಂದಿಗ್ಧ ಸ್ಥಿತಿಯಲ್ಲಿ ಜೀವನ ನಡೆಸಬೇಕಾಗಿ ಬಂದಿದೆ.

ಮೇ, ಜೂನ್ ಅಥವಾ ಜುಲೈನಲ್ಲಿ ಎಫ್‍ಡಿಎ, ಎಸ್‍ಡಿಎ, ಕೆಸೆಟ್, ನೆಟ್, ಪೊಲೀಸ್ ಕಾನ್‍ಸ್ಟೆಬಲ್ ಸೇರಿದಂತೆ ಹಲವು ಉದ್ಯೋಗಗಳ ತರಬೇತಿ ಪಡೆಯಲು ಹಾಗೂ ಕೆಎಎಸ್ ಪರೀಕ್ಷೆಗಾಗಿ ಅಭ್ಯಾಸ ಮಾಡಲು ನಗರಕ್ಕೆ ಆಗಮಿಸಿದ್ದಾರೆ. ಇದೀಗ ಕೊರೋನ ಹರಡಿರುವುದರ ಪರಿಣಾಮ ಪ್ರಧಾನಿ ಎ.14ರವರೆಗೂ ದೇಶದಲ್ಲಿ ಲಾಕ್‍ಡೌನ್ ಘೋಷಿಸಿದ್ದು, ಇವರ ತಯಾರಿ ಮೇಲೆ ತಣ್ಣೀರು ಎರೆಚಿದಂತಾಗಿದೆ.

ಎಲ್ಲೆಲ್ಲಿಂದ ಬರುತ್ತಾರೆ: ಸಾಮಾನ್ಯವಾಗಿ ಪ್ರತಿವರ್ಷ ಉತ್ತರ ಕರ್ನಾಟಕದ ಬಳ್ಳಾರಿ, ಕೊಪ್ಪಳ, ಗದಗ, ಬೀದರ್, ಬೆಳಗಾವಿ, ಬಾಗಲಕೋಟೆ ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಯುವಜನರು, ನಿರುದ್ಯೋಗಿಗಳು ಬರುತ್ತಾರೆ. ನಗರದ ಯಾವುದಾವುದೋ ಪ್ರದೇಶಗಳಲ್ಲಿ ನೆಲೆಸಿ, ತರಬೇತಿ ಪಡೆಯುತ್ತಿರುತ್ತಾರೆ. ಇಲ್ಲಿಗೆ ಬರುವವರಲ್ಲಿ ಬಹುತೇಕರು ಆರ್ಥಿಕವಾಗಿ ಹಿಂದುಳಿದವರೇ ಆಗಿರುತ್ತಾರೆ. ಹಾಗಾಗಿ ಸಂಶೋಧನೆಗೆ, ಓದಿಗೆ, ಪರಾಮರ್ಶೆಗೆ ಸುಲಭದಲ್ಲಿ ಸಿಗುವ ಸ್ಥಳೀಯ ಗ್ರಂಥಾಲಯಗಳನ್ನು ಆಶ್ರಯಿಸಿರುತ್ತಾರೆ. ಇದೀಗ ಕೊರೋನ ಭೀತಿಯಿಂದ ಆ ಗ್ರಂಥಾಲಯಗಳು ಮುಚ್ಚಿದ್ದು, ಎಲ್ಲರೂ ಕಂಗಾಲಾಗಿದ್ದಾರೆ.

ನಗರದ ಪಿಜಿಗಳು ಖಾಲಿ: ರಾಜ್ಯದ ಹಲವು ಕಡೆಗಳಿಂದ ರಾಜಧಾನಿಗೆ ಬರುವ ಬಹುತೇಕರು ಇಲ್ಲಿನ ಕಡಿಮೆ ಬೆಲೆಯುಳ್ಳ ಪಿಜಿಗಳಲ್ಲಿ ಉಳಿದುಕೊಳ್ಳುತ್ತಾರೆ. ಆದರೆ, ಕೊರೋನ ಪ್ರಕರಣಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ನಗರದಲ್ಲಿರುವ ಪಿಜಿಗಳನ್ನು ಮಾಲಕರು ತಾತ್ಕಾಲಿಕವಾಗಿ ಮುಚ್ಚುತ್ತಿದ್ದಾರೆ. ಬಿಬಿಎಂಪಿ ಯಾರನ್ನು ಬಲವಂತವಾಗಿ ಕಳುಹಿಸಬಾರದು ಎಂದು ಹೇಳಿದ್ದರೂ, ಕೆಲವು ಕಡೆಗಳಲ್ಲಿ ಬಲವಂತವಾಗಿ ಮನೆಗಳಿಗೆ ಕಳುಹಿಸಿದ್ದಾರೆ. ಇದರ ಪರಿಣಾಮ ನಗರದ ಹಲವೆಡೆ ಪಿಜಿಗಳು ಖಾಲಿ ಖಾಲಿಯಾಗಿವೆ.

ಕೋಚಿಂಗ್ ಸೆಂಟರ್ ಗಳಿಗೂ ಕೊಕ್ಕೆ: ಕೊರೋನ ಅಧಿಕವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಕೊಚೀಂಗ್ ಸೆಂಟರ್ ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ನಗರದ ಮಲ್ಲೇಶ್ವರಂ, ವಿಜಯನಗರ, ಜಯನಗರ ಸೇರಿದಂತೆ ಹಲವೆಡೆ ಕಳೆದು 8-10 ದಿನಗಳ ಹಿಂದೆಯೇ ಬಂದ್ ಮಾಡಲಾಗಿದೆ. ಈಗಾಗಲೇ ಹೊಸ ಬ್ಯಾಚ್‍ಗಳನ್ನು ಆರಂಭಿಸಲಾಗಿತ್ತಾದರೂ, ಅದನ್ನು ರದ್ದು ಮಾಡಿದ್ದೇವೆ ಎಂದು ಕೋಚಿಂಗ್ ಸೆಂಟರ್ ಗಳ ಮಾಲಕರು ಹೇಳಿದ್ದಾರೆ.

ಕೋವಿಡ್ 19 ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಅದರ ಭಾಗವಾಗಿ ಎಲ್ಲ ಗ್ರಂಥಾಲಯಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿದೆ. ಆದರೆ, ಪುಸ್ತಕಗಳನ್ನು ಮನೆಗಳಿಗೆ ಪಡೆದುಕೊಂಡು ಹೋಗುವುದಕ್ಕೆ ಅವಕಾಶ ನೀಡಲಾಗಿದೆ. ಸದ್ಯದಲ್ಲಿಯೇ ಕೆಲವು ಗ್ರಂಥಾಲಯಗಳನ್ನು ತೆರೆದು, ಸ್ಪರ್ಧಾತ್ಮಕ ಪರೀಕ್ಷಾ ಸ್ಪರ್ಧಿಗಳು ದೂರ ಕುಳಿತು ಓದಲು ಅವಕಾಶ ಮಾಡಿಕೊಡಲಾಗುವುದು.

-ಸತೀಶ್ ಹೊಸಮನಿ, ಗ್ರಂಥಾಲಯ ಇಲಾಖೆ ನಿರ್ದೇಶಕ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)