varthabharthi


ಕರ್ನಾಟಕ

ಕಲಬುರಗಿಯ ಪ್ರತೀ ಮನೆ ಬಾಗಿಲಿಗೆ ತರಕಾರಿ ಪೂರೈಕೆ: ಜಿಲ್ಲಾಧಿಕಾರಿ ಶರತ್

ವಾರ್ತಾ ಭಾರತಿ : 26 Mar, 2020

ಕಲಬುರಗಿ, ಮಾ. 26: ದೈನಂದಿನ ಅತ್ಯವಶ್ಯಕ ತರಕಾರಿಗಳನ್ನು ಮನೆ ಬಾಗಿಲಿಗೆ ತಲುಪಿಸಲು ವ್ಯಾಪಾರಿ ಹಾಗೂ ಪಾಲಿಕೆ ಸಿಬ್ಬಂದಿಯನ್ನು ನಿಯೋಜನೆ ಮಾಡಿ ಕಲಬುರಗಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಕೊರೋನ ವೈರಸ್ ಹರಡುವುದನ್ನು ತಡೆಯಲು ಹಾಗೂ ದಿನಸಿಯ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ನಗರದ ಎಲ್ಲ ವಾರ್ಡ್‍ಗಳು, ಬಡಾವಣೆ ಹಾಗೂ ಜನವಸತಿ ಪ್ರದೇಶಗಳಿಗೂ ತರಕಾರಿಗಳನ್ನು ತಲುಪಿಸುವ ಯೋಜನೆ ರೂಪಿಸಲಾಗಿದೆ. ಇದರಲ್ಲಿ ಪ್ರತಿಯೊಬ್ಬ ತರಕಾರಿ ವ್ಯಾಪಾರಿಯ ಜತೆಗೆ, ಒಬ್ಬ ಪಾಲಿಕೆ ಸಿಬ್ಬಂದಿ ಉಸ್ತುವಾರಿಯಾಗಿ ಇರುತ್ತಾರೆ. ತಳ್ಳುವ ಗಾಡಿ, ವಾಹನಗಳಲ್ಲಿ ತರಕಾರಿಗಳನ್ನು ಪ್ರತಿ ಓಣಿಗೂ ಹೋಗಿ ಮನೆ ಮುಂದೆ ನಿಂತು, ಜನಸಂದಣಿ ಆಗದಂತೆ ತಲುಪಿಸಬೇಕು. ಜತೆಗೆ, ಅದರ ವರದಿ ಹಾಗೂ ಚಿತ್ರವನ್ನೂ ಜಿಲ್ಲಾಡಳಿತ ಹಾಗೂ ಪಾಲಿಕೆಗೆ ನೀಡಬೇಕು.

ಒಟ್ಟು 55 ವಾರ್ಡ್‍ಗಳಿಗಾಗಿ 96 ತಂಡಗಳನ್ನು ರಚಿಸಲಾಗಿದೆ. ಪ್ರತಿಯೊಬ್ಬ ತರಕಾರಿ ವ್ಯಾಪಾರಿ ಹಾಗೂ ಉಸ್ತುವಾರಿ ಸಿಬ್ಬಂದಿಯ ಮೊಬೈಲ್ ನಂಬರ್ ಗಳನ್ನೂ ನಮೂದಿಸಿದ್ದು, ತರಕಾರಿ ಅಗತ್ಯವಿದ್ದವರು ಅವರನ್ನು ಸಂಪರ್ಕಿಸಬಹುದು. ಮಾ.31ರವರೆಗೂ ಈ ತಂಡಗಳು ಸಂಚರಿಸಬೇಕು. ಒಂದು ಕುಟುಂಬದಿಂದ ಮತ್ತೊಂದು ಕುಟುಂಬ ಕನಿಷ್ಠ 6 ಅಡಿ ಅಂತರದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಮಾರಾಟಗಾರರೇ ಮುಂಚಿತವಾಗಿ ಸ್ವಚ್ಛತೆ ಹಾಗೂ ಮುನ್ನೆಚ್ಚರಿಕೆ ವಹಿಸಬೇಕು ಎಂಬಿತ್ಯಾದಿ ನಿಯಮಗಳನ್ನು ಇದರಲ್ಲಿ ಸೇರಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)