varthabharthi

ಬೆಂಗಳೂರು

ಕೊರೋನ ವೈರಸ್ ಹಿನ್ನೆಲೆ

ಬ್ಯಾಂಕ್ ಸಾಲದ ಕಂತು ಪಾವತಿ ಮುಂದೂಡಲು ಕ್ರಮ ವಹಿಸಿ: ಅಧಿಕಾರಿಗಳಿಗೆ ಸಿಎಂ ಬಿಎಸ್‌ವೈ ಸೂಚನೆ

ವಾರ್ತಾ ಭಾರತಿ : 26 Mar, 2020

ಬೆಂಗಳೂರು, ಮಾ.26: ವೈದ್ಯರು, ದಾದಿಯರು, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ಸ್ವಚ್ಛತಾ ಕಾರ್ಯಗಳಲ್ಲಿ ತೊಡಗಿರುವವರಿಗೆ ಮನೆ, ಪಿಜಿ, ಹಾಸ್ಟೆಲ್ ಮಾಲಕರಿಂದ ಯಾವುದೆ ರೀತಿಯ ಕಿರುಕುಳ ಆಗದಂತೆ ಎಚ್ಚರ ವಹಿಸಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಗುರುವಾರ ವಿಧಾನಸೌಧದಲ್ಲಿ ಕೋವಿಡ್-19 ಕುರಿತಂತೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳು ಹಾಗೂ ಲಾಕ್‍ಡೌನ್ ಪರಿಸ್ಥಿತಿ ಕುರಿತು ಅವಲೋಕಿಸಲು ಜಿಲ್ಲಾಧಿಕಾರಿಗಳೊಂದಿಗೆ ಅವರು ವಿಡಿಯೋ ಕಾನ್ಫರೆನ್ಸ್ ನಡೆಸಿದರು. ಸರಕಾರದ ಆದೇಶವನ್ನು ಉಲ್ಲಂಘಿಸುವ ಮನೆ, ಪಿಜಿ, ಹಾಸ್ಟೆಲ್‍ನ ಮಾಲಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ ಅವರು, ಜನರು ಮನೆಯಲ್ಲೆ ಉಳಿಯುವಂತೆ ಮಾಡುವ ನಿಟ್ಟಿನಲ್ಲಿ ಹಲವು ಅಡ್ಡಿಗಳು ಎದುರಾಗಿದ್ದವು. ಈ ನಿಟ್ಟಿನಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ರಸ್ತೆಗಳಲ್ಲಿ ಅನವಶ್ಯಕವಾಗಿ ಜನರು ಓಡಾಡುವುದನ್ನು ಸಂಪೂರ್ಣ ಸ್ಥಗಿತಗೊಳಿಸಬೇಕು. ಅಗತ್ಯ ಸೇವೆಗಳಿಗೆ ಸಂಬಂಧಿಸಿದ ವ್ಯಕ್ತಿಗಳ ಸಂಚಾರಕ್ಕೆ ಮಾತ್ರ ಅನುವು ಮಾಡಿ ಕೊಡುವಂತೆ ತಿಳಿಸಿದ ಮುಖ್ಯಮಂತ್ರಿ, ಬ್ಯಾಂಕ್ ಸಾಲ ಮತ್ತು ಕಿರು ಹಣಕಾಸು ಸಂಸ್ಥೆಗಳ ಸಾಲದ ಕಂತು ಪಾವತಿ ಮುಂದೂಡಲು ಕ್ರಮ ವಹಿಸುವಂತೆ ಸರಕಾರದ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.

ಖಾಸಗಿ ಕ್ಲಿನಿಕ್‍ಗಳು ರಾಜ್ಯಾದ್ಯಂತ ಕಡ್ಡಾಯವಾಗಿ ಕಾರ್ಯನಿರ್ವಹಿಸಬೇಕು. ರೈತರಿಗೆ ಕೃಷಿ ಬಳಕೆಗೆ ಅಗತ್ಯವಾದ ಕೀಟನಾಶಕ, ರಸಗೊಬ್ಬರ ಮತ್ತಿತರ ಕೃಷಿ ಪರಿಕರಗಳು ಲಭ್ಯವಾಗುವಂತೆ ಕ್ರಮ ವಹಿಸಲು ಸೂಚಿಸಿದ ಅವರು, ಜಿಲ್ಲಾಧಿಕಾರಿಗಳ ಪಿ.ಡಿ.ಖಾತೆಯಲ್ಲಿ ಸಾಕಷ್ಟು ಅನುದಾನ ಲಭ್ಯವಿದ್ದು, ಅಗತ್ಯಕ್ಕೆ ತಕ್ಕಂತೆ ಖರ್ಚು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಜನರು ತಮ್ಮ ಮನೆಯ ಬಳಿಯೆ ಅಗತ್ಯ ವಸ್ತುಗಳನ್ನು ಖರೀದಿಸಲು ವ್ಯವಸ್ಥೆ ಮಾಡಬೇಕು. ಇದರಿಂದ ಸಣ್ಣ ವ್ಯಾಪಾರಿಗಳಿಗೂ ಅನುಕೂಲವಾಗಲಿದೆ. ಜೊತೆಗೆ, ನಗರದ, ಪಟ್ಟಣದ ಕೇಂದ್ರ ಭಾಗಕ್ಕೆ ಭೇಟಿ ನೀಡುವವರ ಸಂಖ್ಯೆ ಕಡಿಮೆಯಾಗಲಿದೆ. ಆದರೆ, ಇದೆಲ್ಲದರಲ್ಲಿಯೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಎಚ್ಚರ ವಹಿಸಬೇಕು ಎಂದು ಮುಖ್ಯಮಂತ್ರಿ ಹೇಳಿದರು.

ಸೋಂಕಿನ ನಿರ್ವಹಣೆ ಕುರಿತಂತೆ ಒಟ್ಟಾರೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಅಧಿಕಾರಿಗಳು, ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ, ನರ್ಸ್‍ಗಳು ಮತ್ತು ಪೌರ ಕಾರ್ಮಿಕರು ಕೊರೋನ ನಿವಾರಣೆಗೆ ಹಗಲಿರುಳೆನ್ನದೆ ಶ್ರಮಿಸುತ್ತಿದ್ದಾರೆ. ಅವರಿಗೆ ಅಗತ್ಯ ಸುರಕ್ಷತಾ ಉಪಕರಣಗಳನ್ನು ಒದಗಿಸಲು ಕ್ರಮ ವಹಿಸುವಂತೆ ಅವರು ತಿಳಿಸಿದರು.

ಎಲ್ಲ ಜಿಲ್ಲಾಧಿಕಾರಿಗಳು ತಮ್ಮ ವ್ಯಾಪ್ತಿಯ ವೈದ್ಯಕೀಯ ಕಾಲೇಜುಗಳ ಸಹಕಾರ ಪಡೆಯುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ನಿರ್ದೇಶನ ನೀಡಿದರು. ವಿಡಿಯೋ ಕಾನ್ಫರೆನ್ಸ್ ನಲ್ಲಿ ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಡಾ.ಸಿ.ಎನ್.ಅಶ್ವಥ್ ನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಆರೋಗ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)