varthabharthi

ನಿಮ್ಮ ಅಂಕಣ

ಸಾಂಕ್ರಾಮಿಕ ರೋಗಗಳ ಕಾಯ್ದೆ: ಹೋರಾಡಲು ಭಾರತದ 123 ವರ್ಷ ಹಳೆಯ ಕಾನೂನು

ವಾರ್ತಾ ಭಾರತಿ : 26 Mar, 2020
ಕಿರಣ್ ಕುಂಭಾರ್

ಭಾರತದ ಹಲವು ರಾಜ್ಯಗಳು ಕೊರೋನ ವಿರುದ್ಧ ಹೋರಾಡಲು ಒಂದು ಹಳೆಯ ಕಾನೂನಾತ್ಮಕ ಉಪಕರಣವನ್ನು ಬಳಸುತ್ತಿವೆ. ಅದೇ 1897ರ ಸಾಂಕ್ರಾಮಿಕ ರೋಗಗಳ ಕಾಯ್ದೆ. ಎರಡು ಪುಟಗಳ ಈ ಕಾಯ್ದೆ ತನ್ನ 123 ವರ್ಷಗಳ ಅಸ್ತಿತ್ವದಲ್ಲಿ ಬದಲಾಗದೆ ಬಹುತೇಕ ಹಾಗೆಯೇ ಉಳಿದುಕೊಂಡಿದೆ. ಅಂದರೆ ನಾವು 2020ರ ಒಂದು ಸಾಂಕ್ರಾಮಿಕ ಕಾಯಿಲೆಯನ್ನು ಜನರು ರೇಡಿಯೊ ಸೆಟ್‌ಗಳನ್ನು ಆಗಿನ್ನೂ ಬಳಸಲು ಆರಂಭಿಸದೆ ಇದ್ದ ಮತ್ತು ವಿಟಮಿನ್ ಮಾತ್ರೆಗಳು ಅಸ್ತಿತ್ವದಲ್ಲಿ ಇರದಿದ್ದ ಕಾಲದ ಒಂದು ಕಾಯ್ದೆಯನ್ನು ಬಳಸಿ ನಿಯಂತ್ರಿಸುತ್ತಿದ್ದೇವೆ. ಈ ಕಾಯ್ದೆಯ ಮೂಲಗಳು ಮತ್ತು ಇತಿಹಾಸದ ಬಗ್ಗೆ ತಿಳಿದುಕೊಳ್ಳುವುದು ನಮಗೆ ಉಪಯೋಗವಾಗಬಹುದು.

1896ರ ಸೆಪ್ಟಂಬರ್‌ನಲ್ಲಿ ಆರಂಭವಾದ ಬ್ಯುಬೊನಿಕ್ ಪ್ಲೇಗ್ ಭಾರತೀಯ ಉಪಖಂಡದ ಬಹುತೇಕ ಭಾಗಗಳಿಗೆ ವ್ಯಾಪಿಸಿತು. ಅದು ವಸಾಹತುಶಾಹಿ ಭಾರತದ ಒಂದು ಪ್ರಸಿದ್ಧ ಮುಖ್ಯ ಘಟನೆ, ಜನರನ್ನು ದಿಗಿಲುಗೊಳಿಸಿದ ಪ್ಲೇಗನ್ನು ನಿಯಂತ್ರಿಸಲು ಅಂದಿನ ಸರಕಾರ ತೀವ್ರ ಸ್ವರೂಪದ ಕ್ರಮಗಳನ್ನು ತೆಗೆದುಕೊಂಡಿತು. ಅಂದಿನ ಬಾಂಬೆಯಲ್ಲಿ ಪ್ಲೇಗ್ ಆರಂಭವಾಗಿ ಸುಮಾರು ನಾಲ್ಕು ತಿಂಗಳ ಬಳಿಕ 1897ರ ಜನವರಿ 19ರಂದು ರಾಣಿ ವಿಕ್ಟೋರಿಯ ಬ್ರಿಟಿಷ್ ಪಾರ್ಲಿಮೆಂಟಿನ್ ಎರಡೂ ಮನೆಗಳನ್ನು ಉದ್ದೇಶಿಸಿ ಒಂದು ಭಾಷಣ ಮಾಡಿದರು. ಕಾಯಿಲೆಯ ನಿರ್ಮೂಲನಕ್ಕಾಗಿ ತನ್ನ ಸರಕಾರ ಅದಕ್ಕೆ ಲಭ್ಯವಿರುವ ಅತ್ಯಂತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ತಾನು ತನ್ನ ಸರಕಾರಕ್ಕೆ ನಿರ್ದೇಶ ನೀಡಿರುವುದಾಗಿ ರಾಣಿ ಹೇಳಿದರು. ಆ ಕಟ್ಟುನಿಟ್ಟಿನ ಕ್ರಮಗಳು ಪಡೆದ ಅವತಾರವೇ ಸಾಂಕ್ರಾಮಿಕ ರೋಗಗಳ ಕಾಯ್ದೆ.

ರಾಣಿ ಭಾಷಣ ಮಾಡಿದ ಒಂದು ವಾರದ ಬಳಿಕ ಕಲ್ಕತ್ತದಲ್ಲಿ ಭಾರತದ ಗವರ್ನರ್-ಜನರಲ್‌ರವರ ಕೌನ್ಸಿಲ್‌ನಲ್ಲಿ ಸಾಂಕ್ರಾಮಿಕ ರೋಗಗಳ ಮಸೂದೆಯನ್ನು ಮಂಡಿಸಲಾಯಿತು. ಮಸೂದೆಯನ್ನು ಮಂಡಿಸಿದ ಸದಸ್ಯ ಜಾನ್ ವುಡ್‌ಬರ್ನ್, ಮಸೂದೆಯಲ್ಲಿ ಉಲ್ಲೇಖಿಸಲಾಗಿರುವ ಅಧಿಕಾರಗಳು ಅಸಾಮಾನ್ಯ ಆದರೆ ಅವಶ್ಯಕ ಎಂದರು. ಇನ್ನೊಬ್ಬ ಸದಸ್ಯರು ಮಸೂದೆಯ ಕಠಿಣ ಕ್ರಮಗಳು ಜನರಿಗೆ ತೊಂದರೆ ಉಂಟು ಮಾಡಿದಲ್ಲಿ ಅವುಗಳನ್ನು ಜನರು‘ಸಂತೋಷದಿಂದ ಸಹಿಸಿಕೊಳ್ಳಬೇಕು’’ ಎಂದರು. ಆ ಕಾಯ್ದೆಯಲ್ಲಿ ಸರ್ವಾಧಿಕಾರದ ಛಾಯೆ ಇತ್ತು. ಅಂದಿನ ಸಾಂಪ್ರದಾಯಿಕ ತಿಳುವಳಿಕೆಯ ಪ್ರಕಾರ ಪ್ಲೇಗ್ ಬಾಧಿತ ವ್ಯಕ್ತಿಗಳು ಪ್ರತ್ಯೇಕವಾಗಿ ಇರಿಸುವ, ಮನೆಗಳನ್ನು ಸ್ವಚ್ಛಗೊಳಿಸುವ, ಬಟ್ಟೆಗಳನ್ನು ನಾಶಮಾಡುವ ಅಥವಾ ಅವುಗಳನ್ನು ರೋಗ ನಿರೋಧಕ ದ್ರಾವಣಗಳಿಂದ ತೊಳೆಯುವ ಮತ್ತು ಪ್ಲೇಗ್‌ನ ಲಕ್ಷಣಗಳನ್ನು ಇರುವ ವ್ಯಕ್ತಿಗಳನ್ನು ಕಟ್ಟು ನಿಟ್ಟಾಗಿ ತಪಾಸಣೆಗೊಳಪಡಿಸುವ ಮೂಲಕ ಪ್ಲೇಗ್ ಹರಡುವುದನ್ನು ತಡೆಯಬಹುದು.

ಮಸೂದೆಯ ಕುರಿತು ಕೇವಲ ಒಂದು ದಿನದ ಚರ್ಚೆ ನಡೆದು 1897ರ ಫೆಬ್ರವರಿ 4 ರಂದು ಸಾಂಕ್ರಾಮಿಕ ರೋಗಗಳ ಕಾಯ್ದೆ ಅಂಗೀಕೃತಗೊಂಡಿತು. ಮೊದಲು, ಕಾಯ್ದೆಯ ಬಗ್ಗೆ ಬಹುತೇಕ ಸರ್ವಾನುಮತದ ಒಪ್ಪಿಗೆ ವ್ಯಕ್ತವಾದರೂ, ಬಳಿಕ ಜನರ ಭ್ರಮ ನಿರಸನ ಹಾಗೂ ಕ್ರೋಧಕ್ಕೆ ಅದು ಕಾರಣವಾಯಿತು. ಕಾಯಿಲೆಗಿಂತ ಔಷಧಿಯೇ ಹೆಚ್ಚು ಕೆಟ್ಟದೆಂದು ಜನರಿಗೆ ಮನವರಿಕೆಯಾಯಿತು.

 ಕಾಯ್ದೆಯಡಿಯಲ್ಲಿ ಪೊಲೀಸ್ ಕ್ರೌರ್ಯದ ಕೆಲವು ಘಟನೆಗಳು ಬಾಲ ಗಂಗಾಧರ ತಿಲಕರ ಪಟ್ಟಣವಾಗಿದ್ದ ಪೂನಾದಲ್ಲಿ, ಭಾರತೀಯ ನಾಗರಿಕ ಸೇವೆಗಳ (ಐಸಿಎಸ್) ಅಧಿಕಾರಿ ವಾಲ್ಟರ್ ರ್ಯಾಂಡ್‌ನ ಕೈ ಕೆಳಗೆ ನಡೆದವು. ಸೈನಿಕರು ಒರಟು ಹಾಗೂ ಅವಿವೇಕಿ ಕ್ರಮಗಳನ್ನು ತೆಗೆದುಕೊಂಡು, ರೋಗಿಗಳನ್ನಷ್ಟೆ ಅಲ್ಲದೆ ಅವರ ಸಂಬಂಧಿಕರನ್ನು ಮತ್ತು ದಾರಿಹೋಕರನ್ನು ಕೂಡ ಆಸ್ಪತ್ರೆಗಳಿಗೆ ಹೊತೊಯ್ದರು. ತಪಾಸಣೆಗಾಗಿ ಪುರುಷರು ಹಾಗೂ ಮಹಿಳೆಯರ ಬಟ್ಟೆಗಳನ್ನು ಸಾರ್ವಜನಿಕವಾಗಿ ಕಳಚಲಾಯಿತು. ಮನೆಗಳನ್ನು ಹಾಗೂ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ತೆರೆಯಲಾಯಿತು ಮತ್ತು ಆಸ್ತಿಪಾಸ್ತಿಗೆ ಹಾನಿ ಎಸಗಲಾಯಿತು. ಒಟ್ಟಿನಲ್ಲಿ, ಕರಾಳ ಶಾಸನವನ್ನು ತರುವಾಗ ಸರಕಾರ ನೀಡಿದ್ದ ಆಶ್ವಾಸನೆಗಳು, ಅಧಿಕಾರಿಗಳು ತಮಗೆ ನೀಡಲಾದ ಅಧಿಕಾರವನ್ನು ಚಲಾಯಿಸಿದಾಗ ಪೊಳ್ಳು ಆಶ್ವಾಸನೆಗಳಾದವು. ಬಡವರಿಗೊಂದು ಕಾನೂನಾದರೆ ಶ್ರೀಮಂತರಿಗೆ ಇನ್ನೊಂದು ಕಾನೂನು ಎಂಬಂತಾಯಿತು. ಅಂದಿನ ಗಣ್ಯರಿಗೆ, ಶ್ರೀಮಂತರಿಗೆ ಪ್ಲೇಗ್ ಬಾಧಿತರಾದ ಬಂಧುಗಳನ್ನು ತಮ್ಮ ಮನೆಯಲ್ಲೇ ಇಟ್ಟುಕೊಳ್ಳಲು ಅವಕಾಶ ನೀಡಲಾಯಿತು. ಇತರರನ್ನು ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಪ್ರತ್ಯೇಕಿಸಿ ಇಡಲಾಯಿತು.

ಇಂದು ಕೊರೋನ ಸಾಂಕ್ರಾಮಿಕವಾಗಿ ನಮ್ಮ ಸುತ್ತ ವ್ಯಾಪಿಸುತ್ತಿರುವಾಗ, ದೇಶದ ಪ್ರಾಥಮಿಕ ಕಾನೂನಾತ್ಮಕ ಸಲಕರಣೆಯನ್ನು ಇದರ ವಿರುದ್ಧ ಬಳಸುವಾಗ ನಾವು ತೆಗೆದುಕೊಳ್ಳಬಾರದ, ಇಡಬಾರದ ಹೆಜ್ಜೆಗಳ ಬಗ್ಗೆ ಆ ಕಾನೂನಿನ ಇತಿಹಾಸ ನಮಗೆ ದಾರಿದೀಪವಾಗಬೇಕಾಗಿದೆ. ಅತ್ಯಂತ ಮುಖ್ಯವಾಗಿ, ಸಾರ್ವಜನಿಕರು ಕೀಳು ಎಂಬ ವಸಹಾತುಶಾಹಿ ಭಾವನೆಗೆ ಇಂದಿನ ನಮ್ಮ ಪ್ರಜಾಸತ್ತಾತ್ಮಕ ರಾಷ್ಟ್ರದಲ್ಲಿ ಯಾವುದೇ ಸ್ಥಾನ ಇರಕೂಡದು.

ಕೃಪೆ: the wire

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)