varthabharthi

ನಿಮ್ಮ ಅಂಕಣ

ಲಾಕ್ ಡೌನ್-ಅಪಾಯಗಳು

ವಾರ್ತಾ ಭಾರತಿ : 26 Mar, 2020
ಜೀನ್ ಡ್ರೆಜೆ, ಅನುವಾದ: ಟಿ.ಎಸ್.ವೇಣುಗೋಪಾಲ್

ಹೊಸ ಕೊರೋನ ವೈರಾಣು ಭಾರತದಲ್ಲಿ ಎರಡು ರೀತಿಯ ಬಿಕ್ಕಟ್ಟು ಸೃಷ್ಟಿಸಿದೆ. ಒಂದು ಆರೋಗ್ಯದ ಬಿಕ್ಕಟ್ಟು ಮತ್ತೊಂದು ಆರ್ಥಿಕ ಬಿಕ್ಕಟ್ಟು. ಸತ್ತವರ ಸಂಖ್ಯೆಯ ದೃಷ್ಟಿಯಿಂದ (ಪ್ರತಿ ವರ್ಷ 8 ಮಿಲಿಯನ್ ಜನ ಕ್ಷಯದಿಂದ ಸಾಯುವ ದೇಶದಲ್ಲಿ ಏಳು ಜನ ಕೋವಿಡ್-19ನಿಂದ ಸಾಯುತ್ತಿದ್ದಾರೆ.) ನೋಡಿದಾಗ ಆರೋಗ್ಯ ಬಿಕ್ಕಟ್ಟು ಅಷ್ಟೊಂದು ತೀವ್ರ ಅನ್ನಿಸದೇ ಇರಬಹುದು. ಆದರೆ ಹಾಗೆ ಸಾಯುವವರ ಸಂಖ್ಯೆ ವೇಗವಾಗಿ ಬೆಳೆಯುತ್ತಿದೆ. ಆದರೆ ಆರ್ಥಿಕ ಬಿಕ್ಕಟ್ಟು ತೀವ್ರ ರಭಸದಿಂದ ಅಪ್ಪಳಿಸುತ್ತಿದೆ. ಪ್ರತಿ ದಿನ ಲಕ್ಷಾಂತರ ಜನರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇದು ಬಡವ ಬಲ್ಲಿದ ಅನ್ನದೆ ಎಲ್ಲರನ್ನೂ ಕಾಡುವ ಆರೋಗ್ಯದ ಬಿಕ್ಕಟ್ಟಿನಂತಲ್ಲ. ಬಡವರನ್ನು ಹೆಚ್ಚು ತೀವ್ರವಾಗಿ ಕಾಡುತ್ತದೆ.


ಭಾರತದ ಮಂದಗತಿ

ವಲಸೆ ಬಂದ ಕೆಲಸಗಾರರು, ರಸ್ತೆ ಬದಿಯ ವ್ಯಾಪಾರಿಗಳು, ಕಂಟ್ರಾಕ್ಟ್ ಕೆಲಸಗಾರರು, ಅನೌಪಚಾರಿಕ ವಲಯಗಳಲ್ಲಿ ಕೆಲಸ ಮಾಡುವ ಬಹುತೇಕ ಜನ ಹೀಗೆ ಎಲ್ಲರನ್ನು ಇದು ಕಾಡುತ್ತಿದೆ. ಬಹುತೇಕ ದುಡಿಯುವ ಜನ ಈ ಆರ್ಥಿಕ ಸುನಾಮಿಗೆ ಬಲಿಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಸಾಮೂಹಿಕ ಮುಚ್ಚಳದಿಂದ ವಲಸೆ ಕೆಲಸಗಾರರು ತಮ್ಮ ಊರುಗಳಿಗೆ ದೌಡಾಯಿಸಬೇಕಾಗಿದೆ. ಅವರಲ್ಲಿ ಎಷ್ಟೋ ಜನರಿಗೆ ಬರಬೇಕಾದ ಕೂಲಿಯೂ ಸಿಕ್ಕಿಲ್ಲ. ರೈಲುಗಳು ರದ್ದಾಗಿರುವುದರಿಂದ ಹಲವರಿಗೆ ಊರಿಗೆ ಹೋಗುವುದಕ್ಕೂ ಆಗುತ್ತಿಲ್ಲ. ಅತಂತ್ರ ಸ್ಥಿತಿಯಲ್ಲಿದ್ದಾರೆ. ಮಹಾರಾಷ್ಟ್ರದಲ್ಲಿ ಆಗುತ್ತಿರುವ ಆರ್ಥಿಕ ನಿಲುಗಡೆ ಬೇರೆ ರಾಜ್ಯಗಳಿಗೂ ವಿಸ್ತರಿಸುತ್ತಿದೆ. ಫ್ಯಾಕ್ಟರಿಗಳು, ಅಂಗಡಿಗಳು, ಕಚೇರಿಗಳು ಮತ್ತು ಕೆಲಸದ ಸ್ಥಳಗಳನ್ನು ಮುಚ್ಚಲಾಗುತ್ತಿವೆ. ತಕ್ಷಣದಲ್ಲಿ ಸಾಮಾನ್ಯ ಸ್ಥಿತಿಗೆ ಮರಳುವ ಸೂಚನೆಯೂ ಕಾಣುತ್ತಿಲ್ಲ. ಸಾರಿಗೆ ಸಂಪರ್ಕಗಳು ಅಸ್ತವ್ಯಸ್ತವಾಗಿರುವುದರಿಂದ ಬರಲಿರುವ ಗೋಧಿ ಸುಗ್ಗಿಯೂ ಜನರಿಗೆ ನೆಮ್ಮದಿ ತರದೇ ಇರಬಹುದು. ಇದು ಉತ್ತರ ಭಾರತದ ಲಕ್ಷಾಂತರ ಜನರಿಗೆ ಬದುಕಿನ ಆಸರೆ. ಇವೆಲ್ಲಾ ಮುಂಬರುವ ಕಷ್ಟದ ದಿನಗಳ ಒಂದು ತುಣುಕು ಅಷ್ಟೆ.

ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಪರಿಹಾರ ಕ್ರಮಗಳನ್ನು ದೊಡ್ಡ ಪ್ರಮಾಣದಲ್ಲಿ ತುರ್ತಾಗಿ ತೆಗೆದುಕೊಳ್ಳಬೇಕಾಗಿದೆ. ರೋಗ ಹರಡುವುದನ್ನು ಕಡಿಮೆ ಮಾಡುವ ದೃಷ್ಟಿಯಿಂದ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದು ಅವಶ್ಯಕವಾಗಿರಬಹುದು. ಆದರೆ ಬಡವರಿಗೆ ಕೆಲಸವಿಲ್ಲದೆ ಮನೆಯಲ್ಲಿ ಉಳಿಯುವುದಕ್ಕೆ ಸಾಧ್ಯವಿಲ್ಲ. ಹಾಗೆ ಉಳಿಯಲೇಬೇಕಾದರೆ ಅವರಿಗೆ ನೆರವು ಬೇಕು. ಉತ್ತಮ ಸಾಮಾಜಿಕ ಸುರಕ್ಷತೆ ಇರುವ ಶ್ರೀಮಂತ ದೇಶಗಳಿಗೂ ಭಾರತಕ್ಕೂ ಒಂದು ದೊಡ್ಡ ವ್ಯತ್ಯಾಸವಿದೆ. ಉದಾಹರಣೆಗೆ ಕೆನಡಾ ಅಥವಾ ಇಟಲಿಯಲ್ಲಿ ಒಂದು ಸಾಮಾನ್ಯ ಕುಟುಂಬ ಕೆಲವು ಕಾಲವಾದರು ಅಭದ್ರತೆಯನ್ನು ತಾಳಿಕೊಳ್ಳಬಹುದು. ಆದರೆ ಭಾರತದ ಬಡವರಿಗೆ ದುಡಿಮೆ ಇಲ್ಲದೆ ಬದುಕುವ ಸಾಮರ್ಥ್ಯ ಇಲ್ಲವೇ ಇಲ್ಲ ಅನ್ನಬಹುದು.

ಸಾಮಾಜಿಕ ಯೋಜನೆಗಳನ್ನು ಜಾರಿಗೊಳಿಸೋಣ

ಈಗ ಸಮಯ ಅನ್ನುವುದು ತುಂಬಾ ಮುಖ್ಯ. ಹಾಗಾಗಿ ಈಗಾಗಲೇ ಇರುವ ಸಾಮಾಜಿಕ ಭದ್ರತೆಯ ಯೋಜನೆಗಳನ್ನು ಬಳಸಿಕೊಳ್ಳಬೇಕು. ಬಡವರಿಗೆ ಬೆಂಬಲ ನೀಡಬೇಕು. ಪಿಂಚಣಿ, ಸಾರ್ವಜನಿಕ ಪಡಿತರ ಪದ್ಧತಿ, ಮಧ್ಯಾಹ್ನದ ಊಟ, ಮಹಾತ್ಮ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ನಿಯಮ ಇತ್ಯಾದಿ ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಪ್ರಾರಂಭಕ್ಕೆ ಪಿಂಚಣಿಯನ್ನು ಮುಂಗಡವಾಗಿ ನೀಡುವುದು, ಪಡಿತರ ಪದ್ಧತಿಯ ಪ್ರಮಾಣವನ್ನು ಹೆಚ್ಚಿ ಸುವುದು, ನರೇಗಾ ಯೋಜನೆಯಲ್ಲಿ ಬಾಕಿ ಇರುವ ಕೂಲಿಯನ್ನು ಪಾವತಿಸುವುದು ಇವೆಲ್ಲವನ್ನು ಮಾಡಬಹುದು. ಕೆಲವು ರಾಜ್ಯಗಳು ಈಗಾಗಲೇ ಈ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿವೆ. ಆದರೆ ತುರ್ತಾಗಿ ಇವುಗಳ ಪ್ರಮಾಣವನ್ನು ತುಂಬಾ ಹೆಚ್ಚಿ ಸಬೇಕಾಗಿದೆ. ಇದಕ್ಕೆ ಕೇಂದ್ರ ಸರಕಾರ ದೊಡ್ಡ ಪ್ರಮಾಣದಲ್ಲಿ ಬಂಡವಾಳ ತೊಡಗಿಸಬೇಕು. ಕಾರ್ಪೊರೇಟ್‌ಗಳನ್ನು ಪಾರುಮಾಡುವುದಕ್ಕೆ ಹಣವನ್ನು ಪೋಲು ಮಾಡುವುದನ್ನು ನಿಲ್ಲಿಸಬೇಕು.

ಬಿಕ್ಕಟ್ಟಿಗೆ ತೀವ್ರವಾಗಿ ಸಿಲುಕಿರುವ ಈ ರೀತಿಯ ಸಂಸ್ಥೆಗಳು ರಕ್ಷಣೆಗಾಗಿ ಸರಕಾರದ ಮೇಲೆ ಒತ್ತಾಯ ಹೇರುವ ಸಾಧ್ಯತೆಗಳಿವೆ. ಅವಶ್ಯಕ ಸೇವೆಗಳನ್ನು ನಿಲ್ಲಿಸುವ ಪ್ರವೃತ್ತಿಯಿಂದ ಜನರ ಕಷ್ಟ ಕಾರ್ಪಣ್ಯಗಳು ಹೆಚ್ಚುವ ಅಪಾಯ ಇದೆ. ಸಾರ್ವಜನಿಕ ಸಾರಿಗೆ, ಆಡಳಿತ ಕಚೇರಿಗಳು, ನ್ಯಾಯಾಲಯಗಳ ವಿಚಾರಣೆ, ನರೇಗಾ ಯೋಜನೆಗಳು ಮತ್ತು ಇಮ್ಯುನೈಸೇಷನ್ ಕ್ರಮಗಳು ಕೂಡ ಕೆಲವು ರಾಜ್ಯಗಳಲ್ಲಿ ಸ್ಥಗಿತಗೊಂಡಿವೆ. ಇಂತಹ ಕೆಲವು ಕ್ರಮಗಳು ಖಂಡಿತಾ ಬೇಕು. ಸಮರ್ಥನೀಯ ಕೂಡ. ಆದರೆ ಉಳಿದ ಕೆಲವು ಕ್ರಮಗಳು ಪ್ರತಿಕೂಲ ಪರಿಣಾಮ ಉಂಟು ಮಾಡಬಹುದು. ನಾವು ಕೇವಲ ಆರೋಗ್ಯದ ಬಿಕ್ಕಟ್ಟನ್ನು ಮಾತ್ರ ಎದುರಿಸುತ್ತಿಲ್ಲ. ಜೊತೆಗೆ ಆರ್ಥಿಕ ಬಿಕ್ಕಟ್ಟನ್ನೂ ಎದುರಿಸುತ್ತಿದ್ದೇವೆ ಅನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಸಾರ್ವಜನಿಕ ಸೇವೆಯನ್ನು ನಿಲ್ಲಿಸುವುದರಿಂದ ಆರೋಗ್ಯದ ಬಿಕ್ಕಟ್ಟನ್ನು ಮಿತಗೊಳಿಸಬಹುದು. ಆದೆ ಅದರ ಆರ್ಥಿಕ ಪರಿಣಾಮಗಳನ್ನೂ ಗಮನಿಸಬೇಕು.

ನಾವು ವಿವಿಧ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುವಾಗ ಎರಡೂ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ನೀವು ಮನೆಯಲ್ಲೇ ಉಳಿಯಲು ತೀರ್ಮಾನಿಸಿದರೆ ಅದಕ್ಕೆ ಎರಡು ಉದ್ದೇಶಗಳು ಇರಬಹುದು. ಒಂದು ಸ್ವ-ರಕ್ಷಣೆ. ಇನ್ನೊಂದು ಅದಕ್ಕಿರುವ ಸಾರ್ವಜನಿಕ ಉದ್ದೇಶ. ಮೊದಲನೆಯದರಲ್ಲಿ ನಿಮಗೆ ರೋಗ ತಗಲಿ ಬಿಡಬಹುದೆನ್ನುವ ಭೀತಿಯಿಂದ ನೀವು ಮನೆಯಲ್ಲಿ ಉಳಿಯುತ್ತೀರಿ. ಎರಡನೆಯದು ವೈರಾಣವು ಹರಡುವುದನ್ನು ತಡೆಯಬೇಕೆನ್ನುವ ಸಾಮೂಹಿಕ ಪ್ರಯತ್ನದಲ್ಲಿ ನೀವು ಭಾಗಿಯಾಗುವ ಉದ್ದೇಶದಿಂದ ಮನೆಯಲ್ಲಿ ಉಳಿಯುತ್ತೀರಿ. ಮುನ್ನೆಚ್ಚರಿಕೆಯ ಕ್ರಮಗಳನ್ನು ಕೆಲವರು ಸ್ವ-ರಕ್ಷಣೆಯ ವಿಷಯವಾಗಿ ಯೋಚಿಸುತ್ತಾರೆ. ಆದರೆ ಹಾಗೆ ನೋಡಿದರೆ ವಯಸ್ಸಾದವರು ಮತ್ತು ವೈದ್ಯಕೀಯ ಸೇವೆಯಲ್ಲಿ ತೊಡಗಿಕೊಂಡವರನ್ನು ಬಿಟ್ಟರೆ ಉಳಿದವರು ವೈಯಕ್ತಿಕವಾಗಿ ಖಾಯಿಲೆಗೆ ತುತ್ತಾಗುವ ಸಾಧ್ಯತೆಗಳು ತುಂಬಾ ಕಡಿಮೆ. ಭಾರತದಲ್ಲಿ ಪ್ರತಿವರ್ಷ ಕ್ಷಯದಿಂದ 4 ಲಕ್ಷ ಜನ ಸಾಯುತ್ತಾರೆ. ಆದರೂ ನಾವು ಆ ಬಗ್ಗೆ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದಿಲ್ಲ. ಆದರೆ ಕೇವಲ 7 ಜನ ಕೋವಿಡ್-19ರಲ್ಲಿ ಸತ್ತಾಗ ಏಕೆ ಇಷ್ಟೊಂದು ಎಚ್ಚರ ವಹಿಸುತ್ತಿದ್ದೇವೆೆ? ಈ ಎಚ್ಚರ ನಮ್ಮನ್ನು ರಕ್ಷಿಸಿಕೊಳ್ಳುವುದಕ್ಕಲ್ಲ. ಬದಲಾಗಿ ಸಾಂಕ್ರಾಮಿಕ ಹರಡದಂತೆ ತಡೆಯುವ ಸಾಮೂಹಿಕ ಪ್ರಯತ್ನದ ಭಾಗವಾಗಿ ಈ ಎಚ್ಚರ.
ಸೃಜನಶೀಲತೆಯನ್ನು ಮೆರೆಯೋಣ

 ಮುನ್ನೆಚ್ಚರಿಕೆಯ ಕ್ರಮವಾಗಿ ಸಾರ್ವಜನಿಕ ಸೇವೆಯನ್ನು ಮುಚ್ಚುವುದರ ಬಗ್ಗೆಯೂ ನಾವು ಇದೇ ರೀತಿಯಲ್ಲಿ ಯೋಚಿಸಬಹುದು. ಕನಿಷ್ಠ ಸದ್ಯಕ್ಕಾದರೂ ಸರಕಾರಿ ನೌಕರನ ಸ್ವ-ರಕ್ಷಣೆ ಪ್ರಮುಖ ಕಾಳಜಿಯಲ್ಲ. ಸಾರ್ವಜನಿಕ ಕಾಳಜಿ ಮುಖ್ಯವಾಗಬೇಕು. ಸಾರ್ವಜನಿಕ ಕಾಳಜಿಯ ವಿಷಯದ ಬಗ್ಗೆ ಯೋಚಿಸುವಾಗ ಸಂಘಟನೆಗಳನ್ನು ಮುಚ್ಚುವುದರಿಂದ ಆಗುವ ಆರ್ಥಿಕ ಪರಿಣಾಮಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಒಂದು ಸಂಘಟನೆಯನ್ನು ತೆರೆಯುವುದರಿಂದ ದೊಡ್ಡ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಅನ್ನುವುದಾದರೆ, ಸಾರ್ವಜನಿಕ ದೃಷ್ಟಿಯಿಂದ ಅದನ್ನು ಮುಚ್ಚುವುದು ಖಂಡಿತಾ ಅವಶ್ಯಕ. ಉದಾಹರಣೆಗೆ ಶಾಲಾ ಕಾಲೇಜುಗಳು. ಆದರೆ ಬಡವರಿಗೆ ಅವರ ಕಷ್ಟ ಕಾಲದಲ್ಲಿ ನೆರವಾಗುವ, ಅಂತಹ ಆರೋಗ್ಯದ ಸಮಸ್ಯೆಗಳನ್ನು ಸೃಷ್ಟಿಸದ ಸೇವೆಗಳನ್ನು ಮುಚ್ಚುವಾಗ ಯೋಚಿಸಬೇಕು. ಸಾಧ್ಯವಾದಷ್ಟು ಅವುಗಳನ್ನು ಮುಂದುವರಿಸುವುದು ಸೂಕ್ತ. ಇದು ಕೇವಲ ವೈದ್ಯಕೀಯ ಸೇವೆಗಳು, ಸಾರ್ವಜನಿಕ ಪಡಿತರ ಪದ್ಧತಿಗೆ ಮಾತ್ರ ಸೀಮಿತವಾಗಬಾರದು.

ಜಿಲ್ಲಾ ಹಾಗೂ ಸ್ಥಳೀಯ ಮಟ್ಟದ ಹಲವು ಆಡಳಿತ ಕಚೇರಿಗಳನ್ನು ತೆರೆಯಬೇಕು. ಬಡಜನರು ಹಲವು ರೀತಿಯಲ್ಲಿ ಅವುಗಳನ್ನು ಅವಲಂಬಿಸಿದ್ದಾರೆ. ಅವುಗಳನ್ನು ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಮುಚ್ಚುವುದರಿಂದ ಆರ್ಥಿಕ ಬಿಕ್ಕಟ್ಟು ತೀವ್ರವಾಗುತ್ತದೆ. ಹಾಗೆ ಮುಚ್ಚುವುದರಿಂದ ಆರೋಗ್ಯದ ಬಿಕ್ಕಟ್ಟನ್ನು ನಿವಾರಿಸುವ ದೃಷ್ಟಿಯಿಂದಲೂ ಅಂತಹ ಅನುಕೂಲ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಾರ್ವಜನಿಕ ಸೇವೆಯನ್ನು ಮುಂದುವರಿಸಿಕೊಂಡು ಹೋಗುವಲ್ಲಿ ಒಂದಿಷ್ಟು ಉತ್ಸಾಹ ಹಾಗೂ ಸೃಜನಶೀಲತೆ ಬೇಕು. ಕೊರೋನ ವೈರಾಣು ರಕ್ಷಣೆಗೆ ಸಿದ್ಧತೆಗೆ ಸಂಬಂಧಿಸಿದಂತೆ ಅವಶ್ಯಕ ಸೇವೆಗಳ ಮತ್ತು ಕಾರ್ಯಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅಧಿಕೃತ ಮಾರ್ಗದರ್ಶಿಗಳು ಲಭ್ಯವಿದೆ. ಅಲ್ಲಿಂದ ನಾವು ಪ್ರಾರಂಭಿಸಬಹುದು. ಉದಾಹರಣೆಗೆ ಅಂಗನವಾಡಿಗಳು-ಮಕ್ಕಳನ್ನು ಹೊರಗಿಟ್ಟು- ಸಾರ್ವಜನಿಕ ಆರೋಗ್ಯ ಜನರನ್ನು ತಲುಪುವಲ್ಲಿ ಪ್ರಮುಖ ಪಾತ್ರವಹಿಸಬಹುದು. ಹಲವು ಸಾರ್ವಜನಿಕ ಸೇವೆಗಳನ್ನು ಕೂಡ ಈ ನಿಟ್ಟಿನಲ್ಲಿ ಬಳಸಿಕೊಳ್ಳಬಹುದು. ಬೇಕಾದ ಸೂಕ್ತ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸೂಕ್ತ ಮಾಹಿತಿಯನ್ನು ತಿಳಿಸುವುದಕ್ಕೆ, ಕೈತೊಳೆದುಕೊಳ್ಳುವ ಹಾಗೂ ದೂರ ಕಾಪಾಡಿಕೊಳ್ಳುವುದೇ ಮುಂತಾದ ಒಳ್ಳೆಯ ಅಭ್ಯಾಸಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಇವುಗಳನ್ನು ಬಳಸಿಕೊಳ್ಳಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)