varthabharthi

ಸಂಪಾದಕೀಯ

ಲಾಕ್‌ಡೌನ್ ಇನ್ನೊಂದು ನೋಟು ನಿಷೇಧವಾಗದಿರಲಿ

ವಾರ್ತಾ ಭಾರತಿ : 29 Mar, 2020

ಈ ದೇಶದ ಪ್ರಧಾನ ಮಂತ್ರಿಯಾಗಿರುವ ನರೇಂದ್ರ ಮೋದಿ ಅವರು ರವಿವಾರ 'ಮನ್ ಕಿ ಬಾತ್'ನಲ್ಲಿ ಲಾಕ್‌ಡೌನ್ ಕಾರಣಕ್ಕಾಗಿ ದೇಶದ ಕ್ಷಮೆಯಾಚಿಸಿದಾಗ ತಕ್ಷಣ ಬೇಡ ಬೇಡವೆಂದರೂ ಕಣ್ಣ ಮುಂದೆ ಬರುವುದು ನೋಟು ನಿಷೇಧದ ದಿನಗಳು. ಯಾವುದೇ ಪೂರ್ವ ತಯಾರಿ ಇಲ್ಲದೆ 'ನೋಟು ನಿಷೇಧ' ಘೋಷಣೆಯಾದಾಗ ದೇಶದ ಜನರು ಅಕ್ಷರಶಃ ಬೀದಿಗೆ ಬಿದ್ದಿದ್ದರು. ತಮ್ಮದೇ ಹಣಕ್ಕಾಗಿ ಬ್ಯಾಂಕ್‌ನ ಮುಂದೆ ಕ್ಯೂ ನಿಲ್ಲಬೇಕಾದ ಸ್ಥಿತಿ ಜನಸಾಮಾನ್ಯರದಾಗಿತ್ತು. ಕ್ಯೂನಲ್ಲೇ ಕೆಲವರು ಮೃತಪಟ್ಟು, ಹಲವರು ಅಸ್ವಸ್ಥರಾದ ಘಟನೆಗಳು ವರದಿಯಾದವು. ನೋಟು ನಿಷೇಧದ ಕತ್ತಿಗೆ ಮೊದಲು ತಲೆಕೊಟ್ಟಿದ್ದು 'ದಿನಗೂಲಿ ಕಾರ್ಮಿಕರು'. ಕೂಲಿಯಿಲ್ಲದೆ ಸಾವಿರಾರು ಕಾರ್ಮಿಕರು ರಾತ್ರೋ ರಾತ್ರಿ ಬೀದಿಗೆ ಬಿದ್ದರು. ಸಾವಿರಾರು ಜನರು ಮರಳಿ ತಮ್ಮ ಊರಿಗೆ ವಲಸೆ ಹೋಗುವ ಸನ್ನಿವೇಶ ನಿರ್ಮಾಣವಾಯಿತು. ದೇಶಾದ್ಯಂತ ಲಕ್ಷಾಂತರ ಸಣ್ಣ ಉದ್ದಿಮೆಗಳು ಮುಚ್ಚಲ್ಪಟ್ಟವು. ದೇಶ ಅಲ್ಲೋಲ ಕಲ್ಲೋಲವಾದಾಗ ಪ್ರಧಾನಿ ಮೋದಿಯವರು ''ನನಗೆ ಕೇವಲ ಐವತ್ತು ದಿನಗಳನ್ನು ಕೊಡಿ. ಆ ಬಳಿಕವೂ ಸರಿಯಾಗದಿದ್ದಲ್ಲಿ ನನಗೆ ಬೆಂಕಿ ಹಚ್ಚಿ ಅಥವಾ ನೇಣು ಹಾಕಿ'' ಎಂದು ಘೋಷಿಸಿದರು. ಆದರೆ ನೋಟು ನಿಷೇಧದ ಆಘಾತದಿಂದ ದೇಶ ಇಂದಿಗೂ ಚೇತರಿಸಿಕೊಂಡಿಲ್ಲ. ಕಪ್ಪು ಹಣವಂತೂ ಬರಲೇ ಇಲ್ಲ. ಪ್ರಧಾನಿಯ ಮಾತನ್ನು ನಂಬಿ ಜನಸಾಮಾನ್ಯರು ಮಾಡಿದ ತ್ಯಾಗಕ್ಕೆ ಕೊನೆಗೂ ಫಲವೇ ಸಿಗಲಿಲ್ಲ. ನೋಟು ನಿಷೇಧದ ಅಚಾತುರ್ಯಗಳ ಕುರಿತಂತೆ ಪ್ರಧಾನಿ ಮೋದಿಯವರು ಈವರೆಗೆ ಯಾವುದೇ ಸ್ಪಷ್ಟೀಕರಣ ನೀಡಿಲ್ಲ. ನಡೆದ ಪ್ರಮಾದಗಳಿಗೆ ಈವರೆಗೆ ಕ್ಷಮೆಯಾಚನೆಯನ್ನೂ ಮಾಡಿಲ್ಲ.

ಇದೀಗ ದೇಶ ಕೊರೋನದ ಮುಂದೆ ತತ್ತರಿಸಿ ಕೂತಿದೆ. ಈಗಾಗಲೇ ಮಕಾಡೆ ಮಲಗಿರುವ ದೇಶದ ಆರ್ಥಿಕತೆಯನ್ನು ಕೊರೋನ ಇನ್ನಷ್ಟು ಜರ್ಜರಿತವಾಗಿಸಿದೆ. ಒಂದೆಡೆ ಸಾಂಕ್ರಾಮಿಕ ರೋಗ, ಮಗದೊಂದೆಡೆ ತತ್ತರಿಸಿ ಕೂತಿರುವ ಆರ್ಥಿಕತೆ.ಇವೆರೆಡರ ನಡುವೆ ದೇಶದ ಶ್ರೀಸಾಮಾನ್ಯನ ಬದುಕು ನುಚ್ಚು ನೂರಾಗುತ್ತಿದೆ. ಕೊರೋನವನ್ನು ಎದುರಿಸಲು ಬೇಕಾದಂತಹ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದ್ದು, 'ಲಾಕ್‌ಡೌನ್' ಒಂದನ್ನೇ ನೆಚ್ಚಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ದೇಶಾದ್ಯಂತ ವೈದ್ಯರು ವೆಂಟಿಲೇಟರ್, ಲ್ಯಾಬ್‌ಗಳ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಆದರೆ ಅದನ್ನು ಪೂರೈಸುವುದಕ್ಕೆ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಸ್ವತಂತ್ರ ಕಟ್ಟಡಗಳು, ಕಿಟ್‌ಗಳು, ನುರಿತ ವೈದ್ಯರು ಇವೆಲ್ಲದರ ಕೊರತೆಯಿಂದಾಗಿ ಭಾರತ ಕೊರೋನವನ್ನು ಸ್ವತಃ ಭೀಕರವಾಗಿಸಿಕೊಂಡಿದೆ. ಆದರೆ ಲಾಕ್‌ಡೌನ್ ಈ ದೇಶದ ಮೇಲೆ ಮಾಡುತ್ತಿರುವ ಅಡ್ಡ ಪರಿಣಾಮಗಳು, ಕೊರೋನ ತಂದಿಡುವ ನಷ್ಟಕ್ಕಿಂತಲೂ ಭೀಕರವಾಗಲಿದೆ ಎನ್ನುವುದು ನಿಧಾನಕ್ಕೆ ಜನರಿಗೆ ಮನವರಿಕೆಯಾಗತೊಡಗಿದೆ. ಇಂತಹ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿರುವ ನರೇಂದ್ರ ಮೋದಿಯವರು ''ಲಾಕ್‌ಡೌನ್ ಅನಿವಾರ್ಯವಾಗಿದೆ. ಇದರಿಂದ ತುಂಬಾ ಅನಾನುಕೂಲವಾಗಿದೆ. ಆದಕ್ಕಾಗಿ ನಾನು ದೇಶದ ಜನರ ಕ್ಷಮೆಯಾಚಿಸುತ್ತೇನೆ. ನನ್ನ ಕ್ಷಮೆಯನ್ನು ನೀವು ಸ್ವೀಕರಿಸುತ್ತೀರಿ ಎಂಬ ನಂಬಿಕೆ ನನಗಿದೆ'' ಎಂದಿದ್ದಾರೆ.

ದೇಶ ಲಾಕ್‌ಡೌನ್‌ನ್ನು ಒಪ್ಪಿಕೊಂಡಿದೆ. ಅದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕ್ಷಮೆಯಾಚನೆಗೈಯುವ ಅಗತ್ಯವಿಲ್ಲ. ಆದರೆ ಕೊರೋನದಂತಹ ರೋಗವನ್ನು ನಿಭಾಯಿಸಿದ ರೀತಿಗಾಗಿ ಪ್ರಧಾನಿ ದೇಶದ ಕ್ಷಮೆ ಯಾಚನೆ ಮಾಡಲೇಬೇಕು. ಕೊರೋನಾ ತೀರಾ ಆನಿರೀಕ್ಷಿತವಾಗಿ ಈ ದೇಶದೊಳಗೆ ನುಗ್ಗಿರಲಿಲ್ಲ. ವೈರಸ್ ಚೀನಾ ಸಹಿತ ವಿಶ್ವದ ಒಂದೊಂದೆ ದೇಶಗಳನ್ನು ಆಕ್ರಮಿಸಿದ ಬಳಿಕ ಭಾರತಕ್ಕೆ ಕಾಲಿಟ್ಟಿತ್ತು. ಅದರ ಬಗ್ಗೆ ಮುಂಜಾಗ್ರತೆ ವಹಿಸುವುದಕ್ಕೆ ಸಾಕಷ್ಟು ಕಾಲಾವಕಾಶ ದೇಶದ ಮುಂದಿತ್ತು. ಆದರೆ ಭಾರತ ಅದನ್ನು ಬಳಸಿಕೊಳ್ಳುವ ಬದಲು 'ಟ್ರಂಪ್ ಆಗಮನದ' ಸಂಭ್ರಮದಲ್ಲಿ ಮೈ ಮರೆಯಿತು. ಕೊರೋನದ ಬಗ್ಗೆ ವಿಶ್ವಸಂಸ್ಥೆ ಎಚ್ಚರಿಸಿದ ಬೆನ್ನಿಗೇ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಿಯಂತ್ರಣವನ್ನು ಸಾಧಿಸಿದ್ದಿದ್ದರೆ ಇಡೀ ದೇಶವನ್ನು ಲಾಕ್‌ಡೌನ್ ಮಾಡುವ ಅಗತ್ಯವಿದ್ದಿರಲಿಲ್ಲ. ಕನಿಷ್ಟ ಯಾರೆಲ್ಲ ವಿಐಪಿಗಳು, ಅನಿವಾಸಿಗಳು ವಿಮಾನ ನಿಲ್ದಾಣಗಳ ಮೂಲಕ ಭಾರತಕ್ಕೆ ಕಾಲಿಟ್ಟರೊ ಅವರೆಲ್ಲರಿಗೂ ತಕ್ಷಣವೇ 'ಕ್ವಾರಂಟೈನ್' ಏರ್ಪಡಿಸಿದ್ದಿದ್ದರೆ, ವೈರಸ್ ಭಾರತದೊಳಗೆ ಪಸರಿಸುವುದು ತಪ್ಪುತ್ತಿತ್ತು. ಹೆಚ್ಚೆಂದರೆ ಒಂದು ಲಕ್ಷದಷ್ಟು ಜನರನ್ನು ಗೃಹ ಬಂಧನದಲ್ಲಿಡುವ ಅನಿವಾರ್ಯತೆ ಸರಕಾರಕ್ಕೆ ಸೃಷ್ಟಿಯಾಗುತ್ತಿತ್ತು. ಆದರೆ ಅವರನ್ನೆಲ್ಲ ಅವರ ನಿವಾಸಗಳಿಗೆ ತೆರಳಲು ಅನುಮತಿ ನೀಡಿದ ಕಾರಣದಿಂದ ಇಂದು ದೇಶದ ನೂರು ಕೋಟಿಗೂ ಅಧಿಕ ಜನರನ್ನು ಗೃಹಬಂಧನದಲ್ಲಿಡುವ ಸ್ಥಿತಿ ನಿರ್ಮಾಣವಾಗಿದೆ.

ಆದುದರಿಂದ ಪ್ರಧಾನಿ ಅವರು ಕ್ಷಮೆಯಾಚನೆ ಮಾಡಬೇಕಾಗಿರುವುದು 'ಸೂಕ್ತ ಮುಂಜಾಗ್ರತೆಯನ್ನು ತೆಗೆದುಕೊಳ್ಳುವಲ್ಲಿ ತಡ ಮಾಡಿ ಇಡೀ ದೇಶವನ್ನು ವಿಪತ್ತಿಗೆ ತಳ್ಳಿದ ಕಾರಣಕ್ಕಾಗಿ'. ಲಾಕ್‌ಡೌನ್‌ಗೆ ಇಡೀ ದೇಶ ತಲೆಬಾಗಿದೆ. ಆದರೆ ಈ ಲಾಕ್‌ಡೌನ್‌ನ ಹಿಂದಿರುವ ಮಾನವೀಯ ಉದ್ದೇಶದ ಅರಿವೇ ಇಲ್ಲದವರಂತೆ ಪೊಲೀಸ್ ಇಲಾಖೆ ವರ್ತಿಸುತ್ತಿದೆ. ಇತ್ತೀಚೆಗೆ ಕೋಲ್ಕತಾದಲ್ಲಿ ಹಾಲು ತರಲೆಂದು ಬೀದಿಗಿಳಿದ ವ್ಯಕ್ತಿಯೊಬ್ಬ ಪೊಲೀಸ್ ಲಾಠಿಯೇಟಿಗೆ ಪ್ರಾಣ ತೆತ್ತಿದ್ದಾನೆ. ಶಿವಮೊಗ್ಗದಲ್ಲೂ ಪೊಲೀಸ್ ದೌರ್ಜನ್ಯಕ್ಕೆ ಓರ್ವ ಮೃತಪಟ್ಟಿದ್ದಾನೆ ಎನ್ನುವ ಆರೋಪ ಕೇಳಿ ಬರುತ್ತಿದೆ. ದೇಶಾದ್ಯಂತ 'ಕರ್ಫ್ಯೂ'ವನ್ನು ಮುಂದಿಟ್ಟುಕೊಂಡು ಪೊಲೀಸರು ಎಸಗುತ್ತಿರುವ ದೌರ್ಜನ್ಯಗಳು, ಕೊರೋನ ವೈರಸ್‌ನ್ನು ಇನ್ನಷ್ಟು ರಾಕ್ಷಸೀಯಗೊಳಿಸಿವೆ. ಅನಿವಾರ್ಯ ಕಾರಣಕ್ಕಾಗಿ ರಸ್ತೆಗಳಿಂದ ಒಬ್ಬಂಟಿಯನ್ನೂ ಬಿಡದೆ ಪೊಲೀಸರು ಭೀಕರವಾಗಿ ಥಳಿಸಿರುವ ಘಟನೆಗಳು ವರದಿಯಾಗುತ್ತಿವೆ. ಇದೇ ಸಂದರ್ಭದಲ್ಲಿ 'ವಲಸೆ ಕಾರ್ಮಿಕರು' ಸಾಲು ಸಾಲಾಗಿ ಗುಳೆ ಹೊರಟಿದ್ದು, ಲಾಕ್‌ಡೌನ್‌ನ ಉದ್ದೇಶವೇ ನೆಲಕಚ್ಚುವ ಸೂಚನೆಗಳು ಕಾಣುತ್ತಿವೆ. ಒಂದೆಡೆ ಇವರನ್ನು ತಮ್ಮ ಊರಿಗೆ ಮರಳದಂತೆ ತಡೆಯಲಾಗುತ್ತಿದೆ. ಮಗದೊಂದೆಡೆ ಇವರಿಗೆ ಕನಿಷ್ಟ ಆಹಾರ, ವಸತಿಯ ವ್ಯವಸ್ಥೆಯನ್ನು ಮಾಡಿಕೊಡುವಲ್ಲೂ ಸರಕಾರ ಎಡವಿದೆ.

'ಕಷ್ಟದಲ್ಲಿರುವ ಬಡವರಿಗೆ ಸ್ಪಂದಿಸಬೇಕಾಗಿದೆ. ಅವರನ್ನು ಪ್ರೀತಿಯಿಂದ ಕಾಣಬೇಕಾಗಿದೆ' ಎಂದು ಮೋದಿಯವರು ತಮ್ಮ ಮನ್‌ಕಿ ಬಾತ್‌ನಲ್ಲಿ ಕರೆ ನೀಡಿದ್ದಾರೆ. ಮೊತ್ತ ಮೊದಲು ಮೋದಿ 'ಕಷ್ಟದಲ್ಲಿರುವ ಬಡವರಿಗೆ ತಕ್ಷಣದಿಂದಲೇ ರೂಪಿಸಿದ ಯೋಜನೆಗಳ' ವಿವರಗಳನ್ನು ನೀಡಬೇಕಾಗಿದೆ. ವಲಸೆ ಕಾರ್ಮಿಕರ ಸದ್ಯದ ಸ್ಥಿತಿ ನೋಡಿದರೆ, 'ಲಾಕ್ ಡೌನ್' ಕುರಿತಂತೆ ಕೇಂದ್ರ ಸರಕಾರ ಯಾವುದೇ ಪೂರ್ವತಯಾರಿಯನ್ನು ಮಾಡಿರಲಿಲ್ಲ ಎನ್ನುವುದು ಬಹಿರಂಗವಾಗುತ್ತಿದೆ. 'ಲಾಕ್‌ಡೌನ್' ಎನ್ನುವುದು ಸರಕಾರದ 'ನೋಟು ನಿಷೇಧ'ದ ಮುಂದುವರಿದ ಭಾಗವಾಗಿದೆ. ಆದರೆ ಈ ಬಾರಿಯ ಎಡವಟ್ಟಿಗೆ ದೇಶ ತೆರಬೇಕಾದ ಬೆಲೆ ಊಹಿಸುವುದಕ್ಕೂ ಕಷ್ಟ. ಲಾಕ್‌ಡೌನ್‌ನಿಂದ ಕೋರೋನ ಸಾವಿನ ಸಂಖ್ಯೆಯನ್ನು ಇಳಿಸಬಹುದು ಎಂದು ಸರಕಾರ ಹೇಳುತ್ತಿದೆ. ಆದರೆ, ಈ ದೇಶದಲ್ಲಿ ಕೊರೋನ ಆಗಮಿಸುವ ಮೊದಲು ಅತ್ಯಂತ ಮಾರಕವಾಗಿರುವ ನೂರಾರು ರೋಗಗಳು ಜನರನ್ನು ಆಳುತ್ತಿದ್ದವು. ಆ ರೋಗ ಪೀಡಿತರೆಲ್ಲ ಇಂದು ಔಷಧಿಗಳ ಮತ್ತು ಆಸ್ಪತ್ರೆಗಳ ಕೊರತೆಗಳಿಂದ ನರಳುತ್ತಿದ್ದಾರೆ. ಸರಕಾರದ ಅಘೋಷಿತ ಕರ್ಫ್ಯೂನಿಂದಾಗಿ ಕ್ಯಾನ್ಸರ್ ಪೀಡಿತರು ಕಿಮೋಥೆರಪಿಗೆ ಆಸ್ಪತ್ರೆಗೆ ಹೋಗಲಾರದ ಸ್ಥಿತಿಯಲ್ಲಿದ್ದಾರೆ. ಕಿಡ್ನಿ ಡಯಾಲಿಸಿಸ್ ಮಾಡಲಾಗದೆ ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದಾರೆ.

ಕ್ಷಯ ರೋಗಿಗಳು ಔಷಧಿಗಳಿಲ್ಲದೆ ನರಳುವ ಸ್ಥಿತಿ ನಿರ್ಮಾಣವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕೂಲಿ ಕಾರ್ಮಿಕರು ಹಸಿವಿನಿಂದ ಸಾಯುತ್ತಿದ್ದಾರೆ. ಕಾಲ್ನಡಿಗೆಯ ಮೂಲಕ ಊರಿಗೆ ತಲುಪಲು ಹೊರಟವರು ಅರ್ಧ ದಾರಿಯಲ್ಲೇ ಮೃತಪಟ್ಟಿರುವ ವರದಿಗಳು ಬರುತ್ತಿವೆ. ಮಾನಸಿಕ ಖಿನ್ನತೆಯಿಂದ ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಈ ಎಲ್ಲಾ ಸಾವುಗಳು ಕೊರೋನ ವ್ಯಾಪ್ತಿಯಲ್ಲಿ ಬರುವುದಿಲ್ಲ ಎನ್ನುವ ಕಾರಣಕ್ಕಾಗಿ ಮಾಧ್ಯಮಗಳಲ್ಲೂ ವರದಿಯಾಗುವುದಿಲ್ಲ. ಈ ದೇಶದಲ್ಲಿ ಕೊರೋನದಿಂದ ಸಂಭವಿಸುವ ಸಾವಿಗಿಂತಲೂ ಹಲವು ಪಟ್ಟು 'ಲಾಕ್‌ಡೌನ್' ಕಾರಣದಿಂದ ಸಂಭವಿಸಲಿವೆ. ಈ ಸಾವುನೋವುಗಳ ನಷ್ಟಕಷ್ಟಗಳನ್ನು ಪ್ರಧಾನಿ ಮೋದಿ ಅವರ ಮನ್ ಕೀ ಬಾತ್‌ನ 'ಕ್ಷಮಾಯಾಚನೆ' ತುಂಬಿಕೊಡಲಾರದು. ಈ ಎರಡನೆ ನೋಟು ನಿಷೇಧವನ್ನು ದೇಶ ತಾಳಿಕೊಳ್ಳುವುದು ಎಣಿಸಿದಷ್ಟು ಸುಲಭವಿಲ್ಲ ಎನ್ನುವುದನ್ನು ಪ್ರಧಾನಿ ಎಷ್ಟು ಬೇಗ ಅರ್ಥ ಮಾಡಿಕೊಂಡರೆ ದೇಶಕ್ಕೆ ಅಷ್ಟು ಒಳ್ಳೆಯದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)