varthabharthiರಾಷ್ಟ್ರೀಯ

ಅಕ್ರಮ ದಾಸ್ತಾನು: 1 ಕೋಟಿ ರೂ. ಮೌಲ್ಯದ ಮಾಸ್ಕ್ ವಶ; 10 ಮಂದಿ ಬಂಧನ

ವಾರ್ತಾ ಭಾರತಿ : 29 Mar, 2020

ಮುಂಬೈ, ಮಾ.29: ಮುಂಬೈನಲ್ಲಿ ಹಲವೆಡೆ ದಾಳಿ ನಡೆಸಿದ ಪೊಲೀಸರು ಅಕ್ರಮವಾಗಿ ದಾಸ್ತಾನು ಮಾಡಿಟ್ಟಿದ್ದ 1 ಕೋಟಿ ರೂ. ಮೌಲ್ಯದ ಮಾಸ್ಕ್ ಮತ್ತು 7 ಲಕ್ಷ ರೂ.ಗಳ ಬೆಲೆಯ ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಕೊರೋನ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಿ ಏಕಾಏಕಿ ದೊಡ್ಡ ಲಾಭ ಗಳಿಸುವ ಉದ್ದೇಶಕ್ಕಾಗಿ ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ದಾಸ್ತಾನಿರಿಸಲಾಗಿದ್ದು, ಈ ಸಂಬಂಧ 10 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಗೋರೆಗಾಂವ್ ಪೂರ್ವ, ಮನ್ಖುರ್ಡ್ ಮತ್ತು ಧಾರವಿ ಪ್ರದೇಶಗಳಲ್ಲಿರುವ ಗೋದಾಮುಗಳಿಗೆ ಶನಿವಾರ ದಾಳಿ ನಡೆಸಿದ ಪೊಲೀಸರು ಅಕ್ರಮವಾಗಿ ದಾಸ್ತಾನಿರಿಸಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.

ಕ್ರೈಂ ಬ್ರಾಂಚ್ ಪೊಲೀಸರು ( ಯುನಿಟಿ-8) ಗೋರೆಗಾಂವ್ ಪೂರ್ವದ ಗೋಕುಲ್‌ಧಾಮ್ ಪ್ರದೇಶದ ಅಂಗಡಿಯೊಂದರ ಮೇಲೆ ಮೊದಲ ದಾಳಿ ನಡೆಸಲಾಯಿತು. ಅಲ್ಲಿ 2.22 ಲಕ್ಷ ರೂ. ಮೌಲ್ಯದ 614 ಸ್ಯಾನಿಟೈಸರ್ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಮುಂದಿನ ಕ್ರಮಕ್ಕಾಗಿ ಅಂಗಡಿಯ ಮಾಲೀಕ ಭಾರತ್ ದುಬರಿಯಾ ಅವರನ್ನು ದಿಂಡೋಶಿ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿರಿಯ ಇನ್ಸ್‌ಪೆಕ್ಟರ್ ಸುನೀಲ್ ಮಾನೆ ನೇತೃತ್ವದ ಯುನಿಟ್ ಎಕ್ಸ್ ತಂಡವು ಮಾನ್ಖರ್ಡ್‌ನ ಬೈಂಗನ್ವಾಡಿಯಲ್ಲಿರುವ ಗೋದಾಮಿನ ಮೇಲೆ ದಾಳಿ ನಡೆಸಿ 74.90 ಲಕ್ಷ ರೂ. ಮೌಲ್ಯದ 2,97,800 ಮಾಸ್ಕ್‌ಗಳನ್ನು ವಶಪಡಿಸಿಕೊಂಡಿದೆ ಮತ್ತು ಓರ್ವ ಮಹಿಳೆ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಆರೋಪಿ ಹುಸೇನ್ ಅಖ್ತರ್ ನಿಯಾಜಿ (28), ಖುರ್ಷಿದಾ ಸಲೀಮ್ ಶೇಖ್ (30), ಶಾಹಿದ್ ಅಬ್ದುಲ್ ಕುಡುಸ್ (25) ಮತ್ತು ವಿಕಾಸ್ ಲಾವೊಜಿಭಾಯ್ ಪರ್ಮಾರ್ (30) ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಹೆಚ್ಚಿನ ತನಿಖೆಗಾಗಿ ಶಿವಾಜಿ ನಗರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ ಎಂದು ಮಾನೆ ಹೇಳಿದರು.

ಧಾರವಿಯಲ್ಲಿ ಯುನಿಟ್ ಇಲೆವೆನ್ ನಡೆಸಿದ ಮೂರನೇ ದಾಳಿಯಲ್ಲಿ 4.5 ಲಕ್ಷ ರೂಪಾಯಿ ಮೌಲ್ಯದ 3,000 ಸ್ಯಾನಿಟೈಸರ್ ಬಾಟಲಿಗಳು ಮತ್ತು 22.74 ಲಕ್ಷ ರೂ.ಗಳ 1.51 ಲಕ್ಷ ಮಾಸ್ಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

 ಆದರ್ಶ್ ಹರಿಶ್ಚಂದ್ರ ಮಿಶ್ರಾ (21), ಶುಭಮ್ ಕಿಶೋರ್ ತಿವಾರಿ (23), ಅಶ್ರಫ್ ಜಮಾಲ್ ಶೇಖ್ (50), ಅಖ್ತರ್ ಹುಸೈನ್ ಫಾರೂಕಿ (48) ಮತ್ತು ಯೂಸುಫ್ ಅನ್ಸಾರಿ (31) ಎಂಬವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)