varthabharthiಸಂಪಾದಕೀಯ

ಇದು ನಿಸರ್ಗ ನೀಡಿದ ಎಚ್ಚರಿಕೆ

ವಾರ್ತಾ ಭಾರತಿ : 30 Mar, 2020

ಕಳೆದ 60 ವರ್ಷಗಳಿಂದ ಈ ಕರ್ನಾಟಕವನ್ನು ಅದರ ಮೂಲಕ ಭಾರತವನ್ನು ನೋಡುತ್ತಾ ಬಂದವರು ಕೊರೋನ ನಂತರದ ಸುತ್ತಲಿನ ಪರಿಸರ ಹಿಂದೆಂದೂ ನೋಡಿಲ್ಲ. ಹಿಂದೆಲ್ಲ ಬಂದ್‌ಗಳು, ಮುಷ್ಕರಗಳು ನಡೆದಿವೆ. ಅವೆಲ್ಲ ಒಂದು ಅಥವಾ ಎರಡು ದಿನಕ್ಕೆ ಮಾತ್ರ ಸೀಮಿತವಾಗಿದ್ದವು. 80ರ ದಶಕದಲ್ಲಿ ಸಮಾಜವಾದಿ ನಾಯಕ ಜಾರ್ಜ್ ಫೆರ್ನಾಂಡಿಸ್ ಕರೆ ಕೊಟ್ಟ ಸುದೀರ್ಘ ಎರಡು ವಾರಗಳ ಕಾಲದ ರೈಲು ಮುಷ್ಕರ ಮುಂಬೈನಲ್ಲಿ ದಾಖಲೆ ಮಾಡಿತ್ತು. ಆಗಲೂ ಜನ ಸಂಚಾರಕ್ಕೆ ಅಂತಹ ವ್ಯತ್ಯಯ ಆಗಿರಲಿಲ್ಲ. ಸರಕಾರಿ, ಖಾಸಗಿ ಬಸ್‌ಗಳಿದ್ದವು.

ಆದರೆ, ಕೊರೋನ ಎಂಬ ಯಕಶ್ಚಿತ ವೈರಸ್ ಮನುಷ್ಯನ ಜಂಘಾ ಬಲವನ್ನೇ ಉಡುಗಿಸಿದೆ. ಈ ಜಗತ್ತನ್ನು ಅನೇಕ ಬಾರಿ ಸುಟ್ಟು ಬೂದಿ ಮಾಡಬಲ್ಲ ಅಣುಬಾಂಬ್‌ಗಳನ್ನು ನಿರ್ಮಿಸಿದ ಮತ್ತು ಚಂದ್ರಲೋಕಕ್ಕೆ ಪಯಣ ಬೆಳೆಸಿ ಅದನ್ನೂ ಹಾಳು ಮಾಡಲು ಹೊರಟಿದ್ದ ಮನುಷ್ಯನನ್ನು ಈ ವೈರಸ್ ಮುರಿದು ಮುದ್ದೆ ಮಾಡಿದೆ. ಜಗತ್ತನ್ನೇ ಗೆಲ್ಲುತ್ತೇನೆ, ನನ್ನದೇ ಜಾತಿ, ನನ್ನದೇ ಧರ್ಮ ಸರ್ವಶ್ರೇಷ್ಠ, ನನ್ನದೇ ಧರ್ಮದ ರಾಷ್ಟ್ರ ಕಟ್ಟುತ್ತೇನೆ ಎಂದು ಆರ್ಭಟಿಸುತ್ತಿದ್ದ ಮನುಷ್ಯ ಇದಕ್ಕೆ ಹೆದರಿ ಬಾಗಿಲು ಹಾಕಿಕೊಂಡು ಮನೆಯೊಳಗೆ ಅಡಗಿ ಕುಳಿತಿದ್ದಾನೆ. ಅವನ ದುಡ್ಡಿನ, ಜಾತಿಯ, ಧರ್ಮದ ಅಹಂ ಈ ರೀತಿ ಕುಸಿದು ಕೆಳಗೆ ಬಿದ್ದು ಅಣಕಕ್ಕೊಳಗಾಗುತ್ತಿರುವುದು ಈ ದೇಶಕ್ಕೆ ಹೊಸತು. ಈ ಭೂಮಂಡಲ ಮನುಷ್ಯನಿಗೆ ಮಾತ್ರ ಸೇರಿದ್ದಲ್ಲ, ಇಲ್ಲಿರುವ ಪ್ರಾಣಿ, ಪಕ್ಷಿಗಳಿಗೂ ಸೇರಿದೆ. ಎಲ್ಲಜೀವಿಗಳಿಗೂ ಆಸರೆಯಾಗಿದ್ದ ಈ ಇಳೆಯನ್ನು ತನ್ನ ಸೊತ್ತನ್ನಾಗಿ ಮಾಡಿಕೊಂಡ ಮನುಷ್ಯ ಇದರ ಮೇಲೆ ಯಜಮಾನಿಕೆ ಸಾಧಿಸಲು ಹೊರಟಿದ್ದಾನೆ. ಜೀವಿಗಳ ಪಾಲಿನ ನೆಲವನ್ನು ತಾನೇ ಕಬಳಿಸಿದ, ತನ್ನ ಸಾಮ್ರಾಜ್ಯ ವಿಸ್ತರಿಸಲು ಕಾಡು ನಾಶ ಮಾಡಿದ. ಗುಡ್ಡ ಕಡಿದ, ಆನೆಗಳ ಟ್ರಾಕ್ ಹಾಳು ಮಾಡಿ ರೆಸಾರ್ಟ್ ಮಾಡಿಕೊಂಡ. ಹುಲಿಗಳು ಓಡಾಡುತ್ತಿದ್ದ, ವಾಸವಿದ್ದ ಜಾಗ ಆಕ್ರಮಿಸಿಕೊಂಡ. ಆ ಪ್ರಾಣಿಗಳು ತಮ್ಮ ಸಹಜ ಜಾಗಕ್ಕೆ ಬಂದಾಗ ‘ಪ್ರಾಣಿಗಳ ಹಾವಳಿ’ ಎಂದು ಕರೆದು ಅವುಗಳನ್ನು ಗುಂಡಿಟ್ಟು ಕೊಂದ. ನದಿ, ತೊರೆ, ಕೆರೆ, ಬಾವಿ, ಸರೋವರಗಳ ಅರಿವಿಲ್ಲದ ಮನುಷ್ಯ ಕೇಂದ್ರಿತ ಅಭಿವೃದ್ಧಿ ಮಾರ್ಗವೇ ವಿಶ್ವದ ಇಂದಿನ ಸ್ಥಿತಿಗೆ ಕಾರಣ.

‘ಮನುಷ್ಯ’ ಎಂದು ಸಾಂಕೇತಿಕವಾಗಿ ಕರೆದರೂ ಕೂಡ ಮನುಷ್ಯರೊಳಗಿನ ಸಂಪತ್ತಿನ ಮೇಲೆ ಒಡೆತನ ಹೊಂದಿದ ವರ್ಗ ಎಂದರೆ ಇನ್ನಷ್ಟು ಸ್ಪಷ್ಟ ಅರ್ಥ ಬರುತ್ತದೆ. ಪ್ರಾಣಿಗಳು, ಪಕ್ಷಿಗಳು ಕೂಡಿ ಬಾಳುತ್ತವೆ. ಹಂಚಿಕೊಂಡು ತಿನ್ನುತ್ತವೆ. ಆದರೆ, ಮನುಷ್ಯ ಕೂಡಿ ಬಾಳುವುದನ್ನು ಕಲಿಯಲೇ ಇಲ್ಲ. ಇದನ್ನು ಕಂಡು ವ್ಯಥೆ ಪಟ್ಟ ಬಸವಣ್ಣನವರು, ‘ಕಾಗೆಯೊಂದು ಅಗುಳ ಕಂಡರೆ ಕೂಗಿ ಕರೆಯುವದು ತನ್ನ ಬಳಗವನು’ ಎಂದು ವಚನ ಬರೆದು ಮನುಷ್ಯನ ಸಣ್ಣತನವನ್ನು ಲೇವಡಿ ಮಾಡಿದರು. ಮಹಾವೀರ, ಬುದ್ಧ ಎಲ್ಲ ಮಹಾಪುರುಷರು ಮನುಷ್ಯನ ಕೊಳಕುತನವನ್ನು ಜರೆದರು. ಆದರೆ, ಮನುಷ್ಯ ಬದಲಾಗಲಿಲ್ಲ.

ಮನುಷ್ಯರೊಳಗೆ ನಿರ್ಮಾಣಗೊಂಡ ವರ್ಗಗಳು, ಜಾತಿಗಳು ಆತನನ್ನು ವಿನಾಶದಂಚಿಗೆ ತಂದು ನಿಲ್ಲಿಸಿವೆ. 90ರ ದಶಕದಲ್ಲಿ ಸಮಾಜವಾದಿ ಸೋವಿಯತ್ ಒಕ್ಕೂಟ ಪತನಗೊಂಡ ನಂತರ ಜಗತ್ತಿನ ಯಜಮಾನಿಕೆ ವಹಿಸಿಕೊಂಡ ಅಮೆರಿಕ ಮತ್ತು ಇತರ ಬಂಡವಾಳಶಾಹಿ ದೇಶಗಳು ಮುಕ್ತ ಮಾರುಕಟ್ಟೆ ನೀತಿಯನ್ನು ಜಗತ್ತಿನ ಮೇಲೆ ಹೇರಿ ಇಡೀ ಮನುಕುಲವನ್ನು ಮತ್ತು ಪ್ರಕೃತಿಯನ್ನು ಏಕಕಾಲಕ್ಕೆ ದೋಚಿ, ಪರಿಸರವನ್ನು ನಾಶ ಮಾಡಿದ ಪರಿಣಾಮವಾಗಿ ಇಂದು ನಿಸರ್ಗ ಮುನಿಸಿಕೊಂಡಿದೆ.

ಮನುಕುಲಕ್ಕೆ ಆಸರೆ ನೀಡಿದ ನಿಸರ್ಗವನ್ನು ನಾವು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ. ಮನುಷ್ಯನ ಆಸೆ ಎಂದರೆ ಹಣ ಮಾಡಲು ಹೊರಟವರ ಆಸೆ ಮಿತಿ ಮೀರಿ ಗಿಡ, ಮರಗಳನ್ನು ಕಡಿದು ಅಮೂಲ್ಯ ವನ ಸಂಪತ್ತನ್ನು ನಾಶ ಮಾಡಲು ಹೊರಟಂತೆ ಅಲ್ಲಿ ಓರೆನ್ ಪದರಿಗೆ ಧಕ್ಕೆಯಾಗಿ ಏನೇನೊ ದುಷ್ಪರಿಣಾಮ ಜಗತ್ತಿನ ಮೇಲೆ ಆಗುತ್ತಿದೆ.ಮನುಷ್ಯ ಕುಲವೇ ನಾಶವಾಗುವ ಇಂದಿನ ಕೊರೋನ ಕಾಲದಲ್ಲಿ ಪುರೋಹಿತ ಶಾಹಿ ವ್ಯವಸ್ಥೆಯನ್ನು ಪೋಷಿಸಿಕೊಂಡು ಬರುತ್ತಿರುವ ಸಂಸ್ಥೆಗಳೆಲ್ಲ ಬಾಗಿಲು ಮುಚ್ಚಿವೆ. ರಾಧನೆ ಏಕಾಏಕಿ ಖಾಸಗಿ ವಿಷಯವಾಗಿ ಬದಲಾಗಿದೆ. ಧರ್ಮಗಳ ಹೆಸರಲ್ಲಿ ದ್ವೇಷ ಹಂಚಿಕೊಂಡು ಕಿತ್ತಾಡುತ್ತಿದ್ದ ಮನುಷ್ಯನನ್ನು ವಿಜ್ಞಾನ ಕೈ ಹಿಡಿದು ನಡೆಸುತ್ತಿದೆ. ಇವುಗಳ ನಡುವೆಯೂ ಪುರೋಹಿತಶಾಹಿ ಹಿತಾಸಕ್ತಿಗಳು ವೌಢ್ಯಗಳನ್ನು ಬಿತ್ತಿ ಜನರನ್ನು ಮೋಸಗೊಳಿಸಲು ಬೇರೆ ಬೇರೆ ದಾರಿಗಳನ್ನು ಅನುಸರಿಸುತ್ತಿವೆ. ಟಿವಿ ಮಾಧ್ಯಮಗಳೂ ಅವರಿಗೆ ನೆರವಾಗುತ್ತಿವೆ. ಕೊರೋನದಿಂದ ನಾವು ಪಾಠ ಕಲಿಯಬೇಕಾಗಿದೆ. ಕೊರೋನ ನವೆಂಬರ್ ತಿಂಗಳಲ್ಲೇ ಚೀನಾದಲ್ಲಿ ಕಾಣಿಸಿಕೊಂಡಿತು. ಆದರೆ ಅದು ಜಗತ್ತಿಗೆ ತಿಳಿಯಲಿಲ್ಲ. ಚೀನಾ ಅದನ್ನು ಮುಚ್ಚಿಡಲು ಯತ್ನಿಸಿತು. ಕೊನೆಗೆ ಕೈ ಮೀರಿ ಅದು ಜಗತ್ತಿಗೆ ವ್ಯಾಪಿಸಿತು. ದುರಂತವೆಂದರೆ ಈಗ ಜಗತ್ತಿಗೂ ಮುತ್ಸದ್ಧ್ದಿ ನಾಯಕತ್ವ ಇಲ್ಲ. ಟ್ರಂಪ್‌ನಂತಹ ಕಾರ್ಪೊರೇಟ್ ಜೋಕರ್‌ಗಳನ್ನು ನಾವು ಕೆನಡಿ, ರೂಸವೆಲ್ಟ್ ಅಂತಹವರು ಕುಳಿತ ಜಾಗದಲ್ಲಿ ನೋಡಬೇಕಾಗಿದೆ. ಈ ಟ್ರಂಪ್‌ಗೆ ಈ ವಿಷಯ ಮುಂಚೆಯೇ ಗೊತ್ತಾದರೂ ಮುಚ್ಚಿಟ್ಟರು. ಈಗ ಅಲ್ಲಿ ಚುನಾವಣೆ ಇರುವುದರಿಂದ ‘ಕೊರೋನ ಎಂಬುದು ಡೆಮಾಕ್ರಟಿಕ್ ಪಕ್ಷದ ಅಪಪ್ರಚಾರ’ ಎಂದು ಸುಳ್ಳು ಹೇಳಿದರು. ಈಗ ಅಮೆರಿಕ ಅದಕ್ಕೆ ಬೆಲೆ ತೆರುತ್ತಿದೆ.

ಭಾರತದ್ದು ಅದೇ ಕತೆ. ಇಲ್ಲೂ ಜನವರಿಯಲ್ಲಿ ಕೊರೋನ ಅಪಾಯದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಎಚ್ಚರಿಕೆ ಬಂದಿತ್ತು. ಆದರೆ ನಮ್ಮ ನಾಯಕರು ಟ್ರಂಪ್ ಆಗಮನದ ಸಂಭ್ರಮ, ಎನ್‌ಆರ್‌ಸಿ, ಕಾಶ್ಮೀರ ಸಮಸ್ಯೆಯಲ್ಲಿ ಎಲ್ಲವನ್ನೂ ಮರೆತರು. ಇದು ಬರೀ ಮರೆವಲ್ಲ, ಜಾಣ ಮರೆವು. ಇದೇ ಕಾಲಘಟ್ಟದಲ್ಲಿ ವಿದೇಶದಲ್ಲಿ ನೆಲೆಸಿರುವ ಲಕ್ಷಾಂತರ ಅನಿವಾಸಿ ಸಿರಿವಂತರ ಮಕ್ಕಳನ್ನು ವಿಶೇಷ ವಿಮಾನ ಕಳಿಸಿ ಕರೆಸಿಕೊಂಡರು. ಅವರಲ್ಲಿದ್ದ ಕೊರೋನ ವೈರಸ್ ಬಗ್ಗೆ ಪರೀಕ್ಷೆ ನಡೆಯಲಿಲ್ಲ. ಈಗ ಅವರೆಲ್ಲ ದೇಶದ ಎಲ್ಲ ಕಡೆ ಸೇರಿದ್ದಾರೆ. ವಿಪರ್ಯಾಸವೆಂದರೆ, ವಿದೇಶಗಳಲ್ಲಿರುವ ವಿಐಪಿ, ವಿವಿಐಪಿಗಳನ್ನು ಅವರ ಮಕ್ಕಳು ಮರಿಗಳನ್ನು ವಿಶೇಷ ವಿಮಾನಗಳ ಮೂಲಕ ಕರೆಸಿ ಅವರಿಂದ ಕೊರೋನಾವನ್ನು ದೇಶಕ್ಕೆ ಹಂಚಿದ ಸರಕಾರ, ತನ್ನದೇ ದೇಶದೊಳಗಿರುವ ವಲಸೆ ಕಾರ್ಮಿಕರನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಅವರು ತಮ್ಮ ಊರಿಗೆ ಬರಿ ಕಾಲ್ನಡಿಗೆಯಲ್ಲೇ ಸಾವಿರಾರು ಕಿಲೋಮೀಟರ್ ನಡೆಯಬೇಕಾಗಿದೆ. ಈ ಪಯಣದಲ್ಲೇ ಅವರು ತಮ್ಮ ಪ್ರಾಣ ಬಿಡುತ್ತಿದ್ದಾರೆ.

ಕೊರೋನಕ್ಕೆ ನಾವು ಹೆದರಬೇಕಾಗಿಲ್ಲ. ಮನುಷ್ಯ ಇಂಥ ಅನೇಕ ಅನಾಹುತಗಳನ್ನು ಎದುರಿಸಿ ಬದುಕು ಕಟ್ಟಿಕೊಂಡಿದ್ದಾನೆ. ಈಗಲೂ ನಾವು ಎಚ್ಚರಿಕೆಯಿಂದ ಇದ್ದಿದ್ದು, ಒಂದು ತಿಂಗಳಾದರೂ ಮನೆಯೊಳಗೆ ಉಳಿದರೆ, ವೈದ್ಯಕೀಯ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ, ಸಣ್ಣಪುಟ್ಟ ನಷ್ಟಗಳ ಈ ಕೊರೋನವನ್ನು ಗೆದ್ದು ಮತ್ತೆ ಬದುಕು ಕಟ್ಟಿಕೊಳ್ಳಬಹುದು. ಕೊರೋನ ಅಪಾಯದಿಂದ ಪಾರಾದ ನಂತರ ಇನ್ನಷ್ಟು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದರೆ ಕೊರೋನಾ ಎದುರಿಸುವ ಸಂದರ್ಭದಲ್ಲಿ ಸೃಷ್ಟಿಸುವ ಇತರ ಸಮಸ್ಯೆಗಳೇ ಭಾರತವನ್ನು ಭವಿಷ್ಯದಲ್ಲಿ ಕಿತ್ತು ತಿನ್ನಲಿದೆ. ಈ ದೇಶದಲ್ಲಿ ಕೊರೋನಾಕ್ಕೆ ಸತ್ತವರ ಸಂಖ್ಯೆಗಿಂತಲೂ ಹಸಿವಿನಿಂದ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚುವ ಎಲ್ಲ ಸೂಚನೆಗಳು ಕಾಣುತ್ತಿವೆ. ಹಾಗೆಯೇ ದಿಕ್ಕೆಟ್ಟಿರುವ ಆರ್ಥಿಕತೆಯ ದೆಸೆಯಿಂದ ಭಾರತದಲ್ಲಿ ಅರಾಜಕತೆ ಸೃಷ್ಟಿಯಾಗುವ ಸಾಧ್ಯತೆಗಳಿವೆ. ಇವುಗಳನ್ನು ಎದುರಿಸುವ ಬಗೆ ಹೇಗೆ ಎನ್ನುವುದರ ಬಗ್ಗೆ ನಾವು ಗಮನ ಹರಿಸಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)