varthabharthi

ನಿಮ್ಮ ಅಂಕಣ

ವಲಸೆ ಕಾರ್ಮಿಕರ ಮೇಲೆ ರಾಸಾಯನಿಕ ಸಿಂಪಡಿಸಿದ ಸರಕಾರದ ಕ್ರೌರ್ಯಕ್ಕೆ ಸಮಾಜದ ಚಪ್ಪಾಳೆ

ವಾರ್ತಾ ಭಾರತಿ : 31 Mar, 2020
ಶಿವಸುಂದರ್

ಕೋವಿಡ್ ಸೋಂಕಿತರಿಗೆ ಕ್ಲೋರಿನ್ ದ್ರಾವಣವನ್ನು ಸಿಂಪಡಿಸುವುದರಿಂದ ವೈರಸ್ ಸಾಯುವುದಿಲ್ಲ ಹಾಗು ಅದು ಅಪಾಯಕಾರಿ ಎಂದು  WHO ಸಂಸ್ಥೆಯು ತಿಂಗಳು ಮುಂಚೆಯೇ ಎಲ್ಲಾ ದೇಶಗಳಿಗೂ ಹಾಗು ಜನರಿಗೂ ತಿಳವಳಿಕೆ ನೀಡಿದೆ. ಅದಕ್ಕೆ ಸಂಬಂಧಪಟ್ಟಂತೆ  WHO ಸಂಸ್ಥೆಯು ಬಿಡುಗಡೆ ಮಾಡಿರುವ ಮಿಥ್ಯೆ ಮತ್ತು ಸತ್ಯಗಳ ಫೋಟೊ ಇಲ್ಲಿದೆ ಹಾಗು ಅದರ ಲಿಂಕ್ ಕೆಳಗಡೆ ನೀಡಲಾಗಿದೆ.

ಆದರೂ ನಿನ್ನೆ ಉತ್ತರ ಪ್ರದೇಶದಲ್ಲಿ ವಾಪಸ್ ಊರುಗಳಿಗೆ ಮರಳುತ್ತಿದ್ದ ವಲಸೆ ಕಾರ್ಮಿಕರನ್ನು ಒಟ್ಟುಗೂಡಿಸಿ ಅವರ  ಮೇಲೆ ಯೋಗಿ ಸರ್ಕಾರವು ಹೈಡ್ರೋಕ್ಲೋರೈಡ್ ಮಿಶ್ರಣವನ್ನು ಸಿಂಪಡಿಸುವಂಥ ಹೇಯ ಹಾಗೂ ಮನುಷ್ಯ ಸಮಾಜವೊಂದು ಊಹಿಸಲಸಾಧ್ಯವಾದ  ಕ್ರಮವನ್ನು ಕೈಗೊಂಡಿದೆ.

ಒಂದೆಡೆ ಇದು ಒಂದು ಸರ್ಕಾರ ಹಾಗು ಸಮಾಜ ಬಿಕ್ಕಟ್ಟಿನ ಸಮಯದಲ್ಲಿ ಮುಟ್ಟಬಹುದಾದ ಬರ್ಬರ ಸಂವೇದನಾಶೂನ್ಯತೆಯನ್ನು ಸೂಚಿಸುತ್ತಿದ್ದರೆ ಮತ್ತೊಂದೆಡೆ ಜನರ ಆರೋಗ್ಯದ ವಿಷಯದ ಬಗ್ಗೆ ಸರ್ಕಾರ ತೋರುವ ವರ್ಗ ಪಕ್ಷಪಾತವನ್ನು ಸೂಚಿಸುತ್ತದೆ. ಏಕೆಂದರೆ ಈ ವೈರಸ್ ಅನ್ನು ಬೇರೆ ದೇಶಗಳಿಂದ ಹೊತ್ತುಕೊಂಡು ಬಂದ ಮೇಲ್ವರ್ಗದ ಜನರ ಮೇಲೆ ಏರ್ಪೊರ್ಟಿನಲ್ಲೇ  ಕ್ಲೋರೈಡ್ ಸಿಂಪಡಿಸುವ ಯೋಚನೆಯೂ ಈ ಸರ್ಕಾರಗಳಿಗೆ ಬರುತ್ತಿರಲಿಲ್ಲ......

ಇಂದು ವಲಸೆ ಕಾರ್ಮಿಕರು ತಾವು ಮಾಡಿರದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾರೆ. "ಅತ್ತ ಕೋವಿಡ್ ಇತ್ತ ಹಸಿವು" ಎಂಬ ಅಡಕತ್ತರಿಗೆ ಸಿಲುಕಿ ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಕಳೆದ 70 ವರ್ಷ ಗಳಲ್ಲಿ ಹಸಿವೆಂಬ ನಿತ್ಯರಾಕ್ಷಸನಿಂದ ತಮ್ಮನ್ನು ಬಚಾವು ಮಾಡಲಾಗದ ಸರ್ಕಾರಗಳು ಕೋವಿಡ್ ಎಂಬ ಅಪಾಯದಿಂದ ಪಾರು ಮಾಡಿಸೀತೆಂಬ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. 

ಮೋದಿ ಸರ್ಕಾರದ ಲಾಕ್ ಡೌನ್ ಅವರ ಅವಿಶ್ವಾಸ ವನ್ನು ಧೃಡಪಡಿಸಿದೆ. ಆತಂಕವನ್ನು ಹೆಚ್ಚಿಸಿದೆ. ಹೀಗಾಗಿ ಕೋವಿಡ್ ಹಾಗೂ ಹಸಿವಿನಿಂದ ಪ್ರಾಣ ಉಳಿಸಿಕೊಳ್ಳಲು ತಮ್ಮ ತಮ್ಮ ದಾರಿ ಹುಡುಕಿಕೊಳ್ಳುತ್ತಿದ್ದಾರೆ. ಅಂಥ ಬಡಪಾಯಿ ಬಲಿಪಶುಗಳ ಮೇಲೆ ಸರ್ಕಾರ ಈಗ "ಕ್ಲೋರಿನ್" ದಾಳಿ ನಡೆಸಿದೆ. ಪೊಲೀಸರು ಲಾಠಿ ಚಾರ್ಜ್ ಮಾಡುತ್ತಾರೆ. ಪ್ರಾಯಶಃ ತನ್ನದೇ ದೇಶದ ಜನರನ್ನು ಈ ಪರಿಯಲ್ಲಿ ವೈರಿಗಳೆಂದು ಭಾವಿಸಿರುವ ಮತ್ತೊಂದು ದೇಶಭಕ್ತ ಸರ್ಕಾರ ವನ್ನು ಈ ದೇಶ ಕಂಡಿರಲಿಲ್ಲ...

ಇದು ಈ ದೇಶದ 70 ವರ್ಷದ ಸಾಂಸ್ಥಿಕ ಪ್ರಜಾತಂತ್ರದ ವೈಫಲ್ಯ. ಸರ್ಕಾರ ಮತ್ತು ಜನರಿಗೆ ಮಾಡಿರುವ ವಿಶ್ವಾಸದ್ರೋಹದ ಪ್ರತಿಫಲ. ಸಮಾಜದ ಇದೆ ವರ್ಗಗಳೇ ಸ್ವಾತಂತ್ರ್ಯ ನಂತರವೂ  ಸದಾ ಸರ್ಕಾರಗಳ ಹಾಗು ಬಲಿಷ್ಠರ ವಿವಿಧ ಬಗೆಯ ದೌರ್ಜನ್ಯಕ್ಕೆ ತುತ್ತಾಗುತ್ತಾ ಬಂದಿದ್ದಾರೆ.

ನಾಳೆ NPR-NRC ಗಳಾದರೂ ಡಿಟೆನ್ಶನ್ ಕ್ಯಾಂಪ್ ಗಳೆಂಬ ಆಧುನಿಕ Concentration Camp ಗಳಿಗೆ ದೂಡಲ್ಪಡುವವರು ಇದೆ ನತದೃಷ್ಟರೇ. ನಮ್ಮದೇ ಸಮಾಜದ ಒಂದು ವರ್ಗವನ್ನು ಸರ್ಕಾರವೊಂದು ಹೀಗೆ ಪ್ರಾಣಿಗಳಿಗಿಂತ ಕೀಳಾಗಿ ನಡೆಸಿಕೊಳ್ಳುತ್ತಿದ್ದರೂ, ಸರ್ಕಾರದ  ಕ್ರೌರ್ಯವನ್ನು ಹಾಗು ಅದರ ಕೊಲೆಗಡುಕ ನೆಪಗಳನ್ನು ಒಪ್ಪಿಕೊಳ್ಳುತ್ತಾ ಅದರ ಅಧಿನೇತನಿಗೆ ನಾಗರಿಕ ಸಮಾಜ "ಚಪ್ಪಾಳೆ ತಟ್ಟುತ್ತಿದೆ"ಯೆಂದರೆ ಅದು  ಸಮಾಜದ ಪ್ಯಾಸಿಕರಣದ ಸಂಕೇತವು ಹೌದು. ಸಮಾಜವು ಪ್ಯಾಸಿಕರಣಗೊಳ್ಳದೆ ಪ್ರಭುತ್ವವೊಂದು ಪ್ಯಾಸಿಸ್ಟ್ ಆಗಲು ಸಾಧ್ಯವಿಲ್ಲ.

ಈಗಲಾದರೂ ಮನುಷ್ಯತ್ವ ಎಚ್ಚರಗೊಳ್ಳಬೇಕು. ವಲಸೆ ಕಾರ್ಮಿಕರಲ್ಲೂ ನನ್ನಲ್ಲಿರುವ ದೇವರನ್ನೇ ಕಾಣಬಹುದಾದ ಧಾರ್ಮಿಕತೆಯಾದರು ಹುಟ್ಟಬೇಕು. ಸರ್ಕಾರವು ಜನತೆಗೆ ಉತ್ತರದಾಯಿಯಾಗಿರಬೇಕೆಂಬ ಪ್ರಜಾತಾಂತ್ರಿಕ ಪ್ರಜ್ಞೆ ಸಾಮಾಜಿಕ ಹಾಗು ಸಾಂಸ್ಥಿಕ ಮಟ್ಟದಲ್ಲಿ ಜೀವಪಡೆದುಕೊಳ್ಳಬೇಕು. ಇಲ್ಲದಿದ್ದರೆ "ಏ ಥೋ ಸಿರ್ಫ್ ಟ್ರೇಲರ್ ಹಾಯ್... ಅಭಿ ಕಾಪಿ ಪಿಚ್ಚರ್ ಬಾಕಿ ಹೈ"

- ಶಿವಸುಂದರ್ 

www.who.int/images/default-source/health-topics/coronavirus/myth-busters/mythbusters-33.png  

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)