varthabharthi

ಕರಾವಳಿ

ಗಂಟಲು ದ್ರವ ಮಾದರಿ ಪ್ರಾಯೋಗಿಕ ಪರೀಕ್ಷೆ ಆರಂಭ

ಮಂಗಳೂರಿನಲ್ಲಿ ಕೊರೋನ ಟೆಸ್ಟಿಂಗ್ ಲ್ಯಾಬ್

ವಾರ್ತಾ ಭಾರತಿ : 1 Apr, 2020

ಮಂಗಳೂರು, ಎ.1: ಮಂಗಳೂರಿನಲ್ಲಿ ಕೊರೋನ ಸಹಿತ ವೈರಾಣು ಪತ್ತೆ ಪ್ರಯೋಗಾಲಯ ಆರಂಭಕ್ಕೆ ಸರಕಾರದಿಂದ ಮಂಜೂರಾತಿ ಸಿಕ್ಕಿದ್ದು, ಲ್ಯಾಬ್ನಲ್ಲಿ ಪ್ರಾಯೋಗಿಕ ಪರೀಕ್ಷೆ (ಟ್ರಾಯಲ್ ಟೆಸ್ಟ್) ನಡೆಸಲಾಗುತ್ತಿದೆ.

ರಾಜ್ಯದಲ್ಲಿ ಕೊರೋನ ಪ್ರಕರಣ ಹೆಚ್ಚುತ್ತಿರುವುದರಿಂದ ಮತ್ತು ಪರೀಕ್ಷಾ ಪ್ರಯೋಗಾಲಯಗಳು ಕಡಿಮೆ ಸಂಖ್ಯೆಯಲ್ಲಿರುವುದರಿಂದ ಎಲ್ಲಾ ಜಿಲ್ಲೆಗಳಲ್ಲೂ ಟೆಸ್ಟಿಂಗ್ ಲ್ಯಾಬ್ ತೆರೆಯುವ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ಮಾ.17ರಂದು ಮಂಗಳೂರಿಗೆ ಭೇಟಿ ನೀಡಿದ ಸಂದರ್ಭ ಭರವಸೆ ನೀಡಿದ್ದರು. ಅದರಂತೆ ಸರಕಾರದಿಂದ ಟೆಸ್ಟಿಂಗ್ ಲ್ಯಾಬ್ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಮಂಜೂರಾಗಿದೆ. ಇನ್ನು ಭಾರತೀಯ ವೈದ್ಯಕೀಯ ಮಂಡಳಿಯಲ್ಲಿ (ಐಸಿಎಂಆರ್) ನೋಂದಣಿಯಾಗಲು ಬಾಕಿ ಇದೆ. ಇನ್ನು ಕೆಲವು ದಿನಗಳಲ್ಲಿ ಈ ಪ್ರಕ್ರಿಯೆ ಮುಕ್ತಾಯವಾಗಲಿದೆ. ಬಳಿಕ ಪೂರ್ಣ ಪ್ರಮಾಣದಲ್ಲಿ ಪ್ರಯೋಗಾಲಯ ಕಾರ್ಯಾಚರಿಸಲಿದೆ.

ಯಾವುದೇ ರೋಗಿಯ ಗಂಟಲು ದ್ರವ ಮಾದರಿಯನ್ನು ನೇರವಾಗಿ ಈ ಪ್ರಯೋಗಾಲಯದಲ್ಲಿ ತಪಾಸಣೆಗೊಳಪಡಿಸಲಾಗುವುದಿಲ್ಲ. ಸ್ಯಾಂಪಲ್ಗಳನ್ನು ಜಿಲ್ಲಾ ಸರ್ವೇಕ್ಷಣಾ ವಿಭಾಗದವರು ಕಳುಹಿಸಿದ್ದಲ್ಲಿ ಮಾತ್ರ ಪರೀಕ್ಷೆ ನಡೆಸಲಾಗುತ್ತದೆ.

ತರಬೇತಿ ಪಡೆದ ಸಿಬ್ಬಂದಿ
ಲ್ಯಾಬ್ ನಲ್ಲಿ ಕರ್ತವ್ಯ ನಿರ್ವಹಿಸಲು ಡಾ. ಶರತ್ ಕುಮಾರ್, ಡಾ. ಮಧುಸೂದನ್ ಅವರೊಂದಿಗೆ ಇತರ ಮೂವರು ಸಿಬ್ಬಂದಿ ಸೇರಿ ಒಟ್ಟು ಐದು ಮಂದಿ ಇರಲಿದ್ದಾರೆ. ಇವರೆಲ್ಲರೂ ಹಾಸನ ಮತ್ತು ಮೈಸೂರಿನ ಪ್ರಯೋಗಾಲಯಗಳಲ್ಲಿ ತರಬೇತಿ ಪಡೆದು ಬಂದಿದ್ದಾರೆ. ಎನ್‌ಐಟಿಕೆ ಸುರತ್ಕಲ್, ಮೀನುಗಾರಿಕಾ ಕಾಲೇಜು ಮತ್ತು ಮಂಗಳೂರು ವಿವಿಯ ನುರಿತ ವಿಜ್ಞಾನಿಗಳು ವೈದ್ಯರಿಗೆ ಸಹಕಾರ ನೀಡುತ್ತಿದ್ದಾರೆ.

ಮಂಗಳೂರಿನಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಯೋಗಾಲಯ ಆರಂಭವಾದ ನಂತರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿಗಾಗಿ ನಾಲ್ಕೈದು ದಿನ ಕಾಯಬೇಕಾದ ಅವಶ್ಯಕತೆ ಇಲ್ಲ. ಒಂದೇ ದಿನದಲ್ಲಿ ಪರೀಕ್ಷಾ ವರದಿಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಈವರೆಗೆ ಕೊರೋನ ಶಂಕಿತನ ಗಂಟಲಿನ ದ್ರವದ ಮಾದರಿಯನ್ನು ಹಾಸನದ ಪ್ರಯೋಗಾಲಯಕ್ಕೆ ಕಳುಹಿಸಿ ವರದಿಗಾಗಿ ಮೂರರಿಂದ ನಾಲ್ಕು ದಿನಗಳ ಕಾಲ ಕಾಯಬೇಕಾಗಿದೆ.

ಲ್ಯಾಬೋರೇಟರಿಯು ವೆನ್ಲಾಕ್ ಆಸ್ಪತ್ರೆಯ ಪಬ್ಲಿಕ್ ಹೆಲ್ತ್ ಲ್ಯಾಬ್ ನ ಮುಂಭಾಗದಲ್ಲಿ ಕಾರ್ಯಾಚರಿಸಲಿದೆ. ಪ್ರಯೋಗಾಲಯಕ್ಕೆ ಬೇಕಾದ ಯಂತ್ರಗಳು ಸೇರಿದಂತೆ ವಿವಿಧ ಪ್ರಕ್ರಿಯೆಗಳಿಗೆ 60 ಲಕ್ಷ ರೂ. ವೆಚ್ಚವಾಗಿದೆ. ಇತರ ಕೆಲವು ಮೂಲ ಅವಶ್ಯಕತೆಗಳಿಗೆ ಹೆಚ್ಚುವರಿ ಹಣವನ್ನು ವ್ಯಯಿಸಲಾಗಿದೆ.

ಕೊರೋನ ವೈರಾಣು ಪರೀಕ್ಷಾ ಪ್ರಯೋಗಾಲಯಕ್ಕೆ ಸರಕಾರದಿಂದ ಮಂಜೂರಾತಿ ಸಿಕ್ಕಿದ್ದು, ಐಸಿಎಂಆರ್ ನಿಂದ ಅನುಮತಿಗಾಗಿ ಕಾಯಲಾಗುತ್ತಿದೆ. ಪ್ರಸ್ತುತ ಲ್ಯಾಬ್‌ನಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ.
ಸೆಲ್ವಮಣಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ದ.ಕ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)