varthabharthi

ಕರ್ನಾಟಕ

ಲಾಕ್ ಡೌನ್: ಬಾದಾಮಿ ಕ್ಷೇತ್ರದ ಜನತೆಗೆ ಆಹಾರ ಪೂರೈಕೆಗೆ ಮುಂದಾದ ಸಿದ್ದರಾಮಯ್ಯ

ವಾರ್ತಾ ಭಾರತಿ : 1 Apr, 2020

ಬೆಂಗಳೂರು, ಎ.1: ಕೊರೋನ ವೈರಸ್ ಸೋಂಕು ತಡೆಗಟ್ಟುವ ದೃಷ್ಟಿಯಿಂದ ಲಾಕ್ ಡೌನ್ ಪರಿಣಾಮ ಬಾದಾಮಿಯಲ್ಲಿ ಆಹಾರ ಕೊರತೆ ಎದುರಾಗಿ ಕ್ಷೇತ್ರದ ಜನರು ಹಸಿವಿನಿಂದ ಪರದಾಡುವ ಪರಿಸ್ಥಿತಿ ಸೃಷ್ಟಿಯಾಗಬಾರದೆಂದು ಮುಂಜಾಗ್ರತೆ ವಹಿಸಿ, ಹಲವು ಕಡೆಗಳಲ್ಲಿ ಆಹಾರ ಸಿದ್ಧಪಡಿಸಿ ಅಗತ್ಯ ಇರುವವರಿಗೆ ಆಹಾರ ಪೂರೈಕೆಗೆ ಕ್ಷೇತ್ರವನ್ನು ಪ್ರತಿನಿಧಿಸುವ ವಿಪಕ್ಷ ನಾಯಕ ಸಿದ್ದರಾಮಯ್ಯ ಮುಂದಾಗಿದ್ದಾರೆ.

ಈ ಸಂಬಂಧ ಸ್ಥಳೀಯ ಮುಖಂಡರೊಂದಿಗೆ ನಿರಂತರ ಸಂಪರ್ಕದಲ್ಲಿರುವ ಸಿದ್ದರಾಮಯ್ಯ, ಆಹಾರ ತಯಾರಿಕೆ ಮತ್ತು ವಿತರಣೆ ವೇಳೆ ಗುಂಪುಗೂಡಿ ಕೆಲಸ ಮಾಡದೆ ಸೂಕ್ತ ಅಂತರ ಕಾಯ್ದುಕೊಳ್ಳಲು ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿಸಲಾಗಿದೆ.

ಹಸಿದವರಿಗೆ ಅನ್ನ ನೀಡುವುದು ಎಷ್ಟು ಮುಖ್ಯವೋ, ಮಾರಕ ಕೊರೋನ ವೈರಸ್ ಸೋಂಕು ಹರಡದಂತೆ ಎಚ್ಚರಿಕೆಯಿಂದ ಕೆಲಸ ಮಾಡುವುದು ಅಷ್ಟೇ ಮುಖ್ಯ ಎಂದು ಹೇಳಿರುವ ಸಿದ್ದರಾಮಯ್ಯ, ಜನಸೇವೆ ಮತ್ತು ಕೊರೋನ ವೈರಸ್ ಸೋಂಕಿನ ಬಗ್ಗೆ ಜಾಗೃತಿ ವಹಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬಾರದು ಎಂದು ಸೂಚನೆ ನೀಡಿದ್ದಾರೆ.

ಕೃಷಿ ಪರಿಕರ ಖರೀದಿಗೆ ಅವಕಾಶ: ರಾಜ್ಯ ಸರಕಾರದ ಆದೇಶನ್ವಯ ಬೆಳಗ್ಗೆ 9ರಿಂದ 2ಗಂಟೆ ವರೆಗೆ ಅಧಿಕೃತವಾಗಿ ಪರವಾನಿಗೆ ಪಡೆದ ಸಸ್ಯ ಸಂರಕ್ಷಣಾ ಔಷಧಿಗಳು ಮತ್ತು ರಸಗೊಬ್ಬರ ಹಾಗೂ ಬಿತ್ತನೆ ಬೀಜದ ಮಳಿಗೆಗಳು ಕಾರ್ಯನಿರ್ವಹಿಸಲಿವೆ. ರೈತರು ಮೇಲ್ಕಂಡ ಸಮಯದಲ್ಲಿ ತಮ್ಮ ಕೃಷಿ ಚಟುವಟಿಕೆಗಳಿಗೆ ಅವಶ್ಯಕವಿರುವ ಪರಿಕರಗಳನ್ನು ಖರೀದಿಗೆ ಅವಕಾಶವಿದೆ. ಈ ವೇಳೆ ರೈತರು ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಕೊರೋನ ವೈರಸ್ ಸೋಂಕು ಹರಡದಂತೆ ಎಚ್ಚರ ವಹಿಸಬೇಕು ಎಂದು ಶಾಸಕ ಡಾ.ಯತೀಂದ್ರ ಸಿದ್ಧರಾಮಯ್ಯ ಟ್ವಿಟ್ಟರ್ ಮೂಲಕ ರೈತರಿಗೆ ಮನವಿ ಮಾಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)