varthabharthi

ಕರ್ನಾಟಕ

ಯಾವುದೇ ಕಾರಣಕ್ಕೂ ಕೇರಳ ಗಡಿಯನ್ನು ತೆರೆಯುವುದಿಲ್ಲ: ಗೃಹ ಸಚಿವ ಬೊಮ್ಮಾಯಿ

ವಾರ್ತಾ ಭಾರತಿ : 1 Apr, 2020

ಬೆಂಗಳೂರು, ಎ.1: ಕರ್ನಾಟಕದಿಂದ ದಿಲ್ಲಿಯ ನಿಝಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ 342 ಜನ ಪತ್ತೆಯಾಗಿದ್ದು, 200 ಮಂದಿಯನ್ನು ಕ್ವಾರಂಟೇನ್‍ನಲ್ಲಿಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದಿಂದ ದಿಲ್ಲಿಯ ನಿಝಾಮುದ್ದೀನ್ ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರ ಸಂಖ್ಯೆ ಅಧಿಕವಾಗುತ್ತಿದೆ. ಕರ್ನಾಟಕದವರೇ ಆಗಿರುವ 342 ಮಂದಿ ದಿಲ್ಲಿಗೆ ಹೋಗಿದ್ದಾರೆ ಎನ್ನುವುದು ಪತ್ತೆಯಾಗಿದೆ. ಈಗಾಗಲೇ 200 ಮಂದಿ ಕ್ವಾರಂಟೈನ್‍ನಲ್ಲಿದ್ದಾರೆ. ಉಳಿದ 142 ಮಂದಿಯನ್ನು ಹೋಂ ಕ್ವಾರಂಟೈನ್ ಮಾಡಲಾಗುತ್ತಿದೆ. ಎಲ್ಲರ ಪತ್ತೆಗಾಗಿ ಕ್ರಮ ವಹಿಸಿದ್ದು, ಬುಧವಾರ ರಾತ್ರಿಯೊಳಗೆ ಎಲ್ಲರನ್ನೂ ಪತ್ತೆ ಹಚ್ಚುವಂತೆ ಸೂಚಿಸಲಾಗಿದೆ ಎಂದರು.

ಕೇರಳ ಗಡಿ ಓಪನ್ ಮಾಡುವುದಿಲ್ಲ: ಕೇಂದ್ರ ಸರಕಾರದ ಆದೇಶದ ಪ್ರಕಾರ ಕೇರಳ ಗಡಿಯನ್ನು ಮುಚ್ಚಲಾಗಿದೆ. ಕಾನೂನಿನ ಪ್ರಕಾರ ಗಡಿ ಮುಚ್ಚಿದ್ದು, ಯಾವುದೇ ಕಾರಣಕ್ಕೂ ಗಡಿ ಭಾಗವನ್ನು ಓಪನ್ ಮಾಡುವುದಿಲ್ಲ. ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ 62 ಮಂದಿ ವಿದೇಶಿಯರಲ್ಲಿ 12 ಮಂದಿ ವಾಪಸ್ ಹೋಗಿದ್ದಾರೆ. ಉಳಿದ 50 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ದಿಲ್ಲಿ ಧಾರ್ಮಿಕ ಸಭೆಗೆ ಹೋಗಿದ್ದವರ ಸಂಖ್ಯೆ ಮತ್ತಷ್ಟು ಅಧಿಕವಾಗುತ್ತಿದೆ ಎಂದು ಅವರು ತಿಳಿಸಿದರು.

ಮದ್ಯ ಮಾರಾಟವಿಲ್ಲ: ಏನೇ ಒತ್ತಡ ಬಂದರೂ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಚಿಂತನೆ ಸರಕಾರದ ಮುಂದಿಲ್ಲ. ಈಗಾಗಲೇ ಪರಿಸ್ಥಿತಿ ಬಿಗಡಾಯಿಸಿದ್ದು, ಈ ಸಂದರ್ಭದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದರೆ ಅವರನ್ನು ನಿಯಂತ್ರಣ ಮಾಡಲು ಸಾಧ್ಯವಾಗುವುದಿಲ್ಲ. ಒಂದು ವಾರ ಸುಮ್ಮನಿದ್ದರೂ ಏನೂ ಆಗಲಿಲ್ಲ. ಮದ್ಯ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಆತ್ಯಹತ್ಯೆ ಹೆಚ್ಚುತ್ತಿದೆ ಎನ್ನುವುದಕ್ಕೆ ಯಾವುದೇ ಸಾಕ್ಷಿಯಿಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವೇತನ ಘೋಷಣೆ?: ರಾಜ್ಯದಲ್ಲಿ ಕೊರೋನ ಮಹಾಮಾರಿ ಮಿತಿಮೀರಿದೆ. ಹೀಗಾಗಿ, ಅದರ ವಿರುದ್ಧ ಹೋರಾಡಲು ಅನುಕೂಲವಾಗುವಂತೆ ನಾನು ನನ್ನ ಒಂದು ವರ್ಷದ ಸಂಬಳವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುತ್ತೇನೆ ಎಂದು ಸಚಿವ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾಗಿ ವರದಿಯಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)