varthabharthi

ಸಂಪಾದಕೀಯ

ಮಾಧ್ಯಮಗಳ ಪ್ರಯೋಗ ಶಾಲೆಗಳಲ್ಲಿ ‘ಸ್ವದೇಶಿ ಕೊರೋನ’ ಅಭಿವೃದ್ಧಿ

ವಾರ್ತಾ ಭಾರತಿ : 1 Apr, 2020

ಚೀನಾ ದೇಶದಲ್ಲಿ ಸೃಷ್ಟಿಯಾಗಿರುವ ಕೊರೋನ ವೈರಸನ್ನು ಭಾರತದ ಮಾಧ್ಯಮಗಳೆಂಬ ಪ್ರಯೋಗಾಲಯಗಳಲ್ಲಿ ಇನ್ನಷ್ಟು ಭೀಕರಗೊಳಿಸುವ ಪ್ರಯತ್ನವೊಂದು ನಡೆಯುತ್ತಿದೆ. ಮಾಧ್ಯಮಗಳ ಆಯಕಟ್ಟಿನ ಸ್ಥಾನದಲ್ಲಿ ಕುಳಿತಿರುವ ‘ಬ್ರಾಹ್ಮಣ್ಯ ಮನಸ್ಥಿತಿ’ಗಳು ಈ ವೈರಸ್‌ಗೆ ಕೋಮು ವೈರಸನ್ನು ಕಸಿ ಮಾಡಿ, ಹೊಸದಾಗಿ ಮಾರುಕಟ್ಟೆಗೆ ಬಿಡುವ ಪ್ರಯತ್ನದಲ್ಲಿವೆ. ಕೋಮು ವೈರಸ್‌ಗಳನ್ನು ಸಮಾಜದೊಳಗೆ ಹರಿಯಬಿಟ್ಟು, ಭಾರತದಲ್ಲಿ ಸಹಸ್ರಾರು ಜೀವಗಳನ್ನು ಬಲಿ ಪಡೆದ ಹೆಗ್ಗಳಿಕೆಯನ್ನು ಹೊಂದಿರುವ ಮಾಧ್ಯಮಗಳು, ಇದೀಗ ಚೀನಾದ ವೈರಸ್‌ಗೆ ಸಂಘಪರಿವಾರದ ಕೇಸರಿ ವೈರಸ್‌ನ್ನು ಚುಚ್ಚಿ ಭಾರತದಲ್ಲಿ ಅದನ್ನು ವಿಶಿಷ್ಟ ಪ್ರಯೋಗಕ್ಕೆ ಒಳಪಡಿಸುತ್ತಿದ್ದಾರೆ. ಇವರ ಯಶಸ್ವಿ ಸಾಧನೆಗೆ ಚೀನಾದಂತಹ ಚೀನಾ ಕೂಡ ಬೆಕ್ಕಸ ಬೆರಗಾಗಬೇಕು. ಸಾಧಾರಣವಾಗಿ ಕೊರೋನ ವೈರಸ್ ಶ್ವಾಸಕೋಶಕ್ಕೆ ಲಗ್ಗೆ ಇಟ್ಟು ಹಾನಿ ಮಾಡಿದರೆ, ಮಾಧ್ಯಮಗಳು ಸೃಷ್ಟಿಸುತ್ತಿರುವ ಈ ವೈರಸ್ ನೇರವಾಗಿ ಮೆದುಳನ್ನೇ ಗುರಿಯಾಗಿರಿಸಿಕೊಂಡಿದೆ. ಚೀನಾದಿಂದ ಆಗಮಿಸಿರುವ ಕೊರೋನ ಸೋಂಕಿನಿಂದ ಜನ ಮುಕ್ತವಾಗಬಹುದಾದರೂ, ಮಾಧ್ಯಮ ಸೃಷ್ಟಿಸಿರುವ ವೈರಸ್‌ಗಳಿಂದ ಮೆದುಳಿಗೆ ಹಾನಿಯಾದವರು ಗುಣವಾಗುವುದು ಸುಲಭವಿಲ್ಲ. ಯಾವುದೇ ಸಾಂಕ್ರಾಮಿಕ ರೋಗಗಳಿಗಿಂತ ಮಾಧ್ಯಮ ಸೃಷ್ಟಿಸಿರುವ ಕೋಮುವೈರಸ್ ಈ ದೇಶಕ್ಕೆ ಸರಿಪಡಿಸಲಾಗದಷ್ಟು ಹಾನಿಯನ್ನುಂಟು ಮಾಡುತ್ತಾ ಬಂದಿದೆ. ಇದೀಗ ಅದೇ ಕೋಮು ವೈರಸನ್ನು ಕೊರೋನದ ಜೀವಕೋಶದೊಳಗೆ ಸೇರಿಸಿ ಆ ಮೂಲಕ ಅವುಗಳನ್ನು ಜನರ ನಡುವೆ ಹರಡುವ ಕೆಲಸದಲ್ಲಿ ಮಾಧ್ಯಮಗಳು ಚುರುಕಾಗಿವೆ. ಮಾಧ್ಯಮಗಳ ಈ ಹೊಸ ವೈರಸ್ ಸೃಷ್ಟಿ ಬರೇ ಒಂದು ಸಮುದಾಯವನ್ನು ಬಲಿಪಶು ಮಾಡುವ ಉದ್ದೇಶವನ್ನಷ್ಟೇ ಹೊಂದಿಲ್ಲ, ಬದಲಾಗಿ ಕೊರೋನದಿಂದ ದೇಶಾದ್ಯಂತ ಸೃಷ್ಟಿಯಾಗಿರುವ ಅವ್ಯವಸ್ಥೆ, ಹಸಿವು, ಸಾವು, ನೋವುಗಳ ಹಿಂದಿರುವ ಸರಕಾರದ ವೈಫಲ್ಯವನ್ನು ಮುಚ್ಚುವ ಉದ್ದೇಶವನ್ನು ಹೊಂದಿವೆ. ಚರ್ಚೆಯ ದಿಕ್ಕನ್ನು ಬದಲಿಸುವುದು ಇವರ ಪ್ರಮುಖ ಉದ್ದೇಶ.

ಭಾರತಕ್ಕ್ಲೆ ಕೊರೋನ ವೈರಸ್ ಆಗಮಿಸಿರುವುದು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣವೆಂಬ ದಿಡ್ಡಿ ಬಾಗಿಲಿನ ಮೂಲಕ. ವಿದೇಶಗಳಲ್ಲಿ ವೈರಸ್‌ಗಳು ಸೃಷ್ಟಿಸುತ್ತಿರುವ ಅವಾಂತರಗಳು ಜಗಜ್ಜಾಹೀರಾಗುತ್ತಿರುವ ಸಂದರ್ಭದಲ್ಲೇ ಈ ದಿಡ್ಡಿಬಾಗಿಲನ್ನು ಅನಿರ್ದಿಷ್ಟಾವಧಿ ಮುಚ್ಚಿದ್ದರೆ ಭಾರತ ಉಳಿದ ಶ್ರೀಮಂತ ದೇಶಗಳಂತೆ ‘ಲಾಕ್ ಡೌನ್’ಗಳಿಗೆ ಒಳಗಾಗಬೇಕಾದ ಅಗತ್ಯವಿದ್ದಿರಲಿಲ್ಲ. ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಗಳ ಮೂಲಕ ಭಾರತ ಪ್ರವೇಶಿಸಿದ ಅನಿವಾಸಿಗಳನ್ನಷ್ಟೇ ಬಂಧನದಲ್ಲಿರಿಸಿ, ಅವರಿಗೆ ಸೂಕ್ತ ಚಿಕಿತ್ಸೆ ನೀಡುವುದರಿಂದ ಎಲ್ಲವೂ ಮುಗಿದು ಬಿಡುತ್ತಿತ್ತು. ಆದರೆ ಸರಕಾರದ ಬೇಜವಾಬ್ದಾರಿತನ, ಅಜಾಗರೂಕತೆ ಭಾರತವನ್ನೂ ವಿಪತ್ತಿಗೆ ತಳ್ಳುವಂತೆ ಮಾಡಿತು. ಕೊರೋನ ದೇಶಾದ್ಯಂತ ಹರಡುವುದಕ್ಕೆ ಸರಕಾರವೇ ಪರೋಕ್ಷ ಕಾರಣವಾಯಿತು. ಸರಕಾರ ಮತ್ತು ಕಾನೂನು ವ್ಯವಸ್ಥೆ ಪ್ರತಿ ಹಂತದಲ್ಲೂ ತೋರ್ಪಡಿಸಿದ ಬೇಜವಾಬ್ದಾರಿ ಕಾರಣದಿಂದ ಇಂದು ಕೊರೋನ ಭಾರತದ ಅಳಿದುಳಿದ ಆರ್ಥಿಕತೆಯನ್ನೂ ಆಪೋಷನ ತೆಗೆದುಕೊಳ್ಳುತ್ತಿದೆ. ಸರಕಾರದ ಉಡಾಫೆಗೆ ಅತ್ಯುತ್ತಮ ಉದಾಹರಣೆ ದಿಲ್ಲಿಯ ನಿಝಾಮುದ್ದೀನ್ ಪ್ರದೇಶದಲ್ಲಿ ನಡೆದ ಧಾರ್ಮಿಕ ಸಭೆಯಾಗಿದೆ. ತಬ್ಲೀಗಿ ಜಮಾಅತ್‌ನ ದಿಲ್ಲಿ ಕೇಂದ್ರ ಕಚೇರಿಯಾಗಿರುವ ‘ಮರ್ಕಝ್ ನಿಝಾಮುದ್ದೀನ್’ನಲ್ಲಿ ವಿದೇಶಿಯರು ಸೇರಿದಂತೆ ಸುಮಾರು 2,000 ಜನರು ಭಾಗವಹಿಸಿದ್ದರು. ಮಾರ್ಚ್ 13ರಿಂದ 15ರವರೆಗೆ ಈ ಸಮಾವೇಶ ನಡೆದಿತ್ತು. ಈ ಸಮಾವೇಶ ನಡೆಯುವ ಮೊದಲು, ಸಂಘಟಕರು ಸರಕಾರದ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು, ಪಡೆದಿದ್ದಾರೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಅದಾಗಲೇ ಕೊರೋನ ತಮ್ಮ ನೀಳ ಹಸ್ತವನ್ನು ಚಾಚುತ್ತಿರುವಾಗ, ಮಾರ್ಚ್ 13ರಂದು ಸಮಾವೇಶ ನಡೆಯಲು ಅನುಮತಿ ನೀಡಿರುವುದು ಮೊತ್ತ ಮೊದಲು ವೈಫಲ್ಯವಾಗಿದೆ. ಅನುಮತಿ ನೀಡಿದ ಬಳಿಕವೂ ಕೊನೆಯ ಕ್ಷಣದಲ್ಲಿ ಕಾರ್ಯಕ್ರಮವನ್ನು ರದ್ದುಗೊಳಿಸಲು ದಿಲ್ಲಿ ಅಥವಾ ಕೇಂದ್ರ ಸರಕಾರ ಆದೇಶವನ್ನು ನೀಡಬಹುದಾಗಿತ್ತು. ಆದರೆ ಅಂತಹ ಯಾವುದೇ ಕಾನೂನು ಕ್ರಮ ಜರುಗದೇ ಇರುವುದೇ ಕೊರೋನ ವೈರಸನ್ನು ಸರಕಾರ ಎಷ್ಟು ಹಗುರವಾಗಿ ತೆಗೆದುಕೊಂಡಿತ್ತು ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಒಂದು ವೇಳೆ ಅಂತಹ ಆದೇಶವನ್ನು ನೀಡಿಯೂ ‘ತಬ್ಲೀಗಿ ಜಮಾಅತ್’ನ ಕಾರ್ಯಕರ್ತರು ಕಾರ್ಯಕ್ರಮದಿಂದ ಹಿಂದೆ ಸರಿಯಲಿಲ್ಲ ಎಂದಾಗಿದ್ದರೆ ಇಂದಿನ ಕೊರೋನ ಅನಾಹುತಕ್ಕೆ ನೇರವಾಗಿ ಅವರನ್ನೇ ಹೊಣೆ ಮಾಡಬಹುದಾಗಿತ್ತು. ಮಾರ್ಚ್ 19ರಂದು ನರೇಂದ್ರ ಮೋದಿ ಅವರು ಟಿವಿಯಲ್ಲಿ ಬಂದು ಒಂದು ದಿನದ ಜನತಾ ಕರ್ಫ್ಯೂ ಘೋಷಿಸಿದಾಕ್ಷಣವೇ ಸಮಾವೇಶದಲ್ಲಿ ನೆರೆದ ಜನರು ದಿಲ್ಲಿಯನ್ನು ತೊರೆಯುವ ಪ್ರಯತ್ನದಲ್ಲಿದ್ದರು. ಆದರೆ ಅದಾಗಲೇ ದೇಶಾದ್ಯಂತ ಸಾರಿಗೆ ಸಂಪರ್ಕ ಕಡಿತಗೊಂಡಿದ್ದುದರಿಂದ ನೂರಾರು ಸಂಖ್ಯೆಯ ಕಾರ್ಯಕರ್ತರು ದಿಲ್ಲಿಯಲ್ಲೇ ಅನಿವಾರ್ಯವಾಗಿ ಉಳಿಯಬೇಕಾಯಿತು. ಆಗಲೂ ಕೂಡ, ಅವರನ್ನು ವಶಕ್ಕೆ ಪಡೆದು ಸೂಕ್ತ ಕ್ವಾರಂಟೈನ್ ವ್ಯವಸ್ಥೆ ಮಾಡುವ ಅವಕಾಶ ಸರಕಾರಕ್ಕಿತ್ತು. ಆದರೆ ವ್ಯವಸ್ಥೆ ಎಚ್ಚೆತ್ತುಕೊಳ್ಳುವಷ್ಟರಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿತ್ತು. ಇದೀಗ ಕೆಲವು ಮಾಧ್ಯಮಗಳು ಈ ಅನಾಹುತಕ್ಕೆ ಒಂದು ಧರ್ಮವನ್ನೇ ಹೊಣೆ ಮಾಡಲು ಪ್ರಯತ್ನಿಸುತ್ತಿವೆ. ವಿಶ್ವದಲ್ಲಿ ಕೊರೋನ ಸುದ್ದಿ ಮಾಡುತ್ತಿರುವುದರಿಂದ ಸಂಬಂಧಪಟ್ಟ ಧಾರ್ಮಿಕ ಸಂಘಟಕರು ಸ್ವಯಂ ಜಾಗೃತಗೊಂಡು ಕಾರ್ಯಕ್ರಮವನ್ನು ಮುಂದೆ ಹಾಕಬೇಕಾಗಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಮಾರ್ಚ್ ಮೊದಲ ವಾರದರೆಗೂ ಕೊರೋನವನ್ನು ಅವರೆಂದಲ್ಲ, ಸ್ವತಃ ಸರಕಾರವೇ ಗಂಭೀರವಾಗಿ ಸ್ವೀಕರಿಸಿರಲಿಲ್ಲ.

ಮಾರ್ಚ್ 19ರಂದು ನರೇಂದ್ರ ಮೋದಿ ಒಂದು ದಿನ ‘ಜನತಾ ಕರ್ಫ್ಯೂ’ ಹೇರಿದಾಗ ಕೊರೋನ ಚರ್ಚೆ ಮುನ್ನೆಲೆಗೆ ಬಂತು ಮತ್ತು ವಿವಿಧ ರಾಜ್ಯಗಳು ಈ ಬಗ್ಗೆ ಜನರಲ್ಲಿ ಜಾಗೃತಿಯನ್ನು ಬಿತ್ತುವುದಕ್ಕೆ ಮುಂದಾದವು. ವಿಪರ್ಯಾಸವೆಂದರೆ, ಜನತಾ ಕರ್ಫ್ಯೂ ಘೋಷಿಸಿದ ಸಂಜೆಯೇ ಭಾರೀ ಸಂಖ್ಯೆಯಲ್ಲಿ ಸಂಪ್ರದಾಯವಾದಿಗಳು ಗಂಟೆ ಜಾಗಟೆಗಳ ಜೊತೆಗೆ ಬೀದಿಯಲ್ಲಿ ಮೆರವಣಿಗೆ ನಡೆಸಿ ಸರಕಾರದ ಆದೇಶವನ್ನು ಉಲ್ಲಂಘಿಸಿದರು. ಮಾರ್ಚ್ 13ರಂದು ರಾಜ್ಯದಲ್ಲಿ ಯಡಿಯೂರಪ್ಪ ಒಂದು ವಾರದ ಬಂದ್ ಘೋಷಿಸಿದ್ದರು. ಆದರೆ ಅವರೇ ಮರುದಿನ ಶಾಸಕರೊಬ್ಬರ ಕುಟುಂಬದ ಮದುವೆಯಲ್ಲಿ ಭಾಗವಹಿಸಿ ಬಂದ್‌ನ ಉದ್ದೇಶವನ್ನು ನಿರ್ಲಕ್ಷಿಸಿದ್ದರು. ನಿಝಾಮುದ್ದೀನ್ ಧಾರ್ಮಿಕ ಸಮಾವೇಶ ಮಾರ್ಚ್ 15ಕ್ಕೆ ಮುಕ್ತಾಯಗೊಂಡಿತ್ತು. ಆದರೆ ಇದು ಮುಗಿದ ಮೂರು ದಿನಗಳ ಬಳಿಕ ಅಂದರೆ ಮಾರ್ಚ್ 18ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ‘‘ಅಯೋಧ್ಯೆಯಲ್ಲಿ ನಡೆಯುವ ಬೃಹತ್ ರಾಮನವಮಿ ಆಚರಣೆ ಯಾವ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ’’ ಎಂಬ ಹೇಳಿಕೆ ನೀಡಿದ್ದರು. ‘‘ಕೊರೋನದಿಂದ ಶ್ರೀರಾಮನೇ ನಮ್ಮನ್ನೆಲ್ಲ ಕಾಪಾಡುತ್ತಾನೆ’’ ಎಂದು ಸಂತರು ಸ್ಪಷ್ಟಪಡಿಸಿದ್ದರು. ಸರಕಾರದ ನಿಲುವನ್ನು ಎಲ್ಲ ಹಿಂದುತ್ವವಾದಿ ಸಂಘಟನೆಗಳೂ ಸ್ವಾಗತಿಸಿದ್ದವು. ಆದರೆ ಕೊರೋನ ದಿನದಿಂದ ದಿನಕ್ಕೆ ವ್ಯಾಪಿಸುತ್ತಾ, ದೇಶಾದ್ಯಂತ ಲಾಕ್‌ಡೌನ್ ಘೋಷಣೆಯಾದ ಬಳಿಕವಷ್ಟೇ ಆದಿತ್ಯ ನಾಥ್ ಸರಕಾರ ರಾಮನವಮಿಯಿಂದ ಹಿಂದೆ ಸರಿಯಿತು.

ದೇಶದಲ್ಲಿ ಕೊರೋನ ತುರ್ತುಪರಿಸ್ಥಿತಿಯಿದ್ದರೂ ಸಂಸತ್‌ನಲ್ಲಿ ಅಧಿವೇಶನ ಮುಂದುವರಿಯಿತು. ಬಿಜೆಪಿಯ ಮುಖಂಡರೇ ಅಧಿವೇಶನ ನಿಲ್ಲಿಸಲು ಸೂಚನೆ ನೀಡಿದ್ದರೂ ಪ್ರಧಾನಿ ಅದನ್ನು ತಿರಸ್ಕರಿಸಿದ್ದರು. ಮಧ್ಯ ಪ್ರದೇಶದಲ್ಲಿ ಆಪರೇಷನ್ ಕಮಲ ನಡೆದು, ಕಾಂಗ್ರೆಸ್ ಸರಕಾರ ಉರುಳಿಸಿ, ನೂತನ ಸರಕಾರ ಪ್ರಮಾಣ ವಚನ ಸ್ವೀಕರಿಸುವುದಕ್ಕೂ ಕೊರೋನ ತಡೆಯಾಗಲಿಲ್ಲ. ಮಾರ್ಚ್ 20ರವರೆಗೂ ತಿರುಪತಿ ಸಾರ್ವಜನಿಕರಿಗೆ ಮುಕ್ತವಾಗಿತ್ತು. ವಿವಿಧ ಖ್ಯಾತ ಪುಣ್ಯ ಕ್ಷೇತ್ರಗಳು ಭಕ್ತರಿಗಾಗಿ ತೆರೆದಿದ್ದವು. ಎಲ್ಲಕ್ಕಿಂತ ಮುಖ್ಯವಾಗಿ ಲಾಕ್‌ಡೌನ್‌ಗಳನ್ನೇ ಅಣಕಿಸುವಂತೆ ಸಹಸ್ರಾರು ವಲಸೆ ಕಾರ್ಮಿಕರು ದಿಲ್ಲಿ, ಉತ್ತರ ಪ್ರದೇಶಾದ್ಯಂತ ಬೀದಿಯಲ್ಲಿ ನೆರೆದರು. ಆದರೆ ಮಾಧ್ಯಮಗಳ ಕಣ್ಣಿಗೆ ನಿಝಾಮುದ್ದೀನ್‌ನಲ್ಲಿ ನಡೆದ ಬೇಜಾಬ್ದಾರಿತನ ಮಾತ್ರ ಕಂಡಿರುವುದು, ಸದ್ಯಕ್ಕೆ ಮಾಧ್ಯಮಗಳಿಗೆ ಬಾಧಿಸಿರುವ ಕೋಮು ಕೊರೋನದ ಸೋಂಕನ್ನು ಬೆಳಕಿಗೆ ತಂದಿದೆ. ನಿಝಾಮುದ್ದೀನ್ ಮಾತ್ರವಲ್ಲ, ಅಯೋಧ್ಯೆಯೂ ಸೇರಿದಂತೆ ಈ ದೇಶದ ಯಾವುದೇ ಧಾರ್ಮಿಕ ಸ್ಥಳಗಳು ತಮ್ಮ ಹೊಣೆಗಾರಿಕೆಗಳನ್ನು ಮರೆಯಬಾರದು. ಕೊರೋನದಂತಹ ಸಾಂಕ್ರಾಮಿಕ ರೋಗಗಳು ಹರಡುವಾಗ, ಸರಕಾರದ ನಿರ್ದೇಶವನ್ನು ಕಾಯುತ್ತಾ ಕೂರದೆ ಸ್ವಯಂ ತಮ್ಮ ಮೇಲೆ ನಿರ್ಬಂಧಗಳನ್ನು ಹೇರಿಕೊಳ್ಳುವ ಅಗತ್ಯವಿದೆ.

ಧರ್ಮಗಳು, ಆಚರಣೆಗಳು ಇರುವುದು ಜನರ ಒಳಿತಿಗಾಗಿ. ಇದೇ ಸಂದರ್ಭದಲ್ಲಿ ಮಾಧ್ಯಮಗಳು ಅಭಿವೃದ್ಧಿಗೊಳಿಸಿರುವ ಕೊರೋನದಿಂದಲೂ ಈ ದೇಶದ ಜನತೆಯನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮೆಲ್ಲರದಾಗಿದೆ. ಯಾಕೆಂದರೆ ಕೊರೋನ ವೈರಸ್‌ಗೆ ನಾಳೆ ಔಷಧಿ ಕಂಡುಕೊಳ್ಳಬಹುದು, ಆದರೆ ಮಾಧ್ಯಮಗಳು ಅಭಿವೃದ್ಧಿಗೊಳಿಸಿರುವ ಕೊರೋನ ನೇರ ಮೆದುಳಿನ ಮೇಲೆ ಪರಿಣಾಮ ಬೀರುವುದರಿಂದ ಅದಕ್ಕೆ ಔಷಧಿ ಸಿಗುವುದು ಕಷ್ಟ. ಈ ವೈರಸ್‌ನಿಂದ ಸೋಂಕಿತರಾದವರಿಗೆ, ದೇಶದಲ್ಲಿ ವಲಸೆ ಕಾರ್ಮಿಕರು, ಬಡವರು ಎದುರಿಸುತ್ತಿರುವ ಸಮಸ್ಯೆಗಳು ಕಾಣುವುದಿಲ್ಲ. ಸರಕಾರದ ವೈಫಲ್ಯಗಳು ಮುಖ್ಯವಾಗುವುದಿಲ್ಲ. ಅಭಿವೃದ್ಧಿಯ ವೈಫಲ್ಯಗಳನ್ನು ಸರಕಾರ ಹೇಗೆ ಕೋಮು ಧ್ರುವೀಕರಣದ ಮೂಲಕ ಮುಚ್ಚಿ ಹಾಕಿದೆಯೋ ಹಾಗೆಯೇ, ಕೊರೋನ ವೈಫಲ್ಯಗಳನ್ನೂ ಅದೇ ತಂತ್ರಗಳ ಮೂಲಕ ಮುಚ್ಚಿ ಹಾಕಲು ಹೊರಟಿವೆ. ಮಾಧ್ಯಮಗಳು ಆ ನಿಟ್ಟಿನಲ್ಲಿ ಸರಕಾರಕ್ಕೆ ಸಹಾಯ ಮಾಡುತ್ತಿವೆ. ನಿಝಾಮುದ್ದೀನ್ ಕಡೆಗೆ ಕೈ ತೋರಿಸುತ್ತಾ, ಈ ದೇಶದಲ್ಲಿ ಲಾಕ್‌ಡೌನ್ ದುಷ್ಪರಿಣಾಮದಿಂದ ಮೃತಪಟ್ಟಿರುವ, ಸಾಯುವ ಹಂತದಲ್ಲಿರುವ ನೂರಾರು ಬಡ ಕಾರ್ಮಿಕರ ಕಡೆಗಿನ ನಮ್ಮ ಗಮನವನ್ನು ಬೇರೆಡೆಗೆ ತಿರುಗಿಸುತ್ತಿವೆ. ಸರಕಾರಗಳ ಜೀತಗಾರಿಕೆಗಾಗಿ ಕುಖ್ಯಾತವಾಗಿರುವ ಈ ಮಾಧ್ಯಮಗಳ ಈ ಸಂಚಿಗೆ ಬಲಿಯಾಗದೆ, ಕೊರೋನ ವೈರಸ್ ಮತ್ತು ಲಾಕ್‌ಡೌನ್ ಎರಡೂ ದುಷ್ಪರಿಣಾಮಗಳನ್ನು ಜೊತೆ ಜೊತೆಯಾಗಿ ಎದುರಿಸಿ ನಮ್ಮ ಭಾರತವನ್ನು ರಕ್ಷಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)