ತಪಾಸಣೆಗೆ ಆಗಮಿಸಿದ ಆರೋಗ್ಯ ಸಿಬ್ಬಂದಿ, ವೈದ್ಯೆಯರ ಮೇಲೆ ಕಲ್ಲುತೂರಾಟ ನಡೆಸಿದ ಗುಂಪು
ವಿಡಿಯೋ ವೈರಲ್
ಇಂದೋರ್: ಕೊರೋನ ವೈರಸ್ ಸೋಂಕಿನ ಲಕ್ಷಣಗಳನ್ನು ಹೊಂದಿರುವವರನ್ನು ತಪಾಸಣೆ ನಡೆಸಲೆಂದು ತೆರಳಿದ್ದ ಮಧ್ಯಪ್ರದೇಶದ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ನಗರಾಡಳಿತ ಅಧಿಕಾರಿಗಳ ಮೇಲೆ ಗುಂಪೊಂದು ಹಲ್ಲೆಗೈದ ಘಟನೆ ಇಂದೋರ್ ಸಮೀಪ ನಡೆದಿದೆ.
ಈ ಘಟನೆಯಲ್ಲಿ ಇಬ್ಬರು ವೈದ್ಯೆಯರು ಗಾಯಗೊಂಡಿದ್ದಾರೆ. ಅವರನ್ನು ಪೊಲೀಸರು ಗುಂಪಿನಿಂದ ರಕ್ಷಿಸಿದ್ದಾರೆ. ಘಟನೆಯ ವೀಡಿಯೋ ಕೂಡ ಹರಿದಾಡುತ್ತಿದೆ.
ಸೋಂಕು ರಕ್ಷಣಾ ಕವಚ- ಪಿಪಿಇ ಧರಿಸಿದ್ದ ಇಬ್ಬರು ವೈದ್ಯೆಯರು ಓಡುತ್ತಿರುವುದು ಹಾಗೂ ಸ್ಥಳೀಯರ ಒಂದು ಗುಂಪು ಅವರತ್ತ ಕಲ್ಲುಗಳು ಹಾಗೂ ಪ್ಲಾಸ್ಟಿಕ್ ತುಂಡು ಎಸೆಯುತ್ತಿರುವುದು ವೀಡಿಯೋದಲ್ಲಿ ಕಾಣಿಸುತ್ತದೆ. ಕೆಲವೇ ಕ್ಷಣಗಳಲ್ಲಿ ಈ ಸಣ್ಣ ಗುಂಪಿಗೆ ಇನ್ನೂ ಹಲವಾರು ಸೇರಿಕೊಂಡು ಸುಮಾರು 100 ಮಂದಿಯಷ್ಟಿದ್ದ ತಂಡ ವೈದ್ಯೆಯರು ಹಾಗೂ ಇತರ ಅಧಿಕಾರಿಗಳನ್ನು ನಿಂದಿಸುತ್ತಾ ಅವರನ್ನು ಕಿರಿದಾದ ಗಲ್ಲಿಯಲ್ಲಿ ಅಟ್ಟಾಡಿಸುತ್ತಿರುವುದು ಕಾಣಿಸುತ್ತದೆ.
ಘಟನೆ ನಡೆದಿದೆಯೆನ್ನಲಾದ ತಾತ್ ಪಟ್ಟಿ ಬಖಲ್ ಪ್ರದೇಶದಲ್ಲಿ ಕನಿಷ್ಠ ಎರಡು ಕೊರೋನ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು ಸ್ಥಳೀಯರ ತೀವ್ರ ಪ್ರತಿರೋಧದ ನಡುವೆ ಸುಮಾರು 54 ಕುಟುಂಬಗಳನ್ನು ಕ್ವಾರಂಟೈನ್ ನಲ್ಲಿರಿಸಲಾಗಿದೆ.
Stones pelted on health department officials at Taat Patti in Indore, Madhya Pradesh. Two women doctors got injured and had to be rescued by police. #MPFightsCorona #MadhyaPradesh #Indorelockdown pic.twitter.com/we3yI0iM9C
— Nirupam Banerjee (@nirupamban) April 2, 2020