varthabharthiಸಂಪಾದಕೀಯ

ಕೊರೋನ ದುರಂತ: ಮಾಧ್ಯಮಗಳಿಗೆ ಬರೆ?

ವಾರ್ತಾ ಭಾರತಿ : 2 Apr, 2020

ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದಕ್ಕೆ ಸಂಬಂಧಿಸಿ ಇತ್ತೀಚೆಗೆ ಕೇಂದ್ರ ಸರಕಾರ ಸುಪ್ರೀಂಕೋರ್ಟಿಗೆ ವಿವರಗಳನ್ನು ನೀಡುತ್ತಾ ‘‘ಕೇಂದ್ರ ಸರಕಾರದಿಂದ ಅಧಿಕೃತವಾಗಿ ಬಿಡುಗಡೆಯಾಗದೆ, ಕೊರೋನಕ್ಕೆ ಸಂಬಂಧಿಸಿದ ಯಾವುದೇ ಸುದ್ದಿಗಳನ್ನು ಮಾಧ್ಯಮಗಳು ಪ್ರಕಟಿಸಬಾರದು’’ ಎಂದು ಮನವಿ ಮಾಡಿತ್ತು. ಅಂದರೆ, ಕೊರೋನ ವೈರಸ್ ದೇಶಾದ್ಯಂತ ಬೀರುತ್ತಿರುವ ದುಷ್ಪರಿಣಾಮಗಳ ಕುರಿತಂತೆ ಯಾವುದೇ ಸುದ್ದಿಗಳನ್ನು ಪ್ರಕಟಿಸಬೇಕಾದರೂ, ಮಾಧ್ಯಮಗಳು ಸರಕಾರದ ಅನುಮತಿಯನ್ನು ಪಡೆಯಬೇಕು ಅಥವಾ ಪ್ರತಿ ದಿನ ವಾರ್ತಾ ಇಲಾಖೆಗಳು ಬಿಡುಗಡೆ ಮಾಡುವ ಸುದ್ದಿಗಳನ್ನಷ್ಟೇ ಪ್ರಕಟಿಸಬಹುದು. ‘ಲಾಕ್‌ಡೌನ್’ ಬಳಿಕ ದೇಶಾದ್ಯಂತ ಭುಗಿಲೆದ್ದ ಅರಾಜಕತೆ, ವಲಸೆ ಕಾರ್ಮಿಕರ ಸಮಸ್ಯೆಯ ಹಿನ್ನೆಲೆಯಲ್ಲಿ ಸರಕಾರ ಸುಪ್ರೀಂಕೋರ್ಟ್ ಬಳಿ ಈ ಬೇಡಿಕೆಯನ್ನು ಮುಂದಿಟ್ಟಿತ್ತು. ಇದು ಬೇಡಿಕೆ ಮಾತ್ರವಾಗಿರಲಿಲ್ಲ, ದೇಶಾದ್ಯಂತ ಭುಗಿಲೆದ್ದಿರುವ ವಲಸೆ ಕಾರ್ಮಿಕರ ಸಮಸ್ಯೆಗಳ ಹೊಣೆಗಾರಿಕೆಯಿಂದ ಜಾರಿಕೊಳ್ಳುವ ಉದ್ದೇಶವೂ ಇದರ ಹಿಂದಿತ್ತು. ದೇಶಾದ್ಯಂತ ಲಾಕ್‌ಡೌನ್ ಘೋಷಣೆಯಾದ ಬಳಿಕ ಏಕಾಏಕಿ ವಲಸೆ ಕಾರ್ಮಿಕರು ತಂಡೋಪತಂಡವಾಗಿ ಬೀದಿಗಿಳಿದು, ತಮ್ಮ ಊರಿನ ಕಡೆಗೆ ಪಯಣ ಹೊರಟರು. ವಿವಿಧ ಮಾಧ್ಯಮಗಳಲ್ಲಿ ಇದು ಮುಖ್ಯ ಸುದ್ದಿಯಾಗಿ ಪ್ರಕಟವಾಯಿತು. ಈ ವಲಸೆ ಕಾರ್ಮಿಕರು ಎರಡು ರೀತಿಯ ಚರ್ಚೆಗೆ ಕಾರಣರಾದರು.

ಒಂದು, ದೇಶಾದ್ಯಂತ ಘೋಷಿಸಲ್ಪಟ್ಟ ‘ಲಾಕ್‌ಡೌನ್’ ಅವರ ಮೂಲಕ ಅಣಕಕ್ಕೀಡಾಯಿತು. ಅದರ ಉದ್ದೇಶವೇ ವಿಫಲವಾಯಿತು. ಎರಡನೆಯದಾಗಿ, ಆಹಾರ, ವಸತಿಗಳಿಲ್ಲದೆ ನೂರಾರು ಕಿಲೋಮೀಟರ್ ದೂರದ ಅವರ ಪಯಣ, ಮಾನವ ಹಕ್ಕಿನ ಸಮಸ್ಯೆಯಾಗಿಯೂ ಗುರುತಿಸಲ್ಪಟ್ಟಿತು. ಕೊರೋನವನ್ನು ಎದುರಿಸುವಲ್ಲಿ ಸರಕಾರ ಯಾವುದೇ ಪೂರ್ವತಯಾರಿ ಇಲ್ಲದೆ ‘ಲಾಕ್‌ಡೌನ್’ ಘೋಷಣೆ ಮಾಡಿರುವುದು ಇದರಿಂದ ಬೆಳಕಿಗೆ ಬಂತು. ಈ ದೇಶವೆಂದರೆ ಮನೆಯೊಳಗಿರುವ ಜನರು ಮಾತ್ರವಲ್ಲ. ಬೀದಿಯನ್ನೇ ಮನೆಯಾಗಿ ಸ್ವೀಕರಿಸಿ ಬದುಕುತ್ತಿರುವ ಕೋಟ್ಯಂತರ ಜನರು ಇಲ್ಲಿದ್ದಾರೆ. ಹಾಗೆಯೇ, ದಿನಗೂಲಿಯನ್ನು ನಂಬಿ ದೇಶದ ಮೂಲೆ ಮೂಲೆಗಳಿಂದ ಶಹರವನ್ನು ಆಶ್ರಯಿಸಿದ ಜನರ ಸಂಖ್ಯೆಯೂ ಅಷ್ಟೇ ಇದೆ. ಲಾಕ್‌ಡೌನ್ ಆದಾಗ, ಉದ್ಯೋಗ ಮತ್ತು ಆಹಾರ ಪದಾರ್ಥಗಳ ಕೊರತೆಯಿಂದ ಅವರು ಬೀದಿಗೆ ಬರುವುದು ಸಹಜವೇ ಆಗಿದೆ. ಪೂರ್ವಭಾವಿಯಾಗಿ ಇವರಿಗೆ ಸೂಕ್ತ ವ್ಯವಸ್ಥೆಗಳನ್ನು ಮಾಡಿದ ಬಳಿಕ ಸರಕಾರ ಲಾಕ್‌ಡೌನ್ ಘೋಷಿಸಬೇಕಾಗಿತ್ತು. ಆದರೆ ಈ ಕಾರ್ಮಿಕರ ಅಸ್ತಿತ್ವದ ಬಗ್ಗೆ ಸರಕಾರಕ್ಕೆ ಯಾವ ಮಾಹಿತಿಯೂ ಇದ್ದಿರಲಿಲ್ಲ ಎನ್ನುವುದು ಇದೀಗ ಬಹಿರಂಗವಾಗಿದೆ.

ಆದರೆ ಸರಕಾರ ತನ್ನ ಮಾನ ಉಳಿಸುವುದಕ್ಕಾಗಿ ಸುಪ್ರೀಂಕೋರ್ಟ್‌ನ ಮುಂದೆ ಬೇರೆಯೇ ಕತೆಯನ್ನು ಕಟ್ಟಿದೆ. ಕೊರೋನ ಮತ್ತು ಲಾಕ್‌ಡೌನ್ ಕುರಿತಂತೆ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು ಬಿತ್ತಿದ ಭೀತಿಯ ಸುದ್ದಿಗಳಿಂದ ಹೆದರಿ ಕಾರ್ಮಿಕರು ಏಕಾಏಕಿ ತಮ್ಮ ಊರೆಡೆಗೆ ಪ್ರಯಾಣ ಹೊರಟರು ಎಂದು ಅದು ನ್ಯಾಯಾಲಯಕ್ಕೆ ವಿವರಿಸಿದೆ. ಆದುದರಿಂದ ಮಾಧ್ಯಮಗಳು ತಮ್ಮ ವರದಿಗಳ ಮೂಲಕ ಜನರಲ್ಲಿ ಭೀತಿಗಳನ್ನು ಬಿತ್ತುವುದನ್ನು ತಡೆಯುವ ಭಾಗವಾಗಿ, ಕೊರೋನಕುರಿತ ಯಾವುದೇ ಅಧಿಕೃತ ಸುದ್ದಿಗಳನ್ನು ಸರಕಾರ ಪರಾಮರ್ಶಿಸಿದ ಬಳಿಕವೇ ಪ್ರಕಟವಾಗಬೇಕು ಎಂದು ಸುಪ್ರೀಂಕೋರ್ಟ್‌ನ ಜೊತೆಗೆ ಕೇಳಿಕೊಂಡಿದೆ. ಈ ಮನವಿಯ ಮೂಲಕ ಒಂದೇ ಕಲ್ಲಲ್ಲಿ ಎರಡು ಹಕ್ಕಿಗಳನ್ನು ಹೊಡೆಯುವ ಉದ್ದೇಶವನ್ನು ಕೇಂದ್ರ ಸರಕಾರ ಹೊಂದಿದೆ. ಮೊದಲನೆಯದಾಗಿ, ಕಾರ್ಮಿಕರ ಮಹಾ ವಲಸೆಯಿಂದಾದ ಅರಾಜಕತೆಯನ್ನು ಮಾಧ್ಯಮಗಳ ತಲೆಗೆ ಕಟ್ಟುವುದು. ಎರಡನೆಯದಾಗಿ, ತನ್ನ ಮೂಗಿನ ನೇರಕ್ಕೆ ತಕ್ಕಂತೆ ಕೊರೋನಕುರಿತ ವರದಿಗಳನ್ನು ಮಾಡಲು ಮಾಧ್ಯಮಗಳಿಗೆ ನಿರ್ದೇಶಿಸುವುದು. ‘ಯಾವ ಸುದ್ದಿಗಳನ್ನು ಪ್ರಕಟಿಸಬೇಕು, ಯಾವ ಸುದ್ದಿಗಳನ್ನು ಪ್ರಕಟಿಸಬಾರದು’ ಎನ್ನುವುದನ್ನು ಸ್ವಯಂ ತಾನೇ ನಿರ್ದೇಶಿಸುವುದು. ಅಂದರೆ, ಸರಕಾರಕ್ಕೆ ಮುಜುಗರವಾಗುವಂತಹ ಯಾವುದೇ ಸುದ್ದಿಗಳನ್ನು ಪ್ರಕಟಿಸದಂತೆ ತಡೆಯುವುದು.

ವಲಸೆ ಕಾರ್ಮಿಕರು ಏಕಾಏಕಿ ಬೀದಿಗೆ ಬಂದು ‘ಲಾಕ್‌ಡೌನ್’ ಉದ್ದೇಶವನ್ನು ವಿಫಲಗೊಳಿಸಿದ ಪ್ರಕರಣವನ್ನೇ ತೆಗೆದುಕೊಳ್ಳೋಣ. ಈ ಕಾರ್ಮಿಕರಲ್ಲಿ ಟಿವಿ, ಪತ್ರಿಕೆಗಳನ್ನು ಓದುವವರ ಸಂಖ್ಯೆಯಾದರೂ ಎಷ್ಟಿರಬಹುದು? ಎಷ್ಟು ಜನರಲ್ಲಿ ಮೊಬೈಲ್‌ಗಳಿರಬಹುದು? ಎಷ್ಟು ಕಾರ್ಮಿಕರಲ್ಲಿ ಸಾಮಾಜಿಕ ಜಾಲತಾಣಗಳ ಸುದ್ದಿಗಳನ್ನು ಓದುವುದಕ್ಕೆ ಬೇಕಾದ ಇಂಟರ್‌ನೆಟ್ ಸೌಲಭ್ಯ ಇರಬಹುದು? ತುತ್ತು ಕೂಳಿಗೆ ಪರದಾಡುತ್ತಿರುವ ಇವರೆಲ್ಲ ಪತ್ರಿಕೆ, ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ಸುದ್ದಿಗಳಿಗೆ ಹೆದರಿ ಏಕಾಏಕಿ ಗುಳೆ ಹೊರಟರು ಎಂದು ವಾದಿಸುವುದೇ ಹಾಸ್ಯಾಸ್ಪದವಾಗಿದೆ. ಲಾಕ್‌ಡೌನ್‌ನಿಂದಾಗಿ ಮಧ್ಯಮ ಮತ್ತು ಕೆಳಮಧ್ಯಮ ವರ್ಗಗಳ ಜನರೇ ಆಹಾರ ಪದಾರ್ಥಗಳ ಕೊರತೆಗಳಿಂದ ಮನೆಯೊಳಗೇ ಒದ್ದಾಡುತ್ತಿದ್ದಾರೆ. ಬಿಪಿಎಲ್ ಮತ್ತು ಎಪಿಎಲ್ ರೇಶನ್ ಕಾರ್ಡ್‌ಗಳೆಲ್ಲ ತಮ್ಮ ನಡುವಿನ ಅಂತರಗಳನ್ನು ಕಳೆದುಕೊಂಡಿರುವ ದಿನಗಳು ಇವು. ಇಂತಹ ಸಂದರ್ಭದಲ್ಲಿ ಬಿಪಿಎಲ್ ವ್ಯಾಪ್ತಿಗೂ ಒಳಪಡದ ದಿನಗೂಲಿ ನೌಕರರ ಸ್ಥಿತಿ ಎಷ್ಟು ಚಿಂತಾಜನಕವಾಗಿರಬಹುದು? ಬೀದಿಗಿಳಿದರೆ ಪೊಲೀಸರು ಎರ್ರಾಬಿರ್ರಿ ಥಳಿಸುತ್ತಾರೆ. ಉಳಿಯುವುದಕ್ಕೆ ಸರಿಯಾದ ವಸತಿಗಳೂ ಇಲ್ಲ. ಭವಿಷ್ಯದ ಕುರಿತಂತೆ ಯಾವ ಭರವಸೆಯೂ ಅವರಲ್ಲಿಲ್ಲ.

ಸರಕಾರವಾದರೂ ಆಹಾರ ಮತ್ತು ವೈದ್ಯಕೀಯ ನೆರವುಗಳನ್ನು ಮೊದಲೇ ನೀಡಿದ್ದಿದ್ದರೆ ಅವರು ಭರವಸೆಗಳನ್ನು ಕಳೆದುಕೊಳ್ಳುತ್ತಿರಲಿಲ್ಲವೇನೋ. ಆದರೆ ಸರಕಾರ ಅವರೆಡೆಗೆ ತಿರುಗಿಯೂ ನೋಡಿರಲಿಲ್ಲ. ಹಸಿವಿನಿಂದ ಎಷ್ಟು ದಿನವೆಂದು ಕಾಲ ಕಳೆಯಬಹುದು? ಅನಿವಾರ್ಯವಾಗಿ, ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಮರಳಿ ತಮ್ಮ ಊರಿಗೆ ಕಾಲ್ನಡಿಗೆ ಪ್ರಯಾಣವನ್ನು ಹೊರಟರು. ಕೆಲವೊಂದು ರಾಜ್ಯಗಳು ಅವರಿಗಾಗಿ ಬಸ್ ವ್ಯವಸ್ಥೆಯನ್ನು ಮಾಡಿದ್ದೇ, ತಡ ತಂಡೋಪತಂಡವಾಗಿ ಅವರು ಬಸ್‌ನಿಲ್ದಾಣಗಳಲ್ಲಿ ನೆರೆದರು. ಸಿಕ್ಕಿದ ಅವಕಾಶವನ್ನು ಬಳಸಿಕೊಳ್ಳಲು ಕಾರ್ಮಿಕರು ಏಕಾಏಕಿ ಗುಂಪುಗೂಡುವುದು ಸಹಜವೇ ಆಗಿದೆ. ಯಾವಾಗ ಅನಿರೀಕ್ಷಿತವಾಗಿ ಈ ಕಾರ್ಮಿಕರು ಬೀದಿಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ನೆರೆಯತೊಡಗಿದರೋ ಆಗ ಅವರು ಸರಕಾರಕ್ಕೆ ತಲೆನೋವಾಗಿ ಕಾಡತೊಡಗಿದರು. ಆ ಬಳಿಕವಷ್ಟೇ ವಲಸೆ ಕಾರ್ಮಿಕರ ಕುರಿತಂತೆ ಸರಕಾರ ಗಂಭೀರವಾಗಿ ಯೋಚಿಸಿ ಅವರಿಗಾಗಿ ಕಾರ್ಯಕ್ರಮಗಳನ್ನು ರೂಪಿಸತೊಡಗಿತು.

 ಇದೇ ಸಂದರ್ಭದಲ್ಲಿ ಕೊರೋನದಲ್ಲಿ ಸಂಭವಿಸಿದ ಸಾವುಗಳ ಸಂಖ್ಯೆಗಿಂತಲೂ ಹಸಿವು, ಅಪಘಾತ, ಆಘಾತಗಳಿಂತ ವಲಸೆ ಕಾರ್ಮಿಕರು ಸಾಯುವುದು ಬೆಳಕಿಗೆ ಬರತೊಡಗಿದವು. ಪತ್ರಿಕೆಗಳಲ್ಲಿ ಇವು ಮುಖಪುಟ ಸುದ್ದಿಯಾಗುತ್ತಿರುವುದು ಸರಕಾರಕ್ಕೆ ತೀವ್ರ ಮುಜುಗರವನ್ನು ತಂದಿತು. ಲಾಕ್‌ಡೌನ್‌ನಿಂದಾಗಿರುವ ಅನಾಹುತಗಳು ಏನು ಎನ್ನುವುದು ಇನ್ನೂ ಸ್ಪಷ್ಟವಾಗಿ ಹೊರಬಂದಿಲ್ಲ. ಮುಂದಿನ ದಿನಗಳಲ್ಲಿ ಇದರ ದುಷ್ಪರಿಣಾಮಗಳು ಒಂದೊಂದಾಗಿ ಬಹಿರಂಗವಾಗುತ್ತಾ ಹೋದರೆ, ಅದು ಸರಕಾರದ ವರ್ಚಸ್ಸಿಗೆ ತೀವ್ರ ಹಾನಿಯನ್ನುಂಟು ಮಾಡಬಹುದು ಎನ್ನುವ ಮುಂಜಾಗ್ರತೆಗಾಗಿ ಕೊರೋನ ಕುರಿತ ಸುದ್ದಿ ಪ್ರಕಟಣೆಗೆ ಸಂಬಂಧಿಸಿ ಪತ್ರಿಕೆಗಳಿಗೆ ಮೂಗುದಾರವನ್ನು ಹಾಕಲು ಹೊರಟಿದೆ. ಈಗಾಗಲೇ ಕೊರೋನವನ್ನು ಮುಂದಿಟ್ಟು ಕೆಲವು ಪತ್ರಿಕೆಗಳು ಜಾತಿ, ಧರ್ಮಗಳ ನಡುವೆ ಕಂದಕವನ್ನು ಸೃಷ್ಟಿಸುತ್ತಿರುವುದು ಚರ್ಚೆಗೊಳಗಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳಲು ಮುಂದಾಗದೇ ಇರುವ ಸರಕಾರ, ವಲಸೆ ಕಾರ್ಮಿಕರ ಕುರಿತ ಸುದ್ದಿಗಳಿಗೆ ಕಡಿವಾಣ ಹಾಕಲು ಬಯಸುತ್ತಿರುವುದು ವಿಪರ್ಯಾಸವಾಗಿದೆ. ಒಂದು ವೇಳೆ, ಸರಕಾರದ ಬೇಡಿಕೆಯನ್ನು ಸುಪ್ರೀಂಕೋರ್ಟ್ ಮನ್ನಿಸಿದ್ದೇ ಆದಲ್ಲಿ, ಅದರ ನೇರ ಪರಿಣಾಮ ಈ ದೇಶದ ತಳಸ್ತರದ ಬದುಕಿನ ಮೇಲೆ ಉಂಟಾಗಲಿದೆ. ಕೊರೋನದ ಹೆಸರಲ್ಲಿ ಈ ಜನರ ಬದುಕಿನ ಮೇಲೆ ಗೋರಿ ಕಟ್ಟಲು ಸ್ವತಃ ನ್ಯಾಯಾಲಯವೇ ಅನುಮತಿ ನೀಡಿದಂತಾದೀತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)