varthabharthi


ನಿಧನ

ಹೆಚ್. ಉದಯಶಂಕರ ಪ್ರಭು

ವಾರ್ತಾ ಭಾರತಿ : 3 Apr, 2020

ಮೂಡುಬಿದಿರೆ: ಇಲ್ಲಿನ ಸಮಾಜ ಮಂದಿರ ಸಭಾದ ಕಾರ್ಯದರ್ಶಿ, ಹಿರಿಯ ಸಮಾಜ ಸೇವಕ ಹೆಚ್. ಉದಯ ಶಂಕರ ಪ್ರಭು (80 ವ) ಅಲ್ಪ ಕಾಲದ ಅಸೌಖ್ಯದಿಂದ ಶುಕ್ರವಾರ ಬೆಂಗಳೂರಿನಲ್ಲಿರುವ ತಮ್ಮ ಪುತ್ರನ ಮನೆಯಲ್ಲಿ ನಿಧನ ಹೊಂದಿದರು. ಅವರು ಪತ್ನಿ, ಪುತ್ರನನ್ನು ಅಗಲಿದ್ದಾರೆ. 

ಕಳೆದ ಐದು ದಶಕಗಳಿಂದ ಮೂಡುಬಿದಿರೆಯ ಸಮಾಜ ಮಂದಿರ ಸಭಾದ ಆಡಳಿತ ಮಂಡಳಿಯಲ್ಲಿ ಸಕ್ರಿಯರಾಗಿ ಕೊಶಾಧಿಕಾರಿಯಾಗಿ ಬಳಿಕ ದೀರ್ಘಾವಧಿಗೆ ಕಾರ್ಯದರ್ಶಿಯಾಗಿ ಅಲ್ಲಿನ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಅವರು ಮೂಡುಬಿದಿರೆ ಶ್ರೀ ಮಹಾವೀರ ವಿದ್ಯಾವರ್ಧಕ ಸಂಘ, ಶ್ರೀ ಮಹಾವೀರ ಕಾಲೇಜು ಟ್ರಸ್ಟ್ ಆಶ್ರಿತ ಶಿಕ್ಷಣ ಸಂಸ್ಥೆಗಳಲ್ಲಿ, ಜಿ.ವಿ.ಪೈ ಮೆಮೋರಿಯಲ್ ಟ್ರಸ್ಟ್ ನ ಸದಸ್ಯರಾಗಿದ್ದರು. 

ಅರುವತ್ತರ ದಶಕದಲ್ಲಿ ಸಂಪರ್ಕ ಮಾಧ್ಯಮಗಳ ಕೊರತೆಯ ಅಂದಿನ ದಿನಗಳಲ್ಲಿ  ಹವ್ಯಾಸೀ ಪತ್ರಕರ್ತರಾಗಿ ತುರ್ತು ಪರಿಸ್ಥಿತಿಯ ಅವಧಿಯೂ ಸೇರಿದಂತೆ ನವಭಾರತ, ಉದಯವಾಣಿ ಹೀಗೆ ಒಂದೂವರೆ ದಶಕಗಳ ಕಾಲ ಅವರು ಸೇವೆ ಸಲ್ಲಿಸಿದ್ದರು. ಉದಯಕಲಾನಿಕೇತನ ರಂಗ ಸಂಘಟನೆ,ನಟನೆಯ ಮೂಲಕ ಅಂದಿನ ರಂಗಭೂಮಿಯ ಚಟುವಟಿಕೆಗಳಲ್ಲಿ ಗಮನಾರ್ಹ ಕೊಡುಗೆ ನೀಡಿದ್ದರು.

ಮೂಡುಬಿದಿರೆ ರೋಟರಿಯ ಸ್ಥಾಪಕ ಪದಾಧಿಕಾರಿಯಾಗಿ, ಕಾರ್ಯದರ್ಶಿ, ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಅವರು ರೋಟರಿ ಎಜುಕೇಶನ್ ಸೊಸೈಟಿಯ ಸ್ಥಾಪಕ ಸದಸ್ಯರಾಗಿದ್ದರು. 

ಜವುಳಿ ಉದ್ಯಮಿಯಾಗಿ ವೃತ್ತಿ ಜೀವನ ಆರಂಭಿಸಿದ ಅವರು ರಾಜಕೀಯವಾಗಿಯೂ ಸಕ್ರಿಯರಾಗಿ ಅಶಕ್ತರು, ಮತ್ತು ಹಿಂದುಳಿದವರ ಸೇವಾ ಕಾರ್ಯಗಳಿಂದ ಗುರುತಿಸಿಕೊಂಡಿದ್ದರು. ಸಮಾಜ ಸೇವಕರಾಗಿ ಮೂಡುಬಿದಿರೆ ಟೌನ್ ಪಂಚಾಯತ್ ಸದಸ್ಯರಾಗಿ, ಎಂ.ಸಿ.ಎಸ್.ಬ್ಯಾಂಕ್ ನಿರ್ದೇಶಕರಾಗಿ, ಮೂಡುಬಿದಿರೆ ಜಿ.ಎಸ್.ಬಿ. ಸೇವಾ ಸಮಾಜದ ಪದಾಧಿಕಾರಿಯಾಗಿ, ಶ್ರೀ ವೆಂಕಟರಮಣ ಮತ್ತು ಶ್ರೀ ಹಮುಮಂತ ದೇವಸ್ಥಾನದ ಆಡಳಿತ ಮಂಡಳಿಯ ಕೋಶಾಧಿಕಾರಿಯಾಗಿಯೂ ಕ್ರೀಡೆ, ರಂಗಭೂಮಿ, ಸಹಕಾರ, ಧಾರ್ಮಿಕ ಹೀಗೆ ವಿವಿಧ ರಂಗಗಳಲ್ಲಿ  ಸೇವೆ ಸಲ್ಲಿಸಿದ್ದರು. 

ಅವರಿಗೆ 2007ರಲ್ಲಿ ಪ್ರೆಸ್‍ಕ್ಲಬ್ ಗೌರವ, 2019ರಲ್ಲಿ ಸಮಾಜ ಮಂದಿರ ಪುರಸ್ಕಾರ ನೀಡಿ ಗೌರವಿಸಲಾಗಿತ್ತು. 

ಸಂತಾಪ: ಉದಯಶಂಕರ ಪ್ರಭು ಅವರ ನಿಧನಕ್ಕೆ ಮೂಡುಬಿದಿರೆ ಜೈನ ಮಠದ ಭಟ್ಟಾರಕ ಶ್ರೀ, ಸಮಾಜ ಮಂದಿರ ಸಭಾ ಹಾಗೂ ಮಹಾವೀರ ಕಾಲೇಜು ಟ್ರಸ್ಟ್ ಅಧ್ಯಕ್ಷ , ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಜಿ.ವಿ.ಪೈಚ್ಯಾರಿಟೇಬಲ್ ಟ್ರಸ್ಟ್ ಪರವಾಗಿ ಕಾರ್ಯದರ್ಶಿ ಡಾ. ಹರೀಶ್ ನಾಯಕ್, ಮೂಡುಬಿದಿರೆ ಪ್ರೆಸ್ ಕ್ಲಬ್ ಅಧ್ಯಕ್ಷ ವೇಣುಗೋಪಾಲ್, ಬಾಬು ರಾಜೇಂದ್ರ ಪ್ರೌಢಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಪಿ.ರಾಮನಾಥ ಭಟ್, ರೋಟರಿ ಅಧ್ಯಕ್ಷ ಸಿ.ಹೆಚ್. ಗಫೂರ್ ಸಹಿತ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. 
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)