varthabharthiಸಿನಿಮಾ

ದುಡಿದು ಬದುಕುವವರಿಗೆ ಎಡ, ಬಲ ಸಿದ್ಧಾಂತಗಳೇ ಬೇಕಿಲ್ಲ: ರಾಜ್ ಬಿ.ಶೆಟ್ಟಿ

ವಾರ್ತಾ ಭಾರತಿ : 4 Apr, 2020
ಸಂದರ್ಶನ: ಶಶಿಕರ ಪಾತೂರು

‘ಒಂದು ಮೊಟ್ಟೆಯ ಕತೆ’ ಚಿತ್ರದ ಮೂಲಕ ವಿಭಿನ್ನ ಪಾತ್ರದಿಂದಲೇ ನಾಯಕನಾದವರು ರಾಜ್ ಬಿ.ಶೆಟ್ಟಿ. ಚಿತ್ರದಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲಿ ಕೂಡ ಅವರ ವಿಭಿನ್ನತೆ, ವಿಶಿಷ್ಟತೆಯ ನಿಲುವು ಆಗಾಗ ಗುರುತಿಸಲ್ಪಡುತ್ತಿರುತ್ತದೆ. ಯುವಕನಾಗಿರುವಾಗಲೇ ಕೂದಲು ಉದುರಿದರೂ ಅದನ್ನು ಸಮಸ್ಯೆಯಾಗಿ ಸ್ವೀಕರಿಸದ ಮನೋದೃಢತೆ. ವಿಗ್ ಮೂಲಕ ತಲೆಯನ್ನು ಹೇಗೆ ಮರೆಮಾಚಿಲ್ಲವೋ ಅದೇ ರೀತಿ ನಾಟಕೀಯ ಭಾವಗಳಿಂದ ಮನದ ಮಾತು ಅಡಗಿಸುವ ಜಾಯಮಾನ ಕೂಡ ಇವರದಲ್ಲ. ಅನಿಸಿರುವುದನ್ನು ನೇರವಾಗಿ ಹೇಳುವ ವಿಚಾರದಲ್ಲಿ ಹಿಂದೆ ಮುಂದೆ ಯೋಚಿಸಿದವರೇ ಅಲ್ಲ. ಹಾಗಾಗಿಯೇ ಅವರು ಇಂದು ನಮ್ಮೊಂದಿಗೆ ಆಡಿರುವ ಮಾತುಗಳು ಹೆಚ್ಚು ಸಾಂದರ್ಭಿಕವಾಗಿವೆ ಎನ್ನಬಹುದು.

ನೀವು ‘ಲಾಕ್‌ಡೌನ್’ ಕಾಲವನ್ನು ಹೇಗೆ ಕಳೆಯುತ್ತಿದ್ದೀರಾ?
ಸದ್ಯಕ್ಕೆ ಓದಿನಲ್ಲಿ ತೊಡಗಿಸಿಕೊಂಡಿದ್ದೇನೆ. ಪೂರ್ಣಚಂದ್ರ ತೇಜಸ್ವಿಯವರು ಬರೆದಿರುವ ‘ಸಹಜ ಕೃಷಿ’ ಎನ್ನುವ ಪುಸ್ತಕ ಓದುತ್ತಿದ್ದೇನೆ. ಅದು ಜಪಾನ್ನ ರೈತನ ಬದುಕಿನ ವಿಚಾರ. ಸಾವಯವ ಮತ್ತು ಆಧುನಿಕ ರೀತಿಯ ಕೃಷಿಗಳ ನಡುವೆ ಫುಕೊವೊಕ ಎನ್ನುವ ಜಪಾನ್‌ನ ರೈತ ನಡೆಸಿದ ನ್ಯಾಚುರಲ್ ಕೃಷಿಯ ಕುರಿತಾದ ಪುಸ್ತಕ ಇದು. ಇದರಲ್ಲಿ ಕೃಷಿಗಾಗಿ ಯಾವುದೇ ಕೆಲಸ ಮಾಡದೇ ಅದನ್ನು ಪ್ರಾಕೃತಿಕವಾಗಿ ಹೇಗೆ ಬೆಳೆಯುವುದೋ ಅದೇ ರೀತಿಯಲ್ಲಿ ಬೆಳೆಸುವ ಕೆಲಸ ನಡೆಯುತ್ತದೆ. ಆ ಬಗ್ಗೆ ತಿಳಿದುಕೊಳ್ಳುತ್ತಾ ಇದ್ದೇನೆ. ನನಗೆ ಒಂದಲ್ಲ ಒಂದು ದಿನ ಒಬ್ಬ ರೈತನಾಗಬೇಕು ಎನ್ನುವ ಕನಸು ಇದೆ.


ನೀವು ನಿಮ್ಮ ನೇರವಾದ ಅಭಿಪ್ರಾಯಗಳಿಂದಲೂ ಸುದ್ದಿಯಾಗುತ್ತಿದ್ದೀರಿ?

ಹೌದು. ತಪ್ಪು ಕಂಡಾಗ ನಾನು ಖಂಡಿಸಿದ್ದೇನೆ. ನನಗೆ ನನ್ನದೇ ಆದ ಅಭಿಪ್ರಾಯಗಳಿವೆ. ಅದನ್ನು ಒಂದು ಪಂಥದ ಮೂಲಕ ವ್ಯಕ್ತಪಡಿಸಬೇಕು ಎಂದು ನನಗೆ ಅನಿಸಿಲ್ಲ. ಹಾಗಾಗಿ ನಾನು ಎಡ ಪಂಥೀಯನಾಗಲೀ, ಬಲಪಂಥೀಯನಾಗಲೀ ಅಲ್ಲ. ಬಡವರಿಗೆ, ನಿತ್ಯ ದುಡಿದು ಬದುಕುವವರಿಗೆ ಯಾವುದೇ ಸಿದ್ಧಾಂತಗಳು ಇರುವುದಿಲ್ಲ. ಪ್ರಮುಖವಾಗಿ ಇದು ನನ್ನ ದೇಶ. ಸದ್ಯಕ್ಕೆ ನಾನು ಅವಿವಾಹಿತ. ಮುಂದೆ ಮದುವೆಯಾದರೆ ಇದೇ ನೆಲದಲ್ಲೇ ನನ್ನ ಮಕ್ಕಳು ಬೆಳೆಯಲಿದ್ದಾರೆ. ಅವರ ತನಕ ಇಂಥ ಸುಳ್ಳುಗಳು ಮುಂದುವರಿಯಬಾರದು. ಸುಳ್ಳು, ಅಪಪ್ರಚಾರಗಳ ಬಗ್ಗೆ ಅರಿವಾದೊಡನೆ ನಮಗೆ ತಿಳಿದ ಸತ್ಯವನ್ನು ತಿಳಿಸುವ ಮನೋಭಾವ ನಮ್ಮಲ್ಲಿರಬೇಕು.


ನೀವು ಸಿನೆಮಾ ಕತೆಗಳನ್ನು ಆಯ್ದುಕೊಳ್ಳುವ ರೀತಿ ಹೇಗೆ?

ಕತೆ ಕೇಳುವಾಗ ನನಗೆ ಪಾತ್ರದ ಜತೆಗೆ ಕನೆಕ್ಟ್ ಆಗಬೇಕು. ಆ ಪಾತ್ರ ಯಾಕೆ ಹಾಗೆ ಮಾಡುತ್ತಿದೆ ಎನ್ನುವುದಕ್ಕೆ ಒಂದು ಕಾರಣ ಬೇಕು. ಉದಾಹರಣೆಗೆ ‘ಮಾಯಾ ಬಝಾರ್’ ಪಾತ್ರವನ್ನೇ ತೆಗೆದುಕೊಳ್ಳಿ. ಅಂಥ ಪಾತ್ರಗಳು ನನಗೆ ಬೇಕು. ‘ಅಮ್ಮಚ್ಚಿ ಎಂಬ ನೆನಪು’ ಚಿತ್ರವನ್ನು ಒಪ್ಪಿಕೊಂಡಾಗ ಅದು ಕಮರ್ಷಿಯಲ್ ಸಿನೆಮಾ ಆಗಿರಲಿಲ್ಲ. ನನ್ನದು ಪಾಸಿಟಿವ್ ಪಾತ್ರವೂ ಆಗಿರಲಿಲ್ಲ. ಇಂದಿಗೂ ನಾನು ಪಾತ್ರ ಎಷ್ಟು ದೊಡ್ಡದಿದೆ ಎನ್ನುವುದಕ್ಕಿಂತ ಕತೆಯಲ್ಲಿ ಮೂಡಿಸುವ ಪರಿಣಾಮ ಏನು ಎನ್ನುವುದನ್ನು ಗಮನಿಸಿಯೇ ಆಯ್ಕೆ ಮಾಡಿಕೊಳ್ಳುತ್ತೇನೆ. ಸ್ಕ್ರೀನ್ ಸ್ಪೇಸ್ ಎಷ್ಟಿದೆ ಎನ್ನುವುದಕ್ಕಿಂತ ಪಾತ್ರ ಸ್ಕ್ರೀನ್ ಇಂಪ್ಯಾಕ್ಟ್ ಏನು ಎನ್ನುವುದು ನನಗೆ ಮುಖ್ಯವಾಗುತ್ತದೆ. ಆದರೆ ಇತ್ತೀಚೆಗೆ ಹೆಚ್ಚು ಚಿತ್ರಗಳನ್ನು ಒಪ್ಪಿಕೊಳ್ಳುವುದೇ ಇಲ್ಲ ಎನ್ನುವುದು ನಿಜ.


ವರ್ಷಕ್ಕೆ ಇಷ್ಟೇ ಸಿನೆಮಾ ಮಾಡಿದರೆ ಸಾಕು ಎನ್ನುವ ನಿರ್ಧಾರಕ್ಕೆ ಕಾರಣವೇನು?

ಸಣ್ಣ ಪಾತ್ರಗಳಿರುವ ಒಂದಷ್ಟು ಪ್ರಯೋಗಾತ್ಮಕ ಚಿತ್ರಗಳನ್ನು ಮಾಡಿದರೆ ಅವುಗಳ ಪ್ರಚಾರಕ್ಕೆ ತುಂಬ ತಿರುಗಾಡಬೇಕಾಗುತ್ತದೆ. ಅದೇ ವೇಳೆ ಇನ್ ಕಮಿಂಗ್ ತುಂಬ ಕಡಿಮೆ ಇರುತ್ತದೆ. ಮಾತ್ರವಲ್ಲ, ಬೇರೆ ಯಾವುದೇ ಕೆಲಸ ಮಾಡುವುದಕ್ಕೆ ಅವಕಾಶಗಳು ಇರುವುದಿಲ್ಲ. ವರ್ಷಕ್ಕೆ ಏಳೆಂಟು ಚಿತ್ರ ಮಾಡಬಹುದೇ ಹೊರತು ಏನಾದರೂ ಬರೆಯಬೇಕು ಎಂದುಕೊಂಡರೂ ಅದು ಸಾಧ್ಯವಾಗುವುದಿಲ್ಲ. ವರ್ಷವಿಡೀ ಒದ್ದಾಟದಲ್ಲೇ ಕಳೆಯಬೇಕಾಗುತ್ತದೆ. ಅದರ ಬದಲು ಒಳ್ಳೆಯ ಕಂಟೆಂಟ್ ಇರುವ ಎರಡರಿಂದ ಮೂರು ಚಿತ್ರಗಳನ್ನು ಒಪ್ಪಿಕೊಂಡರೆ ಸಮಯವೂ ಸಿಗುತ್ತದೆ. ಜತೆಗೆ ಎಲ್ಲದರ ಕಡೆಗೂ ಸರಿಯಾದ ಗಮನವನ್ನು ಕೊಡಲೂ ಸಾಧ್ಯವಾಗುತ್ತದೆ. ಒಟ್ಟಿನಲ್ಲಿ ಸಿನೆಮಾ ಎಲ್ಲಕ್ಕಿಂತ ದೊಡ್ಡದು. ಯಾಕೆಂದರೆ ಪಾತ್ರಕ್ಕೆ ಬಿಲ್ಡಪ್ ಇದೆ ಎಂದು ಒಪ್ಪಿಕೊಳ್ಳುವುದಕ್ಕಿಂತ ಚಿತ್ರ ಹೇಗೆ ಮೂಡಿ ಬರಲಿದೆ ಎನ್ನುವ ಲೆಕ್ಕಾಚಾರ ಹಾಕಿಯೇ ಪಾತ್ರ ಒಪ್ಪಿಕೊಳ್ಳುತ್ತೇನೆ. ಯೋಜನೆಯಂತೆ ನಡೆದಿದ್ದರೆ ನನ್ನ ನಟನೆಯ ‘ಗರುಡ ಗಮನ ವೃಷಭ ವಾಹನ’ ಜೂನ್ ತಿಂಗಳಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಮುಂದೇನು ಗೊತ್ತಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)