varthabharthi

ರಾಷ್ಟ್ರೀಯ

111 ಮಂದಿಯನ್ನು ಭೇಟಿ ಮಾಡಿದ ಕೊರೋನ ಸೋಂಕಿತ ಉದ್ಯಮಿ

ವಾರ್ತಾ ಭಾರತಿ : 5 Apr, 2020

ಗುವಾಹತಿ: ಅಸ್ಸಾಂನಲ್ಲಿ ಕೊರೋನ ಸೋಂಕಿತ ಉದ್ಯಮಿಯೊಬ್ಬರು 111 ಮಂದಿಯನ್ನು ಭೇಟಿ ಮಾಡಿದ ಬಗ್ಗೆ ಬೆಳಕಿಗೆ ಬಂದಿದೆ. ಈ ಎಲ್ಲ 111 ಮಂದಿಯನ್ನು ಆರೋಗ್ಯ ಅಧಿಕಾರಿಗಳು ಗುರುತಿಸಿದ್ದು, ಸೋಂಕು ಹರಡುತ್ತಿರುವ ವ್ಯಕ್ತಿಗಾಗಿ ಶೋಧ ನಡೆಸುತ್ತಿದ್ದಾರೆ.

ಸೋಂಕು ತಗುಲಿದ ಉದ್ಯಮಿ ಗುವಾಹತಿಯ ಐಷಾರಾಮಿ ಸ್ಪ್ಯಾನಿಶ್ ಗಾರ್ಡನ್ ಪ್ರದೇಶದ ನಿವಾಸಿ. ಇವರು ದೆಹಲಿಗೆ ಭೇಟಿ ನೀಡಿದ್ದರು. ಆದರೆ ಸ್ಥಳೀಯ ವ್ಯಕ್ತಿಯೊಬ್ಬರಿಂದ ಈತನಿಗೆ ಸೋಂಕು ತಗುಲಿದೆ ಎನ್ನಲಾಗಿದೆ. ಇಡೀ ಪ್ರದೇಶದಲ್ಲಿ ನೈರ್ಮಲ್ಯೀಕರಣ ಕಾರ್ಯಾಚರಣೆ ನಡೆಸಲಾಗಿದ್ದು, ನಿಶ್ಶಬ್ದವಾಗಿ ರೋಗ ಹರಡುತ್ತಿರುವವರ ಪತ್ತೆಗೆ ಇಲಾಖೆ ಮುಂದಾಗಿದೆ.

ಈ ವ್ಯಕ್ತಿ ದೆಹಲಿಯಿಂದ ವಾಪಸ್ಸಾಗಿ ಒಂದು ತಿಂಗಳು ಕಳೆದಿದ್ದು, ದೆಹಲಿಯಲ್ಲಿ ಸೋಂಕು ತಗುಲಿರುವ ಸಾಧ್ಯತೆ ಕಡಿಮೆ. ಗುವಾಹತಿಯಲ್ಲೇ ಸೋಂಕು ತಗುಲಿರುವ ಸಾಧ್ಯತೆ ಇದೆ. ದೆಹಲಿಗೆ ಪ್ರಯಾಣ ಮಾಡಿದ 28 ದಿನಗಳ ಬಳಿಕ ಈ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದ್ದು, ರಾಜ್ಯದಲ್ಲಿ ಬೆಳಕಿಗೆ ಬಾರದ ಸೋಂಕಿತರೂ ಇರುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವ ಹಿಮಾಂತ ಬಿಸ್ವ ಶರ್ಮಾ ಹೇಳಿದ್ದಾರೆ.

ಉದ್ಯಮಿ ಜತೆ ನೇರ ಸಂಪರ್ಕ ಹೊಂದಿದ 111 ಮಂದಿಯನ್ನು ಗುರುತಿಸಿ ತಪಾಸಣೆಗೆ ಗುರಿಪಡಿಸಲಾಗಿದೆ. ಅವರು ವಾಸವಿರುವ ಪ್ರದೇಶದಲ್ಲಿ 150 ಕುಟುಂಬಗಳಿದ್ದು, ಇಲ್ಲಿನ ಎಲ್ಲರಿಗೂ ಹೋಮ್ ಕ್ವಾರೆಂಟೈನ್‌ಗೆ ಸೂಚಿಸಲಾಗಿದೆ ಎಂದು ವಿವರಿಸಿದ್ದಾರೆ.

ಫೆ. 29ರಂದು ದೆಹಲಿಯಿಂದ ವಾಪಸ್ಸಾಗಿದ್ದ ಉದ್ಯಮಿ ಮಾ.24ರಂದು ಲಾಕ್‌ಡೌನ್ ಜಾರಿಯಾಗುವವರೆಗೂ ಹಲವು ಮಂದಿಯನ್ನು ಭೇಟಿ ಮಾಡಿದ್ದರು. ಶಿಲ್ಲಾಂಗ್ ಹಾಗೂ ಹುಟ್ಟೂರು ನಾಗಾಂವ್‌ಗೆ ಕೂಡಾ ಭೇಟಿ ನೀಡಿದ್ದರು ಎಂದು ಮೂಲಗಳು ಹೇಳಿವೆ.

ಉದ್ಯಮಿಗೆ ಜ್ವರ ಮತ್ತು ಉಸಿರಾಟ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊರೋನ ವೈರಸ್ ಪರೀಕ್ಷೆಗೆ ಸೂಚಿಸಲಾಗಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)