varthabharthiಸಂಪಾದಕೀಯ

ಭಾರತವನ್ನು ಬಲಿಕೊಟ್ಟು ಪ್ರಧಾನಿ ಮೋದಿ ‘ಗ್ರೇಟ್’ ಅನ್ನಿಸಿಕೊಳ್ಳುವುದು ಸರಿಯೇ?

ವಾರ್ತಾ ಭಾರತಿ : 9 Apr, 2020

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಇಡೀ ದೇಶವನ್ನು ‘ಟ್ರಂಪ್ ಅಥವಾ ಅಮೆರಿಕ’ ಮುಂದೆ ಮಂಡಿಯೂರಿಸಿದರು. ವಿಶ್ವ ಅದಾಗಲೇ ಕೊರೋನ ಆತಂಕವನ್ನು ಎದುರಿಸುತ್ತಿರುವುದಕ್ಕೆ ಸಜ್ಜಾಗುತ್ತಿರುವ ಹೊತ್ತಿನಲ್ಲಿ ‘ನಮಸ್ತೆ ಟ್ರಂಪ್’ ಕಾರ್ಯಕ್ರಮಕ್ಕಾಗಿ ದೇಶ ವಿದೇಶಗಳಿಂದ ಲಕ್ಷಾಂತರ ಜನರನ್ನು ಗುಜರಾತ್‌ನಲ್ಲಿ ಸೇರಿಸಿದರು. ಟ್ರಂಪ್ ಪಾದ ಸ್ಪರ್ಶದಿಂದ ಈ ದೇಶ ಪುನೀತವಾಗುತ್ತದೆ ಮಾತ್ರವಲ್ಲ, ಅಮೆರಿಕದ ಜೊತೆಗಿನ ಸ್ನೇಹದಿಂದ ಮುಂದಿನ ದಿನಗಳಲ್ಲಿ ಭಾರತ ವಿಶ್ವಮಾನ್ಯವಾಗುತ್ತದೆ ಎಂದು ಮಾಧ್ಯಮಗಳ ಮೂಲಕ ಜನರನ್ನು ನಂಬಿಸಲಾಯಿತು. ಟ್ರಂಪ್‌ಗೆ ಮುಜುಗರವಾಗಬಾರದೆಂದು ಭಾರತದ ಬಡತನದ ಮುಂದೆ ಗೋಡೆ ನಿರ್ಮಿಸಲಾಯಿತು. ಇಂದು ಇಡೀ ವಿಶ್ವ ಅಮೆರಿಕವನ್ನು ಹೊರಗಿಟ್ಟುಕೊಂಡು ತಮ್ಮ ತಮ್ಮ ದೇಶದ ಆರ್ಥಿಕ ಬೆಳವಣಿಗೆಗಳ ಬಗ್ಗೆ ಯೋಚಿಸುತ್ತಿರುವಾಗ, ಅಮೆರಿಕದ ಜೀತವೇ ದೇಶದ ಮಹಾಭಾಗ್ಯ ಎಂಬರ್ಥದಲ್ಲಿ ಮೋದಿ ನೇತೃತ್ವದ ಸರಕಾರ ಗುಜರಾತ್‌ನಲ್ಲಿ ಸಮಾವೇಶವನ್ನು ನಡೆಸಿತು. ಇನ್ನು ಮುಂದೆ ಅಮೆರಿಕ-ಭಾರತ ಗಳಸ್ಯ ಕಂಠಸ್ಯ ಎಂದು ‘ಭಕ್ತ’ರು ಸಂಭ್ರಮಿಸಿದರು. ಆದರೆ ಈ ಸಮಾವೇಶ ನಡೆದ ಒಂದೂವರೆ ತಿಂಗಳಲ್ಲಿ ಅಮೆರಿಕದ ಸ್ನೇಹದ ಬಂಡವಾಳ ಬಯಲಾಗಿದೆ. ಅಭಿವೃದ್ಧಿ ಹೊಂದುತ್ತಿರುವ, ಆಳದಲ್ಲಿ ಇನ್ನೂ ಬಡತನವನ್ನು ಬಚ್ಚಿಟ್ಟುಕೊಂಡಿರುವ ಭಾರತ ಕೊರೋನದೊಂದಿಗೆ ಹೋರಾಡಲು ಶಕ್ತಿ ಮೀರಿ ಶ್ರಮಿಸುತ್ತಿರುವಾಗ ‘‘ತಕ್ಷಣ ಮಲೇರಿಯ ಸಂಬಂಧಿತ ಔಷಧಿಗಳನ್ನು ರವಾನಿಸಿ. ಇಲ್ಲವೇ ಪ್ರತೀಕಾರ ಎದುರಿಸಿ’ ಎಂದು ಅಮೆರಿಕ ಭಾರತಕ್ಕೆ ಸಂದೇಶವನ್ನು ನೀಡಿದೆ. ‘ನಮಸ್ತೆ ಟ್ರಂಪ್’ ನಿಂದ ನಿಜಕ್ಕೂ ನಮಗಾದ ಲಾಭ ಏನು ಎನ್ನುವುದು ಇದೀಗ ಬೆಳಕಿಗೆ ಬರುತ್ತಿದೆ.

     

  ಈ ದೇಶದ ಪ್ರಪ್ರಥಮ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರನ್ನು ಭಾರತ ಮಾತ್ರವಲ್ಲ, ವಿಶ್ವವೇ ತನ್ನ ನಾಯಕನಾಗಿ ಸ್ವೀಕರಿಸಿತ್ತು. ಅವರೊಳಗಿನ ವಿದ್ವತ್ತು, ಸ್ವಾತಂತ್ರ ಹೋರಾಟದ ಹಿನ್ನೆಲೆ, ಭವಿಷ್ಯದ ಕುರಿತಂತೆ ಅವರಿಗಿರುವ ದೂರದೃಷ್ಟಿ ಅವರನ್ನು ತೃತೀಯ ಜಗತ್ತಿನ ನೇತಾರನನ್ನಾಗಿಸಿತ್ತು. ದೇಶ ಸ್ವತಂತ್ರಗೊಂಡಾಗ ಅಮೆರಿಕ ಮತ್ತು ರಶ್ಯದ ನಡುವೆ ಶೀತಲ ಸಮರದ ಕಾಲ. ಇಂತಹ ಹೊತ್ತಿನಲ್ಲಿ ಈ ಎರಡೂ ಶಕ್ತಿಗಳೊಂದಿಗೂ ಗುರುತಿಸಿಕೊಳ್ಳದೇ ಅಲಿಪ್ತ ನೀತಿಯನ್ನು ಭಾರತ ಅನುಸರಿಸುವುದಕ್ಕೆ ಮುಖ್ಯ ಕಾರಣ ನೆಹರೂ. ಅಷ್ಟೇ ಅಲ್ಲ, ತೃತೀಯ ಜಗತ್ತು ಭಾರತದ ನೇತೃತ್ವದಲ್ಲಿ ಮುಂದುವರಿಯಿತು. ನೆಹರೂವಿನ ಪಂಚಶೀಲ ತತ್ವಗಳು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿತ್ತು. ಇದೇ ಸಂದರ್ಭದಲ್ಲಿ ಅಮೆರಿಕದ ತೆಕ್ಕೆಗೆ ಜಾರಿದ ಪಾಕಿಸ್ತಾನದ ಇಂದಿನ ಸ್ಥಿತಿ ಹೇಗಿದೆ ಎನ್ನುವುದನ್ನು ನಾವು ನೋಡುತ್ತಿದ್ದೇವೆ. ಇಂದಿರಾಗಾಂಧಿಯ ಕಾಲದಲ್ಲೂ ಭಾರತ ತನ್ನದೇ ಆದ ಸ್ಪಷ್ಟ ವಿದೇಶಾಂಗ ನೀತಿಯನ್ನು ಹೊಂದಿತ್ತು. ಪಾಕಿಸ್ತಾನದಿಂದ ಬಾಂಗ್ಲಾವನ್ನು ವಿಭಜಿಸುವ ಸಂದರ್ಭದಲ್ಲಿ ಅಮೆರಿಕದ ಬೆದರಿಕೆಗೆ ಜಗ್ಗದೆ ತನ್ನ ಉದ್ದೇಶವನ್ನು ಸಾಧಿಸಿದವರು ಇಂದಿರಾಗಾಂಧಿ. ‘ಉಕ್ಕಿನ ಮಹಿಳೆ’ಯೆಂದೇ ಗುರುತಿಸಲ್ಪಡುವ ಇಂದಿರಾಗಾಂಧಿಯ ವರ್ಚಸ್ಸಿಗೆ ವಿಶ್ವ ತಲೆಬಾಗಿತ್ತು. ತನ್ನ ನಿರ್ಭೀತಿಯ ವ್ಯಕ್ತಿತ್ವದಿಂದಲೇ ಅವರಿಗೆ ಬ್ಯಾಂಕ್ ರಾಷ್ಟ್ರೀಕರಣ, ಉಳುವವನೇ ಭೂಮಿಯ ಒಡೆಯ ಮೊದಲಾದ ಜನಪರ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಾಯಿತು. ರಾಜೀವ್‌ಗಾಂಧಿಯ ಕಾಲದಲ್ಲಿ ಭಾರತ ಮಾಹಿತಿ ತಂತ್ರಜ್ಞಾನಕ್ಕೆ ವೇದಿಕೆ ಸಿದ್ಧಪಡಿಸಿತು. ‘ಕಂಪ್ಯೂಟರ್ ಯುಗ’ ಘೋಷಣೆಯಾದದ್ದೇ ರಾಜೀವ್‌ಗಾಂಧಿಯ ಕಾಲದಲ್ಲಿ. ದೂರದೃಷ್ಟಿಯುಳ್ಳ ಅವರ ಯೋಜನೆಗಳನ್ನು ವಿಶ್ವ ಹಾರ್ದಿಕವಾಗಿ ಸ್ವಾಗತಿಸಿತ್ತು. ಹೀಗೆ ಭಾರತದಲ್ಲಿ ಆಗಿ ಹೋದ ಎಲ್ಲ ಪ್ರಧಾನಿಗಳು ಈ ದೇಶವನ್ನು ವಿಶ್ವದ ಶ್ರೀಮಂತ ರಾಷ್ಟ್ರಗಳಿಗೆ ಒತ್ತೆಯಿಡದೆ ಇದರ ಸ್ವಾಯತ್ತತೆಯನ್ನು ಕಾಪಾಡಿಕೊಂಡು ಬಂದಿದ್ದರು. ಭಾರತಕ್ಕೆ ನೇರ ಬೆದರಿಕೆಯನ್ನು ಒಡ್ಡುವ ಧೈರ್ಯ ಅಮೆರಿಕದಂತಹ ದೇಶಗಳಿಗೂ ಇದ್ದಿರಲಿಲ್ಲ. ಆದರೆ 90ರ ದಶಕದಿಂದೀಚೆಗೆ ಭಾರತದ ವಿದೇಶಾಂಗ ನೀತಿ ಬದಲಾಗುತ್ತಾ ಬಂದ ಹಾಗೆ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ದೇಶದ ವರ್ಚಸ್ಸು ದುರ್ಬಲವಾಗುತ್ತಾ ಬಂತು. ಕಳೆದ ಆರು ವರ್ಷಗಳಲ್ಲಿ, ಅಮೆರಿಕದ ಸ್ನೇಹಕ್ಕಾಗಿ ಅಂಗಲಾಚುತ್ತಾ ಬಂದ ಭಾರತ, ಅದಕ್ಕಾಗಿ ತೆತ್ತ ಬೆಲೆಯೇನು ಎನ್ನುವುದು ನಮ್ಮ ಕಣ್ಮುಂದೆಯಿದೆ. ಅಮೆರಿಕದಂತಹ ಶ್ರೀಮಂತ ರಾಷ್ಟ್ರ, ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದ ಕುತ್ತಿಗೆ ಪಟ್ಟಿ ಹಿಡಿದು, ‘ನಮಗೆ ಬೇಕಾದ ಔಷಧಿ ಕಳುಹಿಸಿ, ಇಲ್ಲವಾದರೆ ಪ್ರತೀಕಾರಕ್ಕೆ ಸಿದ್ಧರಾಗಿ’ ಎಂದು ಬೆದರಿಸುವಂತಹ ಸ್ಥಿತಿ ಬಂದಿದೆ. ಮೋದಿಯ ಆಡಳಿತದ ಟೊಳ್ಳುತನ ಈ ಪ್ರಕರಣದಿಂದ ಬೆಳಕಿಗೆ ಬಂದಿದೆ. ಕೊರೋನದಿಂದ ವಿಶ್ವವೇ ತತ್ತರಿಸಿ ಕೂತಿದೆ. ದರೆ ಭಾರತದಲ್ಲಿ ಅದಿನ್ನೂ ತೊದಲು ಹೆಜ್ಜೆಗಳನ್ನಷ್ಟೇ ಇಟ್ಟಿದೆ. ಅದಕ್ಕೆ ಕಾರಣ ಈ ದೇಶದ ಶೇ. 10ರಷ್ಟು ಜನರು ಮಾತ್ರ ಅಂತರ್‌ರಾಷ್ಟ್ರೀಯ ಸಂಬಂಧಗಳ ಮೂಲಕ ಬದುಕನ್ನು ಕಟ್ಟಿಕೊಳ್ಳುತ್ತಿರುವವರು. ಇತರ ಶ್ರೀಮಂತ ರಾಷ್ಟ್ರಗಳಂತೆ, ವಿದೇಶಿ ಸಂಬಂಧಗಳಿಂದಲೇ ಜನ ಜೀವನ ನಡೆಯುತ್ತಿಲ್ಲ. ಕೊರೋನ ವೈರಸ್ ವಿಮಾನ ನಿಲ್ದಾಣಗಳ ಮೂಲಕ ಪ್ರವೇಶಿಸುದರಿಂದ ಇತರ ಶ್ರೀಮಂತ ರಾಷ್ಟ್ರಗಳನ್ನು ವ್ಯಾಪಿಸಿದಂತೆ ಭಾರತವನ್ನು ವ್ಯಾಪಿಸಲಿಲ್ಲ. ಇಷ್ಟಕ್ಕೂ ವಿದೇಶಗಳಲ್ಲಿ ಕೊರೋನ ಅನಾಹುತ ನಡೆಸುತ್ತಿರುವಾಗ ಎಚ್ಚೆತ್ತುಕೊಳ್ಳುವ ಅವಕಾಶವೂ ಭಾರತಕ್ಕಿತ್ತು. ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಮುಚ್ಚಲು ಮತ್ತು ಆಗಮಿಸಿದ ಪ್ರವಾಸಿಗರನ್ನು ಕ್ವಾರಂಟೈನ್‌ನಲ್ಲಿ ಇಡಲು ಸರಕಾರ ತಡ ಮಾಡಿದ ಕಾರಣಕ್ಕಾಗಿ ಭಾರತವೂ ಕೊರೋನ ಕಾರಣದಿಂದ ನಷ್ಟ ಅನುಭವಿಸಬೇಕಾಗಿದೆ. ಅಮೆರಿಕ, ಇಟಲಿಯಂತಹ ದೇಶಗಳ ವೈದ್ಯಕೀಯ ಸವಲತ್ತುಗಳಿಗೆ ಹೋಲಿಸಿದರೆ, ಭಾರತ ಕೊರೋನವನ್ನು ಬರಿಗೈಲಿ ಎದುರಿಸುತ್ತಿದೆ. ಎಲ್ಲ ಸವಲತ್ತುಗಳಿದ್ದೂ ಶ್ರೀಮಂತ ರಾಷ್ಟ್ರಗಳು ಸಂಪೂರ್ಣ ಸೋತು ಕುಳಿತಿವೆ. ಅಂತಹ ಸ್ಥಿತಿ ಭಾರತಕ್ಕೇನಾದರೂ ಒದಗಿ ಬಂದರೆ ಅದನ್ನು ಊಹಿಸುವುದೂ ಕಷ್ಟ. ಭಾರತದಲ್ಲಿ ಕೊರೋನ ಮೂರನೇ ಹಂತಕ್ಕೆ ಈಗಷ್ಟೇ ಕಾಲಿಟ್ಟಿದೆಯಾದರೂ, ಅದು ತಡೆಗಟ್ಟಬಹುದಾದ ಸ್ಥಿತಿಯಲ್ಲಿದೆ. ಈ ನಿಟ್ಟಿನಲ್ಲಿ ಲಾಕ್‌ಡೌನ್ ಭಾರತದ ಪಾಲಿಗೆ ಅನಿವಾರ್ಯವಾಗಿದೆ. ಇಂತಹ ಸಂದರ್ಭದಲ್ಲೇ ಮಲೇರಿಯಕ್ಕೆ ಬಳಸುವ ‘ಹೈಡ್ರಾಕ್ಸಿಕ್ಲೋರೋಕ್ವಿನ್’ ಔಷಧವನ್ನು ಕೊರೋನಕ್ಕೆ ತಾತ್ಕಾಲಿಕವಾಗಿ ಬಳಸಬಹುದು ಎನ್ನುವ ಒಂದು ನಂಬಿಕೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹುಟ್ಟಿಕೊಂಡಿದೆ. ಆದರೆ ಇನ್ನೂ ಖಚಿತವಾಗಿಲ್ಲ. ಮುನ್ನೆಚ್ಚರಿಕೆಯ ರೂಪದಲ್ಲಿ ಈ ಔಷಧಿಯನ್ನು ಬಳಸಲು ಅಮೆರಿಕವೂ ಸೇರಿದಂತೆ ಹಲವು ರಾಷ್ಟ್ರಗಳು ಈಗಾಗಲೇ ತೀರ್ಮಾನಿಸಿವೆ. ಭಾರತವೂ ಇದರಲ್ಲಿ ಒಂದು. ಇಷ್ಟಕ್ಕೂ ಹೈಡ್ರಾಕ್ಸಿಕ್ಲೋರೋಕ್ವಿನ್ ಉತ್ಪಾದನೆ ಮತ್ತು ರಫ್ತಿನಲ್ಲಿ ಭಾರತ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಆದರೆ ಸದ್ಯಕ್ಕೆ ಕೊರೋನ ಕಾರಣದಿಂದ ಕಚ್ಚಾ ವಸ್ತು ಆಮದಿನ ಸಮಸ್ಯೆಗಳು ಎದುರಾಗಿರುವುದರಿಂದ ಭಾರತ ಸದ್ಯ ಹಿಂದಿನಂತೆ ಅದನ್ನು ಉತ್ಪಾದಿಸುವ ಶಕ್ತಿಯನ್ನು ಹೊಂದಿಲ್ಲ. ಜೊತೆಗೆ ಭವಿಷ್ಯದಲ್ಲಿ ಭಾರತದಲ್ಲಿ ಕೊರೋನ ಇನ್ನಷ್ಟು ಉಲ್ಬಣಿಸುವ ಕಾರಣದಿಂದಾಗಿ ಮೂರು ದಿನಗಳ ಹಿಂದೆ ದೇಶದ ಆರೋಗ್ಯ ಸಚಿವಾಲಯ ಈ ಔಷಧಿಯ ರಫ್ತನ್ನು ಸಂಪೂರ್ಣ ನಿಷೇಧಿಸಿತು. ಹಲವು ಬಡ ರಾಷ್ಟ್ರಗಳು ಈ ಔಷಧಿಗಳಿಗಾಗಿ ಬೇಡಿಕೆಯಿಟ್ಟಿದ್ದರೂ, ದೇಶದ ಹಿತಾಸಕ್ತಿ ಮುಖ್ಯವಾಗಿರುವುದರಿಂದ ‘ಮಾನವೀಯ ದೃಷ್ಟಿ’ಯಿಂದಲೂ ವಿದೇಶಗಳಿಗೆ ಔಷಧಿಯನ್ನು ರಫ್ತು ಮಾಡುವಂತಿಲ್ಲ ಎಂದು ತೀರ್ಮಾನಿಸಲಾಯಿತು. ಈಗಾಗಲೇ ವೈದ್ಯಕೀಯ ಸಲಕರಣೆಗಳ ವ್ಯಾಪಕ ಕೊರತೆಯಿಂದ ನರಳುತ್ತಿರುವ ಭಾರತಕ್ಕೆ ಇಂತಹದೊಂದು ತೀರ್ಮಾನಕ್ಕೆ ಬರುವುದು ಅನಿವಾರ್ಯವೇ ಆಗಿತ್ತು. ಯಾಕೆಂದರೆ, ಭಾರತದಲ್ಲಿ ಕೊರೋನ ಮೂರನೇ ಹಂತಕ್ಕೆ ವ್ಯಾಪಿಸಿತೆಂದರೆ ಅದನ್ನು ತಡೆಯಬಲ್ಲ ಯಾವೊಂದು ಸೌಲಭ್ಯಗಳೂ ಇಲ್ಲಿಲ್ಲ. ಆದುದರಿಂದ ‘ಹೈಡ್ರಾಕ್ಸಿಕ್ಲೋರೋಕ್ವಿನ್’ನ ಸಂಗ್ರಹವೊಂದೇ ಭಾರತದ ಪಾಲಿಗಿರುವ ಅಳಿದುಳಿದ ಭರವಸೆಯಾಗಿತ್ತು. ದುರಂತವೆಂದರೆ, ಭಾರತದ ಜನರ ಹಿತಾಸಕ್ತಿಯನ್ನು ದೃಷ್ಟಿಯಲ್ಲಿಟ್ಟು ಸರಕಾರ ತೆಗೆದುಕೊಂಡ ತೀರ್ಮಾನವನ್ನು ಬದಲಿಸುವ ಶಕ್ತಿ ತನಗಿದೆ ಎನ್ನುವುದನ್ನು ಅಮೆರಿಕ ಇದೀಗ ವಿಶ್ವಕ್ಕೆ ತೋರಿಸಿಕೊಟ್ಟಿದೆ. ಅಂದರೆ, ಮುಂದಿನ ದಿನಗಳಲ್ಲಿ ಭಾರತ ತನ್ನ ಯಾವುದೇ ರಫ್ತು ಆಮದನ್ನು ನಿರ್ಧರಿಸುವಾಗ ಭಾರತದ ಹಿತಾಸಕ್ತಿಯ ಬದಲಿಗೆ ಅಮೆರಿಕದ ಹಿತಾಸಕ್ತಿಗೆ ಧಕ್ಕೆಯಾಗುತ್ತದೆಯೇ, ಇಲ್ಲವೇ ಎಂದು ಯೋಚಿಸಬೇಕಾದಂತಹ ಸಂದರ್ಭ ಎದುರಾಗಿದೆ. ಈವರೆಗೆ ಇತರ ಬಡ ರಾಷ್ಟ್ರಗಳು ಈ ಔಷಧಿಗಾಗಿ ಆಗ್ರಹಿಸಿದಾಗ ಕಿವುಡಾಗಿದ್ದ ನಮ್ಮ ಸರಕಾರ, ಅಮೆರಿಕ ಸೂಚನೆ ನೀಡಿದ ಬೆನ್ನಿಗೇ ರಫ್ತಿಗೆ ಸಮ್ಮತಿಸಿರುವುದು, ಪರೋಕ್ಷವಾಗಿ ಭಾರತದ ಸೂತ್ರ ಅಮೆರಿಕದ ಕೈಯಲ್ಲಿದೆ ಎನ್ನುವುದನ್ನು ವಿಶ್ವಕ್ಕೆ ತಿಳಿಸಿದಂತಾಗಿದೆ. ಇದು ಭಾರತದ ಸ್ವಾಯತ್ತೆಗೆ ಧಕ್ಕೆ ತರುವ ವಿಷಯವಾಗಿದೆ. ರಫ್ತಿಗೆ ಭಾರತ ಸಮ್ಮತಿಸಿದ ತಕ್ಷಣವೇ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಪ್ರಧಾನಿ ಮೋದಿ ಅವರನ್ನು ‘ಗ್ರೇಟ್’ ಎಂದು ಹೊಗಳಿದ್ದಾರೆ. ಮೋದಿ ಅವರು ‘ಗ್ರೇಟ್’ ಅನ್ನಿಸಿಕೊಳ್ಳುವುದಕ್ಕಾಗಿ 140 ಕೋಟಿ ಭಾರತೀಯರ ಹಿತಾಸಕ್ತಿಯನ್ನು ಬಲಿಕೊಡುವುದು ಎಷ್ಟು ಸರಿ ಎನ್ನುವುದು ಈಗ ನಮ್ಮ ಮುಂದಿರುವ ಪ್ರಶ್ನೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)