ಹುಬ್ಬಳ್ಳಿ ಕಿಮ್ಸ್ ನಲ್ಲಿ ಕೋವಿಡ್-19 ಪರೀಕ್ಷಾ ಕೇಂದ್ರ ಆರಂಭ
ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ, ಎ.9: ಕಿಮ್ಸ್ ನಲ್ಲಿ ಕೋವಿಡ್-19 ಪರೀಕ್ಷಾ ಕೇಂದ್ರ ಆರಂಭಿಸಲು ಐಸಿಎಂಆರ್ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸೆಂಟರ್) ಒಪ್ಪಿಗೆ ನೀಡಿದ್ದು, ಇಂದಿನಿಂದ ಕಿಮ್ಸ್ ನಲ್ಲಿ ಕೊರೋನ ವೈರಸ್ ಪತ್ತೆ ಪರೀಕ್ಷೆಯನ್ನು ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಕಿಮ್ಸ್ ಕೋವಿಡ್-19 ಆಸ್ಪತ್ರೆ ಬಳಿ ಅಳವಡಿಸಲಾಗಿರುವ ಗಂಟಲು ದ್ರವ ಮಾದರಿ ಸಂಗ್ರಹಣ ಬೂತ್ ಹಾಗೂ ಮೈಕ್ರೋಬಯಲಾಜಿ ವಿಭಾಗದಲ್ಲಿ ಸ್ಥಾಪಿಸಲಾಗಿರುವ ವೈರಾಣು ಪತ್ತೆ ಪರೀಕ್ಷೆ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಅವರು ಮಾತನಾಡಿದರು.
ಬುಧವಾರ ರಾತ್ರಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿಯವರು ದೂರವಾಣಿ ಕರೆ ಮಾಡಿ ಕಿಮ್ಸ್ ಪರೀಕ್ಷಾ ಕೇಂದ್ರ ಕಾರ್ಯನಿರ್ವಹಿಸಲು ಐಸಿಎಂಆರ್ ಒಪ್ಪಿಗೆ ನೀಡಿರುವ ಕುರಿತು ತಿಳಿಸಿದ್ದು, ಕಿಮ್ಸ್ ನಲ್ಲಿ ಪರೀಕ್ಷಾ ಕೇಂದ್ರ ಆರಂಭಿಸಿರುವುದರಿಂದ 24 ಗಂಟೆಗಳಲ್ಲೇ ಕೊರೋನ ಪರೀಕ್ಷಾ ವರದಿ ದೊರಕಲಿದೆ ಎಂದು ತಿಳಿಸಿದರು.
ಬೆಂಗಳೂರು ಹಾಗೂ ಶಿವಮೊಗ್ಗಕ್ಕೆ ಮಾದರಿಗಳನ್ನು ಕಳುಹಿಸಿ ವರದಿಗಾಗಿ ಕಾಯುವುದು ತಪ್ಪಿದೆ. ದಿನ ಒಂದಕ್ಕೆ 40 ಮಾದರಿಗಳನ್ನು ಪರೀಕ್ಷೆ ಮಾಡಬಹುದಾಗಿದೆ ಎಂದರು.
ಕಿಮ್ಸ್ ನಿರ್ದೇಶಕರು ಸ್ವಯಂಚಾಲಿತ ಆರ್.ಎನ್.ಎ ಎಕ್ಸ್ ಟ್ರಾಕ್ಟ್ ಯಂತ್ರಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಯಂತ್ರವನ್ನು ಪರೀಕ್ಷಾ ಕೇಂದ್ರದಲ್ಲಿ ಅಳವಡಿಸಿದರೆ 100 ಮಾದರಿಗಳನ್ನು ದಿನವೊಂದಕ್ಕೆ ಪರೀಕ್ಷೆ ಮಾಡಬಹುದು. ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತಿದೆ. ಒಂದೆರೆಡು ದಿನಗಳಲ್ಲಿ ಬೆಳಗಾವಿಯಲ್ಲೂ ಕೋವಿಡ್-19 ಪರೀಕ್ಷಾ ಕೇಂದ್ರ ಆರಂಭಿಸಲಾಗುವುದು. ಇದಕ್ಕೂ ಐಸಿಎಂಆರ್ ಒಪ್ಪಿಗೆ ನೀಡಲಿದೆ ಎಂದು ತಿಳಿಸಿದರು.
ಹುಬ್ಬಳ್ಳಿಯಲ್ಲಿ ಕೋವಿಡ್-19 ಪರೀಕ್ಷಾ ಕೇಂದ್ರವನ್ನು ಆರಂಭಿಸಿರುವುದರಿಂದ ಉತ್ತರ ಕರ್ನಾಟಕ ಜಿಲ್ಲೆಗಳ ವರದಿಗಳನ್ನು ಶೀಘ್ರವಾಗಿ ಪಡೆಯಬಹುದಾಗಿದೆ. ಕಿಮ್ಸ್ ಕೋವಿಡ್-19 ಪರೀಕ್ಷಾ ಕೇಂದ್ರ ಸ್ಥಾಪನೆಗೆ ಸರಕಾರ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದೆ. ಸದ್ಯ 3 ಜನ ಸೂಕ್ಷ್ಮ ಜೀವಾಣು ತಜ್ಞರು ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ವಿಶ್ವ ವಿದ್ಯಾಲಯದ ಇಬ್ಬರು ಸೂಕ್ಷ್ಮ ಜೀವಾಣು ತಜ್ಞರ ಸೇವೆಯನ್ನು ಪಡೆಯುಲು ಜಿಲ್ಲಾಧಿಕಾರಿಗಳು ವಿ.ವಿ. ಉಪಕುಲಪತಿಗಳಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.
ಕಿಮ್ಸ್ ನಲ್ಲಿ ದಾಖಲಾಗಿದ್ದ ರೋಗಿಗೆ ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದಾರೆ. ರೋಗಿಯ ಮೊದಲ ಎರೆಡು ವರದಿಗಳು ಪಾಸಿಟಿವ್ ಬಂದಿದ್ದವು. ಚಿಕಿತ್ಸೆಯ ನಂತರ ಎರಡು ವರದಿಗಳು ನೆಗೆಟಿವ್ ಬಂದಿದ್ದರಿಂದ ಆಸ್ಪತ್ರೆಯಿಂದ ಅವರನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿ ದೀಪಾ ಚೋಳನ್ ಸೇರಿದಂತೆ ಜಿಲ್ಲಾಡಳಿತ, ವೈದ್ಯರು ಕೋವಿಡ್-19 ವಿರುದ್ಧ ಅತ್ಯುತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ. ಜನರು ಸ್ವಯಂ ನಿಯತ್ರಣದೊಂದಿಗೆ ಲಾಕ್ ಡೌನ್ ಪಾಲಿಸಬೇಕು ಎಂದು ಹೇಳಿದರು.