varthabharthiಸಂಪಾದಕೀಯ

ರಾಜ್ಯಗಳ ಜಿಎಸ್‌ಟಿ ಪರಿಹಾರ: ಕಾನೂನು ಹೋರಾಟ ಅನಿವಾರ್ಯ

ವಾರ್ತಾ ಭಾರತಿ : 9 Apr, 2020

ಕೊರೋನ ವಿರುದ್ಧದ ಹೋರಾಟ ಕೇಂದ್ರ ಮತ್ತು ರಾಜ್ಯಗಳ ನಡುವಿನ ಅಂತರವನ್ನು ಸ್ಪಷ್ಟಗೊಳಿಸಿದೆ. ಒಕ್ಕೂಟ ವ್ಯವಸ್ಥೆಯನ್ನು ಇಲ್ಲವಾಗಿಸಿ ಇಡೀ ದೇಶವನ್ನು ಒಂದು ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನ ಪ್ರಾದೇಶಿಕತೆಗೆ ಆರ್ಥಿಕವಾಗಿ ಲಾಭ ಮಾಡಿಕೊಡಲಾರದು ಎನ್ನುವುದು ನಿಧಾನಕ್ಕೆ ಬೆಳಕಿಗೆ ಬರುತ್ತಿದೆ. ಇಂದು ಕೊರೋನ ವಿರುದ್ಧದ ಹೋರಾಟದಲ್ಲಿ ಕೇಂದ್ರ ಕೈ ಚೆಲ್ಲಿ ಕುಳಿತಿರುವಾಗ, ರಾಜ್ಯಗಳೇ ಇದರ ನೇತೃತ್ವವನ್ನು ವಹಿಸಿ ಅವುಡುಗಚ್ಚಿ ಕೆಲಸ ಮಾಡುತ್ತಿವೆ. ಕೇರಳ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಆರ್ಥಿಕ ಶಕ್ತಿಯ ಕೊರತೆಯಿದ್ದರೂ ಕೊರೋನ ವಿರುದ್ಧ ಕಾರ್ಯಯೋಜನೆಯನ್ನು ರೂಪಿಸುವಲ್ಲಿ ಹಿಂದೆ ಸರಿದಿಲ್ಲ. ಕೇಂದ್ರ ಸರಕಾರ ಕೊರೋನ ತಡೆಯುವುದಕ್ಕೆ ಹಣವನ್ನು ಬಿಡುಗಡೆ ಮಾಡುವುದಿರಲಿ, ರಾಜ್ಯಗಳಿಗೆ ನೀಡಬೇಕಾದ ಜಿಎಸ್‌ಟಿ ಪರಿಹಾರ ಹಣವನ್ನೇ ಕೊಡಲು ಸತಾಯಿಸುತ್ತಿದೆ. ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳ ಮೇಲೆ ಇದು ದುಷ್ಪರಿಣಾಮಗಳನ್ನು ಬೀರುತ್ತಿದೆ. ಕೇಂದ್ರದಲ್ಲಿ 

ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದರೂ ಕರ್ನಾಟಕಕ್ಕೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಬದಲಾಗಿ ಅದರಿಂದ ಅನನುಕೂಲವೇ ಉಂಟಾಗಿದೆ. ಕೇಂದ್ರದಲ್ಲೂ ತನ್ನದೇ ಸರಕಾರ ಇರುವುದರಿಂದ ಜಿಎಸ್‌ಟಿ ಪರಿಹಾರ ನಿಧಿಗಾಗಿ ಬಲವಾದ ಒತ್ತಡ ಹೇರಲು ರಾಜ್ಯ ಹಿಂದೇಟು ಹಾಕುತ್ತಿದೆ. ಬಿಜೆಪಿಯೇತರ ರಾಜ್ಯಗಳು ಮಾತ್ರ ಕೇಂದ್ರದ ಜೊತೆಗೆ ಗುದ್ದಾಡಿ ತಮ್ಮ ತಮ್ಮ ಪಾಲನ್ನು ಬೇರೆ ಬೇರೆ ರೂಪದಲ್ಲಿ ಪಡೆದುಕೊಳ್ಳುತ್ತಿವೆ. ಖೇದಕರ ಸಂಗತಿಯೆಂದರೆ, ಈ ಬಾರಿ ಸರಕು ಹಾಗೂ ಸೇವಾ ತೆರಿಗೆ(ಜಿಎಸ್‌ಟಿ)ಗಾಗಿ ರಾಜ್ಯಗಳಿಗೆ ಕೇಂದ್ರವು ನೀಡುವ ಪರಿಹಾರದಲ್ಲಿ ಅಂದಾಜು 30 ಸಾವಿರ ಕೋಟಿ ರೂ. ಕೊರತೆ ಬೀಳುವುದೆಂದು ಅಂದಾಜಿಸಲಾಗಿದೆ. ಭಾರತದಂತಹ ದೊಡ್ಡ ದೇಶವು ಕೋವಿಡ್-19ನಂತಹ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸಬೇಕೆಂದರೆ, ಅದು ತನ್ನ ರಾಜ್ಯಗಳ ಅರ್ಥಿಕತೆಯನ್ನು ಬಲಪಡಿಸಬೇಕಾದ ಅಗತ್ಯವಿರುತ್ತದೆ. ಇಲ್ಲದೆ ಹೋದಲ್ಲಿ ಬಡವರು ಹಾಗೂ ಅಗತ್ಯವುಳ್ಳವರಿಗೆ ಯೋಗ್ಯವಾದ ಆರೋಗ್ಯ ಸೌಕರ್ಯಗಳನ್ನು ತಲುಪಿಸುವುದು ಅಸಾಧ್ಯವಾಗಲಿದೆ. ದೇಶವು ಸಂವಿಧಾನವನ್ನು ಅಂಗೀಕರಿಸಿದಾಗಿನಿಂದ ಸರ್ಕಾರಿಯಾ ಆಯೋಗ, 10ನೇ ಹಣಕಾಸು ಆಯೋಗ ಹಾಗೂ ಪುಂಛಿ ಆಯೋಗದ ಶಿಫಾರಸುಗಳ ಮೂಲಕ ರಾಜ್ಯ ಸರಕಾರಗಳಿಗೆ ಅಧಿಕ ಆರ್ಥಿಕ ಸ್ವಾತಂತ್ರವನ್ನು ನೀಡುವ ನಿಟ್ಟಿನಲ್ಲಿ ಸಂಯೋಜಿತ ಪ್ರಯತ್ನಗಳು ನಡೆದಿದ್ದವು.ಆನಂತರವೂ ಕೇಂದ್ರ ಸರಕಾರದ ತೆರಿಗೆ ಸಂಗ್ರಹದಲ್ಲಿ ರಾಜ್ಯಗಳಿಗೆ ನೀಡುವ ಪಾಲಿನ ಪ್ರಮಾಣವು ತೃಪ್ತಿಕರವಾಗಿಲ್ಲ. ಪ್ರಾದೇಶಿಕ ಸರಕಾರಗಳನ್ನು ಕೇಂದ್ರದ ಅನಾಥಾಶ್ರಮದ ಮಕ್ಕಳೆಂಬ ರೀತಿಯಲ್ಲಿ ನಡೆಸಿಕೊಳ್ಳಕೂಡದೆಂಬ ರಾಜೇಂದ್ರಪ್ರಸಾದ್ ಅವರ ಆಶಯ ಇನ್ನೂ ಕಾರ್ಯಗತಗೊಂಡಿಲ್ಲ.

2016ರಲ್ಲಿ ಸಂವಿಧಾನಕ್ಕೆ ಮಾಡಲಾದ 101ನೇ ತಿದ್ದುಪಡಿಯು, ಭಾರತಕ್ಕೆ ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ದೇಶದಲ್ಲಿ ಜಾರಿಗೆ ತಂದಿತು. ಜಿಎಸ್‌ಟಿ ಎಂಬುದು ಅವಳಿ ತೆರಿಗೆ ವ್ಯವಸ್ಥೆಯಾಗಿದ್ದು, ಸರಕು ಹಾಗೂ ಸೇವೆಗಳ ಪೂರೈಕೆಗಾಗಿ ಕೇಂದ್ರ ಹಾಗೂ ರಾಜ್ಯಗಳೆರಡೂ ತೆರಿಗೆಯನ್ನು ಹೇರಬಹುದಾಗಿದೆ. ಕೇಂದ್ರ ಸರಕಾರವು ಹೇರಿದ ಎಂಟು ತೆರಿಗೆಗಳು/ ಸೆಸ್‌ಗಳು ಹಾಗೂ ರಾಜ್ಯಗಳು ಹೇರುತ್ತಿದ್ದ 9 ಬಗೆಯ ತೆರಿಗೆಗಳನ್ನು ಜಿಎಸ್‌ಟಿ ಒಂದಾಗಿಸಿತು. ಜಿಎಸ್‌ಟಿಯ ಜಾರಿಯಿಂದಾಗಿ ರಾಜ್ಯ ಸರಕಾರಗಳಿಗೆ ಉಂಟಾದ ಅದಾಯ ನಷ್ಟವನ್ನು ಸರಿದೂಗಿಸಲು ಮೊದಲ ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪರಿಹಾರ ಸೆಸ್ (ಮೇಲ್ತೆರಿಗೆ) ಅನ್ನು ಸಂವಿಧಾನದ 101ನೇ ತಿದ್ದುಪಡಿ ಕಾಯ್ದೆಯ ಸೆಕ್ಷನ್ 18ರ ಅನ್ವಯ ಜಾರಿಗೆ ತರಲಾಯಿತು. 2017ರಲ್ಲಿ ಪ್ರತ್ಯೇಕ ಜಿಎಸ್‌ಟಿ (ರಾಜ್ಯಗಳಿಗೆ ಪರಿಹಾರ) ಕಾಯ್ದೆಯನ್ನು ಜಾರಿಗೆ ತರಲಾಯಿತು. ಈ ಕಾಯ್ದೆಯ ಸೆಕ್ಷನ್ 8ರ ಪ್ರಕಾರ, ಜಿಎಸ್‌ಟಿಯಿಂದಾಗಿ ರಾಜ್ಯಗಳಿಗೆ ಉಂಟಾಗುವ ನಷ್ಟಕ್ಕೆ ಪರಿಹಾರವನ್ನು ಕಾಲಕಾಲಕ್ಕೆ ಲೆಕ್ಕಹಾಕಬೇಕು ಹಾಗೂ ಪ್ರತಿ ಎರಡು ತಿಂಗಳುಗಳ ಅವಧಿಗೊಮ್ಮೆ ಬಿಡುಗಡೆಗೊಳಿಸಬೇಕು ಮತ್ತು ಅಂತಿಮ ಆದಾಯದ ಅಂಕಿಸಂಖ್ಯೆಗಳು ಲಭ್ಯವಾದ ಆನಂತರ ಭಾರತೀಯ ಮಹಾಲೇಖಪಾಲರು ಅಡಿಟ್ ಮಾಡಿದ ಪ್ರಕಾರ ಪ್ರತಿ ಹಣಕಾಸು ವರ್ಷದ ಕೊನೆಗೆ ಲೆಕ್ಕಹಾಕಲಾಗುವುದು.
  ಒಂದು ವೇಳೆ ಕೇಂದ್ರ ಸರಕಾರವು     ್ರತಿ ಎರಡು ತಿಂಗಳಿಗೊಮ್ಮೆ ಜಿಎಸ್‌ಟಿ ಪರಿಹಾರ ಸೆಸ್ ಅನ್ನು ಬಿಡುಗಡೆಗೊಳಿಸದೆ ಇದ್ದಲ್ಲಿ ಏನಾಗಬಹುದು?. ಸಂವಿಧಾನದ 279ಎ(11) ವಿಧಿಯ ಪ್ರಕಾರ ಕೇಂದ್ರ ಹಾಗೂ ರಾಜ್ಯಗಳ ನಡುವೆ ಜಿಎಸ್‌ಟಿ ಪರಿಹಾರ ಸೆಸ್ ಹಂಚಿಕೆ ಕುರಿತ ವಿವಾದಗಳನ್ನು ಬಗೆಹರಿಸಲು ಜಿಎಸ್‌ಟಿ ಮಂಡಳಿಯು ಕಾರ್ಯತಂತ್ರವೊಂದನ್ನು ರೂಪಿಸುವುದನ್ನು ಪ್ರತಿಪಾದಿಸುತ್ತದೆ. ಆದಾಗ್ಯೂ, ಇತ್ತೀಚೆಗೆ ನ ಡೆದ 39ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಇಂತಹ ವಿವಾದಗಳ ಪರಿಹಾರಕ್ಕೆ ಕಾರ್ಯತಂತ್ರ ರೂಪಿಸಲು ಯಾವುದೇ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ.

ಜಿಎಸ್‌ಟಿ ಮಂಡಳಿಯಲ್ಲಿ ಕೇಂದ್ರ ಸರಕಾರವು ಒಟ್ಟು ಚಲಾಯಿತ ಮತಗಳ ಮೂರನೇ ಒಂದಂಶದಷ್ಟು ಮತಗಳನ್ನು ಹೊಂದಿದೆ. ಯಾವುದೇ ನಿರ್ಣಯ ಅಂಗೀಕಾರಕ್ಕೆ ಸಭೆಯಲ್ಲಿ ನಾಲ್ಕನೇ ಮೂರಂಶದಷ್ಟು ಮತಗಳ ಅಗತ್ಯ ಬಿದ್ದಲ್ಲಿ, ಆಗ ಕೇಂದ್ರ ಸರಕಾರವು, ರಾಜಕೀಯವಾಗಿ ತನಗೆ ನಿಷ್ಠವಾಗಿರುವ ರಾಜ್ಯ ಸರಕಾರಗಳ ಬೆಂಬಲವನ್ನು ಪಡೆದುಕೊಂಡು, ಇತರ ರಾಜ್ಯಗಳ ವಿರುದ್ಧ ಚಾಟಿ ಬೀಸಬಹುದಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯಗಳು ಅನಿವಾರ್ಯವಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಬಹುದು. ಬಿಜೆಪಿಯೇತರ ರಾಜ್ಯಗಳು ಈ ನಿಟ್ಟಿನಲ್ಲಿ ಹೆಜ್ಜೆಯಿಡಬಹುದಾದರೆ, ಬಿಜೆಪಿ ಸರಕಾರವಿರುವ ಕರ್ನಾಟಕದಂತಹ ರಾಜ್ಯಗಳು ಕೇಂದ್ರದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವುದು ಅಸಾಧ್ಯ. ಇದೀಗ ಕೇರಳ, ಕರ್ನಾಟಕವೂ ಸೇರಿದಂತೆ ಹಲವು ದಕ್ಷಿಣ ಭಾರತದ ರಾಜ್ಯಗಳು ಕೊರೋನ ವಿರುದ್ಧ ಸೆಣಸಾಡಲು ಹರಸಾಹಸ ಪಡುತ್ತಿವೆ. ಇಂತಹ ಸಂದರ್ಭದಲ್ಲಿ ಅದಕ್ಕೆ ಮುಖ್ಯವಾಗಿ ಇರುವ ಅಡ್ಡಿ ಆರ್ಥಿಕ ಕೊರತೆ. ನೆರೆಯಂತಹ ಪ್ರಕೃತಿ ವಿಕೋಪದಿಂದ ತತ್ತರಿಸಿ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ರಾಜ್ಯಗಳು ಈಗ ಕೊರೋನ ವಿರುದ್ಧ ಹೋರಾಟ ನಡೆಸಬೇಕಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯಗಳು, ತನ್ನ ಜಿಎಸ್‌ಟಿ ಪರಿಹಾರ ಸೆಸ್‌ನ ಪಾಲನ್ನು ಕನಿಷ್ಠ ಪಕ್ಷ ಕಂತುಗಳಲ್ಲಾದರೂ ಪಡೆಯಲು ಕಾನೂನಿನ ಅವಕಾಶಗಳ ಅನ್ವೇಷಣೆ ನಡೆಸಬೇಕಾಗಿದೆ. ಜಿಎಸ್‌ಟಿ ತೆರಿಗೆಯಲ್ಲಿ ರಾಜ್ಯಗಳಿಗೆ ಸಲ್ಲಬೇಕಾದ ಪಾಲಿನಲ್ಲಿ ಯಾವುದೇ ಲೋಪವಾಗದೆಂಬ ಸಾಂವಿಧಾನಿಕ ಖಾತರಿ ದೊರೆಯಬೇಕಾದ ಅಗತ್ಯ ಇದೆ. ಒಂದು ವೇಳೆ ಇಂತಹ ಖಾತರಿಗಳು ದೊರೆಯದೆ ಹೋದಲ್ಲಿ ಭಾರತದ ರಾಜ್ಯಗಳು ಮತ್ತು ಕೇಂದ್ರದ ನಡುವೆ ಸಂಘರ್ಷಗಳು ಉದ್ಭವಿಸುವ ಸಾಧ್ಯತೆಗಳಿವೆ. ಇಂತಹ ಸಂಘರ್ಷ ಒಕ್ಕೂಟ ವ್ಯವಸ್ಥೆಯನ್ನು ಇನ್ನಷ್ಟು ದುರ್ಬಲಗೊಳಿಸಬಹುದು. ಭವಿಷ್ಯದ ದೃಷ್ಟಿಯಿಂದ ಭಾರತದ ಪಾಲಿಗೆ ಒಳಿತನ್ನು ಮಾಡಲಾರದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)