ದಿಲ್ಲಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಚಾಮರಾಜನಗರದ 83 ಮಂದಿಯ ವರದಿ ನೆಗೆಟಿವ್: ಜಿಲ್ಲಾಧಿಕಾರಿ ಡಾ.ರವಿ
ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆ
ಚಾಮರಾಜನಗರ, ಎ.10: ತಬ್ಲೀಗ್ ಜಮಾತ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ 97 ಜನರ ಪೈಕಿ ನೆಗೆಟಿವ್ ವರದಿ ಬಂದಿರುವ 83 ಜನರನ್ನು ಕ್ವಾರೆಂಟೈನ್ ಕೇಂದ್ರದಿಂದ ಬಿಡುಗಡೆ ಮಾಡಲಾಗಿದೆ. ಉಳಿದ 14 ಜನರನ್ನು ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದ ಕ್ವಾರೆಂಟೈನ್ ಕೇಂದ್ರದಲ್ಲಿ ಪ್ರತ್ಯೇಕಿಸಿ ನಿಗಾವಣೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ತಿಳಿಸಿದ್ದಾರೆ.
ಇಂದು ಇಬ್ಬರ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದ್ದು, ಫಲಿತಾಂಶ ನಿರೀಕ್ಷಿಸಲಾಗುತ್ತಿದೆ. ಈ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಕೊರೋನ ಪಾಸಿಟಿವ್ ವ್ಯಕ್ತಿಯು ಉದ್ಯೋಗ ಮಾಡುತ್ತಿದ್ದ ಮೈಸೂರಿನ ಜ್ಯುಬಿಲಿಯೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಚಾಮರಾಜನಗರ ಜಿಲ್ಲೆಯ 52 ಮಂದಿ 14 ದಿನಗಳ ಕ್ವಾರೆಂಟೈನ್ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ವಿದೇಶಗಳಿಂದ ಜಿಲ್ಲೆಗೆ ಇದುವರೆಗೆ ಒಟ್ಟು 43 ಜನರು ಬಂದಿದ್ದು ಇವರೆಲ್ಲರೂ ಸಹ 14 ದಿನಗಳ ಹೋಮ್ ಕ್ವಾರೆಂಟೈನ್ ಅವಧಿಯನ್ನು ಪೂರ್ಣಗೊಳಿಸಿದ್ದಾರೆ ಎಂದು ಜಿಲ್ಲಾಧಿಕಾರಿ ರವಿ ತಿಳಿಸಿದ್ದಾರೆ.