varthabharthiಸಂಪಾದಕೀಯ

ಕೊರೋನ ಸೋಂಕಿತ ಕೋಮು ವೈರಸ್ ವಿರುದ್ಧ ಸ್ವಯಂ ಜಾಗೃತರಾಗೋಣ

ವಾರ್ತಾ ಭಾರತಿ : 10 Apr, 2020

ಭಾರತವಿಂದು ಕೊರೋನ ಕುರಿತಂತೆ ಜಾಗೃತಿಯ ಎರಡನೇ ಹಂತಕ್ಕೆ ಬಂದು ತಲುಪಿದೆ. ಈವರೆಗೆ ‘ಕೊರೋನದಿಂದ ಜಾಗೃತವಾಗಿರಿ’ ಎಂದು ಕರೆ ನೀಡುತ್ತಿದ್ದ ಭಾರತಕ್ಕೆ, ಈಗ ‘ಕೊರೋನ ಹೆಸರಿನಲ್ಲಿ ಹರಡುತ್ತಿರುವ ಕೋಮು ದ್ವೇಷದ ಕುರಿತಂತೆ ಜಾಗೃತರಾಗಿರಿ’ ಎಂದು ಕರೆ ನೀಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕೊರೋನ ವೈರಸ್‌ನ ಜೊತೆಗೆ ಸರಿ ಸಮವಾಗಿ ನಿಂತು ಈ ಕೋಮುವೈರಸ್ ದೇಶವನ್ನು ಕಾಡ ತೊಡಗಿದೆ. ಕೊರೋನ ಚೀನಾದಿಂದ ಆಮದಾಗಿದ್ದರೆ, ಕೊರೋನ ಸೋಂಕಿತವಾಗಿರುವ ಕೋಮು ವೈರಸ್, ಸ್ವದೇಶಿ ಉತ್ಪನ್ನವಾಗಿದೆ. ಮಾಧ್ಯಮಗಳ ಪ್ರಯೋಗಾಲಯಗಳಲ್ಲಿ ಸೃಷ್ಟಿಯಾಗಿರುವ ಈ ವೈರಸ್ ಪತ್ರಕರ್ತರು, ರಾಜಕಾರಣಿಗಳ ಬಾಯಿಯಿಂದ ಬಾಯಿಗೆ ಹರಡುತ್ತಾ, ದೇಶವನ್ನು ವ್ಯಾಪಿಸುತ್ತಿದೆ. ಮನುಷ್ಯನ ನಡುವೆ ಕೊರೋನ ಬಿತ್ತಿರುವ ಅಂತರ ಸಾಲದು ಎಂಬಂತೆ, ಈ ಕೋಮುವೈರಸ್‌ಗಳ ಮೂಲಕ ದೇಶವಾಸಿಗಳ ನಡುವೆ ಮಾನಸಿಕ ಅಂತರವೊಂದನ್ನು ಸೃಷ್ಟಿಸುವ ಕೆಲಸ ನಡೆಯುತ್ತಿದೆ. ಹೀಗೆ ಮುಂದುವರಿದರೆ, ಈ ದೇಶ ಕೊರೋನಾಕ್ಕಿಂತ ಕೋಮು ವೈರಸ್‌ಗೇ ಭಾರೀ ಬೆಲೆ ತೆರಬೇಕಾಗಬಹುದು. ಇದರಲ್ಲೇನಾದರೂ ಮಾಧ್ಯಮದೊಳಗಿರುವ ‘ಬ್ರಾಹ್ಮಣ್ಯ ಮನಸ್ಥಿತಿ’ಗಳು ಯಶಸ್ವಿಯಾದರೆ, ಈ ದೇಶವನ್ನು ನಾಶ ಮಾಡಲು ಕೊರೋನದ ಅಗತ್ಯವೇ ಇಲ್ಲ. ದೈಹಿಕ ರೋಗ ಮತ್ತು ಮಾನಸಿಕ ರೋಗಗಳ ಕಸಿ ಮಾಡಿ ಹಂಚಿ ಭಾರತವನ್ನು ನಾಶ ಮಾಡಲು ನಡೆಯುತ್ತಿರುವ ಈ ಪ್ರಯತ್ನವನ್ನು ತಡೆಯುವುದು ಭಾರತದ ಪಾಲಿಗೆ ಬಹುದೊಡ್ಡ ಸವಾಲಾಗಿದೆ.

ದೇಶದ ಹಲವು ನಾಯಕರು ಕೊರೋನ ಸೋಂಕಿತ ಕೋಮು ದ್ವೇಷದ ವಿರುದ್ಧ ಮಾತನಾಡಿದ್ದಾರೆ. ತೆಲಂಗಾಣದ ಮುಖ್ಯಮಂತ್ರಿ ‘ಮಾಧ್ಯಮ ಮತ್ತು ಪತ್ರಿಕೆಗಳ ಪೀತ ವರದಿ’ಗಳನ್ನು ನೋಡಿ, ಅಸಹಾಯಕರಾಗಿ ‘ಕೋಮುದ್ವೇಷ ಹಂಚುವ ಈ ಪತ್ರಕರ್ತರಿಗೆ ಕೊರೋನಬಾಧಿಸಲಿ’ ಎಂದು ಶಪಿಸಿದ್ದಾರೆ. ಆದರೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅಂತಹ ಹತಾಶ ಹೇಳಿಕೆಗಳಿಗೆ ಮೊರೆ ಹೋಗದೆ, ಮಾಧ್ಯಮಗಳಿಗೇ ಪರೋಕ್ಷವಾಗಿ ‘ಕೋಮು ವೈರಸ್‌ನ್ನು ಹಂಚದಿರಿ’ ಎಂಬ ಎಚ್ಚರಿಕೆ ನೀಡಿದ್ದಾರೆ. ಕೋಮುವಾದಿ ಪಕ್ಷವೆಂದು ಬಿಂಬಿತವಾಗಿರುವ ಬಿಜೆಪಿ ನೇತೃತ್ವದ ಸರಕಾರವೊಂದರ ಮುಖ್ಯಮಂತ್ರಿ ಇಂತಹದೊಂದು ಎಚ್ಚರಿಕೆಯನ್ನು ಸ್ಪಷ್ಟ ಭಾಷೆಯಲ್ಲಿ ನೀಡಿರುವುದನ್ನು ಬಿಜೆಪಿಯೊಳಗಿರುವ ನಾಯಕರಿಗೇ ಅನಿರೀಕ್ಷಿತವಾಗಿತ್ತು.

ವಿಶೇಷವೆಂದರೆ, ಕಳೆದ ಕೆಲವು ವಾರಗಳಿಂದ ಟಿವಿಗಳ ಮೂಲಕ ಒಂದು ನಿರ್ದಿಷ್ಟ ಸಮುದಾಯದ ವಿರುದ್ಧ ದ್ವೇಷ ಕಾರುತ್ತಿರುವ ಟಿವಿ ನಿರೂಪಕರ ಮುಂದೆಯೇ ಯಡಿಯೂರಪ್ಪ ಈ ಎಚ್ಚರಿಕೆ ನೀಡುವ ದಿಟ್ಟತನವನ್ನು ಪ್ರದರ್ಶಿಸಿದ್ದು. ಖಾಸಗಿ ಟಿವಿ ವಾಹಿನಿಗಳ ಸಂದರ್ಶನದ ಸಂದರ್ಭದಲ್ಲಿ ನಿರೂಪಕರು ‘ಮುಸ್ಲಿಮರು ಕೊರೋನ ಹಂಚುತ್ತಿದ್ದಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?’ ಎಂಬ ಧ್ವನಿಯಲ್ಲಿ ಪ್ರಶ್ನೆಯನ್ನು ಕೇಳಿದ್ದಾರೆ. ಆದರೆ ಅದನ್ನು ಅಲ್ಲಿಗೆ ಕತ್ತರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ‘‘ಎಲ್ಲ ಸಮಾಜಕ್ಕೆ ಸೇರಿದವರಿಂದಲೂ ತಪ್ಪುಗಳಾಗಿವೆ. ಹಾಗೆಂದು ಅದಕ್ಕೆ ಇಡೀ ಸಮುದಾಯವನ್ನು ಹೊಣೆ ಮಾಡುವುದು ಸರಿಯಲ್ಲ. ಈಗಾಗಲೇ ಮುಸ್ಲಿಮರು ಕೊರೋನ ವಿರುದ್ಧ ಹೋರಾಟದಲ್ಲಿ ಸಂಪೂರ್ಣವಾಗಿ ಸಹಕರಿಸುತ್ತಿದ್ದಾರೆ. ಕೊರೋನ ಹೆಸರಿನಲ್ಲಿ ಮುಸ್ಲಿಮ್ ಸಮುದಾಯದ ವಿರುದ್ಧ ದ್ವೇಷ ಬಿತ್ತಿದ್ದೇ ಆದರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ’’ ಎಂದು ಸ್ಪಷ್ಟಪಡಿಸಿದ್ದಾರೆ. ಯಡಿಯೂರಪ್ಪ ಅವರ ಬಾಯಿಯಿಂದ ಒಂದು ನಿರ್ದಿಷ್ಟ ಸಮುದಾಯದ ವಿರುದ್ಧ ಹೇಳಿಕೆಯನ್ನು ನಿರೀಕ್ಷಿಸಿ ಪ್ರಶ್ನೆ ಎಸೆದಿದ್ದ ಟಿವಿ ನಿರೂಪಕರಿಗೆ ಕಪಾಳ ಮೋಕ್ಷ ಮಾಡಿದಂತಿತ್ತು ಉತ್ತರ. ಇದೇ ಸಂದರ್ಭದಲ್ಲಿ ತನ್ನ ಪಕ್ಷದೊಳಗಿರುವ ಎಲ್ಲ ರಾಜಕೀಯ ನಾಯಕರಿಗೆ, ಆರೆಸ್ಸೆಸ್‌ನೊಳಗಿರುವ ಕೋಮು ಕ್ರಿಮಿಗಳಿಗೂ ಈ ಮೂಲಕ ಚುರುಕು ಮುಟ್ಟಿಸಿದ್ದರು. ಇಂದು ಕೆಲವು ಟಿವಿ ಚಾನೆಲ್‌ಗಳು, ವೆಬ್‌ಸೈಟ್‌ಗಳು ಉದ್ದೇಶ ಪೂರ್ವಕವಾಗಿ ಕೋಮುವೈರಸ್‌ನ್ನು ಹಂಚುತ್ತಿವೆ.

ಜನರ ಎದೆಯೊಳಗೆ ಭೇದ ಭಾವವನ್ನು ಬಿತ್ತಿ, ಪರಸ್ಪರ ಕಚ್ಚಾಡಿಸುವ ಒಂದೇ ಒಂದು ಗುರಿಯನ್ನು ಇವರು ಹೊಂದಿದ್ದಾರೆ. ಬೇರೆ ಬೇರೆ ನಕಲಿ ಖಾತೆಗಳಿಂದಲೂ ಸುಳ್ಳು ಸುದ್ದಿಗಳನ್ನು ಹರಡಿ, ಅಮಾಯಕ ಜನರಲ್ಲಿ ಒಂದು ನಿರ್ದಿಷ್ಟ ಸಮುದಾಯದ ವಿರುದ್ಧ ದ್ವೇಷವನ್ನು ಬಿತ್ತಲಾಗುತ್ತಿದೆ. ಈಗಾಗಲೇ ಒಂದು ಸಾಂಕ್ರಾಮಿಕ ರೋಗ ದೇಶವನ್ನು ಕುಕ್ಕಿ ತಿನ್ನುತ್ತಿರುವಾಗ, ಆ ರೋಗವನ್ನು ಮುಂದಿಟ್ಟುಕೊಂಡು ದ್ವೇಷ ರಾಜಕಾರಣಕ್ಕೆ ಇಳಿದಿರುವ ಇವರೊಳಗಿನ ಕ್ರೌರ್ಯ ಮನುಷ್ಯ ಜಗತ್ತನ್ನು ಬೆಚ್ಚಿ ಬೀಳಿಸುವಂತಿದೆ. ಈ ದ್ವೇಷ ಭಾವನೆಯನ್ನು ಹಂಚುತ್ತಿರುವ ಟಿವಿ ನಿರೂಪಕರು ಮತ್ತು ಸಂಘಪರಿವಾರದ ಕಾರ್ಯಕರ್ತರನ್ನು ಮಾನಸಿಕವಾಗಿ ಕೌನ್ಸೆಲಿಂಗ್ ಮಾಡುವ ಅಗತ್ಯವನ್ನೂ ಇದು ಹೇಳುತ್ತಿದೆ. ಇವರ ಹಿಂದಿರುವ ದ್ವೇಷಕ್ಕೆ ಅವರೊಳಗಿನ ಜಾತೀಯ ಮನಸ್ಥಿತಿ ಮಾತ್ರ ಕಾರಣವೋ ಅಥವಾ ರಾಜಕೀಯ ಶಕ್ತಿಗಳು ಇವರನ್ನು ಈ ಕೃತ್ಯಕ್ಕಿಳಿಸಿವೆಯೇ ಎನ್ನುವುದು ಬೆಳಕಿಗೆ ಬರಬೇಕಾಗಿದೆ. ಈ ನಿಟ್ಟಿನಲ್ಲಿ ಇವರ ‘ರಕ್ತ ಪರೀಕ್ಷೆ’ ನಡೆಸಿ, ಬಳಿಕ ಅವರಿಗೆ ಔಷಧ ನೀಡುವ ಕೆಲಸ ನಡೆಯಬೇಕು. ಕೊರೋನ ಹೆಸರಿನಲ್ಲಿ ದ್ವೇಷ ಸಾಧಿಸುತ್ತಿರುವವರು ಕೇವಲ ಮೇಲ್‌ಸ್ತರದ ಜನರಷ್ಟೇ ಅಲ್ಲ. ಅವರು ಬೇರೆ ಬೇರೆ ವಲಯಗಳಲ್ಲಿ ಹಬ್ಬಿದ್ದಾರೆ. ಇತ್ತೀಚೆಗೆ ಮಂಡ್ಯದಲ್ಲಿ ನಡೆದಿರುವ ಘಟನೆ ಇದನ್ನು ಸ್ಪಷ್ಟ ಪಡಿಸುತ್ತದೆ. ಮಂಡ್ಯಕ್ಕೆ ಬೈಕ್‌ನಲ್ಲಿ ಆಗಮಿಸಿರುವ ಮೂವರು ಯುವಕರನ್ನು ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ತಡೆಯುತ್ತಾರೆ. ಆಗ ಅವರು ‘‘ನಾವು ಮುಸ್ಲಿಮರು. ನಮಗೆ ಕೊರೋನ ಇದೆ. ನಮ್ಮನ್ನು ಬಂಧಿಸಿದರೆ ನಿಮಗೂ ಅದನ್ನು ಅಂಟಿಸುತ್ತೇವೆ’’ ಎಂದು ಬೆದರಿಸಿ ಅವರು ಪರಾರಿಯಾಗುತ್ತಾರೆ.

ವಿಪರ್ಯಾಸವೆಂದರೆ, ಅಷ್ಟಕ್ಕೇ ಅಲ್ಲಿನ ತಹಶೀಲ್ದಾರ್ ಆ ಮೂವರನ್ನು ಮುಸ್ಲಿಮರೆಂದೇ ಘೋಷಿಸಿ ಪತ್ರಿಕಾ ಹೇಳಿಕೆ ನೀಡುತ್ತಾರೆ. ‘‘ಮೂವರು ಮುಸ್ಲಿಮರು ಕೊರೋನ ಇದೆ. ನಿಮಗೂ ದಾಟಿಸುತ್ತೇವೆ’’ ಎಂದು ಪೊಲೀಸರಿಗೆ ಬೆದರಿಸಿ ಪರಾರಿಯಾಗಿದ್ದಾರೆ ಎನ್ನುವುದು ಅವರ ಹೇಳಿಕೆಯ ಒಟ್ಟು ಸಾರಾಂಶ. ಈಗ ತಹಶೀಲ್ದಾರರ ಹೇಳಿಕೆಯನ್ನು ಸಂಘಪರಿವಾರದ ವಿವಿಧ ಸಂಘಟನೆಗಳು ಮತ್ತು ಮಾದ್ಯಮಗಳು ‘ಮುಸ್ಲಿಮರ ವಿರುದ್ಧ ದ್ವೇಷ’ಕ್ಕೆ ಬಳಸತೊಡಗುತ್ತವೆ. ಆದರೆ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದಾಗ ಅವರ ಹೆಸರು, ಮಹೇಶ್, ಅಭಿಷೇಕ್, ಶ್ರೀನಿವಾಸ್ ಎನ್ನುವುದು ಬೆಳಕಿಗೆ ಬರುತ್ತದೆ. ಈ ಮೂವರು ತರುಣರ ಉದ್ದೇಶ ಪರಾರಿಯಾಗುವುದಷ್ಟೇ ಆಗಿದ್ದರೆ ‘ನಾವು ಮುಸ್ಲಿಮರು’ ಎಂದು ಪೊಲೀಸರಿಗೆ ಸುಳ್ಳು ಹೇಳುವ ಅಗತ್ಯವೇನಿತ್ತು?. ಕೊರೋನ ಇದೆ ಎಂದಷ್ಟೇ ಹೇಳಿದರೆ ಸಾಕಾಗುತ್ತಿರಲಿಲ್ಲವೇ? ಎಲ್ಲಕ್ಕಿಂತ ಮುಖ್ಯವಾಗಿ, ದುಷ್ಕರ್ಮಿಗಳ ಮಾತಿನ ಆಧಾರದಲ್ಲಿ ತಹಶೀಲ್ದಾರರು ಮಾಧ್ಯಮಗಳಿಗೆ ‘ಪರಾರಿಯಾದವರು ಮುಸ್ಲಿಮ್ ತರುಣರು’ ಎಂದು ಯಾಕೆ ಹೇಳಿಕೆ ನೀಡಿದರು? ಇದು ಬೀರಲಿರುವ ದುಷ್ಪರಿಣಾಮಗಳ ಬಗ್ಗೆ ಅವರಿಗೆ ಅರಿವಿರಲಿಲ್ಲವೆ? ಒಂದು ವೇಳೆ ಆರೋಪಿಗಳ ಪತ್ತೆಯಾಗದೇ ಇರುತ್ತಿದ್ದರೆ, ಇಡೀ ಮುಸ್ಲಿಮ್ ಸಮುದಾಯ ತಹಶೀಲ್ದಾರರ ಬೇಜವಾಬ್ದಾರಿಗೆ ಬೆಲೆ ತೆರಬೇಕಾಗುತ್ತಿತ್ತು.

ಮುಸ್ಲಿಮ್ ದ್ವೇಷದ ವಿರುದ್ಧ ಮುಖ್ಯಮಂತ್ರಿ ಸ್ಪಷ್ಟ ಹೇಳಿಕೆ ನೀಡಿದ ಬಳಿಕವೂ, ಈ ವೈರಸ್ ಹಂಚುವ ಪ್ರಮಾಣದಲ್ಲೇನೂ ಕಡಿಮೆಯಾಗಿಲ್ಲ. ವಿಪರ್ಯಾಸವೆಂದರೆ, ಬಿಜೆಪಿಯವರೇ ಆಗಿರುವ, ರೇಣುಕಾಚಾರ್ಯ, ಪ್ರತಾಪಸಿಂಹ, ಅನಂತಕುಮಾರ್ ಹೆಗಡೆಯಂತಹ ನಾಯಕರು ತಮ್ಮ ವಿಷಕಾರಿ ವೈರಸ್‌ಗಳನ್ನು ಹರಡುವ ಕೆಲಸ ಮುಂದುವರಿಸಿದ್ದಾರೆ. ಈವರೆಗೆ ಇವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಯಾವುದೇ ಎಚ್ಚರಿಕೆ ನೀಡಿರುವ ಬಗ್ಗೆ ವರದಿಯಾಗಿಲ್ಲ. ಬದಲಿಗೆ ಖಡಕ್ ಎಚ್ಚರಿಕೆ ನೀಡಿರುವ ಯಡಿಯೂರಪ್ಪ ವಿರುದ್ಧವೇ ಬಿಜೆಪಿಯೊಳಗಿನ ನಾಯಕರು ಕತ್ತಿ ಮಸೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೊರೋನದ ವಿರುದ್ಧ ಜನಸಾಮಾನ್ಯರು ಹೇಗೆ ಸ್ವಯಂ ಜಾಗೃತಿಯನ್ನು ಘೋಷಿಸಿದ್ದಾರೆಯೋ ಹಾಗೆಯೇ ಈ ಕೋಮು ವೈರಸ್‌ಗಳ ವಿರುದ್ಧ ಸ್ವಯಂ ಜಾಗೃತಿವಹಿಸಬೇಕಾಗಿದೆ. ಸಾಧ್ಯವಾದರೆ, ಇಂತಹ ಕೋಮು ವಿಷಗಳ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಬೇಕು. ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಿಟ್ಟು ದ್ವೇಷ ಸಾಧಿಸಿದರೆ ಅಂತಹ ಪತ್ರಕರ್ತರ ವಿರುದ್ಧ ವೈಯಕ್ತಿಕವಾಗಿಯೂ, ಆ ಮಾಧ್ಯಮ ಸಂಸ್ಥೆಯ ಮಾಲಕರ ವಿರುದ್ಧವೂ ದೂರು ದಾಖಲಾಗಬೇಕು. ಆರೋಗ್ಯವಂತ ಸಮಾಜವೊಂದರ ನಿರೀಕ್ಷೆಯಲ್ಲಿರುವ ಪ್ರತಿಯೊಬ್ಬರಿಂದಲೂ ಇದು ನಡೆಯಬೇಕಾಗಿದೆ. ಕೊರೋನ ವಿರುದ್ಧ ಹೇಗೆ ಯುದ್ಧೋಪಾದಿಯಲ್ಲಿ ಹೋರಾಟ ನಡೆಯುತ್ತಿದೆಯೋ, ಕೊರೋನ ಸೋಂಕಿತ ಕೋಮು ವೈರಸ್‌ಗಳ ವಿರುದ್ಧವೂ ಅಂತಹದೇ ಹೋರಾಟಕ್ಕೆ ಜನರು ಒಂದಾಗಬೇಕಾಗಿದೆ. ಇಲ್ಲವಾದರೆ ಈ ದೇಶವನ್ನು ಕೊರೋನಾಕ್ಕಿಂತ ಮೊದಲು ಕೊರೋನಾ ಸೋಂಕಿತ ಕೋಮು ವೈರಸ್‌ಗಳೇ ನಾಶ ಮಾಡಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)