varthabharthiಸಂಪಾದಕೀಯ

ಆನಂದ್ ತೇಲ್ತುಂಬ್ಡೆ ಬಂಧನ: ಅಂಬೇಡ್ಕರ್ ಜಯಂತಿಯ ವ್ಯಂಗ್ಯ

ವಾರ್ತಾ ಭಾರತಿ : 15 Apr, 2020

ಎಪ್ರಿಲ್ 14ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರ ಮುಂದೆ ಟಿವಿಯಲ್ಲಿ ಕಾಣಿಸಿಕೊಂಡು ‘ಕೊರೋನ ವೈರಸ್ ಕುರಿತು’ ಸರಣಿ ಉಪನ್ಯಾಸ ಮುಂದುವರಿಸಿದರು. ಇದೇ ಸಂದರ್ಭದಲ್ಲಿ ಪ್ರಧಾನಿಯವರು ಅಂಬೇಡ್ಕರ್ ಅವರಿಗೆ ‘ಶ್ರದ್ಧಾಂಜಲಿ’ಯನ್ನು ಅರ್ಪಿಸಿರುವುದು ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕ ಪರ ವಿರೋಧ ಚರ್ಚೆಯನ್ನು ಹುಟ್ಟಿಸಿ ಹಾಕಿತು. ಪುಣ್ಯತಿಥಿಯ ಸಂದರ್ಭದಲ್ಲಾದರೆ ಶ್ರದ್ಧಾಂಜಲಿ ಅರ್ಪಿಸುವ ಪರಿಪಾಠವಿದೆ. ಅಂಬೇಡ್ಕರ್ ಹುಟ್ಟಿದ ದಿನ, ದೇಶದ ಪಾಲಿಗೆ ಸಂಭ್ರಮದ ಸಂದೇಶವನ್ನು ಹಂಚುವ ದಿನ. ಈ ಸಂದರ್ಭದಲ್ಲಿ ಶ್ರದ್ಧಾಂಜಲಿ ಅರ್ಪಿಸುವ ಮೂಲಕ ಅಂಬೇಡ್ಕರ್ ಚಿಂತನೆಯನ್ನು ಮೋದಿಯವರು ಪರೋಕ್ಷವಾಗಿ ವ್ಯಂಗ್ಯ ಮಾಡಿದರೇ ಎಂಬ ಅನುಮಾನ ಸಂವಿಧಾನಪರವಾಗಿರುವ ಮನಸ್ಸುಗಳನ್ನು ಕಾಡಿತು. ಆದರೆ, ಅಂಬೇಡ್ಕರ್ ಜಯಂತಿಯ ದಿವಸವೇ ಒಬ್ಬ ಪ್ರಖರ ಅಂಬೇಡ್ಕರ್‌ವಾದಿಯನ್ನು ಬಂಧಿಸುವ ಮೂಲಕ ಅಂಬೇಡ್ಕರ್‌ರನ್ನು ಅವಮಾನಿಸಿದ್ದು ಮುನ್ನೆಲೆಗೆ ಬರಲೇ ಇಲ್ಲ. ದಲಿತರ ಮೇಲೆ ಎಲ್ಲೇ ದೌರ್ಜನ್ಯಗಳು ನಡೆಯಲಿ, ಆ ಕಡೆಗೆ ಬೆಳಕು ಚೆಲ್ಲಿ ವಿಶ್ವದ ಗಮನ ಅತ್ತ ಹರಿಯುವಂತೆ ಮಾಡುತ್ತಾ ಬಂದಿರುವ ಅಂಬೇಡ್ಕರ್ ಚಿಂತನೆಯ ಹರಿಕಾರ, ಆನಂದ್ ತೇಲ್ತುಂಬ್ಡೆ ಅವರನ್ನು ಅಂಬೇಡ್ಕರ್ ಜಯಂತಿಯ ದಿನವೇ ಸರಕಾರ ಬಂಧಿಸಿರುವುದು ಖಂಡಿತವಾಗಿಯೂ ಕಾಕತಾಳೀಯವಲ್ಲ. ಈ ಬಂಧನ ಅಂಬೇಡ್ಕರ್ ಹುಟ್ಟು ದಿನವನ್ನು ಕ್ರೂರವಾಗಿ ವ್ಯಂಗ್ಯ ಮಾಡಿತು.

ಆನಂದ್ ತೇಲ್ತುಂಬ್ಡೆ ಎಂದಾಗ ನಮಗೆ ಪಕ್ಕನೆ ನೆನಪಾಗುವುದು ‘ಖೈರ್ಲಾಂಜಿ ಹತ್ಯಾಕಾಂಡ’. ಖೈರ್ಲಾಂಜಿ ಹತ್ಯಾಕಾಂಡ ಮತ್ತು ಅದರ ಬಳಿಕದ ವಿದ್ಯಮಾನಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ, ಅಲ್ಲಿ ನಡೆದ ಕ್ರೌರ್ಯ ಮತ್ತು ದಲಿತರ ದಮನಗಳನ್ನು ಬಯಲಿಗೆಳೆದು ದೇಶಕ್ಕೆ ವಿವರಿಸಿದವರು ತೇಲ್ತುಂಬ್ಡೆ. ದಲಿತರ ಹಕ್ಕುಗಳಿಗಾಗಿ ನಡೆಯುತ್ತಾ ಬಂದ ಪ್ರಜಾಸತ್ತಾತ್ಮಕವಾದ ಹೋರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡು ಬಂದವರು. ದಲಿತರನ್ನು ಸಂಘಟಿಸುವಲ್ಲೂ ಇವರ ಪಾತ್ರ ದೊಡ್ಡದಿದೆ. ತೇಲ್ತುಂಬ್ಡೆ ಕಾನೂನಿನ ಕೆಂಗಣ್ಣಿಗೆ ಗುರಿಯಾಗಲು ಇದಿಷ್ಟು ಸಾಕಾಗಿತ್ತು. ಈ ದೇಶದಲ್ಲಿ ಸಂಘಟಿತರಾಗುತ್ತಿರುವ ದಲಿತ ಸಮುದಾಯದ ಕುರಿತಂತೆ ವ್ಯವಸ್ಥೆಗಿರುವ ಆತಂಕವೇ ತೇಲ್ತುಂಬ್ಡೆ ಮತ್ತು ಅವರ ಸಂಗಾತಿಗಳ ಬಂಧನದ ಹಿಂದಿರುವ ನಿಜವಾದ ಕಾರಣ. ಎರಡು ವರ್ಷಗಳ ಹಿಂದೆ ಮಹಾರಾಷ್ಟ್ರದ ಕೋರೆಗಾಂವ್‌ನಲ್ಲಿ ನಡೆದ ದಲಿತರ ಬೃಹತ್ ‘ಕೋರೆಗಾಂವ್ ವಿಜಯೋತ್ಸವ’ ದಲಿತ ಮುಖಂಡರ, ಚಿಂತಕರ ಸಾಲು ಸಾಲು ಬಂಧನಗಳಿಗೆ ನೆಪವಾಯಿತು. ಮನುವಾದಿ ಸಂಘಟನೆಗಳ ಆತ್ಮಕ್ಕೆ ನೇರವಾಗಿ ಚುಚ್ಚುವಂತೆ ‘ಕೋರೆಗಾಂವ್ ವಿಜಯ’ವನ್ನು ಒಂದು ಶತಮಾನದಿಂದ ದಲಿತ ಸಮುದಾಯ ಆಚರಿಸಿಕೊಂಡು ಬರುತ್ತಿದೆ. ‘ಪೇಶ್ವೆ ವಂಶ’ದ ಕೊನೆಯ ಕುಡಿ ಎರಡನೇ ಬಾಜೀರಾಯನ 20 ಸಾವಿರಕ್ಕೂ ಅಧಿಕ ಸಂಖ್ಯೆಯ ಸೇನೆಯ ವಿರುದ್ಧ 500 ಮಂದಿ ದಲಿತ ಮಹಾರ್ ಯೋಧರು ವಿಜಯ ಸಾಧಿಸಿದ ದಿನ ಅದು.

ಪೇಶ್ವೆಗಳ ಯುಗ ಆರೆಸ್ಸೆಸ್ ಸೇರಿದಂತೆ ಸಂಘಪರಿವಾರಕ್ಕೆ ‘ಸುವರ್ಣಯುಗ’ವಾದರೆ, ಆ ಜಾತೀಯತೆಯ ಪರಾಕಾಷ್ಠೆಯ ಯುಗಕ್ಕೆ ಮಹಾರ್ ದಲಿತರು ಅಂತ್ಯ ಹಾಡಿದ ದಿನ ‘ಕೋರೆಗಾಂವ್ ವಿಜಯ ದಿನ’. ಅಂಬೇಡ್ಕರ್ ಈ ದಿನವನ್ನು ಮೊತ್ತ ಮೊದಲು ‘ವಿಜಯೋತ್ಸವ’ವಾಗಿ ಆಚರಿಸಿದರು. ಮಹಾರಾಷ್ಟ್ರದ ಕೋರೆಗಾಂವ್‌ನಲ್ಲಿರುವ ‘ವಿಜಯಸ್ತಂಭ’ದ ಮುಂದೆ ಆ ಬಳಿಕ ದಲಿತರೂ ಸೇರಿದಂತೆ, ಶೋಷಿತ ಸಮುದಾಯ ಪ್ರತಿವರ್ಷ ಈ ದಿನವನ್ನು ಆಚರಿಸುತ್ತಿದೆ. ದಿಲ್ಲಿಯಲ್ಲಿ ಪ್ರಧಾನಿ ಮೋದಿಯ ಅಲೆ ಮತ್ತು ಮಹಾರಾಷ್ಟ್ರದಲ್ಲಿ ಫಡ್ನವೀಸ್ ನೇತೃತ್ವದ ಸರಕಾರದ ಅಸ್ತಿತ್ವ ಆರೆಸ್ಸೆಸ್‌ಗೆ ಮೊತ್ತ ಮೊದಲ ಬಾರಿಗೆ, ಈ ಆಚರಣೆಯ ವಿರುದ್ಧ ಕತ್ತಿ ಮಸೆಯುವ ಧೈರ್ಯವನ್ನು ಕೊಟ್ಟಿತು. ಎರಡು ವರ್ಷಗಳ ಹಿಂದೆ, ಜನವರಿ 1ರಂದು ದಲಿತ ಸಂಘಟನೆಗಳು ಕೋರೆಗಾಂವ್ ಆಚರಣೆ ನಡೆಸಲು ಮುಂದಾದಾಗ ಸರ್ವ ಶಕ್ತಿಯನ್ನು ಬಳಸಿ ಅದನ್ನು ವಿಫಲಗೊಳಿಸಲು ಅಂದಿನ ಮಹಾರಾಷ್ಟ್ರದ ಬಿಜೆಪಿ ಸರಕಾರ ಯತ್ನಿಸಿತು. ಅದರ ಭಾಗವಾಗಿಯೇ ಆಚರಣೆಗೆ ಎರಡು ದಿನಗಳಿರುವಾಗ, ಶಿವಾಜಿಯ ಪುತ್ರ ಸಾಂಭಾಜಿಯ ಸಮಾಧಿಯ ಪಕ್ಕದಲ್ಲಿರುವ ಮಹಾರ್ ದಲಿತನ ಗೋರಿಯನ್ನು ಭಗ್ನಗೊಳಿಸಲಾಯಿತು. ಪೇಶ್ವೆಗಳ ಸಹಾಯದಿಂದ ಮೊಗಲರಿಗೆ ಸೆರೆಯಾದ ಸಾಂಭಾಜಿಯನ್ನು ಕೊಂದು ಮೃತದೇಹವನ್ನು ಛಿದ್ರಗೊಳಿಸಿ ನದಿಯ ಪಕ್ಕ ಎಸೆದಾಗ ಮೃತದೇಹಕ್ಕೆ ಅಂತ್ಯಸಂಸ್ಕಾರಗೈದವನು ಈ ಮಹಾರ್ ದಲಿತ. ಆ ಕಾರಣದಿಂದಲೇ, ಈತ ಮೃತಪಟ್ಟಾಗ ಸಾಂಭಾಜಿಯ ಗೋರಿಯ ಪಕ್ಕದಲ್ಲೇ ದಫನ ಮಾಡಲಾಗಿತ್ತು.

ಕೋರೆಗಾಂವ್ ವಿಜಯ ದಿವಸ ಆಚರಣೆಗೆ ಸಿದ್ಧತೆ ನಡೆಸುತ್ತಿರುವಾಗ, ಈತನ ಗೋರಿಯನ್ನು ಅಗೆದು ವಾತಾವರಣವನ್ನು ಸಂಘಪರಿವಾರದ ಕಾರ್ಯಕರ್ತರು ಉದ್ವಿಗ್ನಗೊಳಿಸಿದರು. ಕೋರೆಗಾಂವ್ ವಿಜಯೋತ್ಸವ ಆಚರಣೆಗೆ ಬಂದ ದಲಿತರ ಮೇಲೆ ಸಂಘಪರಿವಾರ ಕಾರ್ಯಕರ್ತರು ಬಹಿರಂಗವಾಗಿ ಹಲ್ಲೆ ನಡೆಸಿದಾಗ ಸಹಜವಾಗಿಯೇ ಉಭಯ ಗುಂಪುಗಳ ನಡುವೆ ಘರ್ಷಣೆೆ ನಡೆಯಿತು. ಇದನ್ನೇ ಮುಂದಿಟ್ಟು ವಿಜಯೋತ್ಸವಕ್ಕೆ ಸರಕಾರ ಕಾನೂನು ನಿಬಂಧನೆಗಳನ್ನು ಹೇರಿತು. ಆದರೆ ಎಲ್ಲ ನಿಬಂಧನೆಗಳನ್ನು ಮೀರಿ ವಿಜಯೋತ್ಸವ ಯಶಸ್ವಿಯಾಗಿ ನಡೆಯಿತು. ಸಹಸ್ರಾರು ದಲಿತರು ಸೇರಿ ಹುತಾತ್ಮ ಮಹಾರ್ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ಯಶಸ್ಸು ಸರಕಾರವನ್ನು ಸಣ್ಣಗೆ ನಡುಗಿಸಿತ್ತು. ಇದು ಹೀಗೇ ಮುಂದುವರಿದರೆ ಭವಿಷ್ಯದಲ್ಲಿ ತಮಗೆ ಅಪಾಯವಿದೆ ಎನ್ನುವುದು ಆರೆಸ್ಸೆಸ್‌ಗೂ ಮನವರಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ದಲಿತ ಸಮಾವೇಶದ ನೇತೃತ್ವವನ್ನು ವಹಿಸಿದ ಮುಖಂಡರನ್ನು ಗುರಿ ಮಾಡಿ ಅವರನ್ನು ಬಂಧಿಸುವ ಯೋಜನೆಯೊಂದು ರೂಪುಗೊಂಡಿತು. ಕೋರೆಗಾಂವ್ ಸಮಾವೇಶದ ನೇತೃತ್ವ ವಹಿಸಿದ್ದ ಹಲವು ನಾಯಕರಿಗೆ ‘ಮಾವೋವಾದಿ’ ಸಂಬಂಧವನ್ನು ಕಲ್ಪಿಸಲಾಯಿತು. ಅವರನ್ನು ‘ನಗರ ನಕ್ಸಲರು’ ಎಂದು ಕರೆಯಲಾಯಿತು. ಇದೇ ಸಂದರ್ಭದಲ್ಲಿ ‘ಪ್ರಧಾನಿ ಹತ್ಯೆ ಸಂಚು’ ಚಿತ್ರ-ಕತೆಯೂ ಬೆಳಕಿಗೆ ಬಂತು. ದಲಿತ ಸಂಘಟನೆಯ ಮುಂಚೂಣಿಯಲ್ಲಿದ್ದ ಹಲವು ನಾಯಕರನ್ನು ಈ ಆರೋಪದಲ್ಲಿ ಬಂಧಿಸಲಾಯಿತು. ವಿಪರ್ಯಾಸವೆಂದರೆ, ಕೋರೆಗಾಂವ್ ವಿಜಯೋತ್ಸವದ ಸಂದರ್ಭದಲ್ಲಿ ಅದನ್ನು ವಿಫಲಗೊಳಿಸಲು ದಲಿತರ ಮೇಲೆ ಎರಗಿದ್ದ ಸಂಘಪರಿವಾರ ಮುಖಂಡರು, ಕಾರ್ಯಕರ್ತರ ಮೇಲಿನ ಮೊಕದ್ದಮೆಗಳನ್ನು ಸರಕಾರ ಹಿಂದೆಗೆಯಿತು.

ಆದರೆ ಹಿಂಸಾಚಾರದ ಆರೋಪದಲ್ಲಿ ಬಂಧಿತರಾದ ನೂರಾರು ದಲಿತರು ಈಗಲೂ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ, ಕೋರೆಗಾಂವ್ ವಿಜಯೋತ್ಸವ ಸಮಾವೇಶದ ಜೊತೆಗೆ ಯಾವ ಪಾತ್ರವನ್ನೂ ಹೊಂದಿರದ ತೇಲ್ತುಂಬ್ಡೆಯನ್ನೂ ಬಂಧಿಸಲು ತನಿಖಾ ಸಂಸ್ಥೆಗಳು ಬಲೆ ಬೀಸತೊಡಗಿದವು. ಕಳೆದ ಒಂದೂವರೆ ವರ್ಷಗಳಿಂದ ಸತತವಾಗಿ ತೇಲ್ತುಂಬ್ಡೆಯನ್ನು ಬಂಧಿಸಲು ಬೇರೆ ಬೇರೆ ಪ್ರಯತ್ನಗಳು ನಡೆದಿದ್ದವು. ಜೊತೆಗೆ ಅವರ ಮೇಲೆ ತನಿಖಾಧಿಕಾರಿಗಳು ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ದೌರ್ಜನ್ಯಗಳನ್ನು ಎಸಗುತ್ತಾ ಬಂದಿದ್ದರು. ಇದರ ವಿರುದ್ಧ ಜಗತ್ತಿನ ಮಾನವಹಕ್ಕು ಹೋರಾಟಗಾರರು ಒಕ್ಕೊರಲಲ್ಲಿ ಧ್ವನಿಯೆತ್ತಿದ್ದರು. ಆದರೆ ಕಾನೂನು ವ್ಯವಸ್ಥೆಗೆ ತೇಲ್ತುಂಬ್ಡೆಯ ಮೂಲಕ ಈ ದೇಶದ ದಲಿತರ ಹಕ್ಕುಗಳಿಗಾಗಿ ಮೇಲೆತ್ತಲ್ಪಟ್ಟ ಕೈಗಳನ್ನು ಕತ್ತರಿಸುವುದು ಅತ್ಯಗತ್ಯವಾಗಿತ್ತು. ಅಂಬೇಡ್ಕರ್ ಜಯಂತಿಯ ದಿವಸವೇ ಅದರಲ್ಲಿ ಯಶಸ್ವಿಯಾಯಿತು. ಬಿ. ಆರ್. ಅಂಬೇಡ್ಕರ್ ಅವರ ಹುಟ್ಟು ದಿನದಂದು ಅಂಬೇಡ್ಕರ್ ಅವರ ಮೊಮ್ಮಗಳ ಪತಿಯೂ ಆಗಿರುವ ಆನಂದ್ ತೇಲ್ತುಂಬ್ಡೆ ಅವರನ್ನು ಬಂಧಿಸುವ ಮೂಲಕ ಸರಕಾರ ಅಂಬೇಡ್ಕರ್ ಜಯಂತಿಯನ್ನು ಪುಣ್ಯತಿಥಿಯಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಯಿತು. ಹೀಗಿರುವಾಗ, ಪ್ರಧಾನಿ ಮೋದಿಯವರು ಅಂಬೇಡ್ಕರ್‌ಗೆ ‘ಶ್ರದ್ಧಾಂಜಲಿ’ವ್ಯಕ್ತ ಪಡಿಸಿದರೆ ಅದರಲ್ಲಿ ಅಚ್ಚರಿ ಪಡುವುದೇನೂ ಇಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)