varthabharthiಆರೋಗ್ಯ

ಲಾಕ್‌ಡೌನ್‌ನಿಂದಾಗಿ ದಂತವೈದ್ಯರನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲವೇ?

ವಾರ್ತಾ ಭಾರತಿ : 16 Apr, 2020

ಹಲ್ಲಿನ ಸಮಸ್ಯೆಗಳಿಗೆ ಈ ಮನೆಮದ್ದುಗಳನ್ನು ಪ್ರಯತ್ನಿಸಿ ಹಲ್ಲು ನೋವಿಗಿಂತ ಹೆಚ್ಚಿನ ನೋವು ಬೇರೆಯದು ಇದೆಯೇ? ಹಲ್ಲು ನೋವಿಗೆ ಹಲವಾರು ಕಾರಣಗಳಿವೆ. ಕೆಲವೊಮ್ಮೆ ನೋವು ಎಷ್ಟು ತೀವ್ರವಾಗಿರುತ್ತದೆ ಎಂದರೆ ತಕ್ಷಣ ವೈದ್ಯಕೀಯ ನೆರವು ಅಗತ್ಯವಾಗಿರುತ್ತದೆ. ಹಲ್ಲು ಮುರಿದಾಗ ಅಥವಾ ಸಡಿಲಗೊಂಡಾಗ, ವಿಶೇಷವಾಗಿ ಅರ್ಧ ಕಳಚಿ ಬಿದ್ದು ಇನ್ನರ್ಧ ಹಲ್ಲು ವಸಡಿಗೆ ಅಂಟಿಕೊಂಡಿದ್ದಾಗ ನೋವು ತೀವ್ರವಾಗಿರುತ್ತದೆ. ವಸಡುಗಳು ಹಲ್ಲಿನ ರಕ್ತನಾಳಗಳು,ನರಗಳು ಮತ್ತು ಸಂಪರ್ಕ ಅಂಗಾಂಶಗಳನ್ನು ಒಳಗೊಂಡಿರುವುದರಿಂದ ಕೆಲವೊಮ್ಮೆ ಅಸಹನೀಯ ನೋವು ಉಂಟಾಗುತ್ತದೆ. ಹಲ್ಲಿನ ಸಣ್ಣ ಸಮಸ್ಯೆಯಿದ್ದರೂ ದಂತವೈದ್ಯರ ಬಳಿಗೆ ತೆರಳಬೇಕು ಎನ್ನುವುದು ಸಾಮಾನ್ಯವಾದ ಶಿಫಾರಸು,ಆದರೆ ಕೊರೋನ ವೈರಸ್ ಹಿನ್ನೆಲೆಯಲ್ಲಿ ಲಾಕ್‌ಡೌನ್‌ನಿಂದಾಗಿ ಮನೆಯಿಂದ ಹೊರಗೆ ಬೀಳುವುದೂ ಕಷ್ಟವಾಗಿರುವ ಈ ಸಂದರ್ಭದಲ್ಲಿ,ಒಂದು ವೇಳೆ ಹೊರಗೆ ಬಂದರೂ ದಂತವೈದ್ಯರ ಕ್ಲಿನಿಕ್‌ಗಳು ಮುಚ್ಚಿರುವುದರಿಂದ ಸಣ್ಣಪುಟ್ಟ ಹಲ್ಲಿನ ಸಮಸ್ಯೆಗಳಿಗೆ ಮನೆಯಲ್ಲಿಯೇ ಸ್ವಯಂ ಪರಿಹಾರವನ್ನು ಕಂಡುಕೊಳ್ಳಬಹುದು. ಇಂತಹ ಕೆಲವು ಮನೆಮದ್ದುಗಳ ಕುರಿತು ಮಾಹಿತಿಗಳಿಲ್ಲಿವೆ......

ಹಲ್ಲು ತುಂಡಾಗಿದ್ದರೆ ಅಥವಾ ಅಲುಗಾಡುತ್ತಿದ್ದರೆ ಇವುಗಳನ್ನು ಮಾಡಲೇಬೇಡಿ

ನಿಮ್ಮ ಹಲ್ಲು ತುಂಡಾಗಿದ್ದರೆ ಅಥವಾ ಸಡಿಲಗೊಂಡಿದ್ದರೆ ಮತ್ತು ನಿಮಗೆ ದಂತವೈದ್ಯರ ಬಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದಿದ್ದರೆ ಕೆಲವು ವಿಷಯಗಳು ನಿಮ್ಮ ಗಮನದಲ್ಲಿರಲಿ.

► ತುಂಬ ಬಿಸಿಯಾದ ಅಥವಾ ತಣ್ಣಗಿನ ಆಹಾರ ಮತ್ತು ಪಾನೀಯಗಳನ್ನು ಸೇವಿಸಬೇಡಿ

► ಅತಿಯಾಗಿ ಸಿಹಿತಿಂಡಿಗಳನ್ನು ತಿನ್ನಬೇಡಿ

► ಆಮ್ಲೀಯತೆಯನ್ನುಂಟು ಮಾಡುವ ಮತ್ತು ಅತಿಹುಳಿಯಾದ ಆಹಾರಗಳಿಂದ ದೂರವಿರಿ

► ಗಟ್ಟಿಯಾದ ಮತ್ತು ಅಗಿಯಲು ಕಷ್ಟವಾದ ತಿನಿಸುಗಳು,ಟಾಫಿ ಇತ್ಯಾದಿಗಳನ್ನು ತಿನ್ನಬೇಡಿ

► ವೈದ್ಯರೊಂದಿಗೆ ಸಮಾಲೋಚಿಸದೆ ನೈಸರ್ಗಿಕ ವಸ್ತುಗಳನ್ನು ಹೊರತುಪಡಿಸಿ ಇತರ ಯಾವುದೇ ರಾಸಾಯನಿಕಗಳು ಮತ್ತು ಕೃತಕ ವಸ್ತುಗಳನ್ನು ಹಲ್ಲುಗಳ ಮೇಲೆ ಪ್ರಯೋಗಿಸಬೇಡಿ

ಹಲ್ಲುನೋವನ್ನು ಶಮನಿಸಲು ಮನೆಮದ್ದುಗಳು

ತುಂಡಾದ ಹಲ್ಲು ನರಗಳೊಂದಿಗೆ ಜೋಡಣೆಗೊಳ್ಳಲು ಮತ್ತು ಗಾಯ ಮಾಗಲು ಕೊಂಚ ಸಮಯವನ್ನು ತೆಗೆದುಕೊಳ್ಳುತ್ತದೆ. ವೈದ್ಯರ ಭೇಟಿ ಸಾಧ್ಯವಾಗುವವರೆಗೆ ನೋವನ್ನು ಶಮನಿಸುವ ಮನೆಮದ್ದುಗಳ ಮೊರೆಹೋಗಬಹುದು.

ಹಲ್ಲು ಮುರಿದು ಅಸಹನೀಯ ನೋವು ಉಂಟಾಗುತ್ತಿದ್ದರೆ ಸಮೀಪದ ಔಷಧಿ ಅಂಗಡಿಯಲ್ಲಿ ಸಲಹೆ ಪಡೆದುಕೊಂಡು ಪೇನ್‌ಕಿಲ್ಲರ್ ತೆಗೆದುಕೊಳ್ಳಬಹುದು. ಸಾಮಾನ್ಯವಾಗಿ ಇಬುಪ್ರೊಫೆನ್,ಎಸಿಟಾಮಿನೊಫೆನ್‌ನಂತಹ ಔಷಧಿಗಳನ್ನು ಇಂತಹ ನೋವನ್ನು ಶಮನಿಸಲು ಸೇವಿಸಬಹುದು. ಆದರೆ ವೈದ್ಯಕೀಯ ಸಲಹೆಯಿಲ್ಲದೆ,ಕನಿಷ್ಠ ಕೆಮಿಸ್ಟ್‌ಗಳ ಸಲಹೆ ಪಡೆಯದೆ ಯಾವುದೇ ಔಷಧಿಯನ್ನು ಸೇವಿಸಬೇಡಿ. ಹಾಗೆ ಮಾಡಿದರೆ ಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದು.

ಉಪ್ಪು ಮಿಶ್ರಿತ ನೀರಿನಿಂದ ಬಾಯಿ ಮುಕ್ಕಳಿಸಿದರೆ ಬಾಯಿಯಲ್ಲಿನ ಬ್ಯಾಕ್ಟೀರಿಯಾಗಳು ಕೊಲ್ಲಲ್ಪಡುತ್ತವೆ ಮತ್ತು ಉರಿಯೂತ ಕಡಿಮೆಯಾಗುತ್ತದೆ. ಉಪ್ಪಿನಲ್ಲಿ ನಂಜು ನಿರೋಧಕ ಗುಣವಿರುವುದರಿಂದ ಅದು ಸೋಂಕನ್ನು ತಡೆಯುತ್ತದೆ,ಜೊತೆಗೆ ನೋವಿನಿಂದ ಮುಕ್ತಿ ನೀಡುತ್ತದೆ. ಹಲ್ಲಿನ ಸಮಸ್ಯೆಯಿದ್ದಾಗ ದಿನಕ್ಕೆ ಕನಿಷ್ಠ 3-4 ಬಾರಿ ಉಪ್ಪುನೀರಿನಿಂದ ಬಾಯಿ ಮುಕ್ಕಳಿಸಬೇಕು. ಇದು ಬಹುಶಃ ಹಲ್ಲಿನ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರವಾಗಿದೆ.

ಲವಂಗದೆಣ್ಣೆ ಬಳಸಿ

ಹಲ್ಲು ನೋವನ್ನು ತಗ್ಗಿಸುವಲ್ಲಿ ಲವಂಗದ ಎಣ್ಣೆ ಬಹಳ ಪರಿಣಾಮಕಾರಿ ಮದ್ದು ಎಂದು ಪರಿಗಣಿಸಲ್ಪಟ್ಟಿದೆ. ನೈಸರ್ಗಿಕ ನೋವು ನಿವಾರಕವಾಗಿರುವ ಇದನ್ನು ನೂರಾರು ವರ್ಷಗಳಿಂದಲೂ ಹಲ್ಲು ನೋವು ಶಮನಿಸಲು ಬಳಸಲಾಗುತ್ತಿದೆ. ಚೂರು ಹತ್ತಿಯ ಮೇಲೆ ಲವಂಗದೆಣ್ಣೆಯ ಹನಿಗಳನ್ನು ಹಾಕಿ ಅದನ್ನು ನೋವಿರುವ ಜಾಗದಲ್ಲಿ ಸ್ವಲ್ಪ ಸಮಯ ಇಟ್ಟುಕೊಂಡರೆ ತಕ್ಷಣ ನೋವು ಶಮನಗೊಳ್ಳುತ್ತದೆ. ಈ ಎಲ್ಲ ಟಿಪ್ಸ್ ನೀವು ಬಳಸಿಕೊಂಡರೂ ನಂತರವಾದರೂ ದಂತವೈದ್ಯರನ್ನು ನೀವು ಖಂಡಿತವಾಗಿಯೂ ಭೇಟಿಯಾಗಬೇಕಾಗುತ್ತದೆ,ಏಕೆಂದರೆ ಹೆಚ್ಚಿನ ಸಮಯ ಹಾನಿಗೀಡಾದ ಅಂಗಾಂಶಗಳು ಸೂಕ್ತವಾಗಿ ತುಂಬಿಕೊಂಡಿರುವುದಿಲ್ಲ ಮತ್ತು ಇದು ಬಳಿಕ ಸೋಂಕು ಮತ್ತು ಮಾರಕ ರೋಗಗಳ ಅಪಾಯವನ್ನು ಒಡ್ಡಬಹುದು. ಬಾಯಿಯ ಆರೋಗ್ಯಕ್ಕೂ ಹೃದಯದ ಆರೋಗ್ಯಕ್ಕೂ ಸಂಬಂಧವಿದೆ ಎನ್ನುವುದನ್ನು ಸಂಶೋಧನೆಗಳು ತಿಳಿಸಿವೆ. ಹೀಗಾಗಿ ಭವಿಷ್ಯದಲ್ಲಿ ಗಂಭೀರ ತೊಂದರೆಗೆ ಕಾರಣವಾಗಬಹುದಾದ ಯಾವುದೇ ಸಮಸ್ಯೆಯನ್ನು ನಿರ್ಲಕ್ಷಿಸಬಾರದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)