varthabharthiಸಿನಿಮಾ

ಚುರುಕು ಕಂಗಳ ಕಿರುತೆರೆ ಪ್ರತಿಭೆ ಶ್ರದ್ಧಾ ಜತೆ ಮಾತು

ವಾರ್ತಾ ಭಾರತಿ : 18 Apr, 2020
ಸಂದರ್ಶನ: ಶಶಿಕರ ಪಾತೂರು

ಲಾಕ್‌ಡೌನ್ ಸಮಯದಲ್ಲಿ ಜನತೆ ಹಿಂದೆಂದಿಗಿಂತಲೂ ಹೆಚ್ಚು ಬಳಸಿರುವುದು ಸಾಮಾಜಿಕ ಜಾಲತಾಣವನ್ನು. ಟಿ.ವಿ. ನ್ಯೂಸ್ ನೋಡಿ ಹೆದರಿಕೊಂಡವರೆಲ್ಲ ಮನೋರಂಜನೆಗೆ ಆಶ್ರಯ ಪಡೆದಿದ್ದು ಹಾಸ್ಯದ ವೀಡಿಯೊಗಳಲ್ಲಿ. ಹಾಗೆ ವೀಕ್ಷಿಸಲ್ಪಟ್ಟ ವೀಡಿಯೊ ತುಣುಕುಗಳಲ್ಲಿ ಶ್ರದ್ಧಾ ಅವರ ವೀಡಿಯೊಗಳು ಹೊಸ ದಾಖಲೆಯನ್ನೇ ಸೃಷ್ಟಿ ಮಾಡಿವೆ. ಶ್ರದ್ಧಾ ಎನ್ನುವ ಹೆಸರು ಕೇಳಿದಾಕ್ಷಣ ಇವರ ಬಗ್ಗೆ ಗೊತ್ತಾಗದೇ ಹೋಗಬಹುದೇನೋ. ಆದರೆ ಈ ಚುರುಕು ಕಣ್ಣುಗಳ ನೋಟವನ್ನು ಕಂಡವರ ಮುಖದಲ್ಲಿ ನಗು ಮೂಡುವುದು ಸಹಜ. ಅದಕ್ಕೆ ಕಾರಣ ಇವರು ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್ ಜಿಟಜ್ಟ ಮೂಲಕ ಹಂಚಿಕೊಂಡಿರುವ ವೀಡಿಯೊಗಳು. ಅವರು ತಮ್ಮ ಹಾಸ್ಯಪ್ರಜ್ಞೆ, ಹಿನ್ನೆಲೆ, ವೃತ್ತಿ ಪ್ರವೃತ್ತಿಗಳ ಬಗ್ಗೆ ‘ವಾರ್ತಾಭಾರತಿ’ಯೊಂದಿಗೆ ವಿವರವಾಗಿ ಮಾತನಾಡಿದ್ದಾರೆ.

 ನಿಮ್ಮಲ್ಲಿ ಇಷ್ಟೊಂದು ಹಾಸ್ಯ ಪ್ರಜ್ಞೆ ಮೂಡಲು ಸ್ಫೂರ್ತಿ ಯಾರು?
ಸಾಮಾನ್ಯವಾಗಿ ನಾನು ಎಷ್ಟೇ ಗಂಭೀರವಾದ ಪರಿಸ್ಥಿತಿಯಲ್ಲಿದ್ದರೂ ಅದರ ಜತೆಯಲ್ಲಿಯೇ ನನ್ನ ಹಾಸ್ಯಪ್ರಜ್ಞೆ ಜಾಗೃತವಾಗಿರುತ್ತದೆ. ಒಂದುವೇಳೆ ಅದು ಸರಿಯಾದ ಸಮಯವಲ್ಲ ಎನ್ನುವ ಕಾರಣಕ್ಕೆ ಆ ಸಂದರ್ಭದಲ್ಲಿ ನಾನು ವ್ಯಕ್ತಪಡಿಸದೇ ಹೋಗಿರಬಹುದು. ಆದರೆ ಗಂಭೀರ ಪರಿಸ್ಥಿತಿಯನ್ನು ಕೂಡ, ಹಾಸ್ಯಮಯ ದೃಷ್ಟಿಕೋನದಿಂದ ನೋಡಬಲ್ಲ ಮನಸ್ಸು ನನಗಿದೆ. ನನ್ನ ತಂದೆ ತಾಯಿ ಮೂಲತಃ ಕಾರ್ಕಳದವರಾದರೂ ನಾನು ಹುಟ್ಟಿದ್ದು ಮುಂಬೈನಲ್ಲಿ ಹಾಗಾಗಿ ಶಾಲೆಯಲ್ಲಿದ್ದಾಗ ಸಿಗುವ ಬೇಸಿಗೆ ರಜಾ ದಿನಗಳಲ್ಲಿ ಕಾರ್ಕಳದ ಅಜ್ಜಿ ಮನೆಗೆ ಬರುತ್ತಿದ್ದೆ. ಅಲ್ಲಿದ್ದಾಗ ಜಾತ್ರೆ, ಉತ್ಸವ, ಕೋಲ ಹೀಗೆ ಯಾವುದನ್ನು ಕೂಡ ತಪ್ಪಿಸಿಕೊಳ್ಳುತ್ತಿರಲಿಲ್ಲ. ಆ ಸಂದರ್ಭದಲ್ಲಿ ಭಾಗಿಯಾಗುತ್ತಿದ್ದ ಊರಿನ ಮಹಿಳೆಯರ ಮಾತುಕತೆಗಳು ಮಾತ್ರವಲ್ಲ, ನನ್ನದೇ ಸಂಬಂಧಿಕರ ಮಾತುಕತೆಗಳೆಲ್ಲ ಹೊಸರೂಪ ಪಡೆದುಕೊಂಡು ಹಾಸ್ಯವನ್ನಾಗಿ ಈಗ ನಿಮ್ಮೆದುರು ಹಂಚಿಕೊಳ್ಳುತ್ತಿದ್ದೇನೆ.

 ಕಿರುತೆರೆಯಲ್ಲಿ ನಿಮ್ಮ ವೃತ್ತಿಬದುಕು ಶುರುವಾಗಿದ್ದು ಹೇಗೆ?
      ನಾನು ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದೆ. ಆದರೆ ಆಗ ನನಗೆ ಟಿ.ವಿ.ಗಿಂತಲೂ ಎಫ್.ಎಮ್. ಆಲಿಸುವ ಹವ್ಯಾಸವಿತ್ತು. ಅದರಲ್ಲೇ ಕೆಲಸ ಮಾಡುವ ಆಕಾಂಕ್ಷೆಯೂ ಇತ್ತು. ಮಾಧ್ಯಮ ಕ್ಷೇತ್ರದ ವೃತ್ತಿ ಶುರುವಾಗಿದ್ದು ಫಿವರ್ 104 ಎಫ್.ಎಮ್. ರೇಡಿಯೊ ಮೂಲಕ. ಅದೇ ಸಂದರ್ಭದಲ್ಲಿ ಬೆಂಗಳೂರಿನ ‘ಅವರೆಕಾಳು ಪರಿಷೆ’ ಬಗ್ಗೆ ಒಂದು ಹಾಸ್ಯ ತುಂಬಿದ ವೀಡಿಯೊ ಮಾಡಿದ್ದೆ. ಅದು ಸಾವಿರಾರು ಸಂಖ್ಯೆಯಲ್ಲಿ ಮೆಚ್ಚುಗೆ ಪಡೆದಿತ್ತು. ಅದು ಕಲರ್ಸ್ ವಾಹಿನಿಯ ಬಿಸ್‌ನೆಸ್ ಹೆಡ್ ಅವರ ಗಮನ ಸೆಳೆದು, ನನಗೆ ಆಡಿಶನ್‌ಗೆ ಆಹ್ವಾನ ಬಂತು. ಆ ರೀತಿಯಲ್ಲಿ ‘ಡಾನ್ಸಿಂಗ್ ಸ್ಟಾರ್’ ರಿಯಾಲಿಟಿ ಶೋನ ಮೊದಲ ಸೀಸನ್‌ಗೆ ನಿರೂಪಕಿಯಾದೆ. ಬಳಿಕ ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದ ಕ್ರಿಯೇಟಿವ್ ಡೈರೆಕ್ಟರ್ ಆದೆ. ಈಗ‘ಹಾಡು ಕರ್ನಾಟಕ’ ಶೋಗೆ ನಿರ್ದೇಶಕಿಯಾಗಿದ್ದೇನೆ ಮಾತ್ರವಲ್ಲ, ಕಲರ್ಸ್‌ನ ನಾನ್ ಫಿಕ್ಷನ್ ಹೆಡ್ ಆಗಿ ವೃತ್ತಿಯಲ್ಲಿದ್ದೇನೆ. ಆದರೆ ಇವೆಲ್ಲದರ ನಡುವೆ ತಮಾಷೆಗೆಂದು ಆರಂಭಿಸಿದ ಹಾಸ್ಯದ ವೀಡಿಯೊಗಳು ಎಲ್ಲರ ಗಮನ ಸೆಳೆಯುತ್ತಿರುವುದು ಮಾತ್ರ ವಿಶೇಷ.

 ಕಾರ್ಕಳದ ಜತೆಗಿನ ನಿಮ್ಮ ಸಂಬಂಧ ಹೇಗಿದೆ?

ಇಂದಿಗೂ ನಾನು ಬಿಡುವಾದಾಗ ಕಾರ್ಕಳಕ್ಕೆ ಬರುತ್ತಿರುತ್ತೇನೆ. ನಮ್ಮಮ್ಮ ಕಾರ್ಕಳದ ನಿಟ್ಟೆಯವರು. ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಅವರ ಹೆಸರು ಸುಶೀಲಾ. ಈಗ ಅವರಿಲ್ಲ. ತಂದೆ ವರ್ಧಮಾನ್ ಜೈನ್ ಕೂಡ ಕಾರ್ಕಳದ ನೆಲ್ಲಿಕಾರ್‌ನವರು. ನನ್ನ ಮಾತೃಭಾಷೆ ತುಳು. ಮಾತ್ರವಲ್ಲ, ಊರಿನ ಊಟ, ತಿಂಡಿ, ಲೈಫ್ ಸ್ಟೈಲ್ ಮೊದಲಾದವುಗಳನ್ನು ಯಾವ ನಗರಕ್ಕೂ ನನ್ನಿಂದ ದೂರಮಾಡಲು ಸಾಧ್ಯವಾಗಿಲ್ಲ. ನಿಜ್ಕೂ ಈಗ ಸ್ವಲ್ಪ ಬಿಡುವಲ್ಲಿದ್ದೇನೆ. ಆದರೆ ಅನಿವಾರ್ಯ ಕಾರಣಗಳಿಂದಾಗಿ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದೇನೆ. ಲಾಕ್‌ಡೌನ್ ಅಂಥ ಸಂದರ್ಭವನ್ನು ಸೃಷ್ಟಿಸಿದೆ. ಮಾತ್ರವಲ್ಲ, ಈ ಸಂದರ್ಭದಲ್ಲಿ ನಾವು ಹೆಚ್ಚು ಓಡಾಡದಿರುವುದು ಎಲ್ಲರಿಗೂ ಕ್ಷೇಮ ಎಂದು ಅರ್ಥ ಮಾಡಿಕೊಂಡಿದ್ದೇನೆ.

ನಿಮ್ಮನ್ನು ಇಷ್ಟಪಡುವವರಿಗೆ ಏನು ಹೇಳಬಯಸುತ್ತೀರಿ?
ಮೊದಲನೆಯದಾಗಿ ಥ್ಯಾಂಕ್ಸ್ ಹೇಳುತ್ತೇನೆ. ಆಮೇಲೆ ಇಷ್ಟಪಟ್ಟು ಭೇಟಿಯಾದವರು ಕೇಳುವ ಎರಡನೆಯ ಮಾತು ನಿಮಗೆ ಹೇಗೆ ಹಾಸ್ಯಕ್ಕೆ ಹೊಸ ವಿಚಾರಗಳು ಸಿಗುತ್ತವೆ ಎನ್ನುವುದು. ಅದಕ್ಕೆ ಈಗಾಗಲೇ ಉತ್ತರಿಸಿದ್ದೇನೆ. ಆದರೆ ಅವರಿಗೂ ಅಂತಹ ಆಸಕ್ತಿಗಳಿದ್ದಾಗ ಒಂದಷ್ಟು ಸಲಹೆುನ್ನು ಕೂಡ ನೀಡುತ್ತೇನೆ. ನಾವು ಬದುಕನ್ನು ಸ್ವಲ್ಪ ಸೂಕ್ಷ್ಮ್ಮವಾಗಿ ಗಮನಿಸಬೇಕು. ಅದಕ್ಕೆ ಹಲವು ಮಗ್ಗುಲುಗಳಿವೆ. ಅದನ್ನು ಅರಿತ ಹಾಗೆ ನಮ್ಮ ಬದುಕಲ್ಲಿ ನಮಗೆ ತಾಳ್ಮೆ, ಪ್ರೀತಿ ಮೊದಲಾದ ಭಾವಗಳು ಮೂಡುತ್ತಾ ಹೋಗುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಓದುವ ಹವ್ಯಾಸ ನಮಗೆ ನೀಡುವ ಜ್ಞಾನ ಖಂಡಿತವಾಗಿ ಅನನ್ಯ. ಯಾವುದೇ ಕೆಲಸ ಮಾಡುವುದಿದ್ದರೂ ಪುಸ್ತಕಗಳ ಮೂಲಕ ನಾವು ಪಡೆದ ಜ್ಞಾನ ನಮ್ಮನ್ನು ಅಲ್ಲಿ ಪ್ರತ್ಯೇಕವಾಗಿ ಗುರುತಿಸುವಂತೆ ಮಾಡುತ್ತದೆ. ಉದಾಹರಣೆಗೆ ನಾನು ಈಗ ವೆಬ್ ಸೀರೀಸ್ಳಲ್ಲಿಯೂ ನಟಿಸುತ್ತಿದ್ದೇನೆ. ಇಂದಿನ ಯುವ ಸಮೂಹಕ್ಕೆ ಅವಕಾಶಗಳಿಗೆ ಕೊರತೆಯೇ ಇಲ್ಲ. ಒಂದೊಳ್ಳೆಯ ಕ್ಯಾಮರಾ ಮೊಬೈಲ್ ಇದ್ದರೆ ನಿಮ್ಮ ಪ್ರತಿಭೆ ಬಳಸಿಕೊಂಡು ಯೂಟ್ಯೂಬರ್ ಆಗಬಹುದು. ಸ್ಟಾಂಡಪ್ ಕಾಮಿಡಿಯನ್ ಆಗಬಹುದು ಅಥವಾ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಬಹುದು. ಒಟ್ಟಿನಲ್ಲಿ ಇನ್ನೊಬ್ಬರನ್ನು ಮೆಚ್ಚುವ ಜತೆಗೆ ನಾವು ಕೂಡ ಆಕರ್ಷಕವಾಗಿ ಬದುಕುವ ಪ್ರಯತ್ನ ಮಾಡಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)