varthabharthiಸಂಪಾದಕೀಯ

ಬಡವರ ರಕ್ತದಿಂದ ಸ್ಯಾನಿಟೈಸರ್ ತಯಾರಿಸಲು ಹೊರಟವರು

ವಾರ್ತಾ ಭಾರತಿ : 22 Apr, 2020

ಕೊರೋನ ಮತ್ತು ಹಸಿವು ಇವೆರಡರ ನಡುವೆ ಮೊದಲ ಆಯ್ಕೆ ಯಾವುದು ಎನ್ನುವ ಪ್ರಶ್ನೆ ಚರ್ಚೆಯಲ್ಲಿದೆ. ಕೊರೋನವನ್ನು ಮೊದಲು ಗೆದ್ದು ಬಳಿಕ ಹಸಿವಿನ ಬಗ್ಗೆ ಚಿಂತೆ ಮಾಡೋಣ ಎಂದು ಸರಕಾರ ಯೋಚಿಸುತ್ತಿರುವಂತಿದೆ. ಆದರೆ ಹಸಿವನ್ನು ಗೆಲ್ಲದೆ ಕೊರೋನವನ್ನು ಗೆಲ್ಲುವುದಕ್ಕೆ ಸಾಧ್ಯವಿಲ್ಲ ಎನ್ನುವುದು ಇನ್ನೂ ಸರಕಾರಕ್ಕೆ ಮನವರಿಕೆಯಾದಂತಿಲ್ಲ. ಕೊರೋನ ವಿರುದ್ಧ ‘ಲಾಕ್‌ಡೌನ್’ ಸಮರ ಸಾರಿರುವ ಸರಕಾರಕ್ಕೆ ಅದು ನಿಧಾನಕ್ಕೆ ತಿರುಗು ಬಾಣವಾಗುತ್ತಿದೆ. ಒಂದೆಡೆ ಈ ಲಾಕ್‌ಡೌನ್ ದೇಶದ ಅರ್ಥವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶ ಮಾಡಿದ್ದರೆ, ಮಗದೊಂದೆಡೆ ಈ ಲಾಕ್‌ಡೌನ್‌ನಿಂದ ಕೊರೋನವನ್ನು ಪೂರ್ಣ ಪ್ರಮಾಣದಲ್ಲಿ ಎದುರಿಸಲು ಸಾಧ್ಯವಿಲ್ಲ ಎನ್ನುವುದೂ ಸಾಬೀತಾಗುತ್ತಿದೆ. ಲಾಕ್‌ಡೌನ್‌ನಿಂದ ಕೊರೋನ ಹರಡುವುದನ್ನು ತಪ್ಪಿಸಬಹುದು ಎಂದಾಗಿದ್ದರೆ, ಕೊರೋನ ಹರಡುವಿಕೆಯ ಪ್ರಮಾಣ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಾ ಬರಬೇಕಾಗಿತ್ತು. ಇದೇ ಸಂದರ್ಭದಲ್ಲಿ ಜರ್ಜರಿತವಾಗುತ್ತಿರುವ ಆರ್ಥಿಕತೆ ಕೊರೋನ ಹರಡುವಲ್ಲಿ ಪರೋಕ್ಷ ಸಹಕಾರವನ್ನು ನೀಡುತ್ತಿದೆ. ಹಸಿವು, ಅಸಹಾಯಕತೆ, ಹತಾಶೆ ಅನಿವಾರ್ಯವಾಗಿ ತಳಸ್ತರದ ಕಾರ್ಮಿಕ ವರ್ಗವನ್ನು ಬೀದಿಗಿಳಿಯುವಂತೆ ಮಾಡುತ್ತಿದೆ. ಇದು ಸರಕಾರದ ಲಾಕ್‌ಡೌನ್‌ಗೆ ನೇರ ಸವಾಲಾಗಿದೆ. ಆದುದರಿಂದ, ಲಾಕ್‌ಡೌನ್‌ನ್ನು ಮುಂದುವರಿಸುವ ಸಂದರ್ಭದಲ್ಲೇ ಈ ಕಾರ್ಮಿಕ ವರ್ಗಕ್ಕೆ ಕನಿಷ್ಠ ಒಂದೆರಡು ತಿಂಗಳ ಕಾಲ ಆಹಾರ ಪದಾರ್ಥಗಳನ್ನು ಪುಕ್ಕಟೆಯಾಗಿ ಹಂಚುವ ಸಾಮರ್ಥ್ಯ ಸರಕಾರಕ್ಕಿರಬೇಕು.

ಆ ಕುರಿತಂತೆ ಯಾವ ಭರವಸೆಯೂ ಸರಕಾರ ನೀಡದೇ ಇದ್ದ ಕಾರಣದಿಂದ, ದೇಶದೊಳಗೆ ಕಾರ್ಮಿಕ ವರ್ಗ ಹಸಿವಿನ ಆತಂಕ, ಭವಿಷ್ಯದ ಅಭದ್ರತೆಯಿಂದ ದಂಗೆಯೇಳುವ ಸ್ಥಿತಿ ನಿರ್ಮಾಣವಾಗಿದೆ. ಇದು ಹೀಗೆಯೇ ಮುಂದುವರಿದರೆ ಕೊರೋನ ನಿಯಂತ್ರಣಕ್ಕಿಂತ, ಈ ಜನಸಾಮಾನ್ಯರ ಆಕ್ರೋಶವನ್ನು ನಿಭಾಯಿಸುವುದು ಸರಕಾರಕ್ಕೆ ಕಷ್ಟವಾಗಬಹುದು. ಇತ್ತೀಚೆಗೆ ಗುಜರಾತ್, ದಿಲ್ಲಿಯಲ್ಲಿ ವಲಸೆ ಕಾರ್ಮಿಕರು ಪೊಲೀಸರ ಜೊತೆಗೆ ಸಂಘರ್ಷಕ್ಕಿಳಿದರು. ಅಂಗಡಿ ಮುಂಗಟ್ಟುಗಳು ಬೆಂಕಿಗೆ ಆಹುತಿಯಾದವು. ನೂರಾರು ವಲಸೆ ಕಾರ್ಮಿಕರನ್ನು ಪೊಲೀಸರು ಬಂಧಿಸಿ ಜೈಲಿಗೆ ತಳ್ಳಿದರು. ಇಷ್ಟು ಗಂಭೀರವಾಗಿಲ್ಲದೇ ಇದ್ದರೂ ಅಧಿಕಾರಿಗಳು ಮತ್ತು ಪೊಲೀಸರ ಬೇಜವಾಬ್ದಾರಿಯಿಂದ ಪಾದರಾಯನ ಪುರದಲ್ಲೂ ಅದೇ ಸಂಭವಿಸಿತು. ಆದರೆ ಇಲ್ಲಿ ಪೊಲೀಸರ ಸರ್ವಾಧಿಕಾರವನ್ನು ಪ್ರಶ್ನಿಸಿದವರಲ್ಲಿ ಒಂದು ನಿರ್ದಿಷ್ಟ ಸಮುದಾಯದ ಜನರೇ ಅಧಿಕವಾಗಿದ್ದುದರಿಂದ ಅವರು ‘ಕಾರ್ಮಿಕ’ರೆಂದು ಗುರುತಿಸಲ್ಪಡದೆ ಧರ್ಮದ ಹೆಸರಲ್ಲಿ ಗುರುತಿಸಲ್ಪಟ್ಟರು. ಕೊರೋನ ಸಾವಿಗಿಂತಲೂ ವಲಸೆ ಕಾರ್ಮಿಕರ ದುರಂತಗಳು ಎದೆ ನಡುಗಿಸುತ್ತಿವೆ. ತೆಲಂಗಾಣದಿಂದ ಛತ್ತೀಸ್‌ಗಡದ ತನ್ನ ಹಳ್ಳಿಗೆ ಕಾರ್ಮಿಕರೊಂದಿಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಬಾಲಕಿ ಮೃತಪಟ್ಟ ದಾರುಣ ಘಟನೆ ಎಪ್ರಿಲ್ 21ರಂದು ವರದಿಯಾಗಿದೆೆ.

ಸುಮಾರು 150 ಕಿ.ಮೀ. ದೂರ ನಡೆದ ಈಕೆ ಕುಸಿದು ಬಿದ್ದಿದ್ದಾಳೆ. ಹಸಿವು, ಅಸ್ವಸ್ಥತೆ, ಸುಸ್ತು ಎಲ್ಲವೂ ಸಾವಿಗೆ ಕಾರಣವಾಗಿದೆ. ಹೀಗೆ ಸಾವಿನ ಕಡೆಗೆ ನಡಿಗೆ ಆರಂಭಿಸಿರುವ ಸಹಸ್ರಾರು ಕಾರ್ಮಿಕರು ಈ ದೇಶದಲ್ಲಿದ್ದಾರೆ. ಸರಕಾರ, ಕೊರೋನದ ದುಷ್ಪರಿಣಾಮಗಳ ಬಗ್ಗೆ ಚಿಂತಿಸಿದಂತೆಯೇ ಹಸಿವೆಯಿಂದ ತತ್ತರಿಸಿರುವ ಈ ಜನರ ಕಡೆಗೂ ಗಮನ ಹರಿಸಬೇಕಾಗಿದೆ. ಇಂದು ದೇಶದಲ್ಲಿ ಶೇ. 50ರಷ್ಟು ಕಾರ್ಮಿಕರು ಒಂದು ದಿನಕ್ಕೆ ಸಾಕಾಗುವಷ್ಟು ಆಹಾರವೂ ತಮ್ಮ ಬಳಿ ಇಲ್ಲದೆ ಕಂಗಾಲಾಗಿದ್ದಾರೆ. ವಲಸೆ ಕಾರ್ಮಿಕರಲ್ಲಿ ಶೇ. 96ರಷ್ಟು ಜನರಿಗೆ ಸರಕಾರದ ಸಹಾಯ ತಲುಪಿಲ್ಲ. ಶೇ. 89ರಷ್ಟು ಕಾರ್ಮಿಕರಿಗೆ ಅವರ ಮಾಲಕರು ಲಾಕ್‌ಡೌನ್ ಸಂದರ್ಭದಲ್ಲಿ ಚಿಕ್ಕಾಸು ನೀಡಿಲ್ಲ ಎನ್ನುವುದು ಈಗಾಗಲೇ ವರದಿಯಲ್ಲಿ ಬಹಿರಂಗವಾಗಿದೆ. ಆದರೆ ದೇಶದಲ್ಲಿಂದು ಬಿಪಿಎಲ್ ಕಾರ್ಡ್‌ದಾರರು, ಅಂತ್ಯೋದಯ ವರ್ಗದವರು ಮಾತ್ರವಲ್ಲ, ಎಪಿಎಲ್ ಕಾರ್ಡ್‌ಧಾರರ ಸ್ಥಿತಿಯೂ ಚಿಂತಾಜನಕವಾಗಿದೆ. ಲಕ್ಷಾಂತರ ಜನರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ವೇತನವಿಲ್ಲದೆ ಮನೆಯೊಳಗೇ ಇದ್ದು, ಇಎಂಐಯನ್ನು ಹೇಗೆ ಕಟ್ಟುವುದು ಎಂಬ ಆತಂಕದಲ್ಲಿ ದಿನಕಳೆಯುತ್ತಿದ್ದಾರೆ. ಇಎಂಐ ಕುರಿತಂತೆ ಸರಕಾರ ನೀಡಿರುವ ಎಲ್ಲ ಭರವಸೆಗಳು ಹುಸಿಯಾಗುತ್ತಿವೆ. ವಿವಿಧ ಬ್ಯಾಂಕ್‌ಗಳಿಂದ ಈಗಾಗಲೇ ಗ್ರಾಹಕರಿಗೆ ಮೊಬೈಲ್ ಮೂಲಕ ಸಂದೇಶದ ಎಚ್ಚರಿಕೆ ರವಾನೆಯಾಗುತ್ತಿದೆ. ವಿದ್ಯುತ್ ಬಿಲ್‌ಗಳ ಬಗ್ಗೆಯೂ ಸಂದೇಶದ ಮೇಲೆ ಸಂದೇಶಗಳು ಹೋಗುತ್ತಿವೆ.

ಇದರಿಂದಾಗಿ ಜನರು ಖಿನ್ನತೆ, ಆತಂಕದಂತಹ ರೋಗಗಳಿಗೆ ಎರವಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕನಿಷ್ಠ ಅವರ ಹಸಿವೆಯನ್ನು ತಣಿಸುವ ದಾರಿಯನ್ನಾದರೂ ಹುಡುಕಿ ಅವರಿಗೆ ನೆರವಾಗುವುದು ಸರಕಾರದ ಕರ್ತವ್ಯವಾಗಿತ್ತು. ಪಡಿತರ ವಿತರಣಾ ಯೋಜನೆಯಡಿ ಸರಕಾರ ಸುಮಾರು 80 ಕೋಟಿ ಜನರಿಗೆ ದಿನಸಿ ವಿತರಿಸುವ ಭರವಸೆ ನೀಡಿದೆ. ಆದರೆ ಇಷ್ಟು ಜನರಿಗೆ ಪೂರ್ಣ ಪ್ರಮಾಣದಲ್ಲಿ ಆಹಾರ ವಿತರಿಸಲು ಸರಕಾರಕ್ಕೆ ಸಾಧ್ಯವಾಗಿಲ್ಲ. ಇದೇ ಸಂದರ್ಭದಲ್ಲಿ ಪಡಿತರ ವ್ಯಾಪ್ತಿಯ ಹೊರಗಿರುವವರಿಗೂ ಆಹಾರ ಪೂರೈಕೆಯಾಗಬೇಕು ಎನ್ನುವ ಕೂಗು ಕೇಳುತ್ತಿದೆಯಾದರೂ ಸರಕಾರ ಜಾಣ ಕಿವುಡು ಪ್ರದರ್ಶಿಸುತ್ತಿದೆ. ಅತ್ಯಂತ ವಿಷಾದನೀಯ ಸಂಗತಿಯೆಂದರೆ, ಈ ಕಾರ್ಮಿಕರಿಗೆ ಆಹಾರ ಒದಗಿಸಲು ಇರುವ ಸಣ್ಣ ಮೂಲವನ್ನೂ ಸರಕಾರ ಬೇರೆಡೆಗೆ ವರ್ಗಾಯಿಸಲು ಮುಂದಾಗಿದೆ. ಮಾರ್ಚ್‌ನಲ್ಲಿ ಭಾರತೀಯ ಆಹಾರ ನಿಗಮವು 77 ದಶಲಕ್ಷ ಟನ್ ಆಹಾರವನ್ನು ಗೋದಾಮಿನಲ್ಲಿ ದಾಸ್ತಾನಿಟ್ಟಿದೆ. ಇದು ಅಗತ್ಯವಿರುವ ದಾಸ್ತಾನಿನ ಮೂರು ಪಟ್ಟು ಹೆಚ್ಚಾಗಿದೆ. ಇದರ ಜೊತೆಗೆ ಹಾಲಿ ಋತುವಿನಲ್ಲಿ 40 ದಶಲಕ್ಷ ಟನ್ ಧಾನ್ಯಗಳನ್ನು ಖರೀದಿಸುವ ಅಂದಾಜುಗಳಿವೆ. ಈ ಧಾನ್ಯಗಳನ್ನು ಬಳಸಿಕೊಂಡು ಈ ದೇಶದ 130 ಕೋಟಿ ಜನಸಂಖ್ಯೆಗೆ ಆಹಾರವನ್ನು ಪೂರೈಸುವುದು ಸರಕಾರಕ್ಕೆ ಕಷ್ಟವೇನೂ ಅಲ್ಲ. ಆದರೆ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಅತ್ಯಗತ್ಯ ಎಂದು ಸರಕಾರ ಯೋಚಿಸುತ್ತಿದೆ.

ಸುಮಾರು 3 ಕೋಟಿ ಹೆಚ್ಚುವರಿ ಧಾನ್ಯವನ್ನು ಈ ಸಂದರ್ಭದಲ್ಲಿ ಸದುಪಯೋಗಪಡಿಸುವುದು ಬಿಟ್ಟು, ಅದು ಈ ಧಾನ್ಯ ಸಂಗ್ರಹವನ್ನು ಸ್ಯಾನಿಟೈಸರ್ ತಯಾರಿಸುವುದಕ್ಕೆ ಬಳಸಲು ಹೊರಟಿದೆ. ಸರಕಾರ ಬಡವರ ಹಸಿವೆಯನ್ನು ಅದೆಷ್ಟು ಹಗುರವಾಗಿ ತೆಗೆದುಕೊಂಡಿದೆ ಎನ್ನುವುದನ್ನು ಇದು ಹೇಳುತ್ತಿದೆ. ಇಷ್ಟಕ್ಕೂ ಸರಕಾರ ಈ ಅಕ್ಕಿಯಿಂದ ತಯಾರಿಸಲು ಹೊರಟಿರುವುದು ಕೊರೋನ ತಡೆಯುವುದಕ್ಕೆ ಬೇಕಾದ ಔಷಧಿಯನ್ನಲ್ಲ. ವೈರಸ್‌ಗಳನ್ನು ನಿವಾರಿಸಲು ಬೇಕಾದ ಸ್ಯಾನಿಟೈಸರ್ ಅಥವಾ ಸೋಪಿನಂತಹ ಪದಾರ್ಥವನ್ನು. ಈ ಸ್ಯಾನಿಟೈಸರ್‌ನ ಮೂಲಕ ವೈರಸ್‌ಗಳು ಸಂಪೂರ್ಣ ಸಾಯುವುದಿಲ್ಲ ಎನ್ನುವುದನ್ನು ತಜ್ಞರು ಈಗಾಗಲೇ ವಿವರಿಸಿದ್ದಾರೆ. ಸ್ಯಾನಿಟೈಸರ್ ಬದಲಾಗಿ ಸೋಪುಗಳನ್ನೂ ಬಳಸಬಹುದು ಎಂದು ವೈದ್ಯರು ಸಲಹೆ ನೀಡುತ್ತಿದ್ದಾರೆ. ಇಷ್ಟಕ್ಕೂ ದಿನದ ಕೂಳಿಗೆ ಪರದಾಡುತ್ತಿರುವ ಬಡವರು ಈ ಸ್ಯಾನಿಟೈಸರ್‌ನಲ್ಲಿ ಕೈ ತೊಳೆದುಕೊಳ್ಳುತ್ತಾರೆ ಎಂದು ಭಾವಿಸುವುದೇ ತಮಾಷೆಯ ವಿಷಯವಾಗಿದೆ.

ಅಂದರೆ, ಈ ಸ್ಯಾನಿಟೈಸರ್‌ನ ಅಗತ್ಯವಿರುವುದು ಮೇಲ್‌ಮಧ್ಯಮ ಮತ್ತು ಶ್ರೀಮಂತರಿಗೆ. ಅವರ ಅಗತ್ಯವನ್ನು ಪೂರೈಸುವುದಕ್ಕಾಗಿ ಬಡವರ ತಟ್ಟೆಯಲ್ಲಿರುವ ಅಕ್ಕಿಯನ್ನು ಕಸಿಯಲು ಹೊರಟಿದೆ. ಹಸಿದವರಿಗೆ ಧಾನ್ಯ ನೀಡದೆ, ಆ ಧಾನ್ಯಗಳಿಂದ ಸ್ಯಾನಿಟೈಸರ್ ತಯಾರಿಸುವ ಸರಕಾರ ಒಂದನ್ನು ಯೋಚಿಸಬೇಕು. ಬಡವರು ಏಕಾಏಕಿ ಬೀದಿಗಿಳಿದರೆ ಯಾವ ಸ್ಯಾನಿಟೈಸರ್‌ಗಳೂ ಶ್ರೀಮಂತರನ್ನು ರಕ್ಷಿಸಲಾರವು. ಬಡವರು ಲಾಕ್‌ಡೌನ್, ಕ್ವಾರಂಟೈನ್ ಉಲ್ಲಂಘಿಸದೇ ಇರಬೇಕಾದರೆ ಅವರ ಸಹನೆಯನ್ನು ಪರೀಕ್ಷಿಸದೇ ಅವರಿಗೆ ಬೇಕಾದ ಅಗತ್ಯದ ಆಹಾರ ಪದಾರ್ಥಗಳನ್ನು ತಲುಪಿಸುವ ಪ್ರಯತ್ನ ನಡೆಯಬೇಕು. ಅಷ್ಟೇ ಅಲ್ಲ, ಮುಂದಿನ ಐದು ತಿಂಗಳಿಗೆ ಬೇಕಾದ ಧಾನ್ಯಗಳ ಸಂಗ್ರಹವೂ ಸರಕಾರದ ಬಳಿ ಇದಕ್ಕಾಗಿ ಇರಬೇಕು. ಇದನ್ನು ನಿರ್ಲಕ್ಷಿಸಿ, ಬಡವರ ಅನ್ನವನ್ನು ಕಿತ್ತು ಉತ್ಪಾದಿಸುವ ಸ್ಯಾನಿಟೈಸರ್‌ನಲ್ಲಿ ಕೈ ತೊಳೆಯುವುದು ಎಂದರೆ ಬಡವರ ಕಣ್ಣೀರಿನಿಂದಲ್ಲ, ರಕ್ತದಿಂದ ಕೈತೊಳೆದಂತೆ. ಆ ರಕ್ತ ಉಳ್ಳವರ ಕೈಗಳ ವೈರಸ್‌ಗಳನ್ನು ಹೆಚ್ಚಿಸೀತೇ ಹೊರತು ಅವುಗಳನ್ನು ಸಾಯಿಸಲಾರವು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)