varthabharthiಸಂಪಾದಕೀಯ

ಸಾಧುಗಳ ಲಿಂಚಿಂಗ್‌ನಲ್ಲಿ ಪತ್ರಕರ್ತರ ಪಾತ್ರವೆಷ್ಟು?

ವಾರ್ತಾ ಭಾರತಿ : 23 Apr, 2020

‘ಚಾರ್ಲಿ ಹೆಬ್ದೋ’ ಹತ್ಯಾಕಾಂಡ ಪತ್ರಿಕೋದ್ಯಮದ ಪಾಲಿಗೆ ಇನ್ನೂ ಆರದ ಗಾಯ. 2015ರಲ್ಲಿ ಪ್ಯಾರಿಸ್‌ನಲ್ಲಿರುವ ಈ ಪತ್ರಿಕೆಯ ಕಚೇರಿಯ ಮೇಲೆ ದುಷ್ಕರ್ಮಿಗಳು ಭೀಕರ ಗುಂಡಿನ ದಾಳಿ ನಡೆಸಿದರು. 12 ಮಂದಿ ಸಿಬ್ಬಂದಿ ಬರ್ಬರವಾಗಿ ಕೊಲೆಯಾದರು. ಮಾನವೀಯ ನೆಲೆಯಲ್ಲಿ ಈ ಕಗ್ಗೊಲೆಯನ್ನು ಇಡೀ ವಿಶ್ವ ಒಕ್ಕೊರಲಿನಲ್ಲಿ ಖಂಡಿಸಿತು. ಆದರೆ ಇದೇ ಹೊತ್ತಿಗೆ, ‘ಚಾರ್ಲಿ ಹೆಬ್ದೋ’ ಪತ್ರಿಕೆಯ ದುರಂತ, ಒಬ್ಬ ಪತ್ರಕರ್ತ ತನಗೆ ತಾನೇ ಹಾಕಿಕೊಳ್ಳಬೇಕಾದ ನೀತಿ ಸಂಹಿತೆಯ ಬಗ್ಗೆ ಜಾಗತಿಕವಾಗಿ ಒಂದು ಚರ್ಚೆಯನ್ನು ಹುಟ್ಟಿಸಿ ಹಾಕಿತು. ‘ಚಾರ್ಲಿ ಹೆಬ್ದೋ’ ವಿಡಂಬನಾ ಪತ್ರಿಕೆ. ಆದರೆ ವಿಡಂಬನೆಯ ಹೆಸರಿನಲ್ಲಿ ಅದು ವೈಯಕ್ತಿಕ ನಿಂದನೆಯ ಮಟ್ಟಕ್ಕೆ ಇಳಿದಿತ್ತು. ಸಾರ್ವಜನಿಕ ವ್ಯಕ್ತಿಯನ್ನು ಬೆತ್ತಲೆಯಾಗಿ ಚಿತ್ರಿಸುವುದು, ಅತ್ಯಂತ ಕೀಳು ಮಟ್ಟದ ಭಾಷೆಯನ್ನು ಬಳಸಿ ನಿಂದಿಸುವುದು, ಕೀಳು ದರ್ಜೆಯ ವ್ಯಂಗ್ಯ ಚಿತ್ರಗಳನ್ನು ಬಿಡಿಸುವುದು ಉಳಿದ ಪತ್ರಕರ್ತರಿಗೆ ನುಂಗಲಾರದ ತುತ್ತಾಗಿತ್ತು.

ವ್ಯಂಗ್ಯ ಚಿತ್ರವೆಂದರೆ ತಂತಿಯ ಮೇಲಿನ ನಡಿಗೆಯಂತೆ. ಒಬ್ಬ ರಾಜಕಾರಣಿಯ ಕುರಿತ ವ್ಯಂಗ್ಯ, ವಿಡಂಬನೆ ಲಯ ತಪ್ಪಿದರೆ ನಿಂದನೆಯಾಗಿ ಬಿಡಬಹುದು. ಆದರೆ ‘ಚಾರ್ಲಿ ಹೆಬ್ದೋ’ ಪ್ರಜ್ಞಾಪೂರ್ವಕವಾಗಿಯೇ ಈ ದಾರಿಯನ್ನು ಹಿಡಿದಿತ್ತು. ಒಬ್ಬ ವ್ಯಕ್ತಿಯನ್ನು, ಒಬ್ಬ ಚಿಂತಕನನ್ನು ಅಥವಾ ಒಂದು ಧರ್ಮವನ್ನು ವಿಮರ್ಶೆಗೆ ಒಡ್ಡುವ ಪ್ರಬುದ್ಧ ದಾರಿಯನ್ನು ತೊರೆದು, ಅವರನ್ನು ಅಥವಾ ಅವುಗಳನ್ನು ಅಗ್ಗವಾಗಿ, ಕೀಳಾಗಿ ನಿಂದಿಸುವ ದಾರಿಯನ್ನು ಆರಿಸಿಕೊಂಡಿತು. ಗಣ್ಯರು, ಧಾರ್ಮಿಕ ಮುಖಂಡರು ಮೊದಲಾದವರ ಅಶ್ಲೀಲ ಚಿತ್ರ ಬರೆದು ಅಭಿವ್ಯಕ್ತಿ ಸ್ವಾತಂತ್ರವನ್ನು ಸಂಪೂರ್ಣವಾಗಿ ದುರುಪಯೋಗ ಪಡಿಸಿಕೊಂಡಿತು. ಚಾರ್ಲಿ ಹೆಬ್ದೋ ಮೇಲೆ ದುಷ್ಕರ್ಮಿಗಳು ಬರ್ಬರ ದಾಳಿ ನಡೆಸಿದಾಗ ಆ ದಾಳಿಯನ್ನು ವಿಶ್ವ ಖಂಡಿಸಿತಾದರೂ, ‘ಚಾರ್ಲಿ ಹೆಬ್ದೋ’ ಪತ್ರಿಕೆಯ ಅಭಿವ್ಯಕ್ತಿ ಸ್ವಾತಂತ್ರದ ದುರ್ಬಳಕೆಯನ್ನು ಸಮರ್ಥಿಸುವ ಸಾಹಸಕ್ಕೆ ಯಾರೂ ಇಳಿಯಲಿಲ್ಲ. ವಿಶ್ವದ ಶ್ರೇಷ್ಠ ವ್ಯಂಗ್ಯಚಿತ್ರಕಾರರು ಕೂಡ, ಚಾರ್ಲಿಹೆಬ್ದೋ ಪತ್ರಿಕೆಯ ಅನೈತಿಕ ಪತ್ರಿಕೋದ್ಯಮಕ್ಕೆ ಅಸಮ್ಮತಿಯನ್ನು ವ್ಯಕ್ತಪಡಿಸುತ್ತಲೇ, ಪತ್ರಿಕೆಯ ಮೇಲಿನ ದಾಳಿಯನ್ನು ಖಂಡಿಸಿದರು.

ಇದೀಗ, ಕೊರೋನ ಸಂಕಟದ ಕಾಲಕ್ಕೆ ಭಾರತದಲ್ಲಿ ‘ಮಾಧ್ಯಮಗಳು’ ಕೊರೋನ ವೈರಸ್‌ಗಿಂತ ಹೆಚ್ಚು ಭಯ ಭೀತಿಯನ್ನು ಸೃಷ್ಟಿಸುತ್ತಿವೆ. ಈ ಹಿಂದೆಲ್ಲ ಅಧ್ಯಯನ, ಪ್ರಬುದ್ಧತೆ, ವಸ್ತು ನಿಷ್ಠತೆ ಮಾಧ್ಯಮಗಳ ಹೆಗ್ಗಳಿಕೆಯಾಗಿದ್ದವು. ಆದರೆ ಅವಕ್ಕೆಲ್ಲ ಶ್ರಮ, ಪ್ರತಿಭೆಯ ಅಗತ್ಯವಿರುವುದರಿಂದ, ಭಾರತದ ಮಾಧ್ಯಮಗಳು ಅಡ್ಡ ದಾರಿ ಹಿಡಿದಿವೆ. ಅತ್ಯಂತ ಅಶ್ಲೀಲ, ಅಗ್ಗದ ಭಾಷೆಯ ಮೂಲಕ ‘ಗ್ರಾಹಕ’ರ ಗಮನವನ್ನು ಸೆಳೆಯಲು ಮುಂದಾಗಿವೆೆ. ತನ್ನ ಅಸ್ತಿತ್ವವನ್ನು ಉಳಿಸಲು ಯಾವ ಮಾರ್ಗವನ್ನು ಅನುಸರಿಸುವುದಕ್ಕೂ ಸಿದ್ಧ ಎನ್ನುವ ಮಟಕ್ಕೆ ಭಾರತದ ಬಹುತೇಕ ಮಾಧ್ಯಮಗಳು ತಲುಪಿವೆ. ರಾಜಕೀಯ ಪಕ್ಷಗಳನ್ನು ಓಲೈಸಲು ಕೆಲವು ಟಿವಿ ಮಾಧ್ಯಮಗಳ ಪೈಪೋಟಿ ಯಾವ ಮಟ್ಟದಲ್ಲಿದೆಯಂದರೆ, ರಾಜಕೀಯ ಪಕ್ಷದೊಳಗಿರುವ ಮೂರನೇ ದರ್ಜೆಯ ಪುಡಿ ರೌಡಿಗಳು ಇವರಿಗಿಂತ ವಾಸಿ. ರಾಜಕಾರಣಿಗಳೇ ಇವರ ‘ಜೀತ’ಕ್ಕೆ ನಾಚಬೇಕು. ಟಿಆರ್‌ಪಿಗಾಗಿ ಸ್ವತಃ ತನ್ನೆಲ್ಲ ಬಟ್ಟೆಗಳನ್ನು ಕಳಚಿ ನಗ್ನವಾಗಿ ನಿಲ್ಲಲು ಸಿದ್ಧ ಎನ್ನುವುದನ್ನು ಈಗಾಗಲೇ ಹಲವು ಚಾನೆಲ್‌ಗಳು ಸಾಬೀತು ಮಾಡಿವೆ. ಕೆಲವು ಟಿವಿ ಚಾನೆಲ್‌ಗಳು ‘ಪ್ರಮೋದ್ ಮುತಾಲಿಕ್’ನ ಭಾಷೆಯನ್ನು ಬಳಸಿಕೊಂಡು, ಸಮಾಜಕ್ಕೆ ಬೆಂಕಿ ಹಚ್ಚಿ, ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನದಲ್ಲಿವೆ. ಪರಿಣಾಮವಾಗಿ, ಇಂದು ದೇಶದಲ್ಲಿ ಕೊರೋನ ವೈರಸ್ ಆತಂಕ ಬದಿಗೆ ಸರಿದಿದೆ. ಈ ಟಿವಿ ಮಾಧ್ಯಮಗಳು ಹಂಚುತ್ತಿರುವ ವೈರಸ್‌ಗಳಿಗೆ ಮದ್ದು ಹುಡುಕುವ ಅನಿವಾರ್ಯತೆ ಒದಗಿದೆ. ವಿಪರ್ಯಾಸವೆಂದರೆ ಈ ಮಾಧ್ಯಮಗಳು ‘ಅಭಿವ್ಯಕ್ತಿ ಸ್ವಾತಂತ್ರ’ವನ್ನು ಸಂಪೂರ್ಣವಾಗಿ ದುರ್ಬಳಕೆಗೈದು ದೇಶದೊಳಗೆ ಅಶಾಂತಿಯನ್ನು ಬಿತ್ತುತ್ತಲೇ, ಮಗದೊಂದೆಡೆ ‘ಅಭಿವ್ಯಕ್ತಿ ಸ್ವಾತಂತ್ರದ ಮೇಲೆ ಹಲ್ಲೆಯಾಗುತ್ತಿದೆ’ ಎಂದು ಮೊಸಳೆ ಕಣ್ಣೀರು ಸುರಿಸುತ್ತಿವೆ.

ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಮೂವರು ಸಾಧುಗಳ ಬರ್ಬರ ಹತ್ಯೆ ನಡೆಯಿತು. ಮನುಷ್ಯನ ಘನತೆಯನ್ನೇ ತಗ್ಗಿಸುವ ಈ ಘೋರ ಕೃತ್ಯವನ್ನು ದೇಶ ಒಂದಾಗಿ ಖಂಡಿಸಿ ಆರೋಪಿಗಳಿಗೆ ಶಿಕ್ಷೆಯಾಗುವುದಕ್ಕೆ ಶ್ರಮಿಸಬೇಕಾಗಿತ್ತು. ದುರಂತವೆಂದರೆ, ಕೆಲವು ಹಿತಾಸಕ್ತಿಗಳಿಗೆ ಈ ಬರ್ಬರ ಹತ್ಯೆ ಮುಖ್ಯವಾಗಲಿಲ್ಲ. ಸಾಯಿಸಲ್ಪಟ್ಟವರು ಒಂದು ಧರ್ಮಕ್ಕೆ ಸೇರಿದ ಸಾಧುಗಳಾಗಿರುವುದರಿಂದ ಕೊಂದವರು ಇನ್ನೊಂದು ಧರ್ಮಕ್ಕೆ ಸೇರಿದವರಾಗಿದ್ದರೆ ಅದನ್ನು ಮುಂದಿಟ್ಟು ಇಡೀ ದೇಶಕ್ಕೆ ಬೆಂಕಿ ಹಚ್ಚಬಹುದು ಎಂಬ ಲೆಕ್ಕ ಹಾಕತೊಡಗಿತು. ಆದುದರಿಂದ, ಕೊಂದವರನ್ನು ಒಂದು ನಿರ್ದಿಷ್ಟ ಧರ್ಮಕ್ಕೆ ಕಟ್ಟಿ ಹಾಕಲು ಕಟ್ಟ ಕಡೆಯವರೆಗೂ ಶತ ಪ್ರಯತ್ನ ನಡೆಸಿತು. ಕೆಲವು ಮಾಧ್ಯಮಗಳು ಇದಕ್ಕೆ ಸಹಕರಿಸಲು ಯತ್ನಿಸಿದವು. ಆದರೆ ಆ ಶಕ್ತಿಗಳ ಎಲ್ಲ ಪ್ರಯತ್ನ ವಿಫಲವಾಯಿತು. ಬಂಧಿಸಲ್ಪಟ್ಟವರಲ್ಲಿ ಯಾವನೇ ಒಬ್ಬ ಮುಸ್ಲಿಮನಾಗಲಿ, ಕ್ರಿಶ್ಚಿಯನ್ನನಾಗಲಿ ಇಲ್ಲ ಎನ್ನುವುದು ಬೆಳಕಿಗೆ ಬಂತು. ಸ್ವತಃ ಮಹಾರಾಷ್ಟ್ರದ ಗೃಹ ಸಚಿವರೇ ಈ ಕುರಿತಂತೆ ಹೇಳಿಕೆಯನ್ನು ನೀಡಿದರು. ಇದಾದ ಬಳಿಕವೂ ಕೆಲವು ಮಾಧ್ಯಮಗಳು ಈ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುವುದರಲ್ಲಿ ನಿರತವಾದವು.

ಮುಖ್ಯವಾಗಿ ಅರ್ನಾಬ್ ಗೋಸ್ವಾಮಿಯ ‘ರಿಪಬ್ಲಿಕ್ ಟಿವಿ’ ಹತಾಶೆಯಿಂದ ಅರಚಾಡತೊಡಗಿತು. ಸಾಧುಗಳ ಹತ್ಯೆಯನ್ನು ಮುಂದಿಟ್ಟು ಕೋಮುಗಲಭೆ ಸೃಷ್ಟಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎನ್ನುವುದೇ ಇವರ ಹತಾಶೆಗೆ ಮುಖ್ಯ ಕಾರಣವಾಗಿತ್ತು. ಆದುದರಿಂದಲೇ ಅದು ಅನಗತ್ಯವಾಗಿ ಸೋನಿಯಾಗಾಂಧಿಯನ್ನು ಪ್ರಕರಣಕ್ಕೆ ಎಳೆದು ತರಲು ಯತ್ನಿಸಿತು. ‘‘ಒಬ್ಬ ಪಾದ್ರಿಯ ಹತ್ಯೆಯಾಗಿದ್ದರೆ ಸೋನಿಯಾಗಾಂಧಿ ಸುಮ್ಮನಿರುತ್ತಿದ್ದರೇ?’ ಎಂಬ ಪ್ರಶ್ನೆಯನ್ನು ಇಟ್ಟುಕೊಂಡು ಅರ್ನಾಬ್ ಗೋಸ್ವಾಮಿ ಉದ್ವಿಗ್ನಕಾರಿ ಹೇಳಿಕೆಯನ್ನು ಟಿವಿಯ ಮೂಲಕ ಹೊರ ಬಿಡತೊಡಗಿದರು. ಸಾಧುಗಳ ಹತ್ಯೆಯನ್ನು ಸೋನಿಯಾಗಾಂಧಿಯೂ ಸೇರಿದಂತೆ ಕಾಂಗ್ರೆಸ್‌ನ ಎಲ್ಲ ಮುಖಂಡರೂ ಖಂಡಿಸಿದ್ದಾರೆ ಮಾತ್ರವಲ್ಲ, ನಾಲ್ಕೇ ದಿನಗಳಲ್ಲಿ ಮಹಾರಾಷ್ಟ್ರ ಸರಕಾರ ಎಲ್ಲ ದುಷ್ಕರ್ಮಿಗಳನ್ನು ಬಂಧಿಸಿದೆ. ಹೀಗಿದ್ದರೂ, ರಿಪಬ್ಲಿಕ್ ಟಿವಿಯ ಅಸಹನೆಗೆ ಕಾರಣವೇನು? ಯಾವ ರೀತಿಯಲ್ಲಾದರೂ ಈ ಘಟನೆಯನ್ನು ಉದ್ವಿಗ್ನತೆ ವಾತಾವರಣ ಸೃಷ್ಟಿಸುವುದಕ್ಕೆ ಬಳಸಲೇಬೇಕು ಎನ್ನುವ ಉದ್ದೇಶವನ್ನು ಅವರು ಹೊಂದಿದ್ದರು ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಹೇಯ ಘಟನೆಗೆ ಯಾವ ರೀತಿಯಲ್ಲೂ ಸಂಬಂಧವಿಲ್ಲದ ಸೋನಿಯಾಗಾಂಧಿಯನ್ನು ಪ್ರಕರಣದಲ್ಲಿ ಎಳೆದು ತರುವುದು ‘ಅಭಿವ್ಯಕ್ತಿ ಸ್ವಾತಂತ್ರ’ ಖಂಡಿತವಾಗಿಯೂ ಅಲ್ಲ. ಇದು ಅಭಿವ್ಯಕ್ತಿ ಸ್ವಾತಂತ್ರದ ಸ್ಪಷ್ಟ ದುರ್ಬಳಕೆಯಾಗಿದೆ. ಇದರ ವಿರುದ್ಧ ಈಗಾಗಲೇ ಪತ್ರಕರ್ತನ ಮೇಲೆ ದೂರು ದಾಖಲಾಗಿದೆ. ಇದೇ ಸಂದರ್ಭದಲ್ಲಿ ತನ್ನ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಗೋಸ್ವಾಮಿಯೂ ದೂರು ಸಲ್ಲಿಸಿದ್ದಾರೆ. ಆದರೆ ಪತ್ರಿಕೋದ್ಯಮವನ್ನು ಗುರಾಣಿಯಾಗಿಟ್ಟುಕೊಂಡು ಗೋಸ್ವಾಮಿ ನಡೆಸಿರುವುದು ಕೂಡ ಒಂದು ಬಗೆಯ ಹಲ್ಲೆಯೇ ಆಗಿದೆ. ಈ ಎರಡೂ ಹಲ್ಲೆಗಳನ್ನು ನಾವು ಜೊತೆ ಜೊತೆಯಾಗಿ ಖಂಡಿಸಬೇಕಾಗಿದೆ.

ಇದೇ ಸಂದರ್ಭದಲ್ಲಿ ಹಿಂದೂ ಧರ್ಮಕ್ಕೆ ಸೇರಿದವರೇ ಆಗಿರುವ ದುಷ್ಕರ್ಮಿಗಳ ದೊಡ್ಡ ಗುಂಪು ಮೂವರು ಸಾಧುಗಳನ್ನು ಯಾಕೆ ಥಳಿಸಿ ಕೊಂದಿತು? ಎನ್ನುವುದರ ಕುರಿತಂತೆ ಆತ್ಮಾವಲೋಕನ ನಡೆಯಬೇಕಾಗಿದೆ. ‘ಮಕ್ಕಳ ಅಪಹರಣಕಾರರು’ ಎಂಬ ಶಂಕೆಯಲ್ಲಿ ಅವರನ್ನು ಕೊಂದರು ಎಂದು ಪೊಲೀಸರು ಹೇಳುತ್ತಾರೆ. ಆ ಮೂವರನ್ನು ಥಳಿಸುತ್ತಿರುವವರಲ್ಲಿ ಕ್ರೌರ್ಯಗಳಿತ್ತೇ ಹೊರತು, ಯಾವುದೇ ಆತಂಕವಿರಲಿಲ್ಲ. ದುಷ್ಕರ್ಮಿಗಳ ಗುಂಪು ಥಳಿಸುವುದನ್ನು ಒಳಗೊಳಗೆ ಆಸ್ವಾದಿಸುತ್ತಿತ್ತು. ಅವರಿಗದು ಮನರಂಜನೆಯ ಭಾಗವಷ್ಟೇ ಆಗಿತ್ತು. ಇಂತಹ ಒಂದು ಮನಸ್ಥಿತಿಯನ್ನು ಸೃಷ್ಟಿಸಿರುವುದು ನಮ್ಮದೇ ವ್ಯವಸ್ಥೆ. ಈ ಹಿಂದೆ ಇಂತಹ ಲಿಂಚಿಂಗ್‌ಗಳು ನಡೆದಾಗ ಅವನ್ನೆಲ್ಲ ಸಮಾಜ ವೌನವಾಗಿ ಸಮರ್ಥಿಸಿಕೊಂಡಿತ್ತು. ಸತ್ತವನು ಮುಸ್ಲಿಮನಾಗಿದ್ದರೆ ಆ ಕೊಲೆಯನ್ನು ರಾಜಕೀಯ ನಾಯಕರೇ ಬೆಂಬಲಿಸುತ್ತಿದ್ದರು. ಅಂತಹ ಹಲವು ಕೊಲೆಗಳು ಈ ದೇಶದಲ್ಲಿ ಈಗಾಗಲೇ ನಡೆದಿವೆ. ಒಮ್ಮೆ ನರಮಾಂಸದ ರುಚಿ ಹಿಡಿದ ಪ್ರಾಣಿಗಳು, ಬಳಿಕ ತನ್ನವರನ್ನೇ ಭೇಟೆಯಾಡಲು ಆರಂಭಿಸುತ್ತವೆ. ಮಹಾರಾಷ್ಟ್ರದಲ್ಲಿ ನಡೆದಿರುವುದು ಅದೇ ಆಗಿದೆ. ಟಿವಿ ಮಾಧ್ಯಮಗಳಿಗೆ ದುಷ್ಕರ್ಮಿಗಳಿಗೆ ಶಿಕ್ಷೆಯಾಗುವುದು ಬೇಡ. ಬದಲಿಗೆ, ಆ ಹೆಸರಿನಲ್ಲಿ ಸಮಾಜದ ಶಾಂತಿ ಕೆಡಬೇಕು. ಸಾಧುಗಳ ಸಾವನ್ನು ಈ ಮೂಲಕ ಪತ್ರಕರ್ತರೂ ಸಂಭ್ರಮಿಸಿದ್ದಾರೆ. ದೇಶದ ಲಿಂಚಿಂಗ್‌ನ ಪೋಷಕರಲ್ಲಿ ಇವರೂ ಸೇರಿದ್ದಾರೆ. ಸಾಧುಗಳ ಹತ್ಯೆಯ ರಕ್ತ ರಿಪಬ್ಲಿಕ್ ಟಿವಿಯ ಮುಖ್ಯಸ್ಥ ಗೋಸ್ವಾಮಿಯ ಕೈಗಳನ್ನೂ ಅಂಟಿಕೊಂಡಿದೆೆ. ‘ಅಭಿವ್ಯಕ್ತಿ ಸ್ವಾತಂತ್ರ’ ಎಂಬ ಬಟ್ಟೆಯಿಂದ ಆ ರಕ್ತವನ್ನು ಒರೆಸುವ ಪ್ರಯತ್ನದಲ್ಲಿದ್ದಾರೆ ಅವರು. ಇದರಿಂದ ಬಟ್ಟೆ ರಕ್ತಸಿಕ್ತವಾಗಬಹುದೇ ಹೊರತು, ಅರ್ನಾಬ್ ಗೋಸ್ವಾಮಿಯ ಕೈ ಸ್ವಚ್ಛಗೊಳ್ಳಲಾರದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)