varthabharthi

ನಿಮ್ಮ ಅಂಕಣ

ಕೋವಿಡ್-19 ಮತ್ತು ತಪ್ಪು ಗ್ರಹಿಕೆಗಳು

ವಾರ್ತಾ ಭಾರತಿ : 24 Apr, 2020
ಸದಾನಂದ ಆರ್.

ಕೋವಿಡ್-19 ಅತ್ಯಂತ ಚಾಲಾಕಿ ವೈರಾಣು. ಅದು ಜನರನ್ನು ಕೊಲ್ಲುವುದಕ್ಕಿಂತ ತಾನು ಜೀವಂತವಾಗಿರುವುದನ್ನು ಮುಖ್ಯ ಗುರಿಯಾಗಿಸಿಕೊಂಡಿದೆ. ಮುಂದೆ ಯಾವ ನಿರ್ಧಾರವನ್ನು ಅದು ತೆಗೆದುಕೊಳ್ಳುತ್ತದೆ ಎನ್ನುವುದನ್ನು ತಜ್ಞರೇ ಗುರುತಿಸಿ ಹೇಳಬೇಕಿದೆ. ಸ್ವಲ್ಪ ಬೇಗ ಹೇಳುವ ದಾರಿ ಅವರಿಗೆ ಸಿಕ್ಕಿದರೆ ಮತ್ತು ತಜ್ಞರನ್ನು ಸಂಶಯಿಸದೆ ಅವರ ಮಾತುಗಳನ್ನು ಆಲಿಸುವ ಜನ ನಾಯಕರ ಸಂಖ್ಯೆ ಹೆಚ್ಚಾದರೆ, ಮಾನವರಿಗೆ ಭೂಮಿಯ ಮೇಲೆ ಒಂದಷ್ಟು ಕಾಲ ಉಳಿಯಲು ಅವಕಾಶ ಸಿಗಬಹುದು.


ಕೋವಿಡ್-19 ವೈರಾಣು ತಾನು ಬಹಳ ಬುದ್ಧಿವಂತ ವೈರಾಣು ಎನ್ನುವುದು ಕಳೆದ 6 ತಿಂಗಳಲ್ಲಿ ಸಾಬೀತುಪಡಿಸಿಕೊಂಡಿದೆ. ಅದು ಅತ್ಯಂತ ಬುದ್ಧಿವಂತ ತಾನೆಂದು ಬೀಗುತ್ತಿದ್ದ ಮನುಷ್ಯನಿಗೆ ಬೆದರಿಸಿದೆ. ಪ್ರಪಂಚದ ಅಣ್ಣ ತಾನೆಂದು ಹೇಳುತ್ತಾ, ಎಲ್ಲಿಯೇ ಅನ್ಯಾಯ (ತನ್ನ ದೃಷ್ಟಿಯಲ್ಲಿ ಮಾತ್ರ) ನಡೆದರೂ ನಾನು ಸಹಿಸುವುದಿಲ್ಲ ಎನ್ನುತ್ತಿದ್ದ ಟ್ರಂಪ್‌ರವರ ಅಮೆರಿಕವನ್ನು ಹೈರಾಣಾಗಿಸಿದೆ. ಇದೊಂದು ಫ್ಲೂ ಅಷ್ಟೆ. ಒಂದಷ್ಟು ಜನರಿಗೆ ಸೋಂಕು ತಗಲಿದ ಮೇಲೆ, ಸಮುದಾಯದ ಹಂತದಲ್ಲಿ ರೋಗನಿರೋಧಕ ಶಕ್ತಿ (ಹರ್ಡ್ ಇಮ್ಯುನಿಟಿ) ಮೂಡುತ್ತದೆ. ಆನಂತರ ವೈರಾಣು ಜಾಗ ಖಾಲಿ ಮಾಡಲೇಬೇಕಾಗುತ್ತದೆ ಎಂದು ಘೋಷಿಸಿದ್ದ ಇಂಗ್ಲೆಂಡ್‌ನ ಪ್ರಧಾನಮಂತ್ರಿ ಬೊರಿಸ್ ಜಾನ್ಸನ್ ತೀವ್ರ ನಿಗಾ ಘಟಕಕ್ಕೆ (ಐಸಿಯು) ಹೋಗಿ ಬರುವಂತೆ ಇದು ಮಾಡಿತು. ಜಾನ್ಸನ್ ತಮ್ಮ ಜೀವವನ್ನು ಉಳಿಸಿದ ಎಲ್ಲಾ ವೃತ್ತಿ ಪರರಿಗೆ ಧನ್ಯವಾದಗಳನ್ನು ಹೇಳಿದರು.

ಜಾನ್ಸನ್ ಅವರು ವೃತ್ತಿ ಪರರಿಗೆ ಧನ್ಯವಾದ ಹೇಳಿದ್ದು ಬಹಳ ವಿಶೇಷವಾದುದು. ಏಕೆಂದರೆ ಐರೋಪ್ಯ ಒಕ್ಕೂಟದಿಂದ ಹೊರ ಬಂದರೆ ಇಂಗ್ಲೆಂಡ್ ದೇಶಕ್ಕೆ ಅಪಾಯಗಳು ಹೆಚ್ಚಿದೆ. ಒಕ್ಕೂಟದಲ್ಲಿ ಇರುವುದರಿಂದ ಕೆಲವು ಸಮಸ್ಯೆಗಳಿವೆ. ಆದರೆ ಅದರಿಂದ ಹೊರ ಬಂದರೆ ಆಗುವ ಅಪಾಯಗಳಿಗಿಂತ, ಒಳಗಿರುವುದರಿಂದ ಸಂಭವಿಸುವ ಅಪಾಯಗಳು ಕಡಿಮೆ ಎಂದು ಅನೇಕ ಅರ್ಥಶಾಸ್ತ್ರಜ್ಞರು ಹೇಳಿದಾಗ, ಜಾನ್ಸನ್ ಅವರ ತಂಡ ‘ಇಂಗ್ಲೆಂಡ್ ದೇಶಕ್ಕೆ ಇಂತಹ ಎಕ್ಸ್‌ಪರ್ಟ್‌ಗಳ ಸಹವಾಸ ಸಾಕಾಗಿದೆ’ ಎಂದಿದ್ದರು. ಬ್ರೆಕ್ಸಿಟ್ ಎಂದು ಕರೆಯಲ್ಪಟ್ಟ ಈ ಪ್ರಕ್ರಿಯೆ ಎರಡು ಮಧ್ಯಂತರ ಚುನಾವಣೆಗಳಿಗೆ ಕಾರಣವಾಯಿತು. ಐರೋಪ್ಯ ಒಕ್ಕೂಟದಿಂದ ಹೊರಬಂದ ಇಂಗ್ಲೆಂಡಿನ ನಡೆಯ ಪರಿಣಾಮ ಏನೆಂದು ಭವಿಷ್ಯದಲ್ಲಿ ಗೊತ್ತಾಗಬೇಕಿದೆ. ಆದರೆ, ಸದ್ಯದ ಸ್ಥಿತಿಯಲ್ಲಿ ‘ಸೋ ಕಾಲ್ಡ್’ ಎಕ್ಸ್‌ಪರ್ಟ್‌ಗಳು ನೀಡಿದ್ದ ಅಭಿಪ್ರಾಯಗಳಲ್ಲಿ ಹೆಚ್ಚು ಅರ್ಥವಿತ್ತು ಎಂಬುದಂತು ಸತ್ಯ. ಸೋ ಕಾಲ್ಡ್ ಎಕ್ಸ್‌ಪರ್ಟ್‌ಗಳು ಎನ್ನುವುದು ವೃತ್ತಿಪರರನ್ನು ಮತ್ತು ತಜ್ಞರನ್ನು ಗೇಲಿ ಮಾಡಲು ಬಳಸುವ ಮಾತಾಗಿದೆ. ಅನೇಕ ಬಾರಿ ನಮ್ಮ ದೇಶದಲ್ಲಿ ‘ಬುದ್ಧಿಜೀವಿಗಳು’ ಎನ್ನುವುದು ಇದಕ್ಕೆ ಹತ್ತಿರದ ಪದವಾಗುತ್ತದೆ. ಮತ್ತದೇ ಇಂಗ್ಲೆಂಡಿನ ಉದಾಹರಣೆಯನ್ನು ನೋಡಿದರೆ, ಪ್ರಧಾನಿ ಬೊರಿಸ್ ಜಾನ್ಸನ್ ಆರಂಭದಲ್ಲಿ ‘ಸೋ ಕಾಲ್ಡ್ ಎಕ್ಸ್‌ಪರ್ಟ್’ ಗಳನ್ನು ಅವಹೇಳನ ಮಾಡಿದರು, ಇಟಲಿಯಲ್ಲಿ ಕೋವಿಡ್-19ರ ಆರ್ಭಟ ನೋಡಿ ಆತಂಕಿತರಾದರು.

ಆಗ ಅವರ ನೆರವಿಗೆ ಬಂದದ್ದು ವೃತ್ತಿಪರರೆ. ಇಂಗ್ಲೆಂಡ್‌ನಲ್ಲಿ ‘ಎಬೋಲಾ’ ವೈರಾಣುವನ್ನು 1976ರಲ್ಲಿ ಮೊದಲ ಬಾರಿಗೆ ಗುರುತಿಸಿದ ಪೀಟರ್ ಪಾಯಟ್ ಎನ್ನುವ ವೈದ್ಯ ಸಂಶೋಧಕರಿದ್ದಾರೆ. ಅವರ ನಾಯಕತ್ವದಲ್ಲಿ ವಿಶ್ವದ ಅತ್ಯುತ್ತಮವಾದ ವೈರಾಣು ಸಂಶೋಧನ ತಜ್ಞರು ಅಲ್ಲಿದ್ದಾರೆ. ಅವರೆಲ್ಲಾ ಸೇರಿ ಗಣಿತದ ಸಹಾಯವನ್ನು ತೆಗೆದುಕೊಂಡು ಇಂಗ್ಲೆಂಡ್‌ನಲ್ಲಿ ಕೋವಿಡ್-19ರ ಪ್ರಭಾವ ಎಷ್ಟಿರಬಹುದೆಂದು ಲೆಕ್ಕಾಚಾರ ಹಾಕಿ, ಅದರ ವರದಿಯನ್ನು ಇಂಗ್ಲೆಂಡ್ ಸರಕಾರಕ್ಕೆ ನೀಡಿದರು. ಈ ವರದಿಯ ಆಧಾರದ ಮೇಲೆ, ವೃತ್ತಿಪರ ರಾಜಕಾರಣಿಯಾದ ಜಾನ್ಸನ್ ತಮ್ಮ ವೃತ್ತಿ ಧರ್ಮಕ್ಕೆ ಅನುಗುಣವಾಗಿ ಚಾಣಾಕ್ಷ ನಿರ್ಧಾರಕ್ಕೆ ಬಂದರು. ಹೀಗೆ ತಜ್ಞರು ನೀಡಿದ ವರದಿಯನ್ನು ಆಧರಿಸಿ, ಮತ್ತೋರ್ವ ವೃತ್ತಿಪರ (ತಜ್ಞ) ವ್ಯಕ್ತಿಯಾಗಿದ್ದ ಜಾನ್ಸನ್ ಕೋವಿಡ್-19ಅನ್ನು ನಿಭಾಯಿಸಲು ಹಣದ ವ್ಯವಸ್ಥೆಯನ್ನು ಮಾಡಿಕೊಂಡರು. ಅಲ್ಲಿನ ಹಣಕಾಸು ಸಚಿವರು ಒಂದಷ್ಟು ಬಿಲಿಯನ್ ಪೌಂಡ್‌ಗಳನ್ನು ತೆಗೆದಿಟ್ಟರು. ಇದರಲ್ಲಿ ಹೆಚ್ಚು ಪಾಲನ್ನು ಆಸ್ಪತ್ರೆಗಳ ನಿರ್ವಹಣೆಗೆ ಮೀಸಲಿಟ್ಟರು. ಇದರ ಪರಿಣಾಮವಾಗಿಯೇ ಪ್ರಧಾನಿ ಜಾನ್ಸನ್ ಕೋವಿಡ್-19ರಿಂದ ಪೀಡಿತರಾಗಿ ಐಸಿಯು ಸೇರಿ ಹೊರಬರಲು ಸಾಧ್ಯವಾಯಿತು. ಏಕೆಂದರೆ ಮಹಾ ಸಾಂಕ್ರಾಮಿಕವನ್ನು ನಿಭಾಯಿಸಲು ಅಗತ್ಯವಾಗಿದ್ದ ಎಲ್ಲಾ ತಯಾರಿಗಳು ಆಗಿದ್ದವು. ಅಮೆರಿಕ ದೇಶದಲ್ಲಿ ‘ನನಗೆ ಅನ್ನಿಸುತ್ತದೆ, ಮಲೇರಿಯ ಔಷಧಿಯನ್ನು ಬಳಸಿಕೊಂಡು ಕೋವಿಡ್-19ಕ್ಕೆ ಚಿಕಿತ್ಸೆ ನೀಡಬಹುದು’ ಎಂದು ಹೇಳುವ ಅಧ್ಯಕ್ಷ ಟ್ರಂಪ್ ಅವರಿದ್ದಾರೆ.

ಇದನ್ನು ಹೇಳಿದ ಉಸಿರಲ್ಲೇ ‘ನಾನು ವೈದ್ಯನಲ್ಲ’ ಎಂದು ಹೇಳುವ ಅವರಿಗೆ ತಜ್ಞರನ್ನು ಕಂಡರೇ ಆಗುವುದಿಲ್ಲ. ‘‘ಅವರು ಕಳ್ಳರು. ಅವರಿಗೇನು ಗೊತ್ತು. ನನಗೆ ಗೊತ್ತು, ನಾನು ಹೇಳುತ್ತೇನೆ ಕೇಳಿ. ಗ್ಲೋಬಲ್ ವಾರ್ಮಿಂಗ್ ಎನ್ನುವುದೇ ಇಲ್ಲ. ಇದೆಲ್ಲಾ ಮೋಸ. ಒಂದು ವೇಳೆ ಧ್ರುವಗಳ ಹಿಮ ಕರಗುವುದಾದರೆ ಒಳಿತೇ ಆಗುತ್ತದೆ. ಇನ್ನೊಂದಿಷ್ಟು ಭೂ ಪ್ರದೇಶ ದೊರೆಯುತ್ತದೆ. ಅಲ್ಲಿಗೆ ಹೋಗಿ ತೈಲ ಪಡೆಯಬಹುದು, ಗಣಿಗಾರಿಕೆ ಮಾಡಬಹುದು. ರಿಯಲ್ ಎಸ್ಟೇಟ್ ಬಿಲ್ಡ್ ಮಾಡಬಹುದು’’ ಎಂದೆಲ್ಲಾ ನಂಬುವ ಮತ್ತು ಸಾರ್ವಜನಿಕವಾಗಿ ಹೇಳುವ ವ್ಯಕಿ ಇವರು. ಇವರ ದೇಶದಲ್ಲಿ ಮತ್ತೊಂದು ವಿಶೇಷ ಜನರ ಗುಂಪಿದೆ(ಇವರನ್ನು ಕೋವಿಡ್-19ರ ಹಿನ್ನೆಲೆಯಲ್ಲಿ ಮಾತ್ರ ಹೀಗೆ ಗುರುತಿಸಿದ್ದೇನೆ). ಇವರು ಅಲ್ಲಿನ ಆಫ್ರೋ ಅಮೆರಿಕನ್ ಜನ. ಕಪ್ಪು ಜನ ಅಥವಾ ಕಲರ್ಡ್‌ ಅಮೆರಿಕನ್ನರು ಎಂದು ಕರೆಯಲ್ಪಡುವ ಇವರು ಕೋವಿಡ್-19 ಸೋಂಕಿನ ಪ್ರಸರಣಕ್ಕೆ ಹೆಚ್ಚಿನಂಶ ನೇರವಾಗಿ ಕಾರಣವಾಗಿದ್ದಾರೆ ಎನ್ನುವುದನ್ನು ತಜ್ಞರುಗುರುತಿಸ ತೊಡಗಿದ್ದಾರೆ. ತಮ್ಮ ಮೈ ಬಣ್ಣ ಕಪ್ಪಾಗಿರುವುದು ನಮ್ಮಲ್ಲಿ ಮೆಲನಿನ್ ಅಂಶ ಹೆಚ್ಚಿರುವುದರಿಂದ ಮತ್ತು ಈ ಮೆಲನಿನ್ ನಮಗೆ ಕೋವಿಡ್-19ರಿಂದ ರಕ್ಷಣೆ ನೀಡುತ್ತದೆ ಎಂಬುದು ಈ ಕಪ್ಪು ಸಮುದಾಯದ ಬಹುತೇಕರ ನಂಬಿಕೆಯಾಗಿತ್ತು. ಇದರ ಜೊತೆಗೆ ನಾವು ಹಗಲು-ರಾತ್ರಿ ಬಿಸಿಲು ಮಳೆ ಎನ್ನದೆ ದುಡಿಯುವ ಜನ, ನಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿದೆ ಎಂದುಕೊಂಡಿದ್ದರು. ಈಗ ಅಮೆರಿಕದಲ್ಲಿ ಕೋವಿಡ್-19ಕ್ಕೆ ಬಲಿಯಾಗುತ್ತಿ ರುವ ಜನರಲ್ಲಿ ಶೇ. 70ರಷ್ಟು ಜನರು ಹೀಗೆ ನಂಬಿಕೊಂಡಿದ್ದ ಕಪ್ಪು ಜನರು! ಅಮೆರಿಕದ ಕಪ್ಪು ಜನರ ಕೋವಿಡ್-19ರ ಸಮಸ್ಯೆಗೆ ಇನ್ನೊಂದು ಆಯಾಮವಿದೆ.

ಅಮೆರಿಕದ ಕಪ್ಪು ಸಮುದಾಯದವರಲ್ಲಿ ಶೇ.90ರಷ್ಟು ಮಂದಿ ದೈಹಿಕ ಭಾಗವಹಿಸುವಿಕೆಯನ್ನು ಬೇಡುವ ವೃತ್ತಿಗಳಲ್ಲಿ ಇರುವವರು. ಅಂದರೆ ಚಾಲಕರು, ಸ್ವಚ್ಛತಾ ಕಾರ್ಯಗಳು, ಕೊರಿಯರ್ ಸೇವೆಗಳು, ಕಟ್ಟಡ ಕೆಲಸಗಾರರು ಇತ್ಯಾದಿಗಳು. ಅನಿವಾರ್ಯವಾಗಿ ಇವರು ಪ್ರತಿದಿನ ಚಲಿಸಲೇಬೇಕಾದ ಅಗತ್ಯವಿರುವವರು. ಈ ಕಾರಣಕ್ಕಾಗಿಯೇ ಇವರು ‘ಸಾಮಾಜಿಕ ಅಂತರವನ್ನು’ ಪಾಲಿಸಲು ಆಗದವರು. ಜೊತೆಗೆ ನಮಗೇನು ಆಗುವುದಿಲ್ಲ ಎಂದು ಮೂಢನಂಬಿಕೆಯೂ (ಹುಂಬತನ?) ಸೇರಿಕೊಂಡು ಪರಿಸ್ಥಿತಿಯು ಭೀಕರವಾಗಿದೆ. ಹಾಗೆಯೇ, ಅಮೆರಿಕದ ಪೊಲೀಸರಿಗೆ ಮುಸುಕು ಧರಿಸುವ ಕಪ್ಪು ಜನರ ಬಗ್ಗೆ ಮೊದಲಿಂದಲೂ ಗುಮಾನಿ. ಮುಸುಕುಧಾರಿ ಕಪ್ಪು ಜನರು ಯಾವುದೋ ಅಪರಾಧ ಚಟುವಟಿಕೆಗೆ ಸಿದ್ಧರಾಗಿದ್ದಾರೆ ಎಂದು ಮೊದಲು ತಮ್ಮ ಗನ್ ಹಿಡಿದು ನಿಲ್ಲುತ್ತಾರೆ. ಸ್ವಲ್ಪ ಸಂಶಯ ಹೆಚ್ಚಾದರೂ ಸಾಕು, ಗುಂಡು ಹಾರಿಸಿಯೇ ಬಿಡುತ್ತಾರೆ! ಕೋವಿಡ್-19ರಿಂದ ರಕ್ಷಿಸಿಕೊಳ್ಳಲು ಮುಸುಕು (ಮಾಸ್ಕ್) ಧರಿಸಿದ ಕಪ್ಪು ಜನರನ್ನು ಪೊಲೀಸರು ನಿಲ್ಲಿಸಿ, ಅವರ ಮಾಸ್ಕ್ ಕಳಚಿ ಪರೀಕ್ಷೆ ಮಾಡಿದ ಮತ್ತು ಮಾಡುತ್ತಿರುವ ವರದಿಗಳು ಈ ಸಮುದಾಯಕ್ಕೆ ಭಯ ಮೂಡಿಸಿದೆ. ಈ ಕಾರಣದಿಂದ ಕೋವಿಡ್-19ರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹೋಗಿ, ಪೊಲೀಸರ ಗುಂಡಿಗೆ ಬಲಿಯಾಗುವ ಅಪಾಯವಿರುವುದರಿಂದ ಮಾಸ್ಕ್ ಧರಿಸದಿರುವ ಕಪ್ಪು ಜನರೇ ಹೆಚ್ಚಿದ್ದಾರೆ. ಇವರು ದಿನನಿತ್ಯ ತಮ್ಮ ವೃತ್ತಿಯ ಕಾರಣದಿಂದ ನೂರಾರು ಜನರನ್ನು ದೈಹಿಕವಾಗಿ ಭೇಟಿಯಾಗಲೇಬೇಕಾದ ಜನ. ಹಾಗಾಗಿ ಕೋವಿಡ್-19 ಅನ್ನು ನಿರಂತರವಾಗಿ ಹರಡುತ್ತಿದ್ದಾರೆ ಮತ್ತು ಪಡೆಯುತ್ತಿದ್ದಾರೆ!

ಕೊನೆಯದಾಗಿ, ನಮ್ಮ ದೇಶದ ಪರಿಸ್ಥಿತಿಯೆಡೆಗೆ ನೋಡೋಣ. ಶುಂಠಿ, ಈರುಳ್ಳಿ, ಅರಿಶಿನ, ಬೆಳ್ಳುಳ್ಳಿ ತಿನ್ನುವವರಿಗೆ ಇದು ಬರುವುದೇ ಇಲ್ಲ. ನಮ್ಮ ಊಟವು ಉಳಿದವರಿಗಿಂತ ಭಿನ್ನವಾಗಿರುವ ಕಾರಣ ಬರುವುದಿಲ್ಲ ಎನ್ನುವ ಮಾತುಗಳು ಕೇಳಿಬಂದವು. ಆದರೆ ತಕ್ಷಣಕ್ಕೆ ತಜ್ಞರು ಗಮನಿಸಿರುವ ಒಂದು ಸತ್ಯವಿದೆ. ನಮ್ಮ ಜನಸಂಖ್ಯೆಯ ಶೇ.80ರಷ್ಟು ಜನರು ಅರವತ್ತು ವರ್ಷದ ಒಳಗೆ ಇರುವಂತಹವರು. ಅದರಲ್ಲೂ ಶೇ.65ರಷ್ಟು ಜನರು 35 ವರ್ಷದೊಳಗೆ ಇರುವಂತಹವರು. ಹೀಗಾಗಿ, ನಮ್ಮ ದೇಶದ ಮೇಲೆ ಕೋವಿಡ್-19ರ ಭೀಕರ ಪರಿಣಾಮ ಕಡಿಮೆಯಿರಬಹುದು. ಏಕೆಂದರೆ, ಅರವತ್ತು ವರ್ಷದೊಳಗಿನವರಿಗೆ ಕೋವಿಡ್-19 ಮಾರಣಾಂತಿಕವಲ್ಲ. ತಕ್ಷಣದ ಪರಿಸ್ಥಿತಿಯಲ್ಲಿ ನಮಗೆ ಅನುಕೂಲವಾಗಿರುವುದು ದೇಶದ ಸರಾಸರಿ ವಯಸ್ಸು. ಕೋವಿಡ್-19 ಅತ್ಯಂತ ಚಾಲಾಕಿ ವೈರಾಣು. ಅದು ಜನರನ್ನು ಕೊಲ್ಲುವುದಕ್ಕಿಂತ ತಾನು ಜೀವಂತವಾಗಿರುವುದನ್ನು ಮುಖ್ಯ ಗುರಿಯಾಗಿಸಿಕೊಂಡಿದೆ. ಮುಂದೆ ಯಾವ ನಿರ್ಧಾರವನ್ನು ಅದು ತೆಗೆದುಕೊಳ್ಳುತ್ತದೆ ಎನ್ನುವುದನ್ನು ತಜ್ಞರೇ ಗುರುತಿಸಿ ಹೇಳಬೇಕಿದೆ. ಸ್ವಲ್ಪ ಬೇಗ ಹೇಳುವ ದಾರಿ ಅವರಿಗೆ ಸಿಕ್ಕಿದರೆ ಮತ್ತು ತಜ್ಞರನ್ನು ಸಂಶಯಿಸದೆ ಅವರ ಮಾತುಗಳನ್ನು ಆಲಿಸುವ ಜನ ನಾಯಕರ ಸಂಖ್ಯೆ ಹೆಚ್ಚಾದರೆ, ಮಾನವರಿಗೆ ಭೂಮಿಯ ಮೇಲೆ ಒಂದಷ್ಟು ಕಾಲ ಉಳಿಯಲು ಅವಕಾಶ ಸಿಗಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)