varthabharthi

ಗಲ್ಫ್ ಸುದ್ದಿ

ಕೊರೋನ ಹೆಸರಲ್ಲಿ 'ಇಸ್ಲಾಮೋಫೋಬಿಯಾ': ಗಲ್ಫ್ ರಾಷ್ಟ್ರಗಳ ನಾಯಕರಿಗೆ ಕರೆ ಮಾಡಿದ ಪ್ರಧಾನಿ ಮೋದಿ, ಜೈಶಂಕರ್

ವಾರ್ತಾ ಭಾರತಿ : 25 Apr, 2020

ಹೊಸದಿಲ್ಲಿ: ಭಾರತದಲ್ಲಿ ಕೊರೋನ ವೈರಸ್ ಹೆಸರಿನಲ್ಲಿ ಇಸ್ಲಾಮೋಫೋಬಿಯಾ ಹರಡಲಾಗುತ್ತಿದೆ ಎನ್ನುವ ಆರೋಪಗಳ ನಡುವೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅರಬ್ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳ ಜೊತೆ ಮಾತನಾಡಿದ್ದಾರೆ ಎಂದು ವರದಿಯಾಗಿದೆ.

ದ್ವೇಷ ಹರಡುವ  ಬೆಳವಣಿಗೆಗಳು ಗಲ್ಭ್ ರಾಷ್ಟ್ರಗಳಲ್ಲಿರುವ ಭಾರತೀಯರ ಮೇಲೆ ಪರಿಣಾಮ ಬೀರುವ ಜತೆಗೆ ಎರಡೂ ಸರಕಾರಗಳ ನಡುವಣ ಸಂಬಂಧದ ಮೇಲೂ ಪರಿಣಾಮ ಬೀಳಬಹುದೆಂಬ ಭೀತಿಯ ನಡುವೆಯೇ ಜೈಶಂಕರ್ ಅರಬ್ ದೇಶಗಳ ವಿದೇಶಾಂಗ ವ್ಯವಹಾರಗಳ ಸಚಿವರ ಜತೆ ಮಾತನಾಡಿ ಭಾರತ ಅವರ ದೇಶಗಳ ಸಹಾಯಕ್ಕೆ ಸದಾ ಸಿದ್ಧ ಎಂಬ ಭರವಸೆಯನ್ನು ನೀಡಿದ್ದಾರೆ ಎಂದು ವರದಿಯಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿ ಪ್ರಧಾನಿ ಮೋದಿಯವರು ಕೂಡ ಗಲ್ಫ್ ರಾಷ್ಟ್ರಗಳ ನಾಯಕರ ಜೊತೆ ಮಾತನಾಡಿದ್ದಾರೆ ಎನ್ನಲಾಗಿದೆ.

ಅತ್ತ  ಅರಬ್ ದೇಶಗಳಲ್ಲಿರುವ ಭಾರತೀಯ ರಾಯಭಾರಿಗಳು ಕೂಡ ನಕಲಿ ಟ್ವೀಟ್ ಗಳ ಹಾವಳಿಯಿಂದ ವಿವಾದಗಳೇರ್ಪಡದಂತೆ ಶ್ರಮಿಸುತ್ತಿದ್ದಾರೆ.

ಗಲ್ಫ್, ಅರಬ್ ದೇಶಗಳಲ್ಲಿ ಸದ್ಯ ಅತಂತ್ರರಾಗಿರುವ ಭಾರತೀಯ ನಾಗರಿಕರನ್ನು ಲಾಕ್ ಡೌನ್ ಮುಗಿಯುವವರೆಗೆ ದೇಶಕ್ಕೆ ವಾಪಸ್ ಕರೆಸಿಕೊಳ್ಳಲು ಸರಕಾರ ನಿರಾಕರಿಸಿರುವುದರಿಂದ ಪವಿತ್ರ ರಮಝಾನ್ ತಿಂಗಳಲ್ಲಿ ಅಲ್ಲಿ ಆಹಾರ ಸಾಮಗ್ರಿ ಕೊರತೆ ಎದುರಾಗದಂತೆ  ನೋಡಿಕೊಳ್ಳಲು ಸಾಕಷ್ಟು ಪ್ರಮಾಣದಲ್ಲಿ ಪೂರೈಕೆ ಮಾಡುವ ಭರವಸೆಯನ್ನೂ ಜೈಶಂಕರ್ ಗಲ್ಫ್ ರಾಷ್ಟ್ರಗಳಿಗೆ ನೀಡಿದ್ದಾರೆ. ಜತೆಗೆ ಕೊರೋನ ರೋಗಿಗಳಿಗೆ ಅಗತ್ಯವಾಗಿರುವ ಹೈಡ್ರೋಕ್ಸಿಕ್ಲೊರೊಕ್ವಿನ್ ಹಾಗು ಪ್ಯಾರಸಿಟಮಲ್ ಔಷಧಿಗಳನ್ನು ಸೌದಿ ಅರೇಬಿಯಾ, ಬಹ್ರೈನ್, ಒಮಾನ್, ಕತರ್, ಈಜಿಪ್ಟ್ ಮತ್ತು ಫೆಲೆಸ್ತೀನ್ ದೇಶಗಳಿಗೆ ಪೂರೈಸುವ ಭರವಸೆಯನ್ನೂ ನೀಡಿದ್ದಾರೆ ಎನ್ನಲಾಗಿದೆ.

ಅತ್ತ ಒಮಾನ್ ದೇಶದಲ್ಲಿನ ಭಾರತೀಯ ರಾಯಭಾರಿ ಮುನು ಮಹವರ್ ಹಾಗೂ ಯುಎಇಯ ಭಾರತೀಯ ರಾಯಭಾರಿ ಪವನ್ ಕಪೂರ್  ಅವರೂ ಅಲ್ಲಿನ ಭಾರತೀಯರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ನಕಲಿ ಸುದ್ದಿಗಳಿಗೆ ಕಿವಿಗೊಡದಂತೆ ಮನವಿ ಮಾಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)