varthabharthiಆರೋಗ್ಯ

ಶರೀರದಲ್ಲಿ ಅನೈಚ್ಛಿಕ ಚಲನವಲನಗಳಿದ್ದರೆ ಅದು ಡಿಸ್ಟೋನಿಯಾ ಆಗಿರಬಹುದು

ವಾರ್ತಾ ಭಾರತಿ : 25 Apr, 2020

ನಾವು ನಮಗೆ ಗೊತ್ತಿದ್ದೇ ನಮ್ಮ ಕೈಗಳು ಮತ್ತು ಕಾಲುಗಳನ್ನು ಚಲಿಸುತ್ತೇವೆ ಎಂದು ನಾವು ಭಾವಿಸಬಹುದು. ಆದರೆ ಹಲವಾರು ಪ್ರಕರಣಗಳಲ್ಲಿ ನಾವು ಇಚ್ಛಿಸಿರದಿದ್ದರೂ ಕೈಕಾಲುಗಳು ಅಸಹಜವಾಗಿ ಚಲಿಸುತ್ತಿರುತ್ತವೆ ಮತ್ತು ಇದು ಡಿಸ್ಟೋನಿಯಾದ ಲಕ್ಷಣವಾಗಿರಬಹುದು.

ಡಿಸ್ಟೋನಿಯಾ ಒಂದು ನರದೌರ್ಬಲ್ಯದ ಕಾಯಿಲೆಯಾಗಿದೆ. ಈ ರೋಗದಿಂದ ಬಳಲುತ್ತಿರುವವರಿಗೆ ಹಲವೊಮ್ಮೆ ತಮ್ಮ ದೈನಂದಿನ ಚಟುವಟಿಕೆಗಳನ್ನೂ ನಡೆಸಲಾಗುವುದಿಲ್ಲ. ನಮ್ಮ ಚಲನವಲನಗಳನ್ನು ಬಿಡಿ,ನಮ್ಮ ಬದುಕುಗಳಲ್ಲಿ ನಡೆಯುವ ಹೆಚ್ಚುಕಡಿಮೆ ಪ್ರತಿಯೊಂದರ ಮೇಲೂ ನಿಯಂತ್ರಣವನ್ನು ಹೊಂದಿರಲು ನಾವೆಲ್ಲ ಬಯಸುತ್ತೇವೆ. ನಮಗೆ ಕೈ ಕಾಲುಗಳನ್ನು ಚಲಿಸಬೇಕು ಎಂದಿದ್ದಾಗ ಮಿದುಳು ಸಂಬಂಧಿತ ಸ್ನಾಯುವಿಗೆ ಸಂಕೇತವನ್ನು ರವಾನಿಸಿದಾಗ ಆ ಪ್ರಕ್ರಿಯೆ ನಡೆಯುತ್ತದೆ. ಡಿಸ್ಟೋನಿಯಾವನ್ನು ಸರಳವಾದ ಶಬ್ದಗಳಲ್ಲಿ ಅಸಹಜ ಚಲನೆಗಳನ್ನು ಮತ್ತು ಭಂಗಿಗಳನ್ನುಂಟು ಮಾಡುವ ಸ್ನಾಯುಗಳ ಸಂಕೋಚನದ ಅನೈಚ್ಛಿಕ ಸೆಳೆತ ಎಂದು ಹೇಳಬಹುದು. ದೈಹಿಕ ಸ್ಥಿತಿಗಿಂತಲೂ ಡಿಸ್ಟೋನಿಯಾ ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ ಮತ್ತು ಆತ ಸಾಮಾಜಿಕವಾಗಿ ಬೆರೆಯುವುದನ್ನು ತಪ್ಪಿಸುತ್ತದೆ.

ಮಿದುಳಿನ ಜೊತೆಗೆ ನಮ್ಮ ಶರೀರದ ವಿವಿಧ ಭಾಗಗಳ ಮೇಲೂ ಡಿಸ್ಟೋನಿಯಾ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತದೆ. ಈ ಸೆಳೆತಗಳು ವಿವಿಧ ತೀವ್ರತೆಯಲ್ಲಿರುತ್ತವೆ ಮತ್ತು ಕೆಲವರಿಗೆೆ ತುಂಬ ನೋವನ್ನುಂಟು ಮಾಡುತ್ತವೆ. ಸೌಮ್ಯ ಸ್ಥಿತಿಯಲ್ಲಿದ್ದಾಗ ವ್ಯಕ್ತಿಯು ಸಹಜವಾಗಿರುವಂತೆ ಕಂಡುಬರುತ್ತದೆಯಾದರೂ,ಮುಂದುವರಿದಂತೆ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸುವಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಗಂಭೀರ ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಶರೀರದಲ್ಲಿ ಅನೈಚ್ಛಿಕ ಚಲನೆಗಳಿಗೆ ಕಾರಣವಾಗುವ ನರವನ್ನು ಅಸಮರ್ಥಗೊಳಿಸಲಾಗುತ್ತದೆ.

ಸೌಮ್ಯದಿಂದ ಹಿಡಿದು ತೀವ್ರ ಲಕ್ಷಣಗಳನ್ನು ಪ್ರಕಟಿಸುವ ಡಿಸ್ಟೋನಿಯಾ ಹಂತಹಂತವಾಗಿ ಪ್ರಗತಿಗೊಳ್ಳುತ್ತದೆ. ಸ್ನಾಯುವಿನಲ್ಲಿ ಸಂಕೋಚನ ಕಾಲಿನಿಂದ ಆರಂಭಿಸಿ ನಂತರ ಕುತ್ತಿಗೆ ಮತ್ತು ತೋಳಿಗೆ ವಿಸ್ತರಿಸುತ್ತದೆ.

ಕಾಲು ಮತ್ತು ಪಾದದಲ್ಲಿ ಸೆಳೆತ,ಕಾಲು ಎಳೆಯುವುದು,ಕುತ್ತಿಗೆಯ ಅನೈಚ್ಛಿಕ ಅಲುಗಾಟ,ಕಣ್ಣುಗಳು ಅತಿಯಾಗಿ ಮಿಟುಕಿಸಲ್ಪಡುವುದು,ಮಾತನಾಡಲು ತೊಂದರೆ ಇವೆಲ್ಲ ಡಿಸ್ಟೋನಿಯಾದ ಆರಂಭದ ಲಕ್ಷಣಗಳಾಗಿವೆ.

ಈ ಎಲ್ಲ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಆದರೆ ಸಣ್ಣ ವ್ಯತ್ಯಯವೂ ನಮ್ಮ ದೈಹಿಕ ಕ್ರಿಯೆಗಳ ಸಿದ್ಧ ವ್ಯವಸ್ಥೆಯನ್ನು ತೀವ್ರವಾಗಿ ಹದಗೆಡಿಸುತ್ತದೆ ಮತ್ತು ಇದರಿಂದಾಗಿ ಹಲವಾರು ಸಮಸ್ಯೆಗಳು ಮತ್ತು ಅಸಮರ್ಥತೆಗಳು ಉಂಟಾಗುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಒತ್ತಡ ಮತ್ತು ಬಳಲಿಕೆ ಮೇಲೆ ಹೇಳಲಾದ ಲಕ್ಷಣಗಳು ಇನ್ನಷ್ಟು ಹದಗೆಡುವಂತೆ ಮಾಡಿ ನೋವಿಗೆ ಕಾರಣವಾಗಬಹುದು. ಮಕ್ಕಳಲ್ಲಿ ಡಿಸ್ಟೋನಿಯಾದ ಲಕ್ಷಣಗಳು ಹೆಚ್ಚಾಗಿ ಕೈ ಮತ್ತು ಕಾಲುಗಳಲ್ಲಿ ಕಂಡುಬರುತ್ತವೆ,ನಂತರ ಶರೀರದ ಇತರ ಭಾಗಗಳಲ್ಲಿ ಗೋಚರಿಸುತ್ತವೆ. ಕೈಬರಹದಿಂದ ಆರಂಭಿಸಿ ಒತ್ತಡ,ಮಾನಸಿಕ ಅಸ್ಥಿರತೆ, ಉದ್ವೇಗ ಇತ್ಯಾದಿಗಳೊಂದಿಗೆ ಇನ್ನಷ್ಟು ಹದಗೆಡುತ್ತದೆ. ಡಿಸ್ಟೋನಿಯಾ ಬಾಧಿಸುವ ಶರೀರದ ಭಾಗಗಳು

ಕಣ್ಣುಗುಡ್ಡೆಗಳು: ಅತಿಯಾಗಿ ಕಣ್ಣುಗಳನ್ನು ಮಿಟುಕಿಸುವುದು ಡಿಸ್ಟೋನಿಯಾದ ಪ್ರಮುಖ ಲಕ್ಷಣವಾಗಿದ್ದು,ಇದು ಮುಂದಕ್ಕೆ ದೃಷ್ಟಿಸಮಸ್ಯೆಗಳಿಗೆ ಕಾರಣವಾಗಬಹುದು. ವ್ಯಕ್ತಿಯು ಒತ್ತಡದಲ್ಲಿದ್ದಾಗ ಮತ್ತು ಆತಂಕ ಅಥವಾ ಬಳಲಿಕೆಯಿಂದಿದ್ದಾಗ ಇದರ ಸಾಧ್ಯತೆ ಹೆಚ್ಚಾಗಿರುತ್ತದೆ.

ಕುತ್ತಿಗೆ: ಸರ್ವಿಕಲ್ ಡಿಸ್ಟೋನಿಯಾ ಎಂದೂ ಕರೆಯಲಾಗುವ ಈ ಸ್ಥಿತಿಯಲ್ಲಿ ಸ್ನಾಯು ಸಂಕೋಚನಗಳು ಕುತ್ತಿಗೆಯು ಆಚೀಚಿಗೆ ತಿರುಗಲು,ತಲೆಯನ್ನು ಒಂದು ಪಕ್ಕಕ್ಕೆ ತಿರುಗಿಸಲು,ಹಿಂದಕ್ಕೆ ಮತ್ತು ಮುಂದಕ್ಕೆ ಚಲಿಸಲು ಕಾರಣವಾಗುತ್ತವೆ.

ಕೈಗಳ ಚಲನೆ: ಸಾಮಾನ್ಯವಾಗಿ ವ್ಯಕ್ತಿಯು ಬರವಣಿಗೆಯ ಕೆಲಸ ಮಾಡುತ್ತಿದ್ದಾಗ ಅಥವಾ ಸಂಗೀತ ಉಪಕರಣವನ್ನು ನುಡಿಸುತ್ತಿರುವಾಗ ಈ ಸಮಸ್ಯೆ ಉದ್ಭವಿಸುತ್ತದೆ, ಇಂತಹ ಸಂದರ್ಭಗಳಲ್ಲಿ ಶರೀರದಲ್ಲಿ ಅನೈಚ್ಛಿಕ ಚಲನವಲನಗಳು ನಡೆಯುತ್ತಿರುತ್ತವೆ.

ಡಿಸ್ಟೋನಿಯಾಕ್ಕೆ ಕಾರಣಗಳು

ಡಿಸ್ಟೋನಿಯಾವನ್ನು ಉಂಟು ಮಾಡುವ ಕಾರಣಗಳು ಈವರೆಗೆ ಹೆಚ್ಚು ತಿಳಿದುಬಂದಿಲ್ಲ. ಡಿಸ್ಟೋನಿಯಾದ ಲಕ್ಷಣಗಳು ಬರವಣಿಗೆಯಂತಹ ವಿಶೇಷ ಕೆಲಸಗಳಲ್ಲಿದ್ದಾಗ ಕಂಡು ಬರುತ್ತದೆ. ಅದು ಜನ್ಮದತ್ತವಾಗಿಯೂ ಬರಬಹುದು. ಕೆಲವರಲ್ಲಿ ವಿಶೇಷ ಔಷಧಿಗಳನ್ನು ನೀಡಲಾಗುವ ಶ್ವಾಸಕೋಶ ಕ್ಯಾನ್ಸರ್‌ಗಳಂತಹ ರೋಗಗಳಿಂದಲೂ ಡಿಸ್ಟೋನಿಯಾ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಲವು ಪ್ರಕರಣಗಳಲ್ಲಿ ಲಕ್ಷಣಗಳು ಯಾತನಾಮಯ ಮಿದುಳಿನ ಗಾಯ,ಪಾರ್ಕಿನ್‌ಸನ್ ಕಾಯಿಲೆ, ಪಾರ್ಶ್ವವಾಯು,ಮಿದುಳಿನ ಟ್ಯೂಮರ್,ಆಮ್ಲಜನಕದ ಕೊರತೆಯಂತಹ ಬೇರೊಂದು ಕಾಯಿಲೆಯ ಲಕ್ಷಣಗಳಾಗಿರತ್ತವೆ.

 ಡಿಸ್ಟೋನಿಯಾದಿಂದ ಹಲವಾರು ತೊಂದರೆಗಳೂ ಉಂಟಾಗುತ್ತವೆ. ದೈನಂದಿನ ಕೆಲಸಗಳನ್ನು ಮಾಡಲು ಕಷ್ಟ,ಕಣ್ಣುಗಳ ಅತಿಯಾದ ಮಿಟುಕಿಸುವಿಕೆಯಂದ ವಸ್ತುಗಳನ್ನು ಸರಿಯಾಗಿ ಗುರುತಿಸಲು ಅಸಾಮರ್ಥ್ಯ,ಅನೈಚ್ಛಿಕ ಚಲನವಲನಗಳಿಂದ ನೋವು, ಖಿನ್ನತೆ ಮತ್ತು ಸಾಮಾಜಿಕ ಅಂತರದೊಂದಿಗೆ ಮುಂದಿನ ಹಂತ ಇತ್ಯಾದಿಗಳು ಇವುಗಳಲ್ಲಿ ಸೇರಿವೆ.

 ಡಿಸ್ಟೋನಿಯಾವನ್ನು ಗುಣಪಡಿಸಲು ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲದ್ದರಿಂದ ಈ ಬಗ್ಗೆ ಹೆಚ್ಚಿನ ಗಮನ ಅಗತ್ಯವಾಗುತ್ತದೆ. ವಿವಿಧ ಲಕ್ಷಣಗಳನ್ನು ಗಮನಿಸುತ್ತಿರಬೇಕಾಗುತ್ತದೆ ಮತ್ತು ಪ್ರತಿಯೊಂದು ಲಕ್ಷಣಕ್ಕೂ ನಿರ್ದಿಷ್ಟ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಟಾಪ್ ಸುದ್ದಿಗಳು