varthabharthiಆರೋಗ್ಯ

ಏನಿದು ಮೂತ್ರಪಿಂಡ ವೈಫಲ್ಯ?: ಲಕ್ಷಣಗಳೇನು?

ವಾರ್ತಾ ಭಾರತಿ : 26 Apr, 2020

ಮೂತ್ರಪಿಂಡಗಳು ನಮ್ಮ ಕೆಳಬೆನ್ನಿನ ಬಳಿಯಿರುವ ಜೋಡಿ ಅಂಗಗಳಾಗಿವೆ. ಪ್ರತಿ ಮೂತ್ರಪಿಂಡವು ಸುಮಾರು 11 ಸೆಂ.ಮೀ.ಗಳಷ್ಟು ಉದ್ದವಿರುತ್ತದೆ. ಶರೀರದಲ್ಲಿಯ ತಾಜ್ಯವನ್ನು ಮೂತ್ರದ ರೂಪದಲ್ಲಿ ಹೊರಹಾಕಲು ಇವು ನೆರವಾಗುತ್ತವೆ. ರಕ್ತವನ್ನು ಮರಳಿ ಹೃದಯಕ್ಕೆ ಕಳುಹಿಸುವ ಮುನ್ನ ಅದನ್ನು ಸೋಸುತ್ತವೆ. ಶರೀರದಲ್ಲಿಯ ಎಲ್ಲ ವಿಷವಸ್ತುಗಳನ್ನು ತೆಗೆದು ಮೂತ್ರಕೋಶಕ್ಕೆ ರವಾನಿಸುತ್ತವೆ ಮತ್ತು ಇವು ಬಳಿಕ ಮೂತ್ರವಿಸರ್ಜನೆಯ ಸಂದರ್ಭ ಶರೀರದಿಂದ ಹೊರಕ್ಕೆ ಹಾಕಲ್ಪಡುತ್ತವೆ. ಶರೀರದ ಒಟ್ಟಾರೆ ದ್ರವ ಸಮತೋಲನವನ್ನು ಕಾಯ್ದುಕೊಳ್ಳುವ,ತ್ಯಾಜ್ಯಗಳು ಮತ್ತು ವಿಷವಸ್ತುಗಳನ್ನು ಸೋಸುವ,ಕೆಂಪು ರಕ್ತಕಣಗಳ ಉತ್ಪಾದನೆಗೆ ನೆರವಾಗುವ ಹಾರ್ಮೋನ್‌ಗಳ ತಯಾರಿಕೆಯಂಹ ಪ್ರಮುಖ ಕಾರ್ಯಗಳನ್ನು ನಿರ್ವಹಿಸುವ ಮೂತ್ರಪಿಂಡಗಳು ರಕ್ತದೊತ್ತಡವನ್ನೂ ನಿಯಂತ್ರಿಸುತ್ತವೆ.

ಮೂತ್ರಪಿಂಡ ವೈಫಲ್ಯವು ಅವು ಕಾರ್ಯ ನಿರ್ವಹಿಸಲು ಸಾಧ್ಯವಾಗಿರದ ವೈದ್ಯಕೀಯ ಸ್ಥಿತಿಯಾಗಿದೆ. ಇಂತಹ ಸ್ಥಿತಿಯಲ್ಲಿ ಅವು ರಕ್ತವನ್ನು ಸೋಸುವ ಮತ್ತು ರಕ್ತದಲ್ಲಿಯ ತಾಜ್ಯಗಳನ್ನು ಹೊರಹಾಕುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ. ಇದು ಶರೀರದಲ್ಲಿ ಉಪ್ಪು ಮತ್ತು ನೀರಿನ ಒಟ್ಟಾರೆ ಸಮತೋಲನದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಮೂತ್ರಪಿಂಡ ವೈಫಲ್ಯವು ತೀವ್ರ ಸ್ಥಿತಿಗೆ ತಲುಪಿದ್ದರೆ ಮೂತ್ರ ಉತ್ಪಾದನೆಯು ಕಡಿಮೆಯಾಗುತ್ತದೆ ಅಥವಾ ಸಂಪೂರ್ಣವಾಗಿ ನಿಲ್ಲುತ್ತದೆ. ಇದು ತ್ಯಾಜ್ಯಗಳು ಮತ್ತು ವಿಷವಸ್ತುಗಳು ಶರೀರದಲ್ಲಿಯೇ ಸಂಗ್ರಹಗೊಳ್ಳಲು ಕಾರಣವಾಗುತ್ತದೆ.

ಮೂತ್ರಪಿಂಡಗಳ ವೈಫಲ್ಯವನ್ನು ಮೂರು ವಿಧವಾಗಿ ವರ್ಗೀಕರಿಸಲಾಗಿದೆ.

 ಎಕ್ಯೂಟ್ ರೇನಲ್ ಫೇಲ್ಯೂರ್ ಅಥವಾ ತೀವ್ರ ಮೂತ್ರಪಿಂಡ ವೈಫಲ್ಯ: ಇದು ಮೂತ್ರಪಿಂಡಗಳು ತಮ್ಮ ಕಾರ್ಯಾಚರಣೆಯನ್ನು ತ್ವರಿತವಾಗಿ ನಿಲ್ಲಿಸುವ ಸ್ಥಿತಿಯಾಗಿದೆ. ಇದಕ್ಕೆ ಬಹಳ ಸಮಯ ಬೇಕಾಗುವುದಿಲ್ಲ ಮತ್ತು ದಿಢೀರನೆ ಹಾನಿಗೀಡಾಗುತ್ತವೆ. ಇದಕ್ಕೆ ಕೆಲವು ಔಷಧಿಗಳ ಸೇವನೆ,ದಿಢೀರ್ ಅನಾರೋಗ್ಯ ಅಥವಾ ನಿರ್ದಿಷ್ಟ ವೈದ್ಯಕೀಯ ಸ್ಥಿತಿಯಂತಹ ಹಲವಾರು ಕಾರಣಗಳಿವೆ.

ಲಕ್ಷಣಗಳು: ಅಧಿಕ ರಕ್ತದೊತ್ತಡ,ವಾಕರಿಕೆ ಮತ್ತು ವಾಂತಿ,ಮೂತ್ರವಿಸರ್ಜನೆಯ ಪ್ರಮಾಣದಲ್ಲಿ ತ್ವರಿತ ಕುಸಿತ, ಉಪ್ಪು ಮತ್ತು ನೀರಿನ ಅತಿಯಾದ ಶೇಖರಣೆಯಿಂದ ಕಣಕಾಲು ಮತ್ತು ಪಾದಗಳಲ್ಲಿ ಊತ,ಶರೀರದಲ್ಲಿ ವಿಷವಸ್ತುಗಳು ಅಥವಾ ತ್ಯಾಜ್ಯಗಳ ಶೇಖರಣೆಯಿಂದಾಗಿ ಬಳಲಿಕೆ ಅಥವಾ ತಲೆ ಸುತ್ತುವಿಕೆ ಮತ್ತು ಇದರಿಂದ ಮಿದುಳಿನ ಕಾರ್ಯನಿರ್ವಹಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಇವು ಈ ವಿಧದ ಮೂತ್ರಪಿಂಡ ವೈಫಲ್ಯದ ಲಕ್ಷಣಗಳಾಗಿವೆ.

ಕ್ರಾನಿಕ್ ಕಿಡ್ನಿ ಫೇಲ್ಯೂರ್ ಅಥವಾ ದೀರ್ಘಕಾಲಿಕ ಮೂತ್ರಪಿಂಡ ವೈಫಲ್ಯ: ಈ ಪ್ರಕರಣದಲ್ಲಿ ಮೂತ್ರಪಿಂಡವು ತಿಂಗಳುಗಳು ಅಥವಾ ವರ್ಷಗಳ ಅವಧಿಯಲ್ಲಿ ಕ್ರಮೇಣ ವಿಫಲಗೊಳ್ಳುತ್ತದೆ. ಮಧುಮೇಹ,ಅಧಿಕ ರಕ್ತದೊತ್ತಡ ಅಥವಾ ಮೂತ್ರಪಿಂಡ ಉರಿಯೂತದಂತಹ ಹಲವಾರು ಕಾರಣಗಳಿಂದ ಈ ಸ್ಥಿತಿಯು ಉಂಟಾಗುತ್ತದೆ. ಮೂತ್ರಪಿಂಡಕ್ಕೆ ಹಾನಿಯನ್ನುಂಟು ಮಾಡುವ ನಿರ್ದಿಷ್ಟ ಡ್ರಗ್‌ನ ದೀರ್ಘಕಾಲಿಕ ಬಳಕೆಯಿಂದಲೂ ಇದು ಸಂಭವಿಸುತ್ತದೆ.

 ಲಕ್ಷಣಗಳು: ಶರೀರದ ತೂಕ ಇಳಿಕೆ,ಹಸಿವು ಕ್ಷೀಣ,ಅಸ್ವಸ್ಥತೆ ಅಥವಾ ದಣಿವಿನ ನಿರಂತರ ಭಾವನೆ,ತುರಿಕೆ ಮತ್ತು ಚರ್ಮ ಒಣಗುವುದು,ವಾಕರಿಕೆ ಮತ್ತು ವಾಂತಿ ಹಾಗೂ ಚರ್ಮದ ಬಣ್ಣದಲ್ಲಿ ಬದಲಾವಣೆ ಇದರ ಲಕ್ಷಣಗಳಾಗಿವೆ.

ಮಿದುಳು ಮತ್ತು ನರಮಂಡಲ ವ್ಯವಸ್ಥೆಗೆ ಸಂಬಂಧಿಸಿದ ಲಕ್ಷಣಗಳಲ್ಲಿ ಏಕಾಗ್ರತೆಗೆ ಅಥವಾ ಚಿಂತನೆ ನಡೆಸಲು ಕಷ್ಟ, ಕೈಗಳು, ಪಾದಗಳು ಮತ್ತು ಶರೀರದ ಇತರ ಭಾಗಗಳಲ್ಲಿ ಮರಗಟ್ಟುವಿಕೆ, ತಲೆ ಸುತ್ತುವ ಅಥವಾ ಗೊಂದಲಗೊಂಡ ಭಾವನೆ,ಸ್ನಾಯು ಸೆಳೆತ,ಜಾಗರೂಕತೆ ಅಥವಾ ಮಾನಸಿಕ ತೀಕ್ಷ್ಣತೆ ಕಡಿಮೆಯಾಗುವುದು, ಕಣಕಾಲು ಮತ್ತು ಪಾದಗಳಲ್ಲಿ ಊತ,ಹೆಚ್ಚಾಗಿ ಬೆಳಗಿನ ಸಮಯದಲ್ಲಿ ವಾಕರಿಕೆ ಮತ್ತು ವಾಂತಿ ಹಾಗೂ ಮೂತ್ರದಲ್ಲಿ ಬದಲಾವಣೆಗಳು ಸೇರಿವೆ.

ಎಂಡ್ ಸ್ಟೇಜ್ ಕಿಡ್ನಿ ಡಿಸೀಸ್ ಅಥವಾ ಅಂತಿಮ ಹಂತದ ಮೂತ್ರಪಿಂಡ ಕಾಯಿಲೆ: ಇದು ಮೂತ್ರಪಿಂಡ ರೋಗದ ಅಂತಿಮ ಹಂತವಾಗಿದ್ದು,ರೋಗಿಯ ಜೀವವನ್ನುಳಿಸಲು ಡಯಾಲಿಸಿಸ್ ಅಥವಾ ಮೂತ್ರಪಿಂಡ ಕಸಿ ಏಕೈಕ ಮಾರ್ಗವಾಗುತ್ತದೆ.

 ಮೂತ್ರಪಿಂಡ ವೈಫಲ್ಯದ ಸೂಕ್ತ ರೋಗನಿರ್ಣಯಕ್ಕಾಗಿ ವೈದ್ಯರು ಸರಣಿ ಪರೀಕ್ಷೆಗಳನ್ನು ನಡೆಸುತ್ತಾರೆ. ಕೆಲವೊಮ್ಮೆ ಮಾಮೂಲು ರಕ್ತ ಮತ್ತು ಮೂತ್ರ ಪರೀಕ್ಷೆ ಸಂದರ್ಭದಲ್ಲಿ ಮೂತ್ರಪಿಂಡ ರೋಗಗಳು ಆಕಸ್ಮಿಕವಾಗಿ ಪತ್ತೆಯಾಗುತ್ತವೆ. ವ್ಯಕ್ತಿಯಲ್ಲಿ ಮೂತ್ರಪಿಂಡಗಳ ಕಾರ್ಯದಲ್ಲಿ ಏನಾದರೂ ಅಸಹಜತೆ ಕಂಡು ಬಂದಾಗ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವಂತೆ ಸೂಚಿಸಲಾಗುತ್ತದೆ. ಮೂತ್ರಪಿಂಡ ವೈಫಲ್ಯವನ್ನು ಪತ್ತೆ ಹಚ್ಚಲು ಮೂತ್ರ ಪರೀಕ್ಷೆ,ರಕ್ತ ಪರೀಕ್ಷೆ,ಅಲ್ಟ್ರಾಸೌಂಡ್,ಎಂಆರ್‌ಐ ಮತ್ತು ಸಿಟಿ ಸ್ಕಾನ್,ಮೂತ್ರಪಿಂಡ ಬಯಾಪ್ಸಿಗಳನ್ನು ನಡೆಸಲಾಗುತ್ತದೆ.

ಮೂತ್ರಪಿಂಡ ವೈಫಲ್ಯಕ್ಕೆ ಚಿಕಿತ್ಸೆಯು ರೋಗದ ಕಾರಣ ಮತ್ತು ತೀವ್ರತೆಯನ್ನು ಅವಲಂಬಿಸಿರುತ್ತದೆ. ಚಿಕಿತ್ಸೆಯು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಔಷಧಿಗಳ ಸೇವನೆ,ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಲು ಕ್ರಮ,ಕೈಕಾಲುಗಳಲ್ಲಿ ನೀರು ತುಂಬಿಕೊಂಡಿರುವುದನ್ನು ಕಡಿಮೆಗೊಳಿಸುವುದು ಇತ್ಯಾದಿಗಳನ್ನು ಒಳಗೊಂಡಿರಬಹುದು.

ದೀರ್ಘಕಾಲಿಕ ಮೂತ್ರಪಿಂಡ ವೈಫಲ್ಯವು ಮೂಳೆಗಳು ದುರ್ಬಲಗೊಳ್ಳಲು ಕಾರಣವಾಗಬಹುದು. ಮೂಳೆಗಳು ದುರ್ಬಲಗೊಳ್ಳುವದನ್ನು ಮತ್ತು ಅವು ಮುರಿಯುವುದನ್ನು ತಡೆಯಲು ರೋಗಿಗೆ ಕ್ಯಾಲ್ಸಿಯಂ ಮತ್ತು ವಿಟಾಮಿನ್ ಡಿ ಪೂರಕಗಳನ್ನು ನೀಡಲಾಗುತ್ತದೆ.

ಮೂತ್ರಪಿಂಡ ವೈಫಲ್ಯವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಸೂಕ್ತ ವ್ಯೆದ್ಯಕೀಯ ನೆರವು ಮತ್ತು ಚಿಕಿತ್ಸೆಯಿಂದ ರೋಗ ಇನ್ನಷ್ಟು ಬಲಿಯುವುದನ್ನು ತಡೆಗಟ್ಟಬಹುದಷ್ಟೇ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)