varthabharthi

ನಿಮ್ಮ ಅಂಕಣ

ಜನರು ಮತ್ತು ಆಧುನಿಕ ಮಾಧ್ಯಮಗಳ ಅವತಾರ

ವಾರ್ತಾ ಭಾರತಿ : 26 Apr, 2020
ಮಲ್ಲಮ್ಮ ಯತ್ನಾಳ್

ನಿನ್ನೆ ರಾತ್ರಿ ತಾಸುಗಟ್ಟಲೇ ಮಳೆ ಸುರಿದಿದ್ದರಿಂದ ಬೆಳಗ್ಗಿನ ಸಮಯದಲ್ಲಿ ಗಾಳಿ ತಣ್ಣಗೆ ಬೀಸುತ್ತಿತ್ತು. ಮನೆಯ ಸುತ್ತಮುತ್ತಲು ದೊಡ್ಡ ದೊಡ್ಡ ಮರಗಳಿರುವುದರಿಂದ ಹಕ್ಕಿಗಳ ಇಂಪಾದ ರಾಗ ಜೊತೆಗೆ ಒಂದು ದೊಡ್ಡ ಪಕ್ಷಿಯ ಧ್ವನಿ ಕೇಳಿಸಿತು. ಕದ ತೆಗೆದು ನೋಡಿದರೆ ನವಿಲು ಗರಿಬಿಚ್ಚಿ ಕುಣಿಯುತ್ತಾ ತನ್ನ ಸಂಗಾತಿಯನ್ನು ಕರೆದಂತೆ ಭಾಸವಾಗುತ್ತಿತ್ತು...ದೂರದಿಂದಲೇ ನೋಡಿ ಖುಷಿಪಟ್ಟೆವು. ಎಂತಹ ಕಾಲ ಬಂತು ನೋಡು. ಇಂತಹ ನಗರ ವಸತಿ ಪ್ರದೇಶದಲ್ಲಿ ಸ್ವಚ್ಛಂಧವಾಗಿ ಹಾವು, ಕಾಡುಬೆಕ್ಕು, ನವಿಲುಗಳು ರಸ್ತೆ ಮತ್ತು ಬೀದಿಗಿಳಿದಿರುವುದನ್ನು ಎಂದಾದರು ನೋಡಿದಿವಾ? ಎನ್ನುವ ಪ್ರಶ್ನೆ ಕಾಡಿತು.ಇದಕ್ಕೆಲ್ಲಾ ಪರಿಸರದಲ್ಲಿ ಆದ ಏಕಾಏಕಿಯ ಬದಲಾವಣೆ. ಈ ಬದಲಾವಣೆಗೆ ಕಾರಣ ಕೋವಿಡ್-19ನಿಂದ ಶಬ್ದಮಾಲಿನ್ಯ, ವಾಯುಮಾಲಿನ್ಯ, ಜಲಮಾಲಿನ್ಯ ಯಾವುದು ಇಲ್ಲ, ಇಡೀ ಜಗತ್ತಿನ ರಸ್ತೆಗಳಲ್ಲಿ ವಾಹನಗಳ ಓಡಾಟವಿಲ್ಲ, ಕಾರ್ಖಾನೆಗಳು ಉಗುಳುವ ಹೊಗೆಯಿಲ್ಲ, ಜೀವ ಭಯದಿಂದ ಮನೆಯಲ್ಲಿ ಬಂಧಿಯಾಗಿರುವ ಮಾನವನ ಕೆಟ್ಟ ಕೃತ್ಯಗಳಿಲ್ಲದ ಕಾರಣಕ್ಕಾಗಿ ಮತ್ತೆ ನಾವು ಈಗ 100 ವರ್ಷ ಹಿಂದೆ ಹೋದಂತಾಗಿರುವುದಂತು ನಿಜ.

ಹಿಂದಿನ ಕಾಲದಲ್ಲಿ ಜಗತ್ತಿನಲ್ಲಿ ನಡೆಯುವಂತ ಆಗು ಹೋಗುಗಳಾದ ಸಾಮಾಜಿಕ, ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ, ಕ್ರೀಡೆ ಹೀಗೆ ಹಲವಾರು ಕ್ಷೇತ್ರಗಳ ಬಗ್ಗೆ ಪ್ರಚಾರ ಮಾಡಲು ತಕ್ಷಣಕ್ಕೆ ಜನರಿಗೆ ತಲುಪಿಸುವ ಸಮರ್ಪಕವಾದ ವಿದ್ಯಮಾನಗಳು ಇರಲಿಲ್ಲ. ಈ ಒಂದು ಕಾರಣಕ್ಕಾಗಿ ಜನರು ಬಹಳ ನಿಶ್ಚಿಂತೆಯಾಗಿ ಬಿಪಿ, ಶುಗರ್ ಇಲ್ಲದೆ ಬದುಕಿಬಾಳಿದ್ದರು ಎಂದು ಕೇಳುತ್ತಿರುತ್ತೇವೆ. ರೋಗ ರುಜಿನೆಗಳನ್ನೂ ಲೆಕ್ಕಿಸದೆ ಆತಂಕಕ್ಕೆ ಒಳಗಾಗದೆ ಸಾವು ಎನ್ನುವುದು ಮನುಷ್ಯನಿಗಲ್ಲದೆ ಕಲ್ಲಿಗೆ ಬರುತ್ತದೆಯೋ ಎನ್ನುವ ಭಾವನೆ ಮತ್ತು ಭರವಸೆಯಿಂದ ಎಲ್ಲಾರು ನನ್ನವರು ತನ್ನವರು ಎಂದು ಜಾತಿ, ಧರ್ಮ, ಗಡಿಗಳನ್ನು ಮೀರಿ ಬದುಕಿರುವುದು ಈಗಿನ ಕಾಲಕ್ಕೆ ಇದು ಬಹಳ ಅಪರೂಪದ ಸನ್ನಿವೇಶ ಎನಿಸಿದೆ.

ಕಾಲ ಕಳೆದಂತೆಲ್ಲಾ ಆಧುನಿಕ ಗಾಳಿ ಬೀಸತೊಡಗಿದರಿಂದ ಭಾರತದಲ್ಲಿಯೂ ಒಂದೊಂದು ಸರಕಾರಿ ಸ್ವಾಮ್ಯದ ಮಾಧ್ಯಮಗಳು ಹುಟ್ಟಿಕೊಳ್ಳುವುದಕ್ಕೆ ಆರಂಭವಾದವು. ಪ್ರಥಮವಾಗಿ 1936ರಲ್ಲಿ ಪ್ರಸಾರ ಭಾರತಿ ಕೇಂದ್ರ ತದ ನಂತರದಲ್ಲಿ ಇದದೇ ಆಲ್ ಇಂಡಿಯಾ ರೇಡಿಯೊ ಆಗಿ 1956ರಲ್ಲಿ ಅಸ್ತಿತ್ವಕ್ಕೆ ಬಂತು. ಪುಣ್ಯ ಆಗ ಭಾರತಕ್ಕೆ ದೂರದರ್ಶನ ಹಾವಳಿ ಇರಲಿಲ್ಲ. ರೇಡಿಯೊದಿಂದ ಅಲ್ಪಸ್ವಲ್ಪ ಮಾಹಿತಿಯನ್ನು ತಿಳಿದುಕೊಂಡು ಆರಾಮವಾಗಿದ್ದ ಕಾಲವದು. ಭಾರತಕ್ಕೆ ರೇಡಿಯೊ ಬರುವುದಕ್ಕಿಂತ ಮುಂಚೆ ದೂರದರ್ಶನ ಆವಿಷ್ಕಾರದ ಮೊದಲ ಹೆಜ್ಜೆಯನ್ನು ಸ್ಕಾಟ್ಲೆಂಡಿನ ಜಾನ್ ಲೋಗಿ ಬೆಯರ್ಡ್ ಎಂಬ ತಂತ್ರಜ್ಞಾನಿ ಶಬ್ದಗಳನ್ನು ಕೊಂಡೋಯ್ಯುವ ರೇಡಿಯೊ ಮೂಲಕ ಚಿತ್ರಗಳನ್ನು ಕಳಿಸುವ ಪ್ರಯೋಗವನ್ನು 1924ರಲ್ಲಿ ಆರಂಭಿಸಿದ್ದ. ಅದು ಬೇರೆ ಬೇರೆ ದೇಶದಲ್ಲಿ ಪ್ರಯೋಗಗೊಂಡು ಭಾರತಕ್ಕೆ ಬರುವುದು ಸ್ವಲ್ಪತಡವೆ ಆದರೂ1959ರಲ್ಲಿ ದೇಶದ ಪ್ರಥಮ ಟೆಲಿವಿಷನ್ ಕೇಂದ್ರ ಆರಂಭವಾಗಿ ಭಾರತ ಅಂತು ಟೆಲಿವಿಷನ್ ಯುಗಕ್ಕೆ ಪಾದರ್ಪಣೆ ಮಾಡಿತು. ಆಗಿನ ಕಾಲದಲ್ಲಿ ಇಷ್ಟೊಂದು ಮಾಧ್ಯಮಗಳ ಹಾವಳಿ ಇರಲಿಲ್ಲ. ನಮ್ಮ ರಾಜ್ಯಕ್ಕೆ ಕಾಲಿಟ್ಟಿದ್ದು 1981ರಲ್ಲಿ. ಆದರೆ ಇಂದು ಈ ದೃಶ್ಯ ಮಾಧ್ಯಮಗಳ ಹಾವಳಿ ಎಷ್ಟಿದೇ ಎಂದರೆ ಮನೆಗೊಂದು ಸಾಲದೆಂಬಂತೆ ಮನೆಯಲ್ಲಿರುವ ಒಬ್ಬೊಬ್ಬನ ಕೈಯಲ್ಲಿ ಮೊಬೈಲ್ ದಾಂಗುಡಿ ಇಟ್ಟು. ಇಂದು ಮಕ್ಕಳಿಂದ ಹಿಡಿದು ಮುದುಕರನ್ನು ಈ ಮಾಧ್ಯಮ ತಲೆಕೆಡಿಸಿಬಿಟ್ಟಿದೆ. ಈ ಕೋವಿಡ್-19 ಬಂದು ಎಲ್ಲಾ ಜನರನ್ನು ಬಾಯಿ ಮುಚ್ಚಿಕೊಂಡು ಮನೆಯಲ್ಲಿ ಹೇಗೆ ಕುಳಿತುಕೊಳ್ಳುವಂತೆ ಮಾಡಿದಿಯೋ ಹಾಗೆಯೇ ಈ ಮಾಧ್ಯಮಗಳನ್ನು ಕೂಡ ಬಾಯಿ ಮುಚಿ ್ಚಸಿಕೊಂಡು ಕೂಡುವಂತೆ ಮಾಡಿದರೆ ಒಂದಷ್ಟು ಮನಸ್ಸುಗಳು ಈ ಪರಿಸರವೂ ಕೂಡ ಸ್ವಲ್ಪ ನೆಮ್ಮದಿಯಿಂದ ಇರಬಹುದು.

ಈ ಮಾನವರು ಮಾಡುವ ಕೃತ್ಯಗಳನ್ನು ಕಂಡ ಜಗತ್ತಿನಲ್ಲಿರುವ ಅದೆಷ್ಟೋ ಪ್ರಾಣಿ, ಪಕ್ಷಿಗಳು ತಮ್ಮ ಸ್ವಾತಂತ್ರವನ್ನು ಕಳೆದುಕೊಂಡು ಬಂಧನದಲ್ಲಿರುವಾಗ ಮಾನವ ಮಾತ್ರ ತಲೆಯಲ್ಲಿ ಹನ್ನೆರಡು ತಾಪತ್ರೆಯನ್ನು ಹೊತ್ತುಕೊಂಡು ಓಡಾಡುತ್ತಿದ್ದ. ಆದರೆ ಇಂದು ಮಾನವರೆಲ್ಲರನ್ನೂ ಬಂಧನದಲ್ಲಿ ಹಾಕಿ ಪ್ರಾಣಿ, ಪಕ್ಷಿ, ಮರಗಿಡ, ನದಿ, ಹಳ್ಳ ಕೊಳ್ಳ, ದೊಡ್ಡರಸ್ತೆ, ಸಣ್ಣರಸ್ತೆ, ಕಾಲುದಾರಿಗಳು ಎಂದೂ ಕಂಡರಿಯದ ನೆಮ್ಮದಿಯಿಂದ ಸ್ವಚ್ಛಂಧವಾದ ನಿಶಬ್ದವಾದ ಕಲ್ಮಶವಿಲ್ಲದ ವಾತವರಣ ಕಾಣುವಂತಾಗಿದೆ. ನಾನು ಕಂಡ ಹಾಗೆ ಇದೇ ಮೊದಲ ಬಾರಿಗೆ ಆದ ಆವಿಷ್ಕಾರ ಎಂಬಂತಿದೆ. ಆದರೆ ಇಂತಹ ಪ್ರಕ್ಷುಬ್ಧ ವಾತಾವರಣದ ಸಂದರ್ಭದಲ್ಲಿ ಕೆಲವು ಖಾಸಗಿ ಕನ್ನಡ ಸುದ್ದಿ ವಾಹಿನಿಗಳು ಹೆಚ್ಚು ಪರಿಸರ ಮತ್ತು ಜನರ ಮನಸನ್ನು ಮಾಲಿನ್ಯ ಮಾಡುತ್ತಿರುವುದು ದುರಂತ. ಮನೆಯಲ್ಲಿ ಬೆಳಗ್ಗೆ ಶುರುವಾಗುವುದರಿಂದ ರಾತ್ರಿ ಮಲಗುವವರೆಗೂ ಯಾವುದಾದರೂ ಕನ್ನಡ ಸುದ್ದಿ ವಾಹಿನಿ ಹಚ್ಚಿದರೆ ಸಾಕು ಭಯಂಕರವಾದ ಸುಳ್ಳು ಮತ್ತು ಭಯಂಕರವಾದ ಭಯದಿಂದಲೇ ಕೂಡಿರುತ್ತವೆ. ಇಂತಹ ಸುದ್ದಿಗಳು ಪ್ರಸಾರವಾಗುವುದರಿಂದ ಮಕ್ಕಳ ಮತ್ತು ವೃದ್ಧರ ಮೇಲೆ ಪರಿಣಾಮ ಬೀರುವುದಿಲ್ಲವೇ? ಮೊನ್ನೆ ಶಿಕ್ಷಣ ಇಲಾಖೆಗೆ ಸಂಬಂಧಪಟ್ಟ ಒಂದು ದೃಶ್ಯ ಟಿವಿ ಪರದೆ ಮೇಲೆ ಬರುತ್ತಾ ಇತ್ತು. ವಿದ್ಯಾರ್ಥಿಗಳಿಗೆ ಮೇ, ಜೂನ್, ಜುಲೈ, ತಿಂಗಳು ರಜೆ ಕೊಟ್ಟು ಆಗಸ್ಟ್ ತಿಂಗಳಿನಲ್ಲಿ ಶಾಲೆ ಕಾಲೇಜುಗಳನ್ನು ಪ್ರಾರಂಭಿಸಲಾಗುತ್ತದೆ ಜೊತೆಗೆ ಎಸೆಸೆಲ್ಸಿ ಪರೀಕ್ಷೆ ಮತ್ತು ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಬರೆಯದೆ ಪಾಸ್ ಮಾಡಲಾಗುತ್ತದೆ ಎಂದು ವಾಹಿನಿಯ ಆ್ಯಂಕರ್ ಶಿರೋಮಣಿಯವರು ಹೇಳುತ್ತಿದ್ದರು.

ಇನ್ನೂ ಇತ್ತೀಚಿನ ಒಂದು ಸುದ್ದಿಯಂತು ಬಹಳ ಅಸಹ್ಯಕರವಾಗಿತ್ತು. ನಮ್ಮ ರಂಗಭೂಮಿಯ ಘಟಾನುಘಟಿಗಳಿಗಿಂತ ಈತ ವಾಹಿನಿಯ ಪರದೆಯ ಮೇಲೆ ಕುಳಿತಲ್ಲೇ ನಟನೆ ಮಾಡುವ ನಟಭಯಂಕರ! ಕುಳಿತುಕೊಂಡ ಚೇರಿನ ಮೇಲೆ ಭರತ ನಾಟ್ಯಶಾಸ್ತ್ರದಲ್ಲಿ ಬರುವ ಒಂಬತ್ತು ರಸಗಳನ್ನು ಅರಿದು ಕುಡಿದು ಮೇಲಾಗಿ ನಾಲ್ಕೈದು ರಸಗಳನ್ನು ಸ್ವತಃ ತಾವೇ ಸೃಷ್ಟಿಮಾಡಿಕೊಂಡು ತಮ್ಮ ನಟನೆಗೆ ತಾವೇ ಪುಷ್ಠಿಕೊಟ್ಟುಕೊಳ್ಳುವ ನಟ. ಮೊನ್ನೆ ತಮ್ಮದೇ ವಾಹಿನಿಯ ಒಂದು ಕಾರ್ಯಕ್ರಮದಲ್ಲಿ ರಾತ್ರಿ 8 ಗಂಟೆಗೆ ಹೆಲಿಕ್ಯಾಪ್ಟರ್‌ನಿಂದ ಹಣ ಬಿಳುತ್ತದೆ. ಬಡವರೆಲ್ಲ ಕೈ ಚಾಚಿ ನಿಂತುಕೊಳ್ಳಿ ಎಂದು ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡುವ ನೀವೆಲ್ಲಾ ಸಮಾಜೋದ್ಧಾರಕರಾ? ಯಾರನ್ನು ನಂಬಿಸುವುದಕ್ಕಾಗಿ ಈ ರೀತಿ ಮಾಡುತ್ತಿರುವುದು ಮಾಧ್ಯಮದವರೇ? ಇಡೀ ಜಗತ್ತೇ ಕೋವಿಡ್ -19ನಿಂದ ಹೆಣಗಾಡುತ್ತಿರುವ ಹೊತ್ತಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸುವುದನ್ನು ಬಿಟ್ಟು. ಸುಖಾಸುಮ್ಮನೆ ಅನಗತ್ಯ ಸುಳ್ಳು ಸುದ್ದಿ ಪ್ರಸಾರ ಮಾಡುವ ವಾಹಿನಿಗಳ ವಿರುದ್ಧ ಸರಕಾರ ಮುಲಾಜಿಲ್ಲದೆ ನೋಟಿಸು ಕಳುಹಿಸಿ ಅಂತಹ ವಾಹಿನಿಗಳನ್ನು ಬ್ಯಾನ್ ಮಾಡಬೇಕು. ಆಗಲಾದರೂ ಬುದ್ದಿ ಬರುತ್ತೆನೋ. ಮೊನ್ನೆ ಹುಬ್ಬಳ್ಳಿಯಲ್ಲಿ ಒಬ್ಬ ವ್ಯಕ್ತಿ ಕಾಮಣಿ ಮತ್ತು ನಿಮೋನಿಯಾದಿಂದ ಬಳಲಿ ತೀರಿಕೊಂಡಾಗ ಯಾವುದೋ ಒಂದು ವಾಹಿನಿಯಲ್ಲಿ ಇವರು ಪುಣೆಯಿಂದ ಬಂದ ಪ್ರಯಾಣದ ಇತಿಹಾಸ ಇದೆ ಹಾಗಾಗಿ ಈತನಲ್ಲಿ ಕೊರೋನದ ಎಲ್ಲಾ ಲಕ್ಷಣ ಇರುವ ಕಾರಣಕ್ಕಾಗಿ ಆತನ ಸಾವನ್ನು ಶಂಕಿಸಲಾಗಿದೆ. ಆದರೆ ಇನ್ನು ವರದಿ ಬಂದ ನಂತರವೇ ಇದನ್ನು ಅಧಿಕೃತ ಎಂದು ಡಿಸಿ ಘೋಷಣೆ ಮಾಡುತ್ತಾರೆ. ಅಲ್ಲ ನಿಮ್ಮ ಹತ್ತಿರ ಅಧಿಕೃತ ಇಲ್ಲದೇ ಅದ್ಹೇಗೆ ಮಾಹಿತಿ ಪ್ರಸಾರ ಮಾಡತ್ತೀರಿ? ಒಂದು ಕ್ಷಣ ಸತ್ತವರ ಕುಟುಂಬದ ಯೋಚನೆ ಮಾಡತ್ತೀರಾ ಸುದ್ದಿ ಮಾಧ್ಯಮದವರೇ, ಆ ಸತ್ತ ವ್ಯಕ್ತಿಯ ತಂದೆ ಇಲ್ಲ ನನ್ನ ಮಗ ಕೊರೋನ ವೈರಸ್‌ನಿಂದ ಸತ್ತಿಲ್ಲ. ನೀವು ಸುಳ್ಳು ಸುದ್ದಿ ಹಬ್ಬಸಬ್ಯಾಡ್ರೀ ನಿಮ್ಮ ಕೈ ಮುಗಿತೀನಿ ಅಂತ ಹೇಳಿದರೂ ಕೂಡ ಈ ಸಾವನ್ನು ಶಂಕಿಸಲಾಗಿದೆ? ಅಂತ ಪ್ರಶ್ನಾರ್ಥಕ ಚಿನ್ಹೆ ಇಡುತ್ತೀರಲ್ಲ ನೀವೆಂತಹ ಮಾಧ್ಯಮದವರು?. ನಿಮ್ಮ ಸುದ್ದಿ ಮಾಧ್ಯಮದ ದೃಶ್ಯ ವನ್ನು ನೋಡುವುದಕ್ಕಿಂತ, ಪತ್ರಿಕಾ ಮಾಧ್ಯಮವನ್ನು ನೆಚ್ಚಿಕೊಳ್ಳುವುದೇ ಸೂಕ್ತ.

ಈ ದೇಶಕ್ಕೆ ರೇಡಿಯೊ, ಟಿವಿ, ಮೊಬೈಲ್, ಫೇಸ್‌ಬುಕ್, ಟ್ವಿಟರ್, ವಾಟ್ಸ್ ಆ್ಯಪ್, ಟಿಕ್‌ಟಾಕ್, ಯುಟ್ಯೂಬ್, ತಲೆ ಎತ್ತಿ ನಿಂತಿರುವ ಟವರ್‌ಗಳು, ಪ್ರಿಜ್, ವಾಷಿಂಗ್‌ಮಷಿನ್, ಗ್ರೈಂಡರ್ ಬರುವುದಕ್ಕಿಂತ ಮುಂಚೆ ಈ ದೇಶ, ಈ ರಾಜ್ಯ ಈ ಜಿಲ್ಲೆ, ತಾಲೂಕು ನಮ್ಮ ಹಳ್ಳಿಯಲ್ಲಿ ಇಲ್ಲಿರುವ ಜನರು, ಆ ಜನರ ಮನಸ್ಸು, ಎಷ್ಟೊಂದು ಶುಭ್ರವಾಗಿತ್ತಲ್ಲ, ಆದರೆ ಈಗ ಎಲ್ಲಾ ಮನಸ್ಸು ಕೊಳ್ಳೆಯುವುದಕ್ಕೆ ಈ ಮೇಲಿನ ಆಧುನಿಕ ತಂತ್ರಜ್ಞಾನವೇ ಕಾರಣ ಅನಿಸುತ್ತದೆ. ಇವುಗಳನ್ನು ಈ ಸಂದರ್ಭದಲ್ಲಿ ಅವಶ್ಯಕತೆಗೆ ಬೇಕಾದ ಅಧಿಕಾರಿಗಳು ಸರಕಾರದ ಪ್ರತಿನಿಧಿಗಳು ಮತ್ತು ಸರಕಾರದ ವಾಹಿನಿಗಳನ್ನು ಇಟ್ಟುಕೊಂಡು ಉಳಿದವುಗಳ ಮೇಲೆ ಕೊರೋನ ಮುಗಿಯುವವರಿಗಾದರೂ ನಿರ್ಬಂಧ ಹೇರಬೇಕು. ಇಲ್ಲದಿದ್ದರೆ ಇನ್ನಷ್ಟು ಮತೀಯ ಗಲಭೆಗಳಿಗೆ ಬಾಯೊಡ್ಡಿದಂತೆ ಆಗುವುದರಲ್ಲಿ ಸಂದೇಹವಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)