varthabharthiಆರೋಗ್ಯ

ನಿಮ್ಮ ಮಕ್ಕಳನ್ನು ನ್ಯುಮೋನಿಯಾದಿಂದ ರಕ್ಷಿಸಿ

ವಾರ್ತಾ ಭಾರತಿ : 27 Apr, 2020

ದಿನೇ ದಿನೇ ಹೆಚ್ಚುತ್ತಿರುವ ಕೊರೋನ ಪಿಡುಗಿನ ನಡುವೆಯೇ ನಾವು ಶ್ವಾಸಕೋಶಕ್ಕೆ ಸಂಬಂಧಿಸಿದ ಇನ್ನೊಂದು ಕಾಯಿಲೆ ನ್ಯುಮೋನಿಯಾದ ಬಗ್ಗೆಯೂ ಗಮನವನ್ನು ಹರಿಸುವ ಅಗತ್ಯವಿದೆ.

 ನ್ಯುಮೋನಿಯಾ ಬ್ಯಾಕ್ಟೀರಿಯಾ ಅಥವಾ ವೈರಾಣುಗಳಿಂದ ಶ್ವಾಸಕೋಶಗಳಲ್ಲಿ ಉಂಟಾಗುವ ಸೋಂಕು ಆಗಿದೆ. ನ್ಯುಮೋನಿಯಾ ತೀವ್ರವಾಗಿದ್ದರೆ ಮತ್ತು ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಅದು ಗಂಭೀರ ಅನಾರೋಗ್ಯವನ್ನುಂಟು ಮಾಡುತ್ತದೆ,ಸಾವಿಗೂ ಕಾರಣವಾಗಬಲ್ಲದು. ಹೀಗಾಗಿ ನಿಮ್ಮ ಮಗು ನ್ಯುಮೋನಿಯಾದಿಂದ ಬಳಲುತ್ತಿದ್ದರೆ ಮತ್ತು ಸ್ನಾಯು ಹಾಗೂ ಎದೆನೋವು,ಉಬ್ಬಸ ಮತ್ತು ದಣಿವಿನಂತಹ ಲಕ್ಷಣಗಳಿಂದ ಹೈರಾಣಾಗಿದ್ದು,ಸ್ಥಿತಿ ದಿನೇ ದಿನೇ ಹದಗೆಡುತ್ತಿದ್ದರೆ ಅದನ್ನು ತಕ್ಷಣ ವೈದ್ಯರ ಬಳಿ ಕರೆದೊಯ್ಯಬೇಕಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ವರದಿಯಂತೆ ವಿಶ್ವಾದ್ಯಂತ ಐದು ವರ್ಷಕ್ಕೂ ಕಡಿಮೆ ಪ್ರಾಯದ 12 ಲಕ್ಷ ಮಕ್ಕಳು ಪ್ರತಿ ವರ್ಷ ನ್ಯುಮೋನಿಯಾಕ್ಕೆ ಬಲಿಯಾಗುತ್ತಿದ್ದರೆ,ಭಾರತದಲ್ಲಿ ಪ್ರತಿ ನಿಮಿಷಕ್ಕೆ ಒಂದು ಮಗು ನ್ಯುಮೋನಿಯಾದಿಂದ ಸಾವನ್ನುಪ್ಪುತ್ತಿದೆ.

 ನ್ಯುಮೋನಿಯಾ ಹಲವಾರು ರೀತಿಗಳಲ್ಲಿ ಹರಡುತ್ತದೆ. ವೈರಾಣುಗಳು ಆಗಾಗ್ಗೆ ಮಕ್ಕಳ ಮೂಗು ಅಥವಾ ಗಂಟಲಿನಲ್ಲಿರುತ್ತವೆ ಹಾಗೂ ಉಸಿರಾಡಿದಾಗ ಶ್ವಾಸಕೋಶಗಳನ್ನು ಪ್ರವೇಶಿಸಿ ಕೆಮ್ಮು ಅಥವಾ ಸೀನಿಗೆ ಕಾರಣವಾಗುತ್ತವೆ. ಚಳಿ,ಫ್ಲೂ,ಎದೆನೋವು,ಶೀತ ಮತ್ತು ಕೆಮ್ಮು,ಉಸಿರಾಡಲು ಕಷ್ಟ ಅಥವಾ ತ್ವರಿತ ಉಸಿರಾಟ,ಸಾಮಾನ್ಯಕ್ಕಿಂತ ಹೆಚ್ಚಿನ ಸುಸ್ತು,ಹೊಟ್ಟೆನೋವು ಮತ್ತು ರೇಗಾಟ ಇವು ಮಕ್ಕಳಲ್ಲಿ ನ್ಯುಮೋನಿಯಾದ ಕೆಲವು ಸಾಮಾನ್ಯ ಲಕ್ಷಣಗಳಾಗಿವೆ.

ಮಕ್ಕಳಲ್ಲಿ ನ್ಯುಮೋನಿಯಾವನ್ನು ಮೂರು ವಿಧಗಳಲ್ಲಿ ವರ್ಗೀಕರಿಸಲಾಗಿದೆ.

ಲೋಬರ್ ನ್ಯುಮೋನಿಯಾ: ಈ ಸ್ಥಿತಿಯಲ್ಲಿ ಶ್ವಾಸಕೋಶಗಳ ಒಂದು ಅಥವಾ ಹೆಚ್ಚಿನ ಭಾಗಗಳು ಪೀಡಿತವಾಗಿರುತ್ತವೆ.

ಬ್ರಾಂಕಿಯಲ್ ನ್ಯುಮೋನಿಯಾ: ಈ ಸ್ಥಿತಿಯಲ್ಲಿ ಎರಡೂ ಶ್ವಾಸಕೋಶಗಳ ಮೇಲೆ ದದ್ದುಗಳುಂಟಾಗುತ್ತವೆ.

ವಾಕಿಂಗ್ ನ್ಯುಮೋನಿಯಾ: ಈ ಸ್ಥಿತಿಯಲ್ಲಿ ಮಗುವು ಕೊಂಚ ಜಡವಾಗಿರುವಂತೆ ಕಂಡುಬರುತ್ತದೆ. ಇದನ್ನು ಸೌಮ್ಯ ನ್ಯುಮೋನಿಯಾ ಎಂದು ಪರಿಗಣಿಸಲಾಗಿದೆ. ಇದು ಐದು ವರ್ಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳಲ್ಲಿ ಕಂಡು ಬರುತ್ತದೆ,ಆದರೆ ಚಿಕಿತ್ಸೆ ಕೊಡಿಸಲು ನಿರ್ಲಕ್ಷಿಸಿದರೆ ಇದು ಸಾಮಾನ್ಯ ನ್ಯುಮೋನಿಯಾಕ್ಕೆ ತಿರುಗುತ್ತದೆ.

ಮಕ್ಕಳಲ್ಲಿ ನ್ಯುಮೋನಿಯಾ ತಡೆಯುವುದು ಹೇಗೆ?

ರೋಗವು ಬಾಧಿಸಿದ ಬಳಿಕ ಅದಕ್ಕೆ ಚಿಕಿತ್ಸೆ ಪಡೆಯುವುದಕ್ಕಿಂತ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದರೆ ನಿಮ್ಮ ಮಕ್ಕಳನ್ನು ನ್ಯುಮೋನಿಯಾದಿಂದ ದೂರ ಇಡಬಹುದು. ಇದು ಕಷ್ಟವೇನಲ್ಲ. ಇಂತಹ ಕೆಲವು ಸರಳ ಮುನ್ನೆಚ್ಚರಿಕೆ ಕ್ರಮಗಳು ಇಲ್ಲಿವೆ.

ವೈಯಕ್ತಿಕ ನೈರ್ಮಲ್ಯ: ಮಕ್ಕಳಲ್ಲಿ ಆರೋಗ್ಯದ ಬಗ್ಗೆ ಸೂಕ್ತ ತಿಳುವಳಿಕೆಯನ್ನು ಮೂಡಿಸಿದರೆ ಅವರನ್ನು ನ್ಯುಮೋನಿಯಾದಿಂದ ದೂರವಿರಿಸಬಹುದು ಮಾತ್ರವಲ್ಲ,ಇತರ ಕಾಯಿಲೆಗಳಿಂದಲೂ ರಕ್ಷಿಸಬಹುದು. ಕರವಸ್ತ್ರವನ್ನು ಯಾರೊಂದಿಗೂ ಹಂಚಿಕೊಳ್ಳದಂತೆ,ಮುಖ ಮತ್ತು ಬಾಯಿಯನ್ನು ಸರಿಯಾಗಿ ತೊಳೆದುಕೊಳ್ಳುವಂತೆ,ಆಗಾಗ್ಗೆ ಬಾಯು ಮುಕ್ಕಳಿಸುತ್ತಿರುವಂತೆ ಮಕ್ಕಳಿಗೆ ತಿಳಿಸಬೇಕು. ಮಕ್ಕಳು ತಮ್ಮ ಕೈಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಎಲ್ಲಕ್ಕಿಂತ ಮುಖ್ಯವಾಗಿದೆ. ಟಾಯ್ಲೆಟ್‌ನಿಂದ ಹೊರಬಂದ ನಂತರ ಮತ್ತು ಊಟಕ್ಕೆ ಮುನ್ನ ಸರಿಯಾಗಿ ಕೈಗಳನ್ನು ತೊಳೆದುಕೊಳ್ಳುವುದನ್ನು ಮಕ್ಕಳಿಗೆ ರೂಢಿ ಮಾಡಿಸಬೇಕು.

ಎರಡು ತಿಂಗಳು ಪ್ರಾಯದ ಎಲ್ಲ ಮಕ್ಕಳಿಗೂ ಬ್ಯಾಕ್ಟೀರಿಯಲ್ ನ್ಯುಮೋನಿಯಾದಿಂದ ರಕ್ಷಿಸಲು ಸರಣಿ ಲಸಿಕೆಗಳನ್ನು ಕಡ್ಡಾಯವಾಗಿ ಕೊಡಿಸಬೇಕು. ಎರಡು ವರ್ಷಕ್ಕಿಂತ ಹೆಚ್ಚಿನ ಪ್ರಾಯದ ಮಕ್ಕಳಿಗೆ ಪ್ರತ್ಯೇಕ ಲಸಿಕೆ ಅಗತ್ಯವಾಗಬಹುದು. ನಿಮ್ಮ ಮಗು ಎಲ್ಲ ಲಸಿಕೆಗಳನ್ನು ಮತ್ತು ಚುಚ್ಚುಮದ್ದುಗಳನ್ನು ಸಕಾಲದಲ್ಲಿ ಪಡೆದುಕೊಳ್ಳುವಂತೆ ನೋಡಿಕೊಳ್ಳಿ. ಫ್ಲೂ ಕೂಡ ನಿರೋಧಕ ವ್ಯವಸ್ಥೆಯನ್ನು ದುರ್ಬಲಗೊಳಿಸಿ ನ್ಯುಮೋನಿಯಾಕ್ಕೆ ಕಾರಣವಾಗುವುದರಿಂದ ಹೆಚ್ಚಿನ ಸುರಕ್ಷತೆಗಾಗಿ ಮಕ್ಕಳಿಗೆ ವರ್ಷಕ್ಕೊಮ್ಮೆ ಫ್ಲೂ ಚುಚ್ಚುಮದ್ದನ್ನು ಹಾಕಿಸಬೇಕು.

ಮಕ್ಕಳು ದುರ್ಬಲ ನಿರೋಧಕ ಶಕ್ತಿಯನ್ನು ಹೊಂದಿದ್ದರೆ ಇತರ ಎಲ್ಲ ಪ್ರಯತ್ನಗಳೂ ವಿಫಲಗೊಳ್ಳುತ್ತವೆ ಎನ್ನುವುದು ನೆನಪಿರಲಿ. ಮಕ್ಕಳ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅವರು ಸಮತೋಲಿತ ಆಹಾರವನ್ನು ಸೇವಿಸುವಂತೆ ನೋಡಿಕೊಳ್ಳಬೇಕು. ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ವಿಟಾಮಿನ್ ಎ ಅತ್ಯಂತ ಪರಿಣಾಮಕಾರಿಯಾಗಿದೆ. ಹೀಗಾಗಿ ಮಕ್ಕಳು ಹಾಲು ಮತ್ತು ಕ್ಯಾರಟ್‌ನಂತಹ ತರಕಾರಿಗಳನ್ನು ಹೆಚ್ಚಾಗಿ ಸೇವಿಸುವಂತೆ ನೋಡಿಕೊಳ್ಳಬೇಕು. ಅಲ್ಲದೆ ಉಜ್ವಲ ವರ್ಣಗಳ ತರಕಾರಿಗಳಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿರುವುದರಿಂದ ನಿರೋಧಕ ಶಕ್ತಿಗೆ ಲಾಭದಾಯಕವಾಗಿವೆ. ನ್ಯುಮೋನಿಯಾ ಶ್ವಾಸಕೋಶಗಳ ಸೋಂಕು ಆಗಿದ್ದು,ಉಬ್ಬಸ ಮತ್ತು ಕೆಮ್ಮಿನ ಲಕ್ಷಣಗಳೊಂದಿಗೆ ಆರಂಭವಾಗುತ್ತದೆ. ಧೂಮ್ರಪಾನಿಗಳಿಂದ ನಿಮ್ಮ ಮಕ್ಕಳನ್ನು ಸದಾ ದೂರವಿಡಿ.

ನ್ಯುಮೋನಿಯಾ ಸಾಂಕ್ರಾಮಿಕ ರೋಗವಾಗಿರುವುದರಿಂದ ಮಕ್ಕಳ ಮೇಲೆ ನಿಕಟ ನಿಗಾಯಿರಿಸಬೇಕು. ನ್ಯುಮೋನಿಯಾದ ಲಕ್ಷಣಗಳಿರುವವರ ಜೊತೆ ನಿಮ್ಮ ಮಕ್ಕಳನ್ನು ಬೆರೆಯಲು ಬಿಡಬೇಡಿ.ಮನೆಯಲ್ಲಿ ಆಗಾಗ್ಗೆ ಸ್ಪರ್ಶಿಸುವ ಮೇಲ್ಮೈಗಳನ್ನು ಸಾಬೂನು ಮತ್ತು ನೀರಿನಿಂದ ತೊಳೆಯಿರಿ ಅಥವಾ ಸೋಂಕು ನಿವಾರಕದಿಂದ ಒರೆಸಿ. ಮಗುವು ಸೀನುವಾಗ ಮತ್ತು ಕೆಮ್ಮುವಾಗ ತನ್ನ ಮುಖವನ್ನು ಮುಚ್ಚಿಕೊಳ್ಳುವಂತೆ ನೋಡಿಕೊಳ್ಳಿ.

ನೀಲಿಬಣ್ಣಕ್ಕೆ ತಿರುಗಿದ ಉಗುರುಗಳು ಅಥವಾ ತುಟಿಗಳು ,ಉಸಿರಾಟದಲ್ಲಿ ತೊಂದರೆ,ಅತಿಯಾದ ವಾಕರಿಕೆ ಮತ್ತು ವಾಂತಿ,ಆರು ತಿಂಗಳಿಗೂ ಹೆಚ್ಚಿನ ಪ್ರಾಯದ ಮಗುವಿನಲ್ಲಿ 102 ಡಿ ಮತ್ತು ಅದಕ್ಕೂ ಕಡಿಮೆ ಪ್ರಾಯದ ಮಕ್ಕಳಲ್ಲಿ100 ಡಿ.ಜ್ವರ ಕಾಣಿಸಿಕೊಂಡರೆ ತಕ್ಷಣ ನಿಮ್ಮ ವೈದ್ಯರ ಬಳಿ ತೋರಿಸಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)