varthabharthi

ನಿಮ್ಮ ಅಂಕಣ

ಹಸಿವನ್ನು ಗೆಲ್ಲದೆ ಕೊರೋನ ಗೆಲ್ಲಲು ಅಸಾಧ್ಯ

ಕೊರೋನ ವಿರುದ್ಧ ಹೋರಾಟಕ್ಕೆ ಆಹಾರ ಭದ್ರತೆ ಅಗತ್ಯ

ವಾರ್ತಾ ಭಾರತಿ : 28 Apr, 2020
*ಮುತ್ತು ಕೃಷ್ಣ

‘‘ನಮ್ಮ ಕಾರ್ಯಗಳೇ ನಮ್ಮ ಭವಿಷ್ಯ’’ 1981ರ ವಿಶ್ವ ಆಹಾರ ದಿನದ ಘೋಷ್ಯವಾಕ್ಯವು ಇಂದು ಸೂಕ್ತವೆನಿಸಿದೆ. ಕೊರೋನಗೆ ಸಂಬಂಧಿಸಿದ ನಮ್ಮ ಜವಾಬ್ದಾರಿಯುತ ನಡವಳಿಕೆಯೇ ನಮ್ಮ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ಇಂದು ಜಗತ್ತೇ ಸಾರುತ್ತಿದೆ. ಪ್ರಪಂಚದಲ್ಲಿ 2018ರ ಅಂಕಿ-ಅಂಶದ ಪ್ರಕಾರ ಪ್ರತಿ ಸೆಕೆಂಡಿಗೆ ಓರ್ವ ವ್ಯಕ್ತಿ ಹಸಿವಿನಿಂದ ಸಾಯುತ್ತಿದ್ದು, ಪರಿಸ್ಥಿತಿ ಹೀಗೇ ಮುಂದುವರಿದರೆ, ಈ ವರ್ಷ 3.6 ಕೋಟಿ ಜನರು ಹಸಿವಿನಿಂದ ಸಾಯುತ್ತಾರೆ ಎಂದು ಅಂದಾಜಿಸಲಾಗಿದ್ದು, 82.16 ಕೋಟಿಗೂ ಹೆಚ್ಚು ಜನರು ಹಸಿವಿನಿಂದ ಬಳಲುತ್ತಿದ್ದಾರೆ ಎಂದು ತಿಳಿಸಿತ್ತು. ಪ್ರತಿ 9 ಜನರಲ್ಲಿ ಓರ್ವ ಆರೋಗ್ಯಕರ ಜೀವನ ನಡೆಸಲು ಬೇಕಾಗುವ ಆಹಾರ ಪಡೆಯಲು ವಿಫಲವಾಗುತ್ತಿದ್ದಾರೆ ಎಂದೂ ಅದು ತಿಳಿಸಿತ್ತು. ಆದರೆ ಅದಕ್ಕೆ ಇಲ್ಲದ ಪ್ರಾಮುಖ್ಯತೆ ಈ ಕೊರೋನಗೆ ಏಕೆ ಬಂತು? ಈ ಕೊರೋನ ತನ್ನ ಕ್ರೂರ ಸ್ವರೂಪವನ್ನು ತೋರಿಸುತ್ತಿರುವಾಗ, ಜಗತ್ತಿನ ಹೆಚ್ಚಿನ ಹಾಗೂ ಭಾರತ ಸರಕಾರವನ್ನು ಒಳಗೊಂಡು ತನ್ನ ಪ್ರಥಮ ಪತ್ರಿಕಾ ಹೇಳಿಕೆಯಲ್ಲಿ ಆಹಾರಕ್ಕೆ ಪ್ರಮುಖ್ಯತೆಯನ್ನು ನೀಡಿರುವುದು ಏಕೆ? ದೇಶದಲ್ಲಿ 19.44 ಕೋಟಿ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಶೇ.20.8ರಷ್ಟು 5 ವರ್ಷದೊಳಗಿನ ಮಕ್ಕಳು ಆಹಾರದ ಕೊರತೆಯಿಂದ ಕಡಿಮೆ ತೂಕ ಹೊಂದುತ್ತಿದ್ದಾರೆ. ಆಹಾರದ ಕೊರತೆಯಿಂದ ಶೇ.37.9ರಷ್ಟು 5 ವರ್ಷದೊಳಗಿನ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ. ಶೇ.51.4ರಷ್ಟು ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆ ಕಾಡುತ್ತಿದೆ.

ಆಹಾರ ಭದ್ರತೆಯನ್ನು ಒದಗಿಸುವಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯು ಮುಖ್ಯವಾದ ಪಾತ್ರವನ್ನು ವಹಿಸುತ್ತಿದೆ. ಭಾರತದಲ್ಲಿ 4 ಲಕ್ಷ ನ್ಯಾಯಬೆಲೆ ಅಂಗಡಿಗಳು 16 ಕೋಟಿ ಕುಟುಂಬಗಳಿಗೆ, ಕರ್ನಾಟಕದಲ್ಲಿ 20,141 ನ್ಯಾಯಬೆಲೆ ಅಂಗಡಿಗಳು, ಆಹಾರ ಸಾಮಗ್ರಿಯನ್ನು 1.3 ಕೋಟಿ ಕುಟುಂಬಗಳಿಗೆ ವರ್ಷಪೂರ್ತಿ ವಿತರಿಸಲು ಸಹಾಯಕವಾಗುವಂತಹ ಮಾರಾಟ ಜಾಲ ಹೊಂದಿದ್ದು, ಭಾರತದ ಸಾರ್ವಜನಿಕ ವಿತರಣಾ ಸಂಸ್ಥೆಯ ಜಾಲಬಂಧವು ವಿಶ್ವದಲ್ಲಿಯೇ ಬಹು ವ್ಯಾಪಕವಾದ ಮತ್ತು ದೊಡ್ಡದಾಗಿದೆ ಎಂಬ ಹಿರಿಮೆಯನ್ನು ಗಳಿಸಿದೆ. ಇದರ ಜತೆಗೆ ಪೌಷ್ಟಿಕತೆಯ ಭದ್ರತೆಯನ್ನು ರಾಷ್ಟ್ರೀಯ ಮಧ್ಯಾಹ್ನದ ಊಟದ ಕಾರ್ಯಕ್ರಮ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ, (ಐ.ಸಿ.ಡಿ.ಎಸ್.) ಕಿಶೋರಿ ಶಕ್ತಿ ಯೋಜನೆ, ಕಿಶೋರಿಯರಿಗೆ ಪೌಷ್ಟಿಕ ಆಹಾರ ಯೋಜನೆ ಮತ್ತು ಪ್ರಧಾನಮಂತ್ರಿ ಗ್ರಾಮೋದಯ ಯೋಜನೆಗಳ ಮುಖಾಂತರ ಒದಗಿಸುತ್ತಿದೆ. ರಾಷ್ಟ್ರೀಯ ಮಧ್ಯಾಹ್ನ ಊಟದ ಕಾರ್ಯಕ್ರಮವು ಸಾರ್ವತ್ರಿಕ ಯೋಜನೆಯಾಗಿರುವುದು ಗಮನಾರ್ಹ. ಸಮಗ್ರ ಶಿಶು ಕಲ್ಯಾಣ ಅಭಿವೃದ್ಧಿಯೋಜನೆಯ ಸಾರ್ವತ್ರಿಕತೆಯನ್ನು ಹಂತ ಹಂತವಾಗಿ ಮಾಡಲಾಗುತ್ತಿದೆ. ಸರಕಾರವು ಕಿಶೋರಿ ಶಕ್ತಿಯೋಜನೆಯ ಮುಖಾಂತರ 11-18 ವಯಸ್ಸಿನ ಹುಡುಗಿಯರ ಪೌಷ್ಟಿಕತೆ ಮತ್ತು ಆರೋಗ್ಯ ಸ್ಥಿತಿಯ ಸುಧಾರಣೆಯನ್ನು ತರುವ ಸಲುವಾಗಿ ಸಾರ್ವತ್ರಿಕವಾಗಿಸಿದೆ. ಆಹಾರ ಸಮಸ್ಯೆ ಕುರಿತು ಅರಿವು ಮೂಡಿಸಲು ಮತ್ತು ಪೌಷ್ಟಿಕ ಆಹಾರದ ಮಹತ್ವದ ಬಗ್ಗೆ ಹೇಳಲು 1981ರಿಂದ ಜಾರಿಗೆ ಬಂದಿರುವ ‘ವಿಶ್ವ ಆಹಾರ ದಿನ’ವನ್ನು ಅಕ್ಟೋಬರ್ 16ರಂದು ಆಚರಿಸಲಾಗುತ್ತಿದೆ. ‘‘ಭಾರತ ಸ್ವಾತಂತ್ರವಾದಾಗ ಇದ್ದ ಜನಸಂಖ್ಯೆ 32 ಕೋಟಿ ಮಾತ್ರ, ಅವರಲ್ಲಿ ಹಸಿವಿನಿಂದ ಬಳಲುತ್ತಿದ್ದವರ ಸಂಖ್ಯೆ 20 ಕೋಟಿಯಷ್ಟು. ಅಂದರೆ ಶೇ.65ರಷ್ಟು ಮಂದಿಯ ಸ್ಥಿತಿ ಹೀಗಿತ್ತು. ಆಗ ಅಗತ್ಯದಷ್ಟು ಆಹಾರ ಉತ್ಪಾದನೆಯಾಗದೇ ವಿದೇಶಗಳಿಗೆ ಆಹಾರದ ಮೇಲೆ ಅವಲಂಬಿಸುವ ಸ್ಥಿತಿಯಿತ್ತು. ಅದರಲ್ಲಿ ಅಮೆರಿಕದಿಂದ ಪೂರೈಕೆಯಾಗುತ್ತಿದ್ದ ಗೋಧಿ ಅತ್ಯಂತ ಕಳಪೆ ಮಟ್ಟದಿಂದ ಕೂಡಿತ್ತು. ಅಂತಹ ಸಂದರ್ಭ ಹಸಿರು ಕ್ರಾಂತಿಯ ಮೂಲಕ ನಮ್ಮ ಆಹಾರವನ್ನು ನಾವೇ ಉತ್ಪಾದಿಸಿಕೊಂಡೆವು. ಅಂತಹ ಸ್ವಾಭಿಮಾನದ ಅಲೆಯನ್ನು ನಾವು ಉತ್ತೇಜಿಸಿ ಇನ್ನಷ್ಟು ಆಹಾರದಲ್ಲಿ ಸ್ವಾವಲಂಬಿತನ ಸಾಧಿಸಬೇಕು’’ ಎಂದು ಅಂದಿನ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರಿ ಪಣತೊಟ್ಟು ಕಾರ್ಯನಿರ್ವಹಿಸಿದ್ದು ಇಂದು ನೆನಪು ಬರುತ್ತಿದೆ.

1965ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತಿದ್ದ ಸಂದರ್ಭ ನಮಗೆ ಕಳಪೆ ಗುಣಮಟ್ಟದ ಗೋಧಿಯನ್ನು ನೀಡಿದ ಅಮೆರಿಕ ಪಾಕ್‌ಗೇ ಸಹಾಯ ಹಸ್ತ ನೀಡಿತ್ತು. ಈ ಸಂದರ್ಭ ಪ್ರಧಾನಮಂತ್ರಿ ಲಾಲ್ ಬಹದ್ದೂರ್‌ಶಾಸ್ತ್ರಿ ಅವರು ಮಾಡಿದ ಸಾಹಸ ಇಡೀ ಜಗತ್ತೇ ತಿರುಗಿ ನೋಡುವಂತಿತ್ತು. ಒಂದು ಕಡೆ ಯುದ್ಧ, ಮತ್ತೊಂದು ಕಡೆ ದೇಶದಲ್ಲಿ ಹಸಿವಿನ ರುದ್ರ ನರ್ತನ. ಆ ಸಂದರ್ಭ ಜೈ ಜವಾನ್, ಜೈಕಿಸಾನ್ ಎಂದು ಘೋಷಿಸಿದ ಅವರು ಯುದ್ಧ ಮತ್ತು ಹಸಿವನ್ನು ಮೆಟ್ಟಿ ನಿಂತರು. ಒಂದೆಡೆ ಸೈನಿಕರು ದೇಶ ರಕ್ಷಿಸಿದರೆ, ಮತ್ತೊಂದೆಡೆ ರೈತರು ಹಸಿವು ನೀಗಿಸುತ್ತಿದ್ದರು’’ ಎಂದು ಅವರು ಹೆಮ್ಮೆ ಪಡುತ್ತಿದ್ದರು. ಈ ರೀತಿಯ ಸ್ಪಂದನೆಯನ್ನು ನವಭಾರತದ ಯುವ ಸಮುದಾಯವು ಇಂದು ನೀಡಬೇಕಾಗಿದೆ. ಕೊರೋನದಿಂದ ದೇಶಕ್ಕೆ ಆಗಿರುವ ಅಪಾಯದ ಈ ಸಂದರ್ಭದಲ್ಲಿ ಆಹಾರ ಭದ್ರತೆಯಲ್ಲಿ ನಾವು ಕೈಜೋಡಿಸಬೇಕಾಗಿದೆ. ಭಾರತ ಸರಕಾರವು ಈ ನಿಟ್ಟಿನಲ್ಲಿ 30ನೇ ಮಾರ್ಚ್ 2020ರಂದು ರಾಜ್ಯ ಸರಕಾರಗಳಿಗೆ ನೀಡಿದ ಅಧಿಸೂಚನೆಯಲ್ಲಿ, ಮುಂದಿನ ಮೂರು ತಿಂಗಳಿಗೆ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುದಾರರಿಗೆ 5ಕೆಜಿ ಅಹಾರಧಾನ್ಯಗಳನ್ನು ಹೆಚ್ಚುವರಿಯಾಗಿ ಪ್ರತಿ ತಿಂಗಳು ನೀಡುವಂತೆ ತಿಳಿಸಿದೆ. ಇದರ ಲಾಭವನ್ನು ಕರ್ನಾಟಕದಲ್ಲಿ 401.93 ಲಕ್ಷ ಜನ ಪಡೆಯಲಿದ್ದಾರೆ. ರಾಜ್ಯ ಸರಕಾರವು ಪ್ರತಿ ತಿಂಗಳು ನೀಡುತ್ತಿರುವ ಪಡಿತರವನ್ನು, ಒಂದೇ ಸಲ ಎರಡು ತಿಂಗಳ (ಎಪ್ರಿಲ್ ಮತ್ತು ಮೇ) ಆಹಾರವನ್ನು ನೀಡಲು ಕ್ರಮ ತೆಗೆದುಕೊಂಡಿದೆ.

ಕೊರೋನ ಹರಡುವುದನ್ನು ತಡೆಗಟ್ಟಲು ಬಯೋಮೆಟ್ರಿಕ್ ವ್ಯವಸ್ಥೆಯನ್ನು ಸದ್ಯದಲ್ಲಿ ನಿಲ್ಲಿಸಲು ನಿರ್ಧರಿಸಿದೆ. ಆದಷ್ಟು ಬೇಗ ಸಮುದಾಯಕ್ಕೆ ಈ ಸೇವೆಗಳನ್ನು ಮುಟ್ಟಿಸಲು ಕ್ರಮಗಳನ್ನು ತೆಗೆದುಕೊಂಡಿದೆ. ರೋಗ ತಡೆಗಟ್ಟುವುದರಲ್ಲಿ ಆರೋಗ್ಯ ಇಲಾಖೆ ನೀಡಿರುವ ಸೂಚನೆಗಳನ್ನು ಪಾಲಿಸಲು ನ್ಯಾಯಬೆಲೆ ಅಂಗಡಿಗಳಲ್ಲಿ ಸೂಕ್ತ ವ್ಯವಸ್ಥೆಯನ್ನು ಮಾಡಿದೆ. ಇದರಲ್ಲಿ ಆಹಾರಧಾನ್ಯಗಳನ್ನು ಸ್ವಚ್ಛ ಸ್ಥಳಗಳಲ್ಲಿ ಶೇಖರಿಸುವುದು, ಪಡಿತರವನ್ನು ಪಡೆಯಲು ಬರುವ ಫಲಾನುಭವಿಗಳು ಸುರಕ್ಷಿತ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ಮಾಡಿರುವುದು, ಜನರಲ್ಲಿ ಆಹಾರ ಭದ್ರತೆ ಮತ್ತು ಕೊರೋನದ ಬಗ್ಗೆ ಅರಿವು ಮೂಡಿಸುವುದು, ಜನರನ್ನು ಹಸಿವಿನಿಂದ ರಕ್ಷಿಸುವುದು ಪ್ರಮುಖವಾಗಿದೆ. ಕೊರೋನದಿಂದ ಆಗಿರುವ ಲಾಕ್‌ಡೌನ್ ಸಂದರ್ಭದಲ್ಲಿ ಹಸಿದವರಿಗೆ ಆಹಾರವನ್ನು ಮುಟ್ಟಿಸಲು ಸಹಾಯವಾಣಿ ಸಂಖ್ಯೆ: 155214ನ್ನು ಜಾರಿಗೆ ತಂದಿದೆ. ಮೈಸೂರಿನಲ್ಲಿ 50 ವಾಹನಗಳನ್ನು ವ್ಯವಸ್ಥೆ ಮಾಡಿ ಪಡಿತರವನ್ನು ಮನೆಯ ಹಂತದಲ್ಲಿ ವಿತರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ವಲಸಿಗರ ಸುರಕ್ಷತೆಗಾಗಿ ಸುಪ್ರೀಂಕೋರ್ಟ್ ನೀಡಿರುವ ಆದೇಶದಲ್ಲಿ ಆಹಾರದ ಪೂರೈಕೆಗೆ ವಿಶೇಷ ಒತ್ತನ್ನು ನೀಡಿದೆ. ಇದನ್ನು ಪಾಲಿಸಲು ಕೇಂದ್ರ ಸರಕಾರವು ಇಡೀದೇಶಕ್ಕೆ ನಿರ್ದೇಶನವನ್ನು ನೀಡಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಅದಾಲತ್‌ಗಳನ್ನು ಳೂ ನಡೆಸಲು ಈ ಸಂದರ್ಭದಲ್ಲಿ ಸಾಧ್ಯವಿಲ್ಲ. ಇನ್ನು ಸರಕಾರವು ನ್ಯಾಯಬೆಲೆ ಅಂಗಡಿಗಳಲ್ಲಿ ಈಗಾಗಲೇ ನಿಯೋಜಿಸಿರುವ ನಾಗರಿಕ ಮೇಲ್ವಿಚಾರಕರು ಹೇಗೆ ಸ್ಪಂದಿಸುವರು ಎಂಬುದನ್ನು ನೋಡಬೇಕಾಗಿದೆ.

ಇದೇ ಸಂದರ್ಭದಲ್ಲಿ ಮಹಿಳೆಯರಿಗೆ, ಮಕ್ಕಳಿಗೆ, ಗರ್ಭಿಣಿಯರಿಗೆ ಪೌಷ್ಟಿಕ ಆಹಾರದ ಪೂರೈಕೆಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಪೌಷ್ಟಿಕ ಆಹಾರವನ್ನು ಮನೆಗಳಿಗೆ ತಲುಪಿಸುವ ಕ್ರಮವನ್ನು ತೆಗೆದುಕೊಂಡಿದೆ. ಜವಾಬ್ದಾರಿಯುತ ಪ್ರಜೆಗಳಾಗಿ ನಾವು ಆಹಾರ ಭದ್ರತೆಯಲ್ಲಿ ಹೇಗೆ ಕೈಜೋಡಿಸಬಹುದು? ಆಹಾರದ ಭದ್ರತೆಗೆ ಲಾಲ್ ಬಹದೂರ್ ಶಾಸ್ತ್ರಿ ಕರೆ ನೀಡಿದಾಗ ದೇಶವು ಸ್ಪಂದಿಸಿದ ವಿಧಾನವನ್ನು ನಮ್ಮ ಹಿರಿಯರಿಂದ ತಿಳಿಯಲೇಬೇಕು. ಇಂದಿಗೂ ದೇಶದಲ್ಲಿ ಸುಮಾರು ಶೇ. 30 ರಿಂದ 35 ಜನರಿಗೆ ಪೌಷ್ಟಿಕ ಆಹಾರದ ಪೂರೈಕೆ ಆಗುತ್ತಿಲ್ಲ ಎಂಬುದು ಆತಂಕದ ಸಂಗತಿ. ಇನ್ನು ಈಗಿನ ಬಿಗುವಿನ ವಾತಾವರಣದಲ್ಲಿ ಪ್ರತಿಯೊಬ್ಬರಿಗೂ ಪೂರೈಸುವುದು ಸವಾಲಿನ ಸಂಗತಿಯಾಗಿದೆ. ಕೊರೋನ ತಂದಿರುವ ಈ ಸಂದಿಗ್ಧ ಪರಿಸ್ಥಿತಿಯನ್ನು ನಿಭಾಯಿಸಲು ನಾವೆಲ್ಲರೂ ಕೈಜೋಡಿಸಬೇಕಾಗಿದೆ. ಅದಕ್ಕೆ ನಾವು ತೆಗೆದುಕೊಳ್ಳಬೇಕಾದ ಕ್ರಮಗಳು ಹೀಗಿವೆ : ಪ್ರತಿ ಹಂತದಲ್ಲಿಯೂ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು, ಅವಶ್ಯವಿರುವ ಆಹಾರವನ್ನು ಬಳಸುವುದು, ಆಹಾರವನ್ನು ವ್ಯರ್ಥಮಾಡದಿರುವುದು, ಶುಚಿತ್ವವನ್ನು ಪ್ರತಿ ಹಂತದಲ್ಲಿ ಕಾಪಾಡುವುದು, ಆಹಾರದ ಅವಶ್ಯವಿರುವ ಪ್ರತಿಯೊಬ್ಬರಿಗೂ ಅದನ್ನು ಮುಟ್ಟಿಸುವಲ್ಲಿ ಕೈಲಾದಷ್ಟು ಸಹಾಯ ಮಾಡುವುದು, ನ್ಯಾಯಬೆಲೆ ಅಂಗಡಿಯಲ್ಲಿ ಪಡೆದ ಅಹಾರವನ್ನು ಕಾಳಸಂತೆಯಲ್ಲಿ ಮಾರುತ್ತಿದ್ದರೆ ಅದನ್ನು ತಡೆಗಟ್ಟುವುದು ಹಾಗೂ ಅಹಾರ ಧಾನ್ಯಗಳನ್ನು ಸುಲಭವಾಗಿ ವಿತರಿಸಲು ಅಂಗಡಿ ಮಾಲಕರಿಗೆ ಸಹಕರಿಸುವುದು. ನೆನಪಿಡಿ ಕೊರೋನ ವಿರುದ್ಧ ಗೆಲ್ಲಲು ಪ್ರತಿಯೊಬ್ಬ ಸೋಂಕಿತನಿಗೂ ಸದೃಢ ಆರೋಗ್ಯ ಮತ್ತು ಪೌಷ್ಟಿಕ ಆಹಾರ ಅತೀ ಮುಖ್ಯವಾಗಿದೆ.

**ಲೇಖಕರು: ಫೀಲ್ಡ್ ರಿಸರ್ಚ್ ಆಫೀಸರ್, ಪಬ್ಲಿಕ್ ಎಫೇರ್ಸ್ ಫೌಂಡೇಶನ್, ಬೆಂಗಳೂರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)