varthabharthi

ನಿಮ್ಮ ಅಂಕಣ

ರೋಝಾ ಹಿಡಿದು ಝಕಾತ್ ಕೊಡುವ ತಾನಾಜಿ ಬಾಬರ್..!

ವಾರ್ತಾ ಭಾರತಿ : 28 Apr, 2020
ರಶೀದ್ ವಿಟ್ಲ

ತಾನಾಜಿ ಬಾಬರ್

ತಾನಾಜಿ..! ಇವರು 'ಹಾಜಿ'ಯಲ್ಲ. ಚೆನ್ನಾಗಿ ಮಲೆಯಾಳಂ ಮಾತಾಡ್ತಾರೆ. ಆದರೆ ಮಲೆಯಾಳಿಯೂ ಅಲ್ಲ. ಸಲಾಮ್ ಹೇಳಿದರೆ ಉತ್ತರಿಸುತ್ತಾರೆ. ಇಸ್ಲಾಮಿನ ಚರ್ಯೆಯನ್ನು ಆಚರಿಸುತ್ತಿದ್ದಾರೆ. ಆದರೆ ಮುಸ್ಲಿಂ ಕೂಡಾ ಅಲ್ಲ..! ತಾನಾಜಿ ಬಾಬರ್. ಮೂಲತಃ ಮಹಾರಾಷ್ಟ್ರದ ಸಾಂಗ್ಲಿಯವರು. ಪ್ರಸ್ತುತ ವಿಟ್ಲ ರಾಜಧಾನಿ ಜ್ಯುವೆಲ್ಲರ್ಸ್ ಹಾಗೂ ಮೆಲ್ಕಾರ್ ಆರ್.ಜೆ. ಜ್ಯುವೆಲ್ಲರ್ಸ್ ಮಾಲಕರು.

ಎಳೆಯದರಲ್ಲಿ ರಾಜಧಾನಿ ಗ್ರೂಪಿಗೆ ಕೆಲಸಕ್ಕೆ ಸೇರ್ಪಡೆಗೊಂಡ ತಾನಾಜಿ 2002ರಲ್ಲಿ ಉಪ್ಪಳದಲ್ಲಿದ್ದಾಗ ಮಲೆಯಾಳಂ ಕಲಿತರು. ಮುಸ್ಲಿಮ್ ಸಹೋದ್ಯೋಗಿಗಳ ಜೊತೆಯೇ ಉಂಡು, ಮಲಗುವ ಕಾರಣ ರಮಝಾನ್ ತಿಂಗಳಲ್ಲಿ ಮಧ್ಯರಾತ್ರಿ ಎದ್ದು ಆಹಾರ ಸೇವಿಸಿ (ಸಹರಿ) ಉಪವಾಸ ಹಿಡಿಯುತ್ತಿದ್ದರು. ಸಂಜೆ ಜೊತೆಯಾಗಿ ಇಫ್ತಾರ್ ನಲ್ಲಿ ಭಾಗಿಯಾಗಿ ರೋಝಾ ಮುರಿಯುತ್ತಿದ್ದರು. ನಂತರ ಅವರು ರಾಜಧಾನಿ ವಿಟ್ಲ ಶಾಖೆಯ ಪಾಲುದಾರರಾಗಿ ವಿಟ್ಲಕ್ಕೆ ಬಂದರು.

ವಿಟ್ಲದಲ್ಲಿ ಕೂಡಾ ರಮಝಾನ್ ಉಪವಾಸ ಮುಂದುವರಿಯಿತು. 2006ರಲ್ಲಿ ವಿವಾಹಿತರಾದ ಬಳಿಕ ಪ್ರತ್ಯೇಕ ವಾಸ ಪ್ರಾರಂಭಿಸಿದ್ದರಿಂದ ರಮಝಾನ್ ಉಪವಾಸ ಪೂರ್ತಿ ಹಿಡಿಯುವ ವಾಡಿಕೆಗೆ ಕತ್ತರಿ ಬಿತ್ತು. ಈಗಲೂ ಪ್ರತಿವರ್ಷ ವಾಡಿಕೆಯೆಂಬಂತೆ ಕನಿಷ್ಟ ಪಕ್ಷ ಐದು ಉಪವಾಸ ಹಿಡಿಯುತ್ತಾರೆ. ಇಷ್ಟೇ ಅಲ್ಲ, ತನ್ನ ವಾರ್ಷಿಕ ವರಮಾನವನ್ನು ಲೆಕ್ಕ ಹಾಕಿ ವಿಟ್ಲ ಹಾಗೂ ಮೆಲ್ಕಾರ್ ಆಸುಪಾಸಿನ ಬಡವರಿಗೆ ಝಕಾತ್ (ದಾನ) ಮೊತ್ತವನ್ನು ಸುದ್ದಿಯಿಲ್ಲದೆ ಹಂಚುತ್ತಾರೆ.

ಇತ್ತೀಚೆಗೆ ಮೌಲ್ಯಯುತವಾದ ನೂರಕ್ಕೂ ಅಧಿಕ ಕೋವಿಡ್ ರೇಶನ್ ಕಿಟ್ ನ್ನು ಜಾತಿಮತ ಬೇಧವಿಲ್ಲದೆ ಮನೆಮನೆಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ. ರಮಝಾನಲ್ಲೂ ರೇಶನ್ ಕಿಟ್ ವಿತರಿಸಿದ್ದಾರೆ. ಇವಿಷ್ಟೇ ಅಲ್ಲ, ಸರ್ವ ಮತ ಬಾಂಧವರಿಗೂ ಸದ್ದಿಲ್ಲದ ಸಹಾಯಹಸ್ತ ನೀಡುವ ತಾನಾಜಿ ಮೃದು ಸ್ವಭಾವಿ. ಮಿತಭಾಷಿ. ಸರಳ ವ್ಯಕ್ತಿತ್ವ. ಇವರ ಹೆಸರು, ಸ್ಪುಟವಾದ ಮಲೆಯಾಳ ಭಾಷಾ ಜ್ಞಾನ ಕೇಳಿದ ಜನರು ಮುಸ್ಲಿಂ ಎಂದು ಭಾವಿಸಿ ಸಲಾಮ್ ಹೇಳುವುದು ಮಾಮೂಲಿಯಾಗಿದೆ. "ಉಪವಾಸ ಆಚರಿಸಿದಾಗ ದೇಹಕ್ಕೆ ಉಂಟಾಗುವ ಉಲ್ಲಾಸ ಅವರ್ಣನೀಯ. ಮನಸ್ಸು ಕೂಡಾ ಶುಭ್ರಗೊಳ್ಳುತ್ತದೆ. ಹಸಿವಿನಲ್ಲಿರಲು ಪ್ರಾರಂಭದಲ್ಲಿ ಕಷ್ಟವಾಗುತ್ತಿತ್ತು. ಮತ್ತೆ ಸ್ನೇಹಿತರ ಜೊತೆ ಸೇರಿ ಅಭ್ಯಾಸವಾಯಿತು. ದಾನ (ಝಕಾತ್) ನೀಡುವುದರಿಂದ ನಮ್ಮ ವ್ಯವಹಾರದಲ್ಲಿ ಸಮೃದ್ಧಿ ಕಂಡಿದ್ದೇನೆ. ರಮಝಾನ್ ನಲ್ಲಿ ಲೆಕ್ಕ ಹಾಕಿ ಶೇಕಡಾವಾರು ದಾನ ಮಾಡಿದರೂ ಇತರ ಸಂದರ್ಭಗಳಲ್ಲಿ ಕೂಡಾ ಹಿಂದೂ, ಮುಸ್ಲಿಂ, ಕ್ರೈಸ್ತರೆನ್ನದೇ ನೊಂದವರಿಗೆ ಸಹಾಯಹಸ್ತ ಚಾಚಿದ್ದೇನೆ." ಎನ್ನುತ್ತಾರೆ ತಾನಾಜಿ.

ಉದ್ಯಮದ ಜಾಹೀರಾತಿಗಾಗಿ ಕೆಲವರು ದಾನವನ್ನು ಬಹಿರಂಗ ಮಾಡುತ್ತಾರೆ. ಆದರೆ ತಾನಾಜಿಯವರ ಸಹಕಾರದಲ್ಲಿ ಸದ್ದುಗದ್ದಲವಿಲ್ಲ. ಎಲ್ಲವೂ ಗೌಪ್ಯವಾಗಿರುವುದು ವಿಶೇಷ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)