ಮುಂದಿನ ವರ್ಷವೂ ಒಲಿಂಪಿಕ್ಸ್ ನಡೆಯದಿದ್ದರೆ ರದ್ದುಪಡಿಸಲಾಗುವುದು
ಟೋಕಿಯೊ ಗೇಮ್ಸ್ ಅಧ್ಯಕ್ಷ
ಟೋಕಿಯೊ, ಎ.29: ಈಗಾಗಲೇ 2021ಕ್ಕೆ ಮುಂದೂಡಲ್ಪಟ್ಟಿರುವ ಒಲಿಂಪಿಕ್ಸ್ ಗೇಮ್ಸ್ ಮುಂದಿನ ವರ್ಷವೂ ನಡೆಯದೇ ಇದ್ದರೆ ಗೇಮ್ಸ್ನ್ನುರದ್ದುಪಡಿಸಲಾಗುವುದು ಎಂದು ಜಪಾನ್ನ ಕ್ರೀಡಾ ದಿನಪತ್ರಿಕೆ ‘ನಿಕ್ಕಾನ್ ಸ್ಪೋರ್ಟ್ಸ್’ನಲ್ಲಿ ಮಂಗಳವಾರ ಪ್ರಕಟವಾದ ಸಂದರ್ಶನದಲ್ಲಿ ಟೋಕಿಯೊ ಗೇಮ್ಸ್ ಅಧ್ಯಕ್ಷ ಯೊಶಿರೊ ಮೊರಿ ತಿಳಿಸಿದ್ದಾರೆ.
ಕೊರೋನ ವೈರಸ್ ಆರ್ಭಟ ಹೆಚ್ಚಾದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಅಂತರ್ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ) ಹಾಗೂ ಜಪಾನಿನ ಸರಕಾರ ಒಲಿಂಪಿಕ್ಸ್ನ್ನು 2021ಕ್ಕೆ ಮುಂದೂಡಲು ನಿರ್ಧರಿಸಿದ್ದವು.
ವಿಶ್ವದಾದ್ಯಂತ ಕೊರೋನ ವೈರಸ್ ಪಿಡುಗಿನ ಸೋಂಕು ಹೆಚ್ಚಾಗುತ್ತಿದ್ದು, ವೈರಸ್ನ ಲಸಿಕೆ ಕಂಡುಹಿಡಿಯುವ ಪ್ರಕ್ರಿಯೆ ದೀರ್ಘವಾಗಿದೆ ಎಂದು ತಜ್ಞರು ಹೇಳಿದ್ದಾರೆ. ಪ್ರತಿಷ್ಠಿತ ಒಲಿಂಪಿಕ್ ಗೇಮ್ಸ್ ಮತ್ತಷ್ಟು ವಿಳಂಬವಾಗಲಿದೆಯೇ ಎಂಬ ಪ್ರಶ್ನೆ ಕಾಡಲಾರಂಭಿಸಿದೆ.
2022ಕ್ಕೆ ಮತ್ತೊಮ್ಮೆ ಒಲಿಂಪಿಕ್ಸ್ ಮುಂದೂಡಲಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಮೊರಿ, ‘‘ಇಲ್ಲ. ಅಂತಹ ಪರಿಸ್ಥಿತಿ ಎದುರಾದರೆ, ಒಲಿಂಪಿಕ್ಸ್ನ್ನುರದ್ದುಪಡಿಸಲಾಗುವುದು’’ಎಂದರು.
ಟೂರ್ನಿಯು ನಿಗದಿಯಂತೆ ನಡೆಯಲಿದೆ ಎಂದು ಜಪಾನ್ನ ಮಾಜಿ ಪ್ರಧಾನಮಂತ್ರಿ ಮೊರಿ ವಿಶ್ವಾಸ ವ್ಯಕ್ತಪಡಿಸಿದರು.
‘‘ನಾವು ಯುದ್ಧವನ್ನು ಗೆದ್ದ ಬಳಿಕ ಮುಂದಿನ ಬೇಸಿಗೆಯ ತನಕವೂ ಒಲಿಂಪಿಕ್ಸ್ನ್ನು ವಿಳಂಬಗೊಳಿಸಿದ್ದೇವೆ. ಆ ಬಳಿಕ ನಾವು ಯುದ್ಧವನ್ನು ಗೆಲ್ಲುತ್ತೇವೆ. ಕೊರೋನ ವಿರುದ್ಧ ಸಮರವನ್ನು ಜಯಿಸಿದ ಬಳಿಕವೂ ನಾವು ಅದರೊಂದಿಗೆ ಮುಂದುವರಿಯಲು ಸಾಧ್ಯವಾದರೆ ಒಲಿಂಪಿಕ್ಸ್ ಉಳಿದೆಲ್ಲಾ ಒಲಿಂಪಿಕ್ಸ್ ಗಿಂತ ಹೆಚ್ಚು ವೌಲ್ಯಯುತವಾಗಿರುತ್ತದೆ. ಇಲ್ಲದಿದ್ದರೆ ನಮ್ಮ ಕಠಿಣ ಪರಿಶ್ರಮ ಹಾಗೂ ಪ್ರಯತ್ನಗಳಿಗೆ ಪ್ರತಿಫಲ ದೊರೆಯುವುದಿಲ್ಲ ಎಂದು ನಾವು ನಂಬಬೇಕಾಗಿದೆ’’ ಎಂದು ಮೊರಿ ತಿಳಿಸಿದರು.
ಸಂಘಟಕರು ಮುಂದಿನ ವರ್ಷದತ್ತ ಗಮನ ನೀಡುತ್ತಿದ್ದಾರೆ ಎಂದು ಟೋಕಿಯೊ ಒಲಿಂಪಿಕ್ಸ್ ವಕ್ತಾರ ಮಾಸಾ ಟಕಾಯಾ, ಮೊರಿ ಹೇಳಿಕೆಗೆ ಪ್ರತಿಕ್ರಿಯಿಸಿದರು.
‘‘2020ರ ಟೋಕಿಯೊ ಗೇಮ್ಸ್ನ ಹೊಸ ದಿನಾಂಕವನ್ನು ನಿಗದಿಪಡಿಸಲಾಗಿದೆ. ಮುಂದಿನ ವರ್ಷದ ಗೇಮ್ಸ್ನ್ನು ಉತ್ತಮವಾಗಿ ನಡೆಸುವುದು ನಮ್ಮ ಗುರಿ. ಮೊರಿ ಹೇಳಿಕೆ ಅವರ ಅನಿಸಿಕೆಯಾಗಿದೆ’’ ಎಂದರು.