varthabharthi

ನಿಮ್ಮ ಅಂಕಣ

ಇಂದು ಕಾರ್ಮಿಕರ ದಿನಾಚರಣೆ

ಅಂಬೇಡ್ಕರ್ ಕಾರ್ಮಿಕ ಚಳವಳಿಯ ಮೇಲೆ 'ಕಮ್ಯುನಿಸಂ ಪ್ರಭಾವ'

ವಾರ್ತಾ ಭಾರತಿ : 1 May, 2020
ಹಾರೋಹಳ್ಳಿ ರವೀಂದ್ರ

ಕಾರ್ಮಿಕರು ಈ ದೇಶದ ಸಂಪತ್ತು ಎಂಬುದು ಅಂಬೇಡ್ಕರ್ ಅವರಿಗೆ ಸ್ವತಹ ಅರಿವಿತ್ತು. ಕಾರ್ಮಿಕರಿಗೆ ಆರ್ಥಿಕ ಸಮಾನತೆ ಸಿಗಬೇಕೆಂದರೆ ಸ್ವತಂತ್ರ ಅಧಿಕಾರ ಮುಖ್ಯ ಎಂಬುದು ಅವರ ನಿಲುವಾಗಿತ್ತು. ಈ ಕಾರಣಕ್ಕೆ ಸ್ವತಂತ್ರ ಕಾರ್ಮಿಕ ಪಕ್ಷ ಸ್ಥಾಪಿಸಿ ಅದರ ಮೊದಲ ಸಾಮಾನ್ಯ ಸಭೆಯನ್ನು ಆಗಸ್ಟ್ 7, 1937 ರಂದು ಬಾಂಬೆಯ ಸೈಬರ್ ಹುಡ್ ಹೌಸ್‌ನಲ್ಲಿ ಜರುಗಿಸಿ ಆ ಮೂಲಕ ಕಾರ್ಮಿಕ ಚಳವಳಿ ಮತ್ತು ರಾಜಕೀಯ ಕ್ರಾಂತಿಗೆ ಹೊಸರೂಪ ನೀಡಿದರು. ಅಂಬೇಡ್ಕರ್ ಅವರು ಕಾರ್ಮಿಕ ಚಳವಳಿಗೆ ಇಳಿದ ನಂತರ ಈ ದೇಶದ ರೈತರು, ರೈಲ್ವೆ ನೌಕರರು, ಕೈಗಾರಿಕಾ ಕಾರ್ಮಿಕರು ಹೀಗೆ ಹಲವು ಕೆಳಸ್ತರದಲ್ಲಿ ದುಡಿಯುವ ಜನವರ್ಗದ ಬಗ್ಗೆ ಬಹಳಷ್ಟು ಸುಧಾರಣೆ ತರಲು ಪ್ರಯತ್ನಿಸಿದರು.

ಕೈಗಾರಿಕಾ ಕ್ರಾಂತಿಯು ಕಾರ್ಮಿಕ ಚಳವಳಿಯ ಮೇಲೆ ಮಹತ್ತರವಾದ ಪರಿಣಾಮವನ್ನು ಬೀರಿದೆ. ಈ ಕ್ರಾಂತಿಯ ನಂತರ ಕೂಲಿಗಾರರು ಹಳ್ಳಿಯಿಂದ ಪಟ್ಟಣದ ಕಡೆ ಮುಖ ಮಾಡಿದರು. ಅಂತಹ ಸಂದರ್ಭದಲ್ಲಿ ಗ್ರಾಮೀಣ ಜನರ ಬಳಿ ಶ್ರಮ, ಶಕ್ತಿ ಮತ್ತು ಪ್ರಾಮಾಣಿಕತೆ ಬಿಟ್ಟರೆ ಮತ್ಯಾವ ಅಂಶವೂ ಉಳಿದಿರಲಿಲ್ಲ. ಇವೆಲ್ಲವೂ ಬಂಡವಾಳಶಾಹಿಗಳಿಗೆ ವರದಾನವಾದವು. ಕಾರ್ಮಿಕರಿಗೆ ಕೈಗಾರಿಕ ವಲಯವು ಉದ್ಯೋಗ ನೀಡಿದವು. ಆದರೆ ಕಾರ್ಮಿಕರು ತಮ್ಮ ಇಡೀ ಶ್ರಮವನ್ನು ಬಂಡವಾಳಶಾಹಿಗಳಿಗೆ ಕೊಟ್ಟು ಅವರನ್ನು ಕೊಬ್ಬಿಸಿದರು. ಶ್ರಮಿಕರ ಕಣ್ಣೀರಿಗೆ ಬಂಡವಾಳಗಾರರು ನೆರವಿಗೆ ಬರುತ್ತಲೇ ಇರಲಿಲ್ಲ.

16 ನೇ ಶತಮಾನದ ತರುವಾಯ ಕಾರ್ಮಿಕ ಸಂಘಗಳು ಸೃಷ್ಟಿಗೊಂಡವು. ಆದರೆ ಬಂಡವಾಳಶಾಹಿಗಳು ಮತ್ತು ಸರಕಾರಗಳು ಇದಕ್ಕೆ ವಿರುದ್ಧವಾಗಿದ್ದವು. ಕೆಲವು ವೃತ್ತಿಗಳಿಗೆ ಗರಿಷ್ಠ ಕೂಲಿಯನ್ನು ನಿಗದಿ ಮಾಡಿ ಸಂಘಟನೆಗಳನ್ನು ನಿಷೇಧ ಮಾಡಿದರು. ಕಾರ್ಮಿಕ ಸಂಘಟನೆಗಳ ನಿಷೇಧದ ನಂತರ ಕಾರ್ಮಿಕರ ಸಮಸ್ಯೆಗಳು ಮತ್ತಷ್ಟು ಹೆಚ್ಚಾದವು. ಅದೇ ಸಂದರ್ಭದಲ್ಲಿ ಫ್ರಾನ್ಸ್ ನಲ್ಲಿ ನಡೆದ ಕಾರ್ಮಿಕರ ಕ್ರಾಂತಿ, ಇಂಗ್ಲೆಂಡಿಗೆ ಪ್ರೇರಣೆಯಾಗಿ ಕಾರ್ಮಿಕರು ಸಂಘಟನೆಗಳನ್ನು ರಚಿಸಿಕೊಂಡರು. ಆದರೆ 1783 ರಲ್ಲಿ ಇಂಗ್ಲೆಂಡ್ ಮತ್ತು ಫ್ರಾನ್ಸ್ ನಡುವೆ ಯುದ್ಧ ಪ್ರಾರಂಭವಾದ ತರುವಾಯ ಕಾರ್ಮಿಕರಿಗೆ ಕೂಲಿಯ ಹೆಚ್ಚಳ, ಕೆಲಸಗಳಲ್ಲಿ ಗಂಟೆಗಳ ಇಳಿಕೆ, ಬೇಡಿಕೆ ಪೂರೈಕೆಗಳಿಗಾಗಿ ಮುಷ್ಕರ ಇಂತಹ ಕಾರಣಗಳಿಗಾಗಿ ರಚಿತವಾಗುವ ಸಂಘಟನೆಗಳನ್ನು ನಿಷೇಧಿಸಲಾಯಿತು.

ಈ ಎಲ್ಲಾ ಬೆಳವಣಿಗೆಯ ನಂತರ ಕಾರ್ಮಿಕರಿಗೆ ಹೊಸ ಚೈತನ್ಯ ತಂದುಕೊಟ್ಟಿದ್ದು ಕಮ್ಯುನಿಸಂ ಪ್ರಭಾವ. ಆನಂತರ ಕಾರ್ಮಿಕ ಸಂಘ, ಪರಿಷತ್‌ಗಳು ಸ್ಥಾಪನೆಗೊಂಡವು. 20 ನೇ ಶತಮಾನದ ನಂತರದಲ್ಲಿ ಕಾರ್ಮಿಕ ವರ್ಗ ಅತ್ಯಂತ ಕಠಿಣ ದಿನಗಳನ್ನು ಎದುರಿಸಬೇಕಾಯಿತು. ಅವೆಲ್ಲವನ್ನು ಚಳವಳಿ ಮತ್ತು ಕಾನೂನಾತ್ಮಕವಾಗಿ ಎದುರಿಸಲು ಕಮ್ಯುನಿಸಂ ನೆರವಾಯಿತು. ಕಮ್ಯುನಿಸಂನಿಂದ ಸಿಡಿದ ಕಾರ್ಮಿಕ ಕ್ರಾಂತಿಯು ಪ್ರಪಂಚದಾಧ್ಯಂತ ವಿಸ್ತರಣೆಯಾಯಿತು. ಭಾರತಕ್ಕೂ ಕ್ರಾಂತಿಯ ಕಾವು ತಗಲಿತು. ಅಂದು ಶೋಷಿತ ಸಮುದಾಯಗಳ ಪರವಾಗಿ ಹೋರಾಟ ಮಾಡುತ್ತಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೇಲೂ ಪ್ರಭಾವ ಬೀರಿ ಭಾರತದಲ್ಲಿ ಕಾರ್ಮಿಕ ಚಳವಳಿಗೆ ಪುನಶ್ಚೇತನವಾಯಿತು.

ಕಾರ್ಮಿಕರು ಈ ದೇಶದ ಸಂಪತ್ತು ಎಂಬುದು ಅಂಬೇಡ್ಕರ್ ಅವರಿಗೆ ಸ್ವತಹ ಅರಿವಿತ್ತು. ಕಾರ್ಮಿಕರಿಗೆ ಆರ್ಥಿಕ ಸಮಾನತೆ ಸಿಗಬೇಕೆಂದರೆ ಸ್ವತಂತ್ರ ಅಧಿಕಾರ ಮುಖ್ಯ ಎಂಬುದು ಅವರ ನಿಲುವಾಗಿತ್ತು. ಈ ಕಾರಣಕ್ಕೆ ಸ್ವತಂತ್ರ ಕಾರ್ಮಿಕ ಪಕ್ಷ ಸ್ಥಾಪಿಸಿ ಅದರ ಮೊದಲ ಸಾಮಾನ್ಯ ಸಭೆಯನ್ನು ಆಗಸ್ಟ್ 7, 1937 ರಂದು ಬಾಂಬೆಯ ಸೈಬರ್ ಹುಡ್ ಹೌಸ್‌ನಲ್ಲಿ ಜರುಗಿಸಿ ಆ ಮೂಲಕ ಕಾರ್ಮಿಕ ಚಳವಳಿ ಮತ್ತು ರಾಜಕೀಯ ಕ್ರಾಂತಿಗೆ ಹೊಸರೂಪ ನೀಡಿದರು. ಅಂಬೇಡ್ಕರ್ ಅವರು ಕಾರ್ಮಿಕ ಚಳವಳಿಗೆ ಇಳಿದ ನಂತರ ಈ ದೇಶದ ರೈತರು, ರೈಲ್ವೆ ನೌಕರರು, ಕೈಗಾರಿಕಾ ಕಾರ್ಮಿಕರು ಹೀಗೆ ಹಲವು ಕೆಳಸ್ತರದಲ್ಲಿ ದುಡಿಯುವ ಜನವರ್ಗದ ಬಗ್ಗೆ ಬಹಳಷ್ಟು ಸುಧಾರಣೆ ತರಲು ಪ್ರಯತ್ನಿಸಿದರು.

ಭಾರತವು ಹೆಚ್ಚು ಕೃಷಿಯನ್ನೇ ಅವಲಂಬಿಸಿದೆ. ಬಹುತೇಕ ಜನರು ಇಲ್ಲಿ ಕೃಷಿ ಕೂಲಿ ಕಾರ್ಮಿಕರಾಗಿಯೇ ಬದುಕುತ್ತಿದ್ದಾರೆ. ಇಂದಿಗೂ ಕೃಷಿ ಕೂಲಿ ಕಾರ್ಮಿಕರಿಗೆ ನಿಗದಿತ ಕೂಲಿಯನ್ನು ಭೂ ಮಾಲಕರು ನೀಡುತ್ತಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂದರ್ಭದಲ್ಲಿಯೂ ಕೃಷಿ ಕೂಲಿ ಕಾರ್ಮಿಕರಿಗೆ ನಿಗದಿತ ಕೂಲಿ ಸಿಗುತ್ತಿರಲಿಲ್ಲ. ಇದನ್ನು ಮನಗಂಡ ಅವರು ಕೃಷಿ ಕೂಲಿ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿ, ಭೂ ಕಂದಾಯ ಬಾಕಿ ಮತ್ತು ಗೇಣಿ ಬಾಕಿ ಮನ್ನಾ, ಜಮೀನ್ದಾರಿಕೆ ಪದ್ಧತಿಯಿಂದಾಗುವ ಸಾಮಾಜಿಕ ಕ್ರೌರ್ಯ ಮುಂತಾದ ಸಮಸ್ಯೆಗಳನ್ನು ನಿವಾರಿಸಬೇಕೆಂದು ಪ್ರಧಾನಿಯವರಿಗೆ ತಿಳಿಸಿದ್ದರು. ಅಂದಿನ ಸಂದರ್ಭದಲ್ಲಿ ಕಮ್ಯುನಿಷ್ಟರು ಅತಿ ಹೆಚ್ಚು ಕಾರ್ಮಿಕ ಚಳವಳಿಯಲ್ಲಿ ಗುರುತಿಸಿಕೊಂಡಿದ್ದರು. ಭಾರತೀಯ ಕಮ್ಯುನಿಷ್ಟರು ಸಮಸ್ಯೆಗಳ ವ್ಯಾವಹಾರಿಕತನವನ್ನು ಹಾಗೂ ಅದನ್ನು ಬಗೆಹರಿಸುವ ವಿಧಾನವನ್ನು ಸರಿಯಾದ ರೀತಿಯಲ್ಲಿ ಅನುಸರಿಸುವುದಿಲ್ಲ, ಎಲ್ಲಾ ಕಾರ್ಮಿಕ ವರ್ಗ ಮತ್ತು ಅವರ ಸಮಸ್ಯೆಗಳನ್ನು ರಾಜಕೀಯ ದೃಷ್ಟಿಯಿಂದಲೇ ನೋಡುತ್ತಾರೆ ಎಂದು ಇಲ್ಲಿನ ಕಮ್ಯುನಿಷ್ಟರ ಮೇಲೆ ಅಸಮಾಧಾನವಿತ್ತು. ಆದರೆ ಕಮ್ಯುನಿಸಂನ ಮೂಲ ಸಿದ್ಧಾಂತ ಅವರ ಎದೆಯಲ್ಲಿ ಆಳವಾಗಿ ಬೇರೂರಿತ್ತು. ಅವರು ಕಮ್ಯುನಿಸಂನ ಝೆಂಡಾ ಹಿಡಿಯದಿದ್ದರೂ ಅವರ ನಡಾವಳಿಗಳಲ್ಲಿ ಕಮ್ಯುನಿಸಂ ಅನ್ನು ತುಂಬಿಕೊಂಡಿದ್ದರು. ಪ್ರಪಂಚದಲ್ಲಿ ಎರಡು ರೀತಿಯ ವರ್ಗಗಳಿವೆ, ಅವೆಂದರೆ ಉಳ್ಳವರು ಮತ್ತು ಇಲ್ಲದವರು. ಶ್ರೀಮಂತರು ಮತ್ತು ಬಡವರು. ದುಡಿಯುವವರು ಮತ್ತು ದುಡಿಸಿಕೊಳ್ಳುವವರು. ಕಾರ್ಮಿಕರ ಬಡತನಕ್ಕೆ ಕಾರಣ ದುಡಿಸಿಕೊಳ್ಳುವವರ ಶ್ರೀಮಂತಿಕೆಯಲ್ಲಿದೆ. ಕಾರ್ಮಿಕರ ಸಮಸ್ಯೆಗಳು ಬಗೆಹರಿಯಬೇಕೆಂದರೆ ಜಾತಿ, ಧರ್ಮಗಳನ್ನು ಬಿಟ್ಟು ವ್ಯವಸ್ಥಿತವಾಗಿ ಕಾರ್ಮಿಕರು ಒಂದಾಗಬೇಕು ಎಂಬುದನ್ನು ಕೂಡ ಅಂಬೇಡ್ಕರ್ ಅಭಿಪ್ರಾಯಿಸುತ್ತಾರೆ.

ಕೃಷಿಕ ಕಾರ್ಮಿಕರ ನಂತರ ಅಂಬೇಡ್ಕರ್ ರೈಲ್ವೆ ಇಲಾಖೆಯ ಕಾರ್ಮಿಕರತ್ತ ಗಮನ ಹರಿಸಿದರು. ಗಿರಣಿಗಳಲ್ಲಿ ನೇಯ್ಗೆ ಉದ್ಯೋಗ ಮತ್ತು ರೈಲ್ವೆ ಇಲಾಖೆಗಳಲ್ಲಿ ರೈಲ್ವೆ ಮಾರ್ಗಗಳ ಗ್ಯಾಂಗ್ ಮನ್ ಗಳಾಗಿ ದುಡಿಯುವವರಲ್ಲಿ ಸ್ಪಶ್ಯರು ಮತ್ತು ಅಸ್ಪಶ್ಯರು ಇಬ್ಬರೂ ಕಾರ್ಮಿಕರಿದ್ದರು. ಕಾರ್ಮಿಕರಿಗೆ ವೇತನ, ಭದ್ರತೆ ಇತರೆ ಸಮಸ್ಯೆಗಳಾದರೆ, ಅಸ್ಪಶ್ಯ ಕಾರ್ಮಿಕರಿಗೆ ಸಾಮಾಜಿಕ ಸಮಸ್ಯೆ. ಅಲ್ಲಿ ದುಡಿಯುವ ವರ್ಗವಾಗಿದ್ದ ಇವರನ್ನು ಸ್ಟೇಷನ್ ಮಾಸ್ಟರ್, ಮತ್ತಿತರ ಮೇಲ್ವರ್ಗದ ನೌಕರರು ಮನೆಕೆಲಸಕ್ಕೂ ಕೂಡ ನೇಮಿಸಿಕೊಳ್ಳುತ್ತಿರಲಿಲ್ಲ. ಒಂದು ವೇಳೆ ನೇಮಿಸಿಕೊಂಡರೂ ಅವರಿಗೆ ಹಲವು ಕಾರಣಗಳಲ್ಲಿ ಅವಮಾನಿಸಲಾಗುತ್ತಿತ್ತು. ಬೇರೆ ಕಾರ್ಮಿಕರಿಗಿಂತ ಅಸ್ಪಶ್ಯ ಕಾರ್ಮಿಕರು ಭಿನ್ನ ಅಸಮಾನತೆಯನ್ನು ಅನುಭವಿಸಬೇಕಾಗಿತ್ತು. ಈ ಕಾರಣಕ್ಕಾಗಿ ಅಂಬೇಡ್ಕರ್ ಅವರು ದೇಶದಲ್ಲಿ ಕಾರ್ಮಿಕ ವರ್ಗಕ್ಕೆ ಬ್ರಾಹ್ಮಣ್ಯ ಮತ್ತು ಬಂಡವಾಳಶಾಹಿ ಎಂಬ ಇಬ್ಬರು ಶತ್ರುಗಳಿದ್ದಾರೆ ಎಂದು ಹೇಳುತ್ತಾರೆ. ದುಡಿಯುವ ವರ್ಗದ ಸಾಮಾಜಿಕ ಸ್ತರದಲ್ಲಿ ಬ್ರಾಹ್ಮಣ್ಯ ಮತ್ತು ಮಾಲಕ ಇಬ್ಬರೂ ಏಕ ಪ್ರಧಾನವಾಗಿ ಯೋಚಿಸುತ್ತಾರೆ. ಇದರ ಜೊತೆಗೆ ಅಧಿಕಾರವೂ ಅವರ ಕೈಯಲ್ಲೇ ಇರುವುದರಿಂದ ಕಾರ್ಮಿಕರ ಸ್ಥಿತಿ ಅಸ್ಪಶ್ಯರ ಸಮಸ್ಯೆಗಿಂತ ಭಿನ್ನವಾಗಿಲ್ಲ. ಬ್ರಾಹ್ಮಣ್ಯವು ಸೌಹಾರ್ದವನ್ನು ನಿರಾಕರಿಸುತ್ತದೆ. ಇದನ್ನು ಅದರ ಪ್ರವರ್ತಕರು ಚಾಚೂ ತಪ್ಪದೆ ಪಾಲಿಸುತ್ತಾರೆ. ಜತೆಗೆ ಆರ್ಥಿಕ ಕ್ಷೇತ್ರವನ್ನು ಹಿಡಿದುಕೊಂಡು ಅದರಲ್ಲಿರುವ ಸದಾವಕಾಶವನ್ನು ಇತರರಿಗೆ ನಿರಾಕರಿಸುತ್ತಾರೆ. ಕಾರ್ಮಿಕರ ಆರ್ಥಿಕ ಪ್ರಗತಿಯನ್ನು ಈ ದೇಶದ ಬಂಡವಾಳಶಾಹಿಗಳು ಮತ್ತು ಜಾತಿವಾದಿಗಳು ಸಹಿಸದವರು. ಕಾರಣ ಅಂಬೇಡ್ಕರ್ ಅವರೇ ಕಾರ್ಮಿಕ ಚಳವಳಿಗೆ ಮುಂದಾಗಿದ್ದು. ಕಾರ್ಮಿಕ ಪ್ರಗತಿಗೆ ಕಾರ್ಮಿಕ ಪಕ್ಷ ಅನಿವಾರ್ಯ, ಈ ಮೂಲಕ ರಾಜಕೀಯ ಅಧಿಕಾರ ಗಳಿಸಿದರೆ, ಕಾರ್ಮಿಕರ ಸಮಸ್ಯೆಗೆ ಅನುಕೂಲವಾಗುತ್ತದೆ ಎಂಬ ಉದ್ದೇಶದೊಂದಿಗೆ ಕಾರ್ಮಿಕ ಪಕ್ಷವನ್ನು ಅಸ್ತಿತ್ವಕ್ಕೆ ತಂದರು.

ದೇಶದಲ್ಲಿ ಜನರನ್ನು ಸುಲಿಗೆ ಮಾಡಲು ಜಮೀನ್ದಾರಿಕೆ, ಬಡ್ಡಿಸಾಲ ಮತ್ತು ಬಂಡವಾಳಶಾಹಿಗಳ ನಿರಂಕುಶತ್ವ ಇವೆಲ್ಲವೂ ಕಾರ್ಮಿಕರ ಸ್ಥಿತಿಯನ್ನು ಹೀನಾಯಕ್ಕೆ ಕೊಂಡೊಯ್ಯುತ್ತಿರುತ್ತವೆ. ಇವುಗಳ ಬಗ್ಗೆ ದನಿಯಾಗದ ಕಮ್ಯುನಿಷ್ಟ್ ನಾಯಕ ಎಂ.ಎನ್. ರಾಯ್ ಅವರು ಕಮ್ಯುನಿಷ್ಟ್ ಆಗಿ ಕಾರ್ಮಿಕ ಸಂಘಟನೆಯನ್ನು ಪ್ರತ್ಯೇಕವಾಗಿ ಕಟ್ಟಿಕೊಳ್ಳುವುದು ಮತ್ತು ಕಾರ್ಮಿಕ ಪಕ್ಷ ಕಟ್ಟುವುದನ್ನು ವಿರೋಧಿಸುತ್ತಾರೆ. ಅದಕ್ಕೆ ಅಂಬೇಡ್ಕರ್ ಅವರು ಪ್ರತಿಯಾಗಿ ‘ಇದೊಂದು ಘನ ಘೋರವಾದ ಅಪಾಯದ ಮಾತು, ಲೆನಿನ್‌ರು ಸಮಾಧಿಯಲ್ಲಿ ಇದನ್ನು ಕೇಳಿಸಿಕೊಂಡರೆ ರಾಯ್ ಅವರನ್ನು ತಿರುಗಿ ನೋಡಬಹುದು’ ಎಂದು ಹೇಳುತ್ತಾರೆ. ಒಂದು ನೆಲೆಯಲ್ಲಿ ಭಾರತೀಯ ಕಮ್ಯುನಿಷ್ಟರನ್ನು ವಿಮರ್ಶಿಸುತ್ತಲೇ, ಮತ್ತೊಂದೆಡೆ ಕಮ್ಯುನಿಸಂ ಅನ್ನು ಭಾರತೀಯ ಕಾರ್ಮಿಕ ವರ್ಗ ಮತ್ತು ಜಾತಿ ವ್ಯವಸ್ಥೆಯ ಸಮಸ್ಯೆಗೆ ಚಿಕಿತ್ಸಕ ದೃಷ್ಟಿಯಿಂದ ನೋಡಿದ್ದಾರೆ. ಭಿನ್ನ ದೇಶದ ಸಿದ್ಧಾಂತವಾದಿಗಳು ಕಮ್ಯುನಿಸಂ ಅನ್ನು ವರ್ಗ ಸಂಘರ್ಷದ ಆಯಾಮಗಳಲ್ಲಿ ನೋಡಿದರೆ ಅಂಬೇಡ್ಕರ್ ಅವರು ಭಾರತಕ್ಕೆ ಕಮ್ಯುನಿಸಂ ಅನ್ನು ವರ್ಗ ಮತ್ತು ಜಾತಿ ಸಮಸ್ಯೆಯ ನಿವಾರಣೆಯ ಮೂಲಕ ನೋಡುತ್ತಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)