varthabharthiಗಲ್ಫ್ ಸುದ್ದಿ

ಸೂಕ್ತ ದಾಖಲೆಗಳಿಲ್ಲದ ಭಾರತೀಯರನ್ನು ಉಚಿತವಾಗಿ ವಾಪಸ್ ಕಳುಹಿಸುತ್ತೇವೆ: ಕುವೈತ್

ವಾರ್ತಾ ಭಾರತಿ : 2 May, 2020

ಹೊಸದಿಲ್ಲಿ: ವೀಸಾ ನಿಯಮ ಉಲ್ಲಂಘಿಸಿ  ಕುವೈತ್‍ ನಲ್ಲಿರುವ ಹಲವಾರು ಭಾರತೀಯರಿಗೆ ಕ್ಷಮಾದಾನ ಅವಧಿ ಮುಕ್ತಾಯಗೊಂಡಿದ್ದರೂ ಸೂಕ್ತ ದಾಖಲೆಗಳನ್ನು ಹೊಂದಿರದ ಭಾರತೀಯ ಕಾರ್ಮಿಕರನ್ನು ‘ಉಚಿತವಾಗಿ’ ಅಲ್ಲಿಂದ ಕಳುಹಿಸಿ ಕೊಡಲು ತಾನು ಸಿದ್ಧವಿರುವುದಾಗಿ ಕುವೈತ್ ಮತ್ತೊಮ್ಮೆ ಹೇಳಿದೆ.

ಈ ಕುರಿತಂತೆ ಭಾರತದಲ್ಲಿನ ಕುವೈತ್ ರಾಯಭಾರಿ ಕೂಡ ಸ್ಪಷ್ಟಪಡಿಸಿದ್ದು ಕುವೈತ್ ತನ್ನದೇ ವೆಚ್ಚದಲ್ಲಿ ಕಾರ್ಮಿಕರನ್ನು ವಾಪಸ್ ಕಳುಹಿಸಲಿದೆ ಎಂದಿದ್ದಾರೆ. ಆದರೆ ಈ ಕುರಿತು ಭಾರತ ಸರಕಾರ ಇನ್ನೂ ಪ್ರತಿಕ್ರಿಯಿಸಿಲ್ಲ.

ಸೂಕ್ತ ದಾಖಲೆಗಳನ್ನು ಹೊಂದಿರದ ವಿದೇಶಿ ಕಾರ್ಮಿಕರು ಕ್ಷಮಾದಾನ ಅವಧಿಯಲ್ಲಿ ಶರಣಾದರೆ ಅವರನ್ನು ಆಶ್ರಯತಾಣದಲ್ಲಿರಿಸಿ ನಂತರ ಯಾವುದೇ ದಂಡ ವಿಧಿಸದೆ ಅವರನ್ನು ಸ್ವದೇಶಕ್ಕೆ, ಪ್ರಾಯಶಃ ಕಾನೂನುಬದ್ಧವಾಗಿ ವಾಪಸಾಗುವವರ ಜತೆಗೆ ಕಳುಹಿಸಲಾಗುವುದು.

ಇಲ್ಲಿಯ ತನಕ 23,500 ನಿಯಮ ಉಲ್ಲಂಘಕರಿಗೆ ಕ್ಷಮಾದಾನ ನೀಡಲಾಗಿದ್ದು, ಅವರ ಪೈಕಿ 21,000 ಮಂದಿಯನ್ನು ಆಶ್ರಯತಾಣಗಳಿಗೆ ಸ್ಥಳಾಂತರಿಸಲಾಗಿದ್ದು ಅವರನ್ನು ಸ್ವದೇಶಕ್ಕೆ ವಾಪಸ್ ಕಳುಹಿಸುವ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ.

ಎಪ್ರಿಲ್ 28ರಂದು ಕುವೈತ್‍ನ ಜಝೀರಾ ಏರ್ ಲೈನ್ಸ್ 121 ಬಾಂಗ್ಲಾದೇಶಿ ಕಾರ್ಮಿಕರನ್ನು ಢಾಕಾಗೆ ವಾಪಸ್ ಕಳುಹಿಸಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)