varthabharthi

ವಿಶೇಷ-ವರದಿಗಳು

ಫ್ಯಾಕ್ಟ್ ಚೆಕ್

‘ನಿಝಾಮುದ್ದೀನ್ ಮರ್ಕಝ್ ನಲ್ಲಿ ರಹಸ್ಯ ಸುರಂಗ’ ಎಂದು ಸುಳ್ಳುಗಳನ್ನೇ ‘ವಿಶೇಷ ವರದಿ’ಯಾಗಿ ಪ್ರಕಟಿಸಿದ ಟಿವಿ9

ವಾರ್ತಾ ಭಾರತಿ : 2 May, 2020
ಪೂಜಾ ಚೌಧುರಿ, ಮುಹಮ್ಮದ್ ಝುಬೈರ್, altnews.in

ಕೊರೋನವೈರಸ್ ಜಗತ್ತಿನಾದ್ಯಂತ ಲಕ್ಷಾಂತರ ಜೀವಗಳನ್ನು ಬಲಿ ಪಡೆದಿದೆ. ಭಾರತ ಸೇರಿ ವಿಶ್ವದ ಹಲವು ದೇಶಗಳು ಕೊರೋನ ಬಿಕ್ಕಟ್ಟಿನ ವಿರುದ್ಧ ಹೋರಾಟ ನಡೆಸುತ್ತಿದ್ದು, ಜಗತ್ತು ಈ ಹಿಂದಿನಂತಾಗಲು ಪ್ರಯತ್ನಿಸುತ್ತಿದೆ. ಆದರೆ ಭಾರತದ ಮಾಧ್ಯಮಗಳು ಮಾಡುತ್ತಿರುವುದೇನು? , ದೇಶದ ಮಾಧ್ಯಮಗಳು ವಾಸ್ತವದ ಬದಲಿಗೆ ಸುಳ್ಳುಗಳನ್ನು ಪ್ರಚಾರ ಮಾಡುತ್ತಾ ಸಾಮಾಜಿಕ ಜಾಲತಾಣದ ಮತ್ತೊಂದು ರೂಪವಾಗಿ ಬದಲಾಗಿ ಬಿಟ್ಟಿದೆ.

ಎಪ್ರಿಲ್ 18ರಂದು ಟಿವಿ9 ಭಾರತ್ ವರ್ಷ್ ‘ನಿಝಾಮುದ್ದೀನ್ ಮರ್ಕಝ್ ನಲ್ಲಿ ಮೌಲಾನ ಸಾದ್ ರ ರಹಸ್ಯ ಭೂಗತ ಸುರಂಗ ಪತ್ತೆ’ ಎನ್ನುವ ತಲೆಬರಹದಡಿ ವಿಶೇಷ ವರದಿಯೊಂದನ್ನು ಪ್ರಕಟಿಸಿತ್ತು. ಮೌಲಾನ ಸಾದ್ ತಬ್ಲೀಗಿ ಜಮಾತ್ ನ ಮುಖ್ಯಸ್ಥರಾಗಿದ್ದಾರೆ.

ಸಾಂದರ್ಭಿಕ ವಿಡಿಯೋ

‘200 ಮೀಟರ್ ಉದ್ದದ ರಹಸ್ಯ ಸುರಂಗವು ಸಾದ್ ರ ಕೋಣೆಯನ್ನು ನಿಝಾಮುದ್ದೀನ್ ಮರ್ಕಝ್ ಗೆ ಸಂಪರ್ಕಿಸುತ್ತದೆ’ ಎಂದು ಟಿವಿ9 ವರದಿ ಮಾಡಿತ್ತು. ಲಾಲ್ ಮಹಲ್, ಬಗೇಲ್ವಾಲಿ ಮಸ್ಜಿದ್ ಮತ್ತು ಘಾಲಿಬ್ ರೋಡ್ ಸೇರಿ ಇಡೀ ಕಟ್ಟಡವನ್ನು ಈ ಸುರಂಗ ಸಂಪರ್ಕಿಸುತ್ತದೆ ಎಂದು ಟಿವಿ9 ವಿಶೇಷ ವರದಿಯಲ್ಲಿ ಆರೋಪಿಸಲಾಗಿತ್ತು. ನಿಝಾಮುದ್ದೀನ್ ಪೊಲೀಸ್ ಠಾಣೆಯ 500 ಮೀಟರ್ ದೂರದಲ್ಲಿ ಈ ಸುರಂಗವಿದ್ದು, ಸಾದ್, ಅವರ ಪುತ್ರರು ಮತ್ತು ಸಹವರ್ತಿಗಳು ಮಾತ್ರ ಇಲ್ಲಿಗೆ ಪ್ರವೇಶಿಸಬಹುದು ಎಂದೂ ವರದಿಯಲ್ಲಿ ಆರೋಪಿಸಲಾಗಿತ್ತು. ಇದೇ ಸಂದರ್ಭ ಸುರಂಗದ್ದು ಎನ್ನಲಾದ ಫೋಟೊಗಳನ್ನು ಕೂಡ ಪ್ರಸಾರ ಮಾಡಲಾಗಿದ್ದು, ಇದು ಟಿವಿ9 ಮಾಡಿರುವ ವಿಡಿಯೋ ಎಂದು ಆ್ಯಂಕರ್ ಹೇಳಿದ್ದರು. ಆದರೆ ಫೂಟೇಜ್ ನ ಮೇಲೆ ‘ಸಾಂದರ್ಭಿಕ ವಿಡಿಯೋ’ ಎಂದು ಬಳಸಲಾಗಿತ್ತು. ಈ ಒಟ್ಟು ವರದಿಯಲ್ಲಿ ತಬ್ಲೀಗಿ ಜಮಾಅತ್ ನ ಸದಸ್ಯರದ್ದಾಗಲೀ, ನಿಝಾಮುದ್ದೀನ್ ಮರ್ಕಝ್ ನ ಅಧಿಕಾರಿಗಳದ್ದಾಗಲೀ ಅಥವಾ ಪೊಲೀಸರದ್ದಾಗಲೀ ಒಂದೇ ಒಂದು ಹೇಳಿಕೆ ಇರಲಿಲ್ಲ. ನಿಜವಾಗಿಯೂ ಸುರಂಗ ಇದೆ ಎನ್ನುವ ಬಗ್ಗೆ ವರದಿಯಲ್ಲಿ ಟಿವಿ9 ಸೂಕ್ತ ಆಧಾರಗಳನ್ನು ನೀಡಲೇ ಇಲ್ಲ.

ವಿಡಿಯೋ ಗೇಮ್ ನ ಫೂಟೇಜ್

ಸುರಂಗದ ಸಾಂದರ್ಭಿಕ ಚಿತ್ರ ಎಂದು ಟಿವಿ9 ಬಳಸಿದ್ದು ‘ಹಿಲ್ಸ್ ಲೆಜೆಂಡ್: ಆ್ಯಕ್ಷನ್ ಹಾರರ್’ ಎನ್ನುವ ವಿಡಿಯೋ ಗೇಮ್ ನ ಗ್ರಾಫಿಕ್ ಎನ್ನುವುದು ರಿವರ್ಸ್ ಸರ್ಚ್ ಮೂಲಕ ಬಹಿರಂಗವಾಗಿದೆ. ಈ ಗೇಮ್ ಈಗಲೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ.

ಇದೇ ಸಂದರ್ಭ ಟಿವಿ9 ಬಳಸಿದ ಸುರಂಗದ ಇನ್ನೊಂದು ಫೋಟೊ ರೊಮಾನಿಯನ್ ವೆಬ್ ಸೈಟ್ ಒಂದರದ್ದು. ಈ ವರದಿಯಲ್ಲೇ ಬಳಸಲಾಗಿರುವ ಗ್ರಾಫಿಕ್ ಗಳು ‘ಸಾಂದರ್ಭಿಕ’ ಎಂದು ಟಿವಿ9ಹೇಳುತ್ತದೆ, ಆದರೆ 3:46 ನಿಮಿಷದಲ್ಲಿ ಆ್ಯಂಕರ್ ಟಿವಿ9 ಚಿತ್ರೀಕರಿಸಿದ ವಿಡಿಯೋ ಎಂದು ಹೇಳುತ್ತಾರೆ.

ನಿಝಾಮುದ್ದೀನ್ ಮರ್ಕಝ್ ನಲ್ಲಿ ಸುರಂಗವಿದೆಯೇ?

ಈ ಪ್ರಶ್ನೆಗೆ ಸಿಗುವ ಸ್ಪಷ್ಟ ಉತ್ತರ ‘ಇಲ್ಲ’.

“ಮರ್ಕಝ್ ಗೆ ಒಬ್ಬ ವ್ಯಕ್ತಿ ಪ್ರವೇಶಿಸಿದಾಗ ಎಡಭಾಗದಲ್ಲಿ ಮೆಟ್ಟಿಲುಗಳು ಮತ್ತು ಇನ್ನೊಂದು ಭಾಗದಲ್ಲಿ ಅಡುಗೆ ಕೋಣೆ ಸಿಗುತ್ತದೆ, ಕಿಚನ್ ಸಮೀಪದಲ್ಲಿ ಬೇಸ್ ಮೆಂಟ್ ಹೋಗುವ ಸಣ್ಣ ದಾರಿ ಇದ್ದು, ಅಲ್ಲಿ ಸಾದ್ ರ ಸುರಂಗವಿದೆ. ಈ ಸುರಂಗವು 200 ಮೀಟರ್ ಉದ್ದವಿದೆ. ಈ ಸುರಂಗವನ್ನು ಬಳಸಿ ಯಾವುದೇ ಮೂಲೆಯನ್ನು ತಲುಪಬಹುದು ಎನ್ನುವಷ್ಟು ನಿಖರವಾದ ಜಾಗದಲ್ಲಿ ಮೌಲಾನ್ ಸಾದ್ ರ ರಹಸ್ಯ ಸುರಂಗವನ್ನು ನಿರ್ಮಿಸಲಾಗಿದೆ. ಲಾಲ್ ಮಹಲ್, ಮರ್ಕಝಿ ಮಸ್ಜಿದ್ ಮತ್ತು ಘಾಲಿಬ್ ರೋಡ್ ಹೀಗೆ ಇಡೀ ಕಟ್ಟಡದ ಯಾವುದೇ ಭಾಗಗಳಿಗೂ ಹೋಗಬಹುದು” ಎಂದು ಟಿವಿ9 ವರದಿಯಲ್ಲಿ ಆರೋಪಿಸಲಾಗಿತ್ತು.

ಮೌಲಾನ ಸಾದ್ ರ ಕೋಣೆ ಎಲ್ಲಿದೆ?

ಮೇಲಿರುವ ಅನಿಮೇಟೆಡ್ ಮ್ಯಾಪ್ ನಲ್ಲಿ ಟಿವಿ9 ಸಾದ್ ರ ಕೋಣೆಯನ್ನು ಬಂಗ್ಲೇವಾಲಿ ಮಸ್ಜಿದ್ ಅಂದರೆ ನಿಝಾಮುದ್ದೀನ್ ಮರ್ಕಝ್ ನ ಪಕ್ಕದಲ್ಲಿರುವಂತೆ ತೋರಿಸಿದೆ. ಆದರೆ “ಸಾದ್ ರ ಕೋಣೆ ಮರ್ಕಝ್ ನ ಒಳಗಿದೆ, ಹೊರತು ಬೇರೆ ಕಟ್ಟಡದಲ್ಲಿಲ್ಲ” ಎಂದು ಮರ್ಕಝ್ ನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ತನ್ನ ವರದಿಯಲ್ಲಿ ಟಿವಿ9 ಸರಿಯಾಗಿ ಪ್ರಕಟಿಸಿದ ಮಾಹಿತಿ ಎಂದರೆ ಮರ್ಕಝ್ ಪ್ರವೇಶಿಸಿದ ನಂತರ ಎಡಭಾಗದಲ್ಲಿ ಸಿಗುವ ಮೆಟ್ಟಿಲುಗಳು. ಈ ಮೆಟ್ಟಿಲುಗಳು ಮೊದಲನೆ ಮಹಡಿಯಲ್ಲಿರುವ ಪ್ರಾರ್ಥನಾ ಹಾಲ್ ಸಂಪರ್ಕಿಸುತ್ತದೆ. ಸಾದ್ ರ ಕೋಣೆಯು ಇದೇ ಹಾಲ್ ಗೆ ಅಂಟಿಕೊಂಡಿದೆ ಮತ್ತು ಆ ಕೋಣೆಯ ಆಚೆಗೆ ಅವರ ಮನೆಯಿದೆ. ಮನೆ ಮತ್ತು ಕೋಣೆ ಎರಡೂ ಕೂಡ ಮರ್ಕಝ್ ಕಟ್ಟಡದಲ್ಲೇ ಇದೆ.

ಈ ಕೋಣೆ ಇರುವುದರಿಂದ ಸಾದ್ ರಿಗೆ ಮಸ್ಜಿದ್ ಗೆ ನೇರ ಸಂಪರ್ಕವಿದೆ. ಇದೇ ಕೋಣೆ ಇರುವುದರಿಂದ ಅವರಿಗೆ ಮನೆಯೂ ನೇರ ಸಂಪರ್ಕದಲ್ಲಿದೆ. ಒಂದು ವೇಳೆ ಈ ಕೋಣೆ ಇಲ್ಲದಿದ್ದಲ್ಲಿ ಸಾದ್ ಮರ್ಕಝ್ ಕಟ್ಟಡ ತಲುಪಲು ಘಾಲಿಬ್ ರೋಡ್, ದರ್ಗಾ ರೋಡ್ ನಿಂದ ಆಗಮಿಸಬೇಕು ಎಂದು ಮರ್ಕಝ್ ಅಧಿಕಾರಿಯೊಬ್ಬರು ಮಾಹಿತಿ ನೀಡುತ್ತಾರೆ. ಮರ್ಕಝ್ ಕಟ್ಟಡಕ್ಕೆ ಸಾದ್ ರಿಗೆ ಕೋಣೆಯಿಂದಲೇ ನೇರ ಸಂಪರ್ಕವಿರುವಾಗ ರಹಸ್ಯ ಸುರಂಗದ ಅವಶ್ಯಕತೆ ಏನಿದೆ ಎನ್ನುವ ಪ್ರಶ್ನೆಯೂ ಮೂಡುತ್ತದೆ.

ರಹಸ್ಯ ಸುರಂಗ

ಲಾಲ್ ಮಹಲ್ ಏರಿಯಾದವರೆಗೆ ಈ ಸುರಂಗವಿದೆ ಎಂದು ಟಿವಿ9 ವರದಿ ಮಾಡಿದೆ. ಸುರಂಗವಿದೆ ಎಂದು ಟಿವಿ9 ಹೇಳಿದ ಪ್ರದೇಶದ ಗೂಗಲ್ ಮ್ಯಾಪ್ ನಕ್ಷೆ ಈ ಕೆಳಗಿದೆ. ಬೈರೂಲ್ ವಾಲಿ ಕಟ್ಟಡದಿಂದ ಆರಂಭವಾಗುವ ಸುರಂಗ ಮರ್ಕಝ್ ಕಾಂಪ್ಲೆಕ್ಸ್ ದಾಟಿ ಲಾಲ್ ಮಹಲ್ ಏರಿಯಾವನ್ನು ಸಂಪರ್ಕಿಸುತ್ತದೆ ಎಂದು ಟಿವಿ9 ಆರೋಪಿಸಿದೆ. ಮರ್ಕಝ್ ಕಟ್ಟಡದ ನೆಲ ಮಹಡಿಯನ್ನು ಟಿವಿ9 ‘ಭೂಗತ ಸುರಂಗ’ ಎಂದು ಘೋಷಿಸಿದೆ.

ಕಟ್ಟಡದ ವಿವಿಧ ಭಾಗಗಳನ್ನು ಸಂಪರ್ಕಿಸುವ ವಿಶಾಲ ಜಾಗವಾಗಿದೆ ಈ ನೆಲ ಮಹಡಿ. ಇದು ಪ್ರವೇಶ ದ್ವಾರದಿಂದ ಆರಂಭವಾಗಿ ಕಟ್ಟಡದ ಕೊನೆಯಲ್ಲಿರುವ ಕಿಚನ್ ವರೆಗೆ ಇದೆ. ಆದರೆ ಈ ಜಾಗವನ್ನೇ ಟಿವಿ9 ‘ಸುರಂಗ’ ಎಂದು ವಿಶೇಷ ವರದಿ ಪ್ರಕಟಿಸಿದೆ.

ಯಾವುದೇ ಗೇಟ್ ಮುಖಾಂತರ ನೀವು ಮರ್ಕಝ್ ಕಟ್ಟಡ ಪ್ರವೇಶಿಸಿದರೆ ಮೂರು ವಿವಿಧ ಮೆಟ್ಟಿಲುಗಳು ನಿಮಗೆ ಕಾಣಿಸುತ್ತದೆ. ಒಂದು ಮೆಟ್ಟಿಲು ಅಂದರೆ ಎಡಭಾಗದಲ್ಲಿರುವ ಮೆಟ್ಟಿಲು ಮೊದಲ ಮಹಡಿಯಲ್ಲಿರುವ ಮಸೀದಿಗೆ ಸಂಪರ್ಕಿಸುತ್ತದೆ. ಅದರ ಸಮೀಪದಲ್ಲೇ ಸಾದ್ ರ ಕೋಣೆಯಿದೆ. ಬಲ ಭಾಗದಲ್ಲಿರುವ 2 ಮೆಟ್ಟಿಲುಗಳಲ್ಲಿ ಒಂದು ಊಟ ಮಾಡುವ ಪ್ರದೇಶ ಮತ್ತೊಂದು ಮೊದಲ ಮಹಡಿಯಲ್ಲಿರುವ ಬೈರೂನ್ ವಾಲಿ ಕಟ್ಟಡವನ್ನು ಸಂಪರ್ಕಿಸುತ್ತದೆ. ಇದನ್ನು ಸಾಗಿ ಸ್ವಲ್ಪ ಮುಂದೆ ಹೋದರೆ ವೀಲ್ ಚೇರ್ ರ್ಯಾಂಪ್ ಇದ್ದು ಅದೂ ಕೂಡ ಮಸೀದಿಯನ್ನು ಸಂಪರ್ಕಿಸುತ್ತದೆ. ಈ ದಾರಿಯಲ್ಲಿ ಕೊನೆಗೆ ಸಿಗುವುದು ಕಿಚನ್ ಮತ್ತು ಪವರ್ ಕ್ಯಾಬಿನ್. ಈ ಕಿಚನ್ ಸಮೀಪ ಮತ್ತೊಂದು ಮೆಟ್ಟಿಲು ಬೇಸ್ ಮೆಂಟ್ ಅನ್ನು ಸಂಪರ್ಕಿಸುತ್ತದೆ.

ಇಡೀ ಕಟ್ಟಡದಲ್ಲಿ ಬೇಸ್ ಮೆಂಟ್ ನಲ್ಲಿ ಜನರ ಓಡಾಟ ಅಷ್ಟೇನೂ ಇರುವುದಿಲ್ಲ. ಆದರೆ ಈ ಪ್ರದೇಶವೂ ತೆರೆದ ಪ್ರದೇಶವಾಗಿದ್ದು, ‘ರಹಸ್ಯ’ವಾಗಿ ಏನೂ ಇಲ್ಲ. ಒಂದು ಪ್ರವೇಶ ಮತ್ತೊಂದು ನಿರ್ಗಮನ ದಾರಿ ಈ ಬೇಸ್ ಮೆಂಟ್ ಗಿದೆ. ಆಹಾರ ವಿತರಣೆಗಾಗಿ ಬೇಸ್ ಮೆಂಟ್ ಪ್ರದೇಶವನ್ನು ಬಳಸಲಾಗುತ್ತದೆ ಎಂಬುದನ್ನು ಹಲವು ಮೂಲಗಳ ಮೂಲಕ Altnews.in ಕಂಡುಕೊಂಡಿದೆ. ಸಾದ್ ರ ಕೋಣೆಯಿಂದ ಬೇಸ್ ಮೆಂಟ್ ಪ್ರದೇಶಕ್ಕೆ ನೇರ ಸಂಪರ್ಕವೇ ಇಲ್ಲ. ಈ ಪ್ರದೇಶಕ್ಕೆ ಬರಲು ಅವರು ನೆಲ ಮಹಡಿಗೆ ಬರಲೇಬೇಕು.

ಈ ಸುರಂಗವು ಲಾಲ್ ಮಹಲ್ ಏರಿಯಾದವರೆಗೂ ಸಾಗುತ್ತದೆ ಎಂದು ಟಿವಿ9 ಆರೋಪಿಸಿತ್ತು. ಆದರೆ ಕಿಚನ್ / ಪವರ್ ರೂಂ ನಂತರ ಗೋಡೆಯೊಂದಿದೆ. ಇದು ಈ ಕಟ್ಟಡದ ಕೊನೆಯಾಗಿದೆ. ನೀವು ‘ಅದೃಶ್ಯ ಮಾನವ’ನಾಗಿದ್ದರೆ ಮಾತ್ರ ಗೋಡೆ ದಾಟಿ ಇನ್ನೊಂದು ಕಡೆಗೆ ಹೋಗಬಹುದಾಗಿದೆ!.

ಬೈರೂನ್ ವಾಲಿ ಕಟ್ಟಡದಿಂದ ಆರಂಭವಾಗುವ ಸುರಂಗವು ಮರ್ಕಝ್ ಕಟ್ಟಡದ ಮುಖಾಂತರ ಲಾಲ್ ಮಹಲನ್ನು ಸಂಪರ್ಕಿಸುತ್ತದೆ ಎಂದು ಟಿವಿ9 ಆರೋಪಿಸಿತ್ತು. ಆದರೆ ಬೈರೂನ್ ವಾಲಿ ಕಟ್ಟಡ ಎನ್ನುವುದು ಪ್ರತ್ಯೇಕ ಕಟ್ಟಡವಲ್ಲ, ಇದು ಮರ್ಕಝ್ ಕಟ್ಟಡದ ಮೊದಲ ಮಹಡಿಯಲ್ಲೇ ಇದೆ. ಎರಡನೆಯದಾಗಿ ಸಾದ್ ರ ಕೋಣೆಯು ಕಟ್ಟಡದ ಮೊದಲ ಮಹಡಿಯಲ್ಲಿದೆ. ಟಿವಿ9 ಯಾವುದನ್ನು ಸುರಂಗ ಎಂದಿತ್ತೋ ಅದು ವಾಸ್ತವವಾಗಿ ನೆಲ ಮಹಡಿ. ನೆಲ ಮಹಡಿಯಲ್ಲಿರುವುದು ಊಟ ಮಾಡುವ ಪ್ರದೇಶ ಮತ್ತು ಬೇಸ್ ಮೆಂಟ್ . ಈ ಬೇಸ್ ಮೆಂಟ್ ಜನರಿಗೆ ಮುಕ್ತವಾಗಿಯೇ ಇದೆ ಹೊರತು ರಹಸ್ಯವಾಗಿ ಅಲ್ಲ.

ಲಕ್ನೋ ಮರ್ಕಝ್ ಫೋಟೊಗಳನ್ನು ಪ್ರಸಾರ ಮಾಡಿದ ಟಿವಿ9

ಟಿವಿ9 ತನ್ನ ‘ಎಕ್ಸ್ ಕ್ಲೂಸಿವ್ ಬ್ರೇಕಿಂಗ್ ನ್ಯೂಸ್’ನಲ್ಲಿ ಹಲವು ಕಡೆ ದಿಲ್ಲಿಯ ನಿಝಾಮುದ್ದೀನ್ ಮರ್ಕಝ್ ಎಂದು ಲಕ್ನೋದ ಮರ್ಕಝ್ ಪೋಟೊಗಳನ್ನು ಪ್ರಕಟಿಸಿತ್ತು. ಈ ಕೆಳಗಿನ ಟಿವಿ9 ವರದಿಯ ಸ್ಕ್ರೀನ್ ಶಾಟ್ ನಲ್ಲಿ ಮರ್ಕಝ್ ಕಟ್ಟಡದ ಕೆಳಗೆ ಸ್ಟಾರ್ ಬ್ಯುಸಿನೆಸ್ ಸೆಂಟರ್ ಎಂದು ಬರೆದಿರುವುದು ಕಾಣಬಹುದು.

ಇದು ದಿಲ್ಲಿಯ ಮರ್ಕಝ್ ಕಟ್ಟಡ ಎಂದು ಟಿವಿ9 ಹೇಳಿದ್ದರೆ, ನಿಜವಾಗಿಯೂ ಇದು ಲಕ್ನೋದ ಆಮಿನಾಬಾದ್ ನ ಕಟ್ಟಡವಾಗಿದೆ. ಗೂಗಲ್ ಮ್ಯಾಪ್ ಮೂಲಕ ನೀವು ಈ ಕಟ್ಟಡವನ್ನು ಪರಿಶೀಲಿಸಿದಾಗ ಅದರಲ್ಲೂ ಸ್ಟಾರ್ ಬ್ಯುಸಿನೆಸ್ ಸೆಂಟರ್ ಬೋರ್ಡ್ ಇರುವುದು ಕಾಣಬಹುದಾಗಿದೆ.

ನಿಝಾಮುದ್ದೀನ್ ಮರ್ಕಝ್ ಮತ್ತು ಲಕ್ನೋ ಮರ್ಕಝ್ ಕಟ್ಟಡಗಳ ವಿನ್ಯಾಸಗಳಲ್ಲೂ ಹಲವು ವ್ಯತ್ಯಾಸಗಳಿರುವುದನ್ನು ಈ ಎರಡೂ ಫೋಟೊಗಳು ಸಾಬೀತುಪಡಿಸುತ್ತದೆ.

ಒಟ್ಟಿನಲ್ಲಿ ಟಿವಿ9 ತಪ್ಪು ಮಾಹಿತಿಗಳೊಂದಿಗೆ, ಆಧಾರಗಳಿಲ್ಲದೆ ನಿಝಾಮುದ್ದೀನ್ ಮರ್ಕಝ್ ಬಗ್ಗೆ ವರದಿಯೊಂದನ್ನು ಪ್ರಕಟಿಸಿರುವುದು ಖಚಿತಗೊಂಡಿದೆ. ‘ರಹಸ್ಯ ಸುರಂಗ’ ಎಂಬ ಟಿವಿ9ನ ಎಕ್ಸ್ ಕ್ಲೂಸಿವ್ ವರದಿಯಲ್ಲಿ ಎಲ್ಲಾ ಮಾಹಿತಿಗಳು ಸುಳ್ಳು ಎನ್ನುವುದು ಸಾಬೀತುಗೊಂಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)