varthabharthi

ನಿಮ್ಮ ಅಂಕಣ

‘ರಾಕಿ’ಯ ಮೂಲಕ ಸಿಕ್ಕಿದ ಉತ್ತರ

ವಾರ್ತಾ ಭಾರತಿ : 2 May, 2020
ಶಾಹಿದಾ ಶುಕೂರ್

ಒಂದು ಪ್ರಶ್ನೆ ನನ್ನನ್ನು ಬಹುಕಾಲ ಕಾಡಿತ್ತು. ಯಾವ ಗುರುವಿನ ಬಳಿಯೂ ಅದಕ್ಕೊಂದು ತೃಪ್ತಿದಾಯಕ ಉತ್ತರ ಸಿಕ್ಕಿರಲಿಲ್ಲ. ಕೊನೆಗೊಮ್ಮೆ ಒಂದು ವಿಶಿಷ್ಟ ಅನುಭವವಾಯಿತು. ಅನುಭವಕ್ಕಿಂತ ದೊಡ್ಡ ಗುರು ಯಾರಿದ್ದಾರೆ ಹೇಳಿ? ನಾನಾಗ ದಿಲ್ಲಿಯ ಒಂದು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಪಶು ವೈದ್ಯನಾಗಿದ್ದೆ. ದಿಲ್ಲಿಯಲ್ಲಿರುವ ಅಮೆರಿಕನ್ ರಾಯಭಾರಿಯ ಸಾಕು ನಾಯಿಗೆ ಏನೋ ಸಮಸ್ಯೆಯಾಗಿದೆ, ರಾಯಭಾರಿ ನನ್ನನ್ನು ಕಾಣ ಬಯಸುತ್ತಾರೆ ಎಂಬ ಸಂದೇಶ ಬಂತು. ಸುಮಾರು 11 ಗಂಟೆಯ ಹೊತ್ತಿಗೆ ರಾಯಭಾರಿ ಮೇಡಂ ತಮ್ಮ ನಾಯಿ ಮತ್ತು ನಾಲ್ಕು ಮಂದಿ ಸಿಬ್ಬಂದಿಯೊಂದಿಗೆ ಹಾಜರಾದರು.

ಇವನು ನನ್ನ ರಾಕಿ (Rocky). ತುಂಬಾ ಉತ್ತಮ ತಳಿಯವನು ಈ ರಾಕಿ. ಈ ದುಬಾರಿ ರಾಕಿ ನನಗೆ ತುಂಬಾ ಇಷ್ಟ. ನಾನು ಇವನನ್ನು ನನ್ನ ಸ್ವಂತ ಮಗುವಿನಂತೆ ಸಾಕಿದ್ದೇನೆ. ಆದರೆ ಯಾಕೋ ಕಳೆದ ಕೆಲವು ವಾರಗಳಿಂದ ಇವನ ನಡವಳಿಕೆಯಲ್ಲಿ ತುಂಬಾ ಬದಲಾವಣೆಯಾಗಿದೆ. ಇತ್ತೀಚೆಗೆ ಇವನು ನನ್ನ ಯಾವ ಮಾತನ್ನೂ ಕೇಳುತ್ತಿಲ್ಲ. ಕೆಲವೊಮ್ಮೆ ನನ್ನ ಪರಿಚಯವೇ ಇಲ್ಲವೆಂಬಂತೆ ವರ್ತಿಸುತ್ತಾನೆ. ನಾನೆಷ್ಟು ಕರೆದರೂ ನನ್ನ ಬಳಿಗೆ ಬರುವುದಿಲ್ಲ. ನನ್ನನ್ನು ಕಂಡರೆ ದೂರ ಹೋಗಿ ಬಿಡುತ್ತಾನೆ. ಹೀಗೆ ಆ ರಾಯಭಾರಿ ಮಹಿಳೆ ಬಹಳ ಭಾವನಾತ್ಮಕವಾಗಿ ತನ್ನ ಚಿಂತೆಯನ್ನು ಹಂಚಿಕೊಂಡರು. ಮೇಡಂ, ನನಗೆ ಈ ರಾಕಿಯ ಆರೋಗ್ಯ ಪರಿಶೀಲನೆಗೆ ತುಸು ಸಮಯ ಬೇಕು. ನೀವು ಸದ್ಯ ಇವನನ್ನು ಇಲ್ಲೇ ಬಿಟ್ಟು ಹೋಗಿ. ಮಧ್ಯಾಹ್ನ 3 ಗಂಟೆಗೆ ಫೋನ್ ಮಾಡಿದರೆ ನಾನು ನಿಮಗೆ ರಿಪೋರ್ಟ್ ಕೊಡುತ್ತೇನೆ ಎಂದು ಹೇಳಿದೆ. ಆ ಮಹಿಳೆ ತೀರಾ ಒಲ್ಲದ ಮನಸ್ಸಿನಿಂದ ಒಪ್ಪಿ ಹೊರಟು ಹೋದರು. ನಾನು ರಾಕಿಯ ಜೊತೆ ಸ್ವಲ್ಪಹೊತ್ತು ಕಳೆದಾಗ ನನಗೆ ಅವನ ಸಮಸ್ಯೆ ಅರ್ಥವಾಗತೊಡಗಿತು. ಅವನ ಮಾಲಕಿ ಅವನನ್ನು ಭಾರೀ ಮುದ್ದಿನಿಂದ ಸಾಕಿದ್ದಳು. ತೀರಾ ದುಬಾರಿಯಾದ ಎಲ್ಲ ಸವಲತ್ತುಗಳನ್ನು ಒದಗಿಸಿದ್ದಳು. ಅವನಿಗೆ ಆಹಾರ ಉಣಿಸಲಿಕ್ಕೆಂದೇ ನೌಕರರನ್ನು ನೇಮಿಸಿದ್ದಳು. ಮಲಗುವುದಕ್ಕೆ ಭಾರೀ ಬೆಲೆಬಾಳುವ ಹಾಸಿಗೆ ಒದಗಿಸಿದ್ದಳು. ಆತನನ್ನು ಸದಾ ಹವಾ ನಿಯಂತ್ರಿತ ಕೊಠಡಿಯಲ್ಲೇ ಇಟ್ಟಿದ್ದಳು. ಇದರಿಂದಾಗಿ ಆ ನಾಯಿ ತೀರಾ ಒರಟು ಸ್ವಭಾವವನ್ನು ಬೆಳೆಸಿಕೊಂಡಿತ್ತು.

ನಮ್ಮ ಆಸ್ಪತ್ರೆಯಲ್ಲಿ ನಾವು ಕೊಡುವ ಯಾವ ಆಹಾರವನ್ನೂ ಅದು ತಿನ್ನುತ್ತಿರಲಿಲ್ಲ. ಯಾವ ಜಾಗದಲ್ಲೂ ಕೂರಲು ಒಪ್ಪುತ್ತಿರಲಿಲ್ಲ. ಎಲ್ಲವನ್ನೂ ತಾತ್ಸಾರದಿಂದ ಕಾಣುತ್ತಿತ್ತು. ಅವಿಧೇಯತೆಯೇ ಅದರ ಪ್ರಧಾನ ಲಕ್ಷಣವಾಗಿತ್ತು. 3 ಗಂಟೆಗೆ ಸರಿಯಾಗಿ ಮೇಡಂ ಅವರ ಕಚೇರಿಯಿಂದ ಫೋನ್ ಬಂತು. ಸ್ವತಃ ಮೇಡಂ ಮಾತನಾಡಿದರು. ರಾಕಿಯನ್ನು ಇಂದು ಬಿಡುಗಡೆಗೊಳಿಸಲು ಸಾಧ್ಯವಿಲ್ಲ. ನಾಳೆ ಸಂಜೆ ಐದು ಗಂಟೆಯ ತನಕ ರಾಕಿ ಇಲ್ಲೇ ಇರಬೇಕಾಗುತ್ತದೆ ಎಂದು ಹೇಳಿದೆ. ಸ್ವಲ್ಪ ಹೊತ್ತು ಆ ಕುರಿತು ತಕರಾರು ಮಾಡಿದ ಮೇಡಂ ಕೊನೆಗೆ ಒಪ್ಪಿಕೊಂಡರು. ನಾನು ನಮ್ಮ ಅಸಿಸ್ಟೆಂಟ್ ವಾಸುವನ್ನು ಕರೆದು ಈ ರಾಕಿಯನ್ನು, ಅಲ್ಲಿ ಕಿಶನ್ ದಾಸನ ಎಮ್ಮೆಗಳ ಹಟ್ಟಿಯಲ್ಲಿ ಕಟ್ಟಿ ಹಾಕು ಅಂದೆ. ಸಾರ್, ಇದು ಎಸಿ ಕೊಠಡಿಯಲ್ಲೇ ಬೆಳೆದಿರೋ ನಾಯಿ ಸಾರ್. ಅಲ್ಲಿ ಎಮ್ಮೆಗಳ ಹಟ್ಟಿಯಲ್ಲಿ ಸೊಳ್ಳೆ, ನೊಣಗಳ ನಡುವೆ, ಆ ಕೆಸರು, ಸೆಗಣಿ ಮತ್ತು ದಟ್ಟ ದುರ್ವಾಸನೆಯಲ್ಲಿ ಇದು ಸತ್ತೇ ಹೊದೀತು ಸಾರ್ ಅಂದ. ದಿನಕ್ಕೆರಡು ಕೆಜಿ ಮಾಂಸ ತಿಂದು ಬೆಳೆದ ರಾಕಿ ಅಷ್ಟು ಬೇಗ ಸಾಯೋನಲ್ಲ. ನೀನು ಇವನನ್ನು ಅಲ್ಲಿ ಕಟ್ಟಿ ಹಾಕು. ಅನ್ನ, ನೀರು ಏನನ್ನೂ ಕೊಡಬೇಡ. ಅಂದೆ. ವಾಸು, ರಾಕಿಯನ್ನು ಎಮ್ಮೆಹಟ್ಟಿಯಲ್ಲಿ ಕಟ್ಟಿ ಹಾಕಿದ.

ಸ್ವಲ್ಪ ಹೊತ್ತಿನಲ್ಲೇ ರಾಕಿಯ ಬೊಬ್ಬೆ ಮೊಳಗ ತೊಡಗಿತು. ವಾಸು ಪದೇ ಪದೇ ಬಂದು, ಏನು ಮಾಡೋಣ ಸಾರ್ ಎಂದು ಕೇಳ ತೊಡಗಿದ. ಏನೂ ಮಾಡಬೇಡ. ತುಂಬಾ ಕಿರುಚಾಡಿದರೆ ಆ ಲೆದರ್ ಬೆಲ್ಟ್‌ನಿಂದ ನುಣುಪಾಗಿ ನಾಲ್ಕು ಬಾರಿಸು ಅಂದೆ. ಬೆಳಗ್ಗೆ ವಾಸು ನನ್ನ ಮನೆಗೆ ಫೋನ್ ಮಾಡಿ ಸಾರ್ ರಾಕಿ ರಾತ್ರಿಯಿಡೀ ಮಲಗಿಲ್ಲ. ಸೊಳ್ಳೆಗಳ ಕಾಟಕ್ಕೆ ರಾತ್ರಿಯೆಲ್ಲಾ ಕಿರಿಚಾಡುತ್ತಲೇ ಇದ್ದ. ಅವನನ್ನು ಬಿಚ್ಚಿಬಿಟ್ಟು ಏನಾದರೂ ಆಹಾರ ಕೊಡೋಣವೇ? ಎಂದು ಕೇಳಿದ. ನೀನು ಸದ್ಯ ಏನನ್ನೂ ಮಾಡಬೇಡ. ಯಾವುದಕ್ಕೂ 9 ಗಂಟೆಗೆ ನಾನು ಬರುತ್ತೇನೆ. ಅಂದೆ. ನಾನು ಹಟ್ಟಿಗೆ ಹೋದಾಗ ರಾಕಿ ತೀರಾ ಕ್ಷೀಣವಾಗಿ ಬಿಟ್ಟ. ಅವನಿಗೆ ನಿನ್ನೆಯಿಂದ ಯಾರೂ ಏನನ್ನೂ ತಿನ್ನಲು ಕೊಟ್ಟಿರಲಿಲ್ಲ. ಸೊಳ್ಳೆಗಳು ಮಲಗಲು ಬಿಟ್ಟಿರಲಿಲ್ಲ. ಸಾಲದ್ದಕ್ಕೆ ಅಲ್ಲಿನ ದುರ್ವಾಸನೆ ಅಸಹ್ಯವಾಗಿತ್ತು. ಕೋಪಗೊಂಡು ಶಬ್ದ ಮಾಡಿದರೆ ವಾಸು ಬೆಲ್ಟ್ ನಿಂದ ಹೊಡೆಯುತ್ತಿದ್ದ. ನನ್ನನ್ನು ಕಂಡವನೇ ರಾಕಿ ತೀರಾ ವಿನಯದೊಂದಿದೆ ನನ್ನನ್ನು ನೋಡಲಾರಂಭಿಸಿದ. ನಾನು, ರಾಕಿಯನ್ನು ಅಲ್ಲಿಂದ ಹೊರತಂದು ಸ್ನಾನ ಮಾಡಿಸಲು ವಾಸುವಿಗೆ ಹೇಳಿ, ರಾಕಿಗಾಗಿ ನಾನೇ ತಂದಿದ್ದ ಆಹಾರವನ್ನು ಬಡಿಸಿದೆ. ರಾಕಿ ಆಗಲೇ ಸಾಕಷ್ಟು ಬದಲಾಗಿದ್ದ. ನನ್ನನ್ನು ತುಂಬಾ ಪ್ರೀತಿಯಿಂದ ಕೃತಜ್ಞತೆ ತುಂಬಿದ ಕಣ್ಣುಗಳಿಂದ ನೋಡುತ್ತಿದ್ದ. ನಾನು ಅವನನ್ನು ಮತ್ತೆ ವಾಸುವಿನ ವಶಕ್ಕೆ ಕೊಟ್ಟು ಅವನನ್ನು ಹಟ್ಟಿಗೆ ಒಯ್ದು ಅಲ್ಲಿ ಕಟ್ಟಿ ಹಾಕು, ಹೊಟ್ಟೆಗೇನೂ ಕೊಡಬೇಡ, ಸ್ವಲ್ಪ ಅವಿಧೇಯತೆ ಏನಾದರೂ ತೋರಿದರೆ ಬೆಲ್ಟಿನ ರುಚಿ ತೋರಿಸು ಎಂದು ಆದೇಶಿಸಿದ್ದೆ.

ಸಂಜೆ ನಾಲ್ಕು ಗಂಟೆಯ ತನಕವೂ ರಾಕಿ ಹಟ್ಟಿಯಲ್ಲೇ ಇದ್ದ. ನಾಲ್ಕು ಗಂಟೆಗೆ ನಾನು ಅವನನ್ನು ಹೊರಗೆ ತರಿಸಿ, ಸ್ನಾನ ಮಾಡಿಸಿ, ಒಂದಷ್ಟು ತಿಂಡಿ ಕೊಟ್ಟಾಗ ರಾಕಿಯ ಹಾವಭಾವವೆಲ್ಲಾ ಬದಲಾಗಿ ಬಿಟ್ಟಿತ್ತು. 5 ಗಂಟೆಗೆ ಮೇಡಂ ಬಂದರು. ಮೇಡಂರನ್ನು ದೂರದಿಂದ ನೋಡಿದ ರಾಕಿ ಓಡೋಡಿ ಆಕೆಯ ಬಳಿಗೆ ಧಾವಿಸಿದ. ಆತ ಆಕೆಯ ಬಳಿಹೋಗಿ ಆಕೆಯನ್ನು ಅಪ್ಪಿಕೊಂಡ ರೀತಿ ನಿಜಕ್ಕೂ ಅವಿಸ್ಮರಣೀಯವಾಗಿತ್ತು. ಮೇಡಂ ಕೂಡಾ ಭಾವುಕರಾಗಿ ಮೈಮರೆತರು. ಆ ಬಳಿಕ ಸುಮಾರು ಅರ್ಧ ಗಂಟೆ ಹೊತ್ತು ಆಕೆ ಅಲ್ಲೇ ರಾಕಿ ಜೊತೆ ಮಾತನಾಡುತ್ತಾ ಆಟವಾಡುತ್ತ ಇದ್ದರು. ರಾಕಿ ಆಕೆಯ ನಿರೀಕ್ಷೆಗಿಂತ ಹೆಚ್ಚು ಸುಧಾರಿತನಾಗಿದ್ದ. ರಾಕಿ ಇಷ್ಟು ಬೇಗ ಇಷ್ಟೊಂದು ಮಟ್ಟದಲ್ಲಿ ಸುಧಾರಿಸಿದ್ದು ಹೇಗೆ? ಮೇಡಂ ಬಹಳ ಕುತೂಹಲದಿಂದ ಕೇಳಿದರು. ನಾನು ಹೇಳಿದೆ: ನಿಮ್ಮ ಮನೆಯಲ್ಲಿ ಆತನಿಗೆ ಸಿಗುತ್ತಿದ್ದ ಸವಲತ್ತುಗಳಿಗೆಲ್ಲ ನೀವೇ ಮಾಲಕರು ಎಂಬುದು ಆತನಿಗೆ ಮರೆತು ಹೋಗಿತ್ತು.

ಇವನು ಅದಕ್ಕೆಲ್ಲ ತಾನೇ ಮಾಲಕ ಎಂಬ ಭ್ರಮೆಗೆ ತುತ್ತಾಗಿದ್ದ. ಒಂದೇ ದಿನದಲ್ಲಿ ಇವನ ಭ್ರಮೆ ನುಚ್ಚು ನೂರಾಯಿತು. ಮೇಡಂ ನಗುನಗುತ್ತಾ ರಾಕಿ ಜೊತೆ ಹೊರಟು ಹೋದರು. ಆಕೆಗೆ ನನ್ನ ಉತ್ತರದಿಂದ ಎಷ್ಟು ತೃಪ್ತಿಯಾಯಿತೋ ನನಗೆ ತಿಳಿಯದು. ನನಗಂತೂ ಬಾಲ್ಯದಿಂದಲೂ ನನ್ನನ್ನು ಕಾಡಿದ್ದ ಪ್ರಶ್ನೆಯೊಂದಕ್ಕೆ ಉತ್ತರ ಸಿಕ್ಕಿ ಬಿಟ್ಟಿತ್ತು. ದೇವರು ಮನುಷ್ಯನನ್ನು ಪ್ರತಿಕೂಲ ಸನ್ನಿವೇಶಗಳಲ್ಲಿ ಸಿಲುಕಿಸುವುದೇಕೆ? ಎಂಬುದಾಗಿತ್ತು ಆ ನನ್ನ ಪ್ರಶ್ನೆ. ಮನುಷ್ಯನು ತನಗೆ ಉಚಿತವಾಗಿ ಸಿಕ್ಕ ಎಲ್ಲ ಸವಲತ್ತುಗಳಿಗೆ ತಾನೇ ಮಾಲಕನೆಂದು ತಿಳಿದುಕೊಂಡಾಗ ಪ್ರತಿಕೂಲ ಸನ್ನಿವೇಶಗಳು ಬರುತ್ತವೆ ಎಂಬ ಉತ್ತರ ರಾಖಿಯ ಮೂಲಕ ನನಗೆ ಸಿಕ್ಕಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)