varthabharthiವಿಶೇಷ-ವರದಿಗಳು

ಬಾಲಿವುಡ್ ನಟ ಇರ್ಫಾನ್ ಖಾನ್ ಸಾವಿಗೆ ಕಾರಣವಾದ ‘ಕೊಲೈಟಿಸ್’ ಬಗ್ಗೆ ನಿಮಗೆಷ್ಟು ಗೊತ್ತು?

ವಾರ್ತಾ ಭಾರತಿ : 3 May, 2020

ಕರುಳಿನ ಸೋಂಕಿನ ವಿರುದ್ಧ ಹೋರಾಡುತ್ತಿದ್ದ ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ ಅವರು ಎ.29ರಂದು ವಿಧಿವಶರಾಗಿದ್ದಾರೆ. ತಾನು ನ್ಯೂರೊಎಂಡೊಕ್ರೈನ್ ಟ್ಯೂಮರ್ (ಒಂದು ವಿಧದ ಕ್ಯಾನ್ಸರ್)ನಿಂದ ಬಳಲುತ್ತಿರುವುದಾಗಿ 2018ರಲ್ಲಿ ಪ್ರಕಟಿಸಿದ್ದ ಅವರು ಅದಕ್ಕಾಗಿ ಬ್ರಿಟನ್ನಿನ ಆಸ್ಪತ್ರೆಯಲ್ಲಿ ಒಂದು ವರ್ಷ ಚಿಕಿತ್ಸೆಯನ್ನೂ ಪಡೆದು ಬಂದಿದ್ದರು.

ಕರುಳಿನ ಸೋಂಕಿನಿಂದಾಗಿ ಖಾನ್ ಅವರನ್ನು ಎ.28ರಂದು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನ್ಯೂರೊಎಂಡೊಕ್ರೈನ್ ಕ್ಯಾನ್ಸರ್‌ಗೆ ಚಿಕಿತ್ಸೆಯು ಕರುಳಿನ ಸೋಂಕನ್ನು ಉಂಟು ಮಾಡಬಲ್ಲದು ಮತ್ತು ಖಾನ್ ಅವರ ವಿಷಯದಲ್ಲಿ ಇದೇ ಆಗಿತ್ತು. ವೈದ್ಯಕೀಯ ಭಾಷೆಯಲ್ಲಿ ‘ಕೊಲೈಟಿಸ್’ಎಂದು ಕರೆಯಲಾಗುವ ಕರುಳಿನ ಸೋಂಕು ಎಂದರೇನು,ಅದಕ್ಕೆ ಕಾರಣಗಳು,ರೋಗನಿರ್ಣಯ ಮತ್ತು ಚಿಕಿತ್ಸೆ ಕುರಿತು ಮಾಹಿತಿಗಳಿಲ್ಲಿವೆ.....

► ಏನಿದು ಕೊಲೈಟಿಸ್?

ಕೊಲೈಟಿಸ್ ದೊಡ್ಡ ಕರುಳಿನ ಒಳಪದರದ ಉರಿಯೂತವಾಗಿದೆ. ಕರುಳಿನ ಸೋಂಕು ಸಾಮಾನ್ಯವಾಗಿದ್ದು,ಇದು ತೀವ್ರ ಅಥವಾ ದೀರ್ಘಕಾಲಿಕವಾಗಿರಬಹುದು.

► ಕಾರಣಗಳು

ಸೋಂಕು: ಬ್ಯಾಕ್ಟೀರಿಯಾ,ವೈರಾಣುಗಳು ಮತ್ತು ಪರಾವಲಂಬಿಗಳಿಂದ ಕೊಲೈಟಿಸ್ ಉಂಟಾಗುತ್ತದೆ. ಕ್ಯಾಂಪಿಲೊಬ್ಯಾಕ್ಟರ್ಜೆಜುನಿ, ಶಿಗೆಲ್ಲಾ,ಇ.ಕೋಲಿ, ಯೆರ್ಸಿನಿಯಾಎಂಟರೋಕೊಲೈಟಿಕಾ, ಸಾಲ್ಮೊನೆಲ್ಲಾ ಮತ್ತು ಮೈಕೊಬ್ಯಾಕ್ಟೀರಿಯಂ ಟ್ಯುಬರ್‌ಕುಲೊಸಿಸ್ ಇವು ಕರುಳಿನ ಸೋಂಕನ್ನುಂಟು ಮಾಡುವ ಸಾಮಾನ್ಯ ಬ್ಯಾಕ್ಟೀರಿಯಾಗಳಾಗಿವೆ. ಎಂಟಾಮೀಬಿಯಾ ಹಿಸ್ಟೊಲಿಟಿಕಾ ಕರುಳಿನಲ್ಲಿ ಸೋಂಕನ್ನುಂಟು ಮಾಡುವ ಸಾಮಾನ್ಯ ಪರಾವಲಂಬಿಯಾಗಿದ್ದರೆ, ನೊರೊವೈರಸ್, ರೊಟಾವೈರಸ್, ಅಡೆನೊವೈರಸ್ ಮತ್ತು ಸೈಟೊಮೆಗಾಲೊವೈರಸ್ ಇವು ಕೊಲೈಟಿಸ್‌ಗೆ ಕಾರಣವಾಗಬಲ್ಲ ವೈರಾಣುಗಳಾಗಿವೆ.

ಕಲುಷಿತ ಆಹಾರ ಮತ್ತು ನೀರಿನ ಸೇವನೆ,ಅನೈರ್ಮಲ್ಯ ಇವೂ ಕರುಳಿನ ಸೋಂಕಿಗೆ ಕಾರಣಗಳಾಗಿವೆ. ಸಿ.ಡಿಫಿಸಿಲೆ ಎಂಬ ಇನ್ನೊಂದು ಬ್ಯಾಕ್ಟೀರಿಯಾ ಕೂಡ ಕರುಳಿನ ಸೋಂಕನ್ನುಂಟು ಮಾಡುತ್ತದೆ. ವ್ಯಕ್ತಿ ವೈದ್ಯರು ಶಿಫಾರಸು ಮಾಡಿದ ಆ್ಯಂಟಿ ಬಯಾಟಿಕ್‌ಗಳನ್ನು ಸೇವಿಸುತ್ತಿದ್ದಾಗ ಬ್ಯಾಕ್ಟೀರಿಯಾಗಳು ಅತಿಯಾಗಿ ವೃದ್ಧಿಗೊಂಡು ಕರುಳಿನಲ್ಲಿಯ ಆರೋಗ್ಯಕರ ಬ್ಯಾಕ್ಟೀರಿಯಾಗಳ ಸಮತೋಲನದಲ್ಲಿ ಹಸ್ತಕ್ಷೇಪ ಮಾಡಿದಾಗಲೂ ಕೊಲೈಟಿಸ್ ಉಂಟಾಗುತ್ತದೆ.

ಕರುಳಿನ ಉರಿಯೂತದ ಸಹಲಕ್ಷಣ: ಇನ್‌ಫ್ಲಮೇಟರಿ ಬೊವೆಲ್ ಸಿಂಡ್ರೋಮ್ (ಐಬಿಎಸ್) ಅಥವ ಕರುಳಿನ ಉರಿಯೂತದ ಸಹಲಕ್ಷಣವು ಜೀರ್ಣನಾಳದಲ್ಲಿ ಉರಿಯೂತಕ್ಕೆ ಕಾರಣವಾಗುವ ದೀರ್ಘಕಾಲಿಕ ರೋಗಗಳ ಗುಂಪು ಆಗಿದೆ. ಅಲ್ಸರೇಟಿವ್ ಕೊಲೈಟಿಸ್ ಮತ್ತು ಕ್ರೋನ್ಸ್ ಡಿಸೀಸ್ ಇವು ಐಬಿಎಸ್‌ನ ಎರಡು ಸಾಮಾನ್ಯ ವಿಧಗಳಾಗಿವೆ.

ಅಲರ್ಜಿ ಪ್ರತಿಕ್ರಿಯೆಗಳು: ಅಲರ್ಜಿಕ್ ಕೊಲೈಟಿಸ್ ಹೆಚ್ಚಾಗಿ ಶಿಶುಗಳಲ್ಲಿ ಕಂಡು ಬರುತ್ತದೆ. ಹಸುವಿನ ಹಾಲಿನಲ್ಲಿರುವ ಪ್ರೋಟಿನ್‌ಗಳಿಗೆ ಅಲರ್ಜಿ ಪ್ರತಿವರ್ತನೆಗಳಿಂದಾಗಿ ಕರುಳಿನ ಉರಿಯೂತವುಂಟಾಗುತ್ತದೆ. ಇದು ಕೆರಳುವಿಕೆ,ವಾಯು,ಮಲದಲ್ಲಿ ರಕ್ತ ಅಥವಾ ಲೋಳೆ ಇವುಗಳಿಗೆ ಕಾರಣವಾಗಬಹುದು.

 ಇಷೆಮಿಕ್ ಕೊಲೈಟಿಸ್: ಕರುಳಿನಲ್ಲಿ ರಕ್ತದ ಹರಿವು ಕಡಿಮೆಯಾದಾಗ ಈ ವಿಧದ ಕರುಳಿನ ಸೋಂಕು ಉಂಟಾಗುತ್ತದೆ. ಕರುಳಿನಲ್ಲಿ ರಕ್ತದ ಪೂರೈಕೆ ಕಡಿಮೆಯಾದಾಗ ನೋವು,ಜ್ವರ ಮತ್ತು ಅತಿಸಾರಕ್ಕೆ ಕಾರಣವಾಗುತ್ತದೆ. ಇಷೆಮಿಕ್ ಕೊಲೈಟಿಸ್ ಅಪಧಮನಿಗಳ ಸಂಕೋಚನ ಅಥವಾ ಅವುಗಳಲ್ಲಿ ತಡೆ,ಕಡಿಮೆ ರಕ್ತದೊತ್ತಡ ಅಥವಾ ರಕ್ತಹೀನತೆಯನ್ನುಂಟು ಮಾಡುತ್ತದೆ.

ಮೈಕ್ರೋಸ್ಕೋಪಿಕ್ ಕೊಲೈಟಿಸ್: ಕರುಳಿನ ಒಳಪದರದಲ್ಲಿರುವ ಒಂದು ವಿಧದ ಬಿಳಿಯ ರಕ್ತಕಣಗಳಾಸ ಲಿಂಫೊಸೈಟ್‌ಗಳ ಪ್ರಮಾಣದಲ್ಲಿ ಏರಿಕೆಯಾದಾಗಿ ಈ ಕೊಲೈಟಿಸ್ ಉಂಟಾಗುತ್ತದೆ.

ಔಷಧಿಗಳಿಂದುಂಟಾಗುವ ಕೊಲೈಟಿಸ್: ಸ್ಟಿರಾಯ್ಡೇತರ ಉರಿಯೂತ ನಿರೋಧಕ ಔಷಧಿಗಳು ಸಹ ಕರುಳಿನಲ್ಲಿ ಉರಿಯೂತವನ್ನು ಉಂಟು ಮಾಡುತ್ತವೆ.

► ಲಕ್ಷಣಗಳು

ಹೊಟ್ಟೆನೋವು ಮತ್ತು ಸೆಳೆತ, ಜ್ವರ, ವಾಕರಿಕೆ, ರಕ್ತಸಹಿತ ಅಥವಾ ರಕ್ತರಹಿತ ಅತಿಸಾರ, ಹೊಟ್ಟೆಯುಬ್ಬರ, ಬಳಲಿಕೆ, ತೂಕ ನಷ್ಟ, ನಿರ್ಜಲೀಕರಣ ಮತ್ತು ನಡುಕ ಇವು ಕೊಲೈಟಿಸ್‌ನ ಲಕ್ಷಣಗಳಾಗಿವೆ.

► ರೋಗನಿರ್ಣಯ

ತಜ್ಞವೈದ್ಯರು ಲಕ್ಷಣಗಳ ಬಗ್ಗೆ ತಿಳಿದುಕೊಂಡು ದೈಹಿಕ ತಪಾಸಣೆಗಳನ್ನು ನಡೆಸುತ್ತಾರೆ. ಕರುಳಿನ ಕೆಳಗಿನ ಭಾಗ ಮತ್ತು ಗುದನಾಳದ ಪದರವನ್ನು ಪರೀಕ್ಷಿಸಲು ಸಿಗ್ಮಾಯ್ಡಾಸ್ಕೋಪಿ ಅಥವಾ ಕೊಲೊನೊಸ್ಕೋಪಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಕಂಪ್ಯೂಟರೈಸ್ಡ್ ಟೋಮೊಗ್ರಫಿ ಮತ್ತು ಬೇರಿಯಂ ಎನೆಮಾ ಇವು ಇತರ ಕೆಲವು ಪರೀಕ್ಷೆಗಳಾಗಿವೆ. ಇದರ ಜೊತೆಗೆ ರಕ್ತಪರೀಕ್ಷೆ ಮತ್ತು ಮಲಪರೀಕ್ಷೆಗಳನ್ನೂ ನಡೆಸಲಾಗುತ್ತದೆ.

► ಚಿಕಿತ್ಸೆ

ಕೊಲೈಟಿಸ್‌ಗೆ ಕಾರಣವನ್ನು ಅವಲಂಬಿಸಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಹೆಚ್ಚಿನ ಕೊಲೈಟಿಸ್ ವಿಧಗಳಿಗೆ ಉರಿಯೂತ ನಿರೋಧಕ, ಇಮ್ಯುನೊಸಪ್ರೆಸಂಟ್, ಅತಿಸಾರ ನಿರೋಧಕ ಔಷಧಿಗಳು, ಆ್ಯಂಟಿಬಯಾಟಿಕ್‌ಗಳು ಹಾಗೂ ಕ್ಯಾಲ್ಸಿಯಂ,ಕಬ್ಬಿಣ ಮತ್ತು ಡಿ ವಿಟಾಮಿನ್‌ಗಳಂತಹ ಪೂರಕಗಳನ್ನು ನೀಡುವ ಮೂಲಕ ಚಿಕಿತ್ಸೆ ನಡೆಸಲಾಗುತ್ತದೆ.

► ಜೀವನಶೈಲಿ ಬದಲಾವಣೆಗಳು

ಕೊಲೈಟಿಸ್ ಲಕ್ಷಣಗಳನ್ನು ಇನ್ನಷ್ಟು ಹದಗೆಡಿಸುವ ಆಹಾರಗಳಿಂದ ದೂರವಿರಬೇಕು. ಒಂದೇ ಬಾರಿಗೆ ಅತಿಯಾಗಿ ಊಟ ಮಾಡುವುದರ ಬದಲು ದಿನವಿಡೀ ಸಣ್ಣ ಸಣ್ಣ ಊಟಗಳನ್ನು ಮಾಡಬೇಕು. ಮಲ ವಿಸರ್ಜನೆಯ ಪ್ರಮಾಣವನ್ನು ಹೆಚ್ಚಿಸುವ ಕಚ್ಚಾ ಹಣ್ಣುಗಳು ಮತ್ತು ತರಕಾರಿಗಳು,ಕೆಫಿನ್ ಸೇವನೆ ಬೇಡ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)