varthabharthiಸಂಪಾದಕೀಯ

ಬಾಣಲೆಯಿಂದ ಬೆಂಕಿಗೆ ಬಿದ್ದ ಕಾರ್ಮಿಕರು

ವಾರ್ತಾ ಭಾರತಿ : 3 May, 2020

ಈವರೆಗೆ ಬಾಣಲೆಯಲ್ಲಿ ಕುದ್ದ ವಲಸೆ ಕಾರ್ಮಿಕರ ಕುರಿತಂತೆ ಕೊನೆಗೂ ಕೇಂದ್ರ ಸರಕಾರ ತುಸು ಮೆದುವಾಗಿದೆ. ಲಾಕ್‌ಡೌನ್ ಘೋಷಿಸಿದ ಸುಮಾರು ಒಂದೂವರೆ ತಿಂಗಳ ಬಳಿಕ, ಅವರನ್ನು ಮತ್ತೆ ಅವರವರ ಊರಿಗೆ ಕಳುಹಿಸುವ ಕೃಪೆಯನ್ನು ತೋರಿದೆ. ಆದರೆ ಇದರಿಂದ ಕಾರ್ಮಿಕರ ಸಮಸ್ಯೆ ಪರಿಹಾರವಾಗದೆ ಇನ್ನಷ್ಟು ಉಲ್ಬಣಿಸಿದೆ. ಅತ್ತ ಊರಿಗೆ ಹೋಗಲಾರದೆೆ, ಇತ್ತ ಇರುವಲ್ಲೂ ಇರಲಾರದೆ ಅವರು ಅತಂತ್ರರಾಗಿದ್ದಾರೆ. ಒಂದು ರೀತಿಯಲ್ಲಿ, ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ ಅವರ ಬದುಕು. ಮುಖ್ಯವಾಗಿ, ಲಾಕ್‌ಡೌನ್ ಘೋಷಿಸುವ ಮೊದಲೇ ಕೇಂದ್ರ ಸರಕಾರ ವಲಸೆ ಕಾರ್ಮಿಕರನ್ನು ಅವರ ಊರಿಗೆ ತಲುಪಿಸುವ ಕುರಿತಂತೆ ಯೋಜನೆಯೊಂದನ್ನು ರೂಪಿಸಬೇಕಾಗಿತ್ತು. ಅದಾದ ಬಳಿಕವಷ್ಟೇ ಲಾಕ್‌ಡೌನ್ ಘೋಷಣೆ ಮಾಡಬೇಕಾಗಿತ್ತು. ಅದಕ್ಕೆ ಬೇಕಾದ ಸಣ್ಣ ಕಾಲಾವಕಾಶವೂ ಸರಕಾರದ ಬಳಿಯಿತ್ತು.ಆದರೆ ವಲಸೆ ಕಾರ್ಮಿಕರನ್ನು ಸಂಪೂರ್ಣ ನಿರ್ಲಕ್ಷಿಸಿ ಸರಕಾರ ಲಾಕ್‌ಡೌನ್ ಘೋಷಿಸಿತು. ಅದರ ಪರಿಣಾಮ ಅತ್ಯಂತ ಭೀಕರವಾಯಿತು.

ಸರಕಾರದ ಆದೇಶವನ್ನು ಅಣಕಿಸುವಂತೆ ಸಾವಿರಾರು ಕಾರ್ಮಿಕರು ಮುಂಬೈ, ದಿಲ್ಲಿಯಂತಹ ನಗರಗಳ ಬಸ್ ನಿಲ್ದಾಣಗಳಲ್ಲಿ ನೆರೆದರು. ‘ಸುರಕ್ಷಿತ ಅಂತರ’ ನಗೆಪಾಟಲಿಗೀಡಾಯಿತು. ಇತ್ತರ ರಾಜ್ಯ ಸರಕಾರಗಳಿಗೆ ವಲಸೆ ಕಾರ್ಮಿಕರನ್ನು ನಿಭಾಯಿಸುವುದೇ ಕಷ್ಟವಾಯಿತು. ಬೋನಿನಲ್ಲಿ ಸಿಲುಕಿಕೊಂಡ ಇಲಿಗಳಂತೆ ಒದ್ದಾಡತೊಡಗಿದ ಕಾರ್ಮಿಕರು, ತಮ್ಮ ಊರಿನ ಕಡೆಗೆ ಕಾಲ್ನಡಿಗೆಯಲ್ಲಿ ಸಾಗತೊಡಗಿದರು. ಹಲವರು ದಾರಿಯಲ್ಲೇ ಮೃತಪಟ್ಟರು. ಹಲವರು ಅಸ್ವಸ್ಥರಾದರು. ಹಲವರು ಪೊಲೀಸರ ಜೊತೆಗೆ ಸಂಘರ್ಷಕ್ಕಿಳಿದು ಜೈಲು ಸೇರಿದರು. ಸುಮಾರು ಒಂದು ತಿಂಗಳ ಈ ಜಂಜಾಟದ ಬಳಿಕ ಇದೀಗ, ಕಾರ್ಮಿಕರಿಗೆ ತಮ್ಮ ತಮ್ಮ ಊರು ಸೇರಲು ಅನುಮತಿ ದೊರಕಿದೆ. ಆದರೆ ವಿಪರ್ಯಾಸವೆಂದರೆ, ಊರಿಗೆ ಮರಳುವುದಕ್ಕೆ ಟಿಕೆಟ್ ಕೊಳ್ಳಲು ಹಣವಿಲ್ಲದೆ ಮತ್ತೆ ಬಸ್‌ನಿಲ್ದಾಣವನ್ನೇ ವಾಸಸ್ಥಳ ಮಾಡಿಕೊಳ್ಳಬೇಕಾದ ಅನಿವಾರ್ಯತೆಗೆ ಸಾವಿರಾರು ಕಾರ್ಮಿಕರು ಸಿಲುಕಿಕೊಂಡಿದ್ದಾರೆ.

ಒಂದು ವರದಿಯ ಪ್ರಕಾರ, ಲಾಕ್‌ಡೌನ್ ಘೋಷಣೆಯಾದ ಈವರೆಗೆ ಶೇ. 78 ವಲಸೆ ಕಾರ್ಮಿಕರಿಗೆ ಸಂಬಂಧಪಟ್ಟವರು ವೇತನವನ್ನೇ ನೀಡಿಲ್ಲ. ವಲಸೆ ಕಾರ್ಮಿಕರಲ್ಲಿ ಶೇ. 6ರಷ್ಟು ಮಂದಿಗೆ ಮಾತ್ರವೇ ಎಪ್ರಿಲ್ 26ರವರೆಗೆ ಪೂರ್ಣ ವೇತನ ದೊರೆತಿದೆ ಎಂದು ಸರಕಾರೇತರ ಸಂಸ್ಥೆಯೊಂದು ನಡೆಸಿದ ಸಮೀಕ್ಷಾ ವರದಿ ತಿಳಿಸುತ್ತದೆ. ದುಡಿದು ಸಂಗ್ರಹಿಸಿದ ಅಥವಾ ಇರುವ ದುಡ್ಡನ್ನು ಬಳಸಿಕೊಂಡು ಊರಿಗೆ ಹೊರಟು ನಿಂತಾಗ ಸರಕಾರ ವಲಸೆ ಕಾರ್ಮಿಕರನ್ನು ತಡೆಯಿತು. ಇದೀಗ ಸರಕಾರ ಹೊರಡುವುದಕ್ಕೆ ಅನುಮತಿಯನ್ನೇನೋ ನೀಡಿದೆ, ಆದರೆ ಅದಾಗಲೇ ಅವರ ಕೈಯಲ್ಲಿದ್ದ ದುಡ್ಡು ಖಾಲಿಯಾಗಿದೆ. ಶೇ. 78ರಷ್ಟು ಕಾರ್ಮಿಕರಿಗೆ ದುಡಿದ ವೇತನವೇ ಸಿಗದೇ ಇರುವಾಗ, ಸಾರಿಗೆ ವಾಹನಗಳಿಗೆ ನೀಡಲು ಅವರಲ್ಲಿ ದುಡ್ಡೆಲ್ಲಿಂದ ಬರಬೇಕು? ಅತ್ಯಂತ ದುರಂತದ ಸಂಗತಿಯೆಂದರೆ, ಕರ್ನಾಟಕದಲ್ಲಿ ಈ ಅಸಹಾಯಕ ವಲಸೆ ಕಾರ್ಮಿಕರಿಂದಲೇ ಸಾರಿಗೆ ಬಸ್‌ಗಳು ಮೂರು ಪಟ್ಟು ಹಣ ವಸೂಲಿ ಮಾಡಲು ಮುಂದಾಗಿರುವುದು. ಬಹುಶಃ ಲಾಕ್‌ಡೌನ್‌ನಿಂದಾದ ನಾಶ, ನಷ್ಟಗಳನ್ನೆಲ್ಲ ಸರಕಾರ ಈ ಕಾರ್ಮಿಕರ ರಕ್ತ ಹೀರುವ ಮೂಲಕ ತುಂಬ ಬಹುದು ಎಂದು ಭಾವಿಸಿತು. ಸರಕಾರದ ಕೃತ್ಯಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆಯೇ, ಸರಕಾರ ತನ್ನ ದುಬಾರಿ ದರಕ್ಕೆ ಕಡಿವಾಣ ಹಾಕಿತು. ಲಾಕ್‌ಡೌನ್ ದಿನಗಳಲ್ಲಿ ವಲಸೆ ಕಾರ್ಮಿಕರಿಂದ ಮೂರು ಪಟ್ಟು ದರವನ್ನು ವಸೂಲಿ ಮಾಡಲು ಹೊರಟ ಸರಕಾರ ಸರಕಾರದ ಹೃದಯ ಹೀನ ನಿರ್ಧಾರದಿಂದಲೇ, ರಾಜಕಾರಣಿಗಳು ಕಾರ್ಮಿಕರ ಕುರಿತಂತೆ ಎಂತಹ ಮನಸ್ಥಿತಿಯನ್ನು ಹೊಂದಿದ್ದಾರೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಸರಕಾರದ ಪೂರ್ವಸಿದ್ಧತೆಯಿಲ್ಲದ ಲಾಕ್‌ಡೌನ್‌ನಿಂದಾಗಿ ತೊಂದರೆ ಅನುಭವಿಸಿರುವ ಕಾರ್ಮಿಕರು ಹಾಲಿ ದರವನ್ನಾದರೂ ಯಾಕೆ, ಹೇಗೆ ನೀಡಬೇಕು? ಅವರನ್ನು ಯಾವುದೇ ದರ ವಸೂಲಿ ಮಾಡದೆ ಊರಿಗೆ ತಲುಪಿಸುವುದು ಸರಕಾರದ ಜವಾಬ್ದಾರಿಯಲ್ಲವೇ?

ಕರ್ನಾಟಕದ ಸ್ಥಿತಿ ಇದಾದರೆ, ಇತರ ರಾಜ್ಯಗಳಲ್ಲೂ ಕಾರ್ಮಿಕರ ಸ್ಥಿತಿ ಭಿನ್ನವಾಗಿಲ್ಲ. ಮಹಾರಾಷ್ಟ್ರವನ್ನೇ ತೆಗೆದುಕೊಳ್ಳೋಣ. ಇಲ್ಲಿ ಸುಮಾರು 20 ಲಕ್ಷ ವಲಸೆ ಕಾರ್ಮಿಕರಿದ್ದಾರೆ. ಮುಂಬೈಯಲ್ಲೇ ಸುಮಾರು 4 ಲಕ್ಷ ಕಾರ್ಮಿಕರು ಬೇರೆ ಬೇರೆ ರಾಜ್ಯಗಳಿಂದ ಆಗಮಿಸಿದವರಿದ್ದಾರೆ. ಇವರು ಮರಳಿ ಊರಿಗೆ ಹೋಗಬೇಕೆಂದರೆ ಅಷ್ಟು ಸುಲಭವಿಲ್ಲ. ಸಂಬಂಧ ಪಟ್ಟವರಿಂದ ‘ನನಗೆ ಕೊರೋನ ಇಲ್ಲ’ ಎನ್ನುವ ಪ್ರಮಾಣ ಪತ್ರ ಪಡೆದವರಿಗಷ್ಟೇ ಪ್ರಯಾಣಿಸಲು ಅವಕಾಶವಿದೆ. ಈ ಕಾರಣದಿಂದ, ಈ ಪ್ರಮಾಣ ಪತ್ರಕ್ಕಾಗಿಯೇ ನೂಕು ನುಗ್ಗಲು ಆರಂಭವಾಗಿದೆ. ಇಷ್ಟೊಂದು ಸಂಖ್ಯೆಯ ವಲಸೆ ಕಾರ್ಮಿಕರಲ್ಲಿ ಕೊರೋನ ಸೋಂಕಿದೆ ಅಥವಾ ಇಲ್ಲ ಎಂದು ಗುರುತಿಸುವುದು, ಅವರಿಗೆ ಪ್ರಮಾಣ ಪತ್ರ ನೀಡುವುದು ಒಂದೆರೆಡು ದಿನಗಳಲ್ಲಿ ಆಗುವ ಕೆಲಸವಂತೂ ಅಲ್ಲ. ಈ ನೂಕು ನುಗ್ಗಲಿನಲ್ಲೇ ಪರಸ್ಪರ ಕೊರೋನಾ ಹರಡುವ ಸಾಧ್ಯತೆಗಳು ಕಾಣುತ್ತಿವೆ. ಇದೇ ಸಂದರ್ಭದಲ್ಲಿ, ರೈಲಿನಲ್ಲಿ ಪ್ರಯಾಣಿಸುವ ಕಾರ್ಮಿಕರ ವೆಚ್ಚವನ್ನು ಯಾರು ಭರಿಸಬೇಕು? ಎನ್ನುವ ಚರ್ಚೆಯೊಂದು ಎದ್ದಿದೆ. ‘ಆಯಾ ರಾಜ್ಯಗಳೇ ಈ ವೆಚ್ಚವನ್ನು ಭರಿಸಬೇಕು’ ಎಂದು ಹೇಳಿ ಕೇಂದ್ರ ಸರಕಾರ ಕೈ ತೊಳೆದುಕೊಂಡಿದೆ.

ಇದೀಗ ವಲಸೆ ಕಾರ್ಮಿಕರು ಯಾವ ರಾಜ್ಯಗಳಿಂದ ಬಂದಿದ್ದಾರೆಯೋ ಆಯಾ ಸರಕಾರಗಳು ಅವರ ಹೊಣೆಯನ್ನು ಹೊರಬೇಕಾಗಿದೆ. ಈ ಬಗ್ಗೆ ಹಲವು ರಾಜ್ಯಗಳು ಭಿನ್ನಾಭಿಪ್ರಾಯಗಳನ್ನು ಹೊಂದಿವೆ. ಇದೇ ಸಂದರ್ಭದಲ್ಲಿ, ‘ಕೇಂದ್ರ ಸರಕಾರದ ಬೇಜವಾಬ್ದಾರಿ ನಿಲುವಿನಿಂದಾಗಿ ವಲಸೆ ಕಾರ್ಮಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಅದಕ್ಕೆ ದಂಡವನ್ನು ರಾಜ್ಯ ಸರಕಾರಗಳು ಪಾವತಿ ಮಾಡಬೇಕೆ?’ ಎಂದು ವಿರೋಧ ಪಕ್ಷಗಳು ಕೇಳುತ್ತಿವೆ. ಕೇಂದ್ರ ಸರಕಾರವೇ ವಲಸೆ ಕಾರ್ಮಿಕರ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎನ್ನುವುದು ಅವರ ಬೇಡಿಕೆಯಾಗಿದೆ. ಸರಕಾರಗಳ ನಡುವಿನ ತಿಕ್ಕಾಟಗಳ ನಡುವೆಯೇ ದೇಶಾದ್ಯಂತ ಲಾಕ್‌ಡೌನ್ ಸಡಿಲವಾಗಿವೆ. ಅಂದರೆ, ನಗರಗಳಲ್ಲಿ ನಿಧಾನಕ್ಕೆ ಅಭಿವೃದ್ಧಿ ಚಟುವಟಿಕೆಗಳು ಆರಂಭವಾಗಲಿರುವ ಸೂಚನೆಯಿದು. ಇಂತಹ ಹೊತ್ತಿನಲ್ಲಿ ಬರಿಗೈಯಲ್ಲಿ ಊರಿಗೆ ಮರಳಬೇಕೆ ಅಥವಾ ನಗರದಲ್ಲೇ ಉಳಿಯಬೇಕೇ? ಎನ್ನುವ ಗೊಂದಲಗಳೂ ವಲಸೆಕಾರ್ಮಿಕರನ್ನು ಕಾಡುತ್ತಿವೆ. ಒಂದಂತೂ ನಿಜ. ಇಂದು ರಾಜ್ಯ ಸರಕಾರಗಳ ಶ್ರಮದಿಂದಾಗಿ ಕೊರೋನ ತಹಬದಿಗೆ ಬಂದಿದೆ. ಕೇಂದ್ರ ಸರಕಾರ ತನ್ನನ್ನು ತಾನು ಚಪ್ಪಾಳೆ, ದೀಪ, ಹೂಮಳೆ ಇತ್ಯಾದಿಗಳಿಗಷ್ಟೇ ಸೀಮಿತಗೊಳಿಸಿದೆ. ಇದರ ನಡುವೆ ಪ್ರಧಾನಮಂತ್ರಿಯವರೂ ಖಾಸಗಿಯಾಗಿ ಪರಿಹಾರ ನಿಧಿಯನ್ನೂ ಸಂಗ್ರಹಿಸುತ್ತಿದ್ದಾರೆ. ಆದರೆ ಈ ನಿಧಿ ಪರಿಣಾಮಕಾರಿಯಾಗಿ ಬಳಕೆಯಾಗುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

ಕನಿಷ್ಠ ವಿವಿಧ ರಾಜ್ಯಗಳಿಗೆ ನೀಡಬೇಕಾದ ಜಿಎಸ್‌ಟಿ ಪರಿಹಾರ ನಿಧಿಯನ್ನು ಪಾವತಿಸಿದ್ದರೂ ರಾಜ್ಯಗಳು ಕೊರೋನವನ್ನು ಯಶಸ್ವಿಯಾಗಿ ಎದುರಿಸುತ್ತಿತ್ತೇನೋ?. ಬಾಕಿ ಉಳಿಸಿರುವ ಜಿಎಸ್‌ಟಿ ಪರಿಹಾರ ನಿಧಿಯನ್ನು ನೀಡಿ ಎಂದು ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳು ಕೇಂದ್ರವನ್ನು ಕೆಲವು ತಿಂಗಳುಗಳಿಂದ ಗೋಗರೆಯುತ್ತಿದ್ದರೂ, ಪ್ರಧಾನಿ ಮೋದಿ ಜಾಣ ಕಿವುಡು ನಟಿಸುತ್ತಿದ್ದಾರೆ. ವೈದ್ಯಕೀಯ ಸೌಲಭ್ಯಗಳ ಕೊರತೆ, ಆರ್ಥಿಕ ಕೊರತೆಗಳ ನಡುವೆಯೂ ರಾಜ್ಯಗಳು ಕೊರೋನ ವಿರುದ್ಧ ಯಶಸ್ವಿ ಸಾಧನೆಯನ್ನು ತೋರಿಸುತ್ತಿವೆ. ಆದರೆ ಈ ಎಲ್ಲ ಸಾಧನೆಗಳನ್ನು ತನ್ನದೆಂದು ಪ್ರಧಾನಿ ಮೋದಿ ಮಾಧ್ಯಮಗಳ ಮೂಲಕ ಬಿಂಬಿಸಿಕೊಳ್ಳುತ್ತಿದ್ದಾರೆ. ರಾಜ್ಯ ಸರಕಾರಗಳ ಸಾಧನೆಯನ್ನು ತನ್ನದೆಂದು ಬಿಂಬಿಸಿಕೊಳ್ಳುವುದಾದರೆ, ಪ್ರಧಾನಿಗೆ ಈ ದೇಶದ ಜನರ ಕುರಿತಂತೆ ಯಾವ ಹೊಣೆಗಾರಿಕೆಗಳೂ ಇಲ್ಲವೇ? ಎಂಬ ಪ್ರಶ್ನೆಯೊಂದು ಎದ್ದಿದೆ. ಬಿಜೆಪಿ ನೇತೃತ್ವವನ್ನು ಹೊಂದಿರುವ ಕರ್ನಾಟಕದಂತಹ ರಾಜ್ಯಗಳು ಕೇಂದ್ರವನ್ನು ಟೀಕಿಸುವುದಕ್ಕೂ ಸಾಧ್ಯವಾಗದೆ ಒಳಗೊಳಗೆ ಬೇಗುದಿಯನ್ನು ನುಂಗಿಕೊಳ್ಳುತ್ತಾ ಕೊರೋನ ವೈರಸ್ ಮುಂದೆ ಹೆಣಗಾಡುತ್ತಿವೆ. ರಾಜ್ಯಗಳು ಕೇಂದ್ರದ ಯಡವಟ್ಟುಗಳ ಫಲಾನುಭವಿಗಳಾಗಿಯಷ್ಟೇ ಗುರುತಿಸಿಕೊಳ್ಳುತ್ತಿವೆ. ರಾಜ್ಯಗಳ ಸಂಕಟಗಳಿಗೆ ಕೇಂದ್ರ ಧ್ವನಿಯಾಗದೇ ಇದ್ದರೆ, ಭವಿಷ್ಯದಲ್ಲಿ ಒಕ್ಕೂಟ ವ್ಯವಸ್ಥೆಯ ನಡುವಿನ ಬಿಕ್ಕಟ್ಟು ಹೆಚ್ಚಲಿದೆ. ಭಕ್ತರು ಮತ್ತು ತಾನು ಸಾಕಿದ ಮಾಧ್ಯಮಗಳ ಮೂಲಕ ತನ್ನ ಬೇಜವಾಬ್ದಾರಿಯನ್ನು ಮುಚ್ಚಿ ಹಾಕಬಹುದು ಎನ್ನುವ ಆತ್ಮವಿಶ್ವಾಸದಿಂದ ಪ್ರಧಾನಿ ಮೋದಿ ಇನ್ನಾದರೂ ಹೊರ ಬರದೇ ಇದ್ದರೆ, ದೇಶದ ಭವಿಷ್ಯ ಇನ್ನಷ್ಟು ಭೀಕರವಾಗಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)