varthabharthi

ನಿಮ್ಮ ಅಂಕಣ

ಶಾಲಾ ಶಿಕ್ಷಣಕ್ಕಿಂತ ಕಳಪೆಯಾಗುತ್ತಿದೆ ಉನ್ನತ ಶಿಕ್ಷಣ..?

ವಾರ್ತಾ ಭಾರತಿ : 4 May, 2020
ಡಾ.ಡಿ.ಸಿ.ನಂಜುಂಡ

ಸ್ವಾತಂತ್ರ್ಯದ ನಂತರ ದೇಶದಲ್ಲಿನ ವಿವಿ.ಗಳ ಸಂಖ್ಯೆ ನಿರಂತರವಾಗಿ ಹೆಚ್ಚಾಗುತ್ತಿದೆ. ಪ್ರತಿ ವಿಷಯದ ಅಧ್ಯಯನಕ್ಕೆಂದೇ ಇಂದು ಹಲವಾರು ಪ್ರತ್ಯೇಕ ಸರಕಾರಿ ವಿವಿಗಳು ತಲೆ ಎತ್ತುತ್ತಿವೆ. ಕಿಲೋಮೀಟರಿಗೊಂದು ಪ್ರಾಥಮಿಕ ಶಾಲೆಯಂತೆ ಇಂದು ದೇಶದಲ್ಲಿ ಖಾಸಗಿ ವಿವಿಗಳು ಅಣಬೆಯಂತೆ ರಾತ್ರೋರಾತ್ರಿ ಹುಟ್ಟಿಕೊಳ್ಳುತ್ತಿವೆ ಮತ್ತು ಇವುಗಳು ಹೇಗೋ ತಮ್ಮ ಆದಾಯದ ಮೂಲವನ್ನು ಕಂಡುಕೊಳ್ಳುತ್ತಿವೆ. ಇತ್ತೀಚಿನ ಒಂದು ಅಧ್ಯಯನದ ಪ್ರಕಾರ ದೇಶದ ಸರಾಸರಿ ಶೇ.43 ರಾಜಕಾರಣಿಗಳು ಖಾಸಗಿ ವಿವಿಗಳನ್ನು ನಡೆಸುತ್ತಿದ್ದಾರೆ ಎಂದರೆ ಇಲ್ಲಿನ ಲಾಭವನ್ನು ಊಹಿಸಿಕೊಳ್ಳಬಹುದು.


ಕಳೆದ ಎರಡು ದಶಕಗಳಲ್ಲಿ ಭಾರತದ ಉನ್ನತ ಶಿಕ್ಷಣ ಅಗಾಧವಾದ ಬೆಳವಣಿಗೆ ಕಂಡಿದೆ. ಚೀನಾ ಮತ್ತು ಅಮೆರಿಕ ಉಳಿದು ಭಾರತದಲ್ಲಿ ಜಗತ್ತಿನಲ್ಲೇ ಹೆಚ್ಚಾಗಿ ಉನ್ನತ ಶಿಕ್ಷಣವನ್ನು ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ. ವರ್ಷಕ್ಕೆ ಶೇ.8.5 ವಿದ್ಯಾರ್ಥಿಗಳು ಇಂದು ವಿವಿಧ ರೀತಿಯ ಉನ್ನತ ಶಿಕ್ಷಣಕ್ಕೆ ದಾಖಲಾಗುತ್ತಿದ್ದಾರೆ. ಸುಮಾರು 1,110 ವಿವಿಗಳು (ವಿಶ್ವವಿದ್ಯಾನಿಲಯಗಳು) 23 ಸಾವಿರ ವಿವಿಧ ಪದವಿ ಕಾಲೇಜುಗಳು 80-100 ಸ್ವಾಯತ್ತ ವಿವಿಗಳು, 140-150 ಉನ್ನತ ಸಂಶೋಧನ ಸಂಸ್ಥೆಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಉನ್ನತ ಶಿಕ್ಷಣಕ್ಕೆ ಒತ್ತಡ ಹೆಚ್ಚುತ್ತಿದ್ದಂತೆ ಇಂದು ಖಾಸಗಿ ಶಿಕ್ಷಣ ವ್ಯವಸ್ಥೆ ಉನ್ನತ ಶಿಕ್ಷಣ ಕ್ಷೇತ್ರವನ್ನು ನಿಧಾನವಾಗಿ ಆಕ್ರಮಿಸಿಕೊಳ್ಳುತ್ತಿವೆ. ಇವುಗಳಲ್ಲಿ ಯಾವುದೇ ಗುಣಮಟ್ಟಕ್ಕೆ ಆದ್ಯತೆ ಇಲ್ಲ. ಸರಕಾರದ ದ್ವಂದ್ವ ನಿಲುವು, ರಾಜಕೀಯ ಇಚ್ಛಾ ಶಕ್ತಿಯ ಕೊರತೆ, ಹಲವಾರು ರಾಜಕಾರಣಿಗಳು ಖಾಸಗಿ ಶಿಕ್ಷಣ ಕ್ಷೇತ್ರದಲ್ಲಿ ಹೂಡಿರುವ ಬಂಡವಾಳ (ಕಪ್ಪು ಹಣ) ದಿಂದ ಉನ್ನತ ಶಿಕ್ಷಣದ ಗುಣಮಟ್ಟ ಹೇಳ ಹೆಸರಿಲ್ಲದಂತಾಗಿ ಹಣ ಮಾಡುವ ಪ್ರವೃತ್ತಿಯೇ ಹೆಚ್ಚಾಗಿದೆ.

ಸುಮಾರು 7 ಸಾವಿರ ಕೋಟಿ ಹಣ ಇಂದು ಖಾಸಗಿಯವರು ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಹೂಡಿದ್ದಾರೆ ಎಂದರೆ ತಪ್ಪಿಲ್ಲ. ಕೈಯಲ್ಲಿ ಹಲವು ಲಕ್ಷ ಹಣ ಇದ್ದರೆ ಯಾರು ಬೇಕಾದರೂ ಇಂದು ದೇಶದಲ್ಲಿ ಒಂದು ಖಾಸಗಿ ವಿವಿಯನ್ನು ತೆರೆಯಬಹುದು. ಅದರ ಮೂಲಕ ಆತ ಇನ್ನು ಹಲವು ಕೋಟಿಗಳನ್ನು ಗಳಿಸಬಹುದು. ಮುಂದೊಂದು ದಿನ ಪ್ರಾಥಮಿಕ ಶಾಲೆಗಳಿಗಿಂತ ವಿವಿಗಳ ಸಂಖ್ಯೆಯೇ ಹೆಚ್ಚಿದರೂ ಆಶ್ಚರ್ಯವಿಲ್ಲ. ಜಿಲ್ಲೆಗೊಂದು, ತಾಲೂಕಿಗೊಂದು ವಿವಿಗಳು ಬರುವ ದಿನ ಸಹ ದೂರವಿಲ್ಲ. ಅದರೆ ಇಂದಿನ ಸರಕಾರಿ ವಿವಿಗಳು ಸೃಜನಪಕ್ಷಪಾತ, ಭ್ರಷ್ಟಾಚಾರ, ಜಾತಿವ್ಯವಸ್ಥೆಯಿಂದ ತುಂಬಿ ತುಳುಕುತ್ತಿವೆ. ನೇಮಕಾತಿಯಲ್ಲಿ ಅವ್ಯವಹಾರ, ಹಗರಣ ಇಲ್ಲದೆ ಇಂದು ಯಾವ ವಿವಿಗಳಲ್ಲೂ ನೇಮಕಾತಿ ನಡೆಯುತ್ತಿಲ್ಲ. ಉನ್ನತ ಶಿಕ್ಷಣ ವ್ಯವಸ್ಥೆಗೆ ಪೂರಕವಾಗ ಬೇಕಿದ್ದ ಘೆಉ ಪರೀಕ್ಷೆ ಇಂದು ಪಾವಿತ್ರತೆಯನ್ನು ಕಳೆದು ಕೊಂಡಿದೆ. ಉನ್ನತ ಶಿಕ್ಷಣಕ್ಕೆ ಹಣಕಾಸಿನ ಸೌಲಭ್ಯ ಸಹ ಕುಂಠಿತಗೊಂಡಿದೆ.

ಯಾವುದೇ ಸಮಾಜದ ಅಭಿವೃದ್ಧಿಗೆ ಅಲ್ಲಿನ ಗುಣಾತ್ಮಕ ಉನ್ನತ ಶಿಕ್ಷಣ ಮತ್ತು ಲಾಭಇಲ್ಲದ ಕ್ರಿಯಾತ್ಮಕ ರಾಜಕೀಯ ಹಾಜರಾತಿ ಮುಖ್ಯ ಕಾರಣವಾಗುತ್ತದೆ. ಇಂದು ಭಾರತ ಉನ್ನತ ಶಿಕ್ಷಣದ ಅಗಾಧವಾದ ಕ್ರಾಂತಿಯನ್ನು ಆರಂಭಿಸಿ ಅದರಲ್ಲಿ ಯಶಸ್ಸು ಸಹ ಕಂಡಿದೆ. ದೇಶದ ಹಲವಾರು ಪ್ರತಿಭೆಗಳು ವಿದೇಶಗಳಲ್ಲಿ ನಮ್ಮ ದೇಶದ ರೀತಿಯನ್ನು ಬೆಳೆಸುತ್ತಿದ್ದಾರೆ. ಸರಕಾರವು ಸಹ ಕೋಟಿಗಳ ಲೆಕ್ಕದಲ್ಲಿ ಉನ್ನತ ಶಿಕ್ಷಣಕ್ಕೆ ಅನುದಾನವನ್ನು ನೀಡುತ್ತದೆ. ಗುಣಾತ್ಮಕ ಉನ್ನತ ಶಿಕ್ಷಣಕ್ಕೆ ಅತಿ ಹೆಚ್ಚು ಒತ್ತು ನೀಡಿದರೂ ಸಹ ಇತರೆ ಪಾಶ್ಚಿಮಾತ್ಯ ದೇಶಗಳ ಉನ್ನತ ಶಿಕ್ಷಣದ ಗುಣಮಟ್ಟದ ಸಾಲಿಗೆ ಬರುತ್ತಿಲ್ಲ. ನಮ್ಮ ಕೆಲವು ವಿವಿಗಳು ಪ್ರತಿಭೆಗಳನ್ನು ಸೃಷ್ಟಿಸುವುದರ ಬದಲಾಗಿ ಕೇವಲ ಜೊಳ್ಳುಗಳನ್ನು ಹೆಚ್ಚಾಗಿ ಸೃಷ್ಟಿಸುತ್ತಿವೆೆ. ದೇಶದ ಕೆಲವು ವಿವಿಗಳು ಬಿಳಿ ಆನೆಗಳಾಗಿ ಪರಿವರ್ತನೆಗೊಂಡಿವೆೆ ಎಂದರೆ ತಪ್ಪಲ್ಲ. ಇಲ್ಲಿ ನಡೆಯುತ್ತಿರುವ ಸಂಶೋಧನೆಗಳು ತೀರಾ ಕೆಳಮಟ್ಟದಲ್ಲಿವೆ. ಹೆಚ್ಚುತ್ತಿರುವ ಖಾಸಗಿ ವಿವಿಗಳು ಡಿಮ್ಡ್ ವಿವಿಗಳು ಮತ್ತು ವಿದೇಶಿ ವಿವಿಗಳ ಮಧ್ಯೆ ದೇಶದ ಸರಕಾರಿ ವಿವಿಗಳು ಮಾಯವಾಗತೊಡಗಿದೆ. ಇದರ ಮಧ್ಯೆ ಪ್ರತ್ಯೇಕ ಕಮಿಟಿಯು ಇನ್ನು 730 ಸರಕಾರಿ ವಿವಿಗಳನ್ನು ಸೃಷ್ಟಿಸಲು ಸಲಹೆ ನೀಡಿದೆ!

ಸ್ವಾತಂತ್ರ್ಯದ ನಂತರ ದೇಶದಲ್ಲಿನ ವಿವಿಗಳ ಸಂಖ್ಯೆ ನಿರಂತರವಾಗಿ ಹೆಚ್ಚಾಗುತ್ತಿದೆ. ಪ್ರತಿ ವಿಷಯದ ಅಧ್ಯಯನಕ್ಕೆಂದೇ ಇಂದು ಹಲವಾರು ಪ್ರತ್ಯೇಕ ಸರಕಾರಿ ವಿವಿಗಳು ತಲೆ ಎತ್ತುತ್ತಿವೆ. ಕಿಲೋಮೀಟರಿಗೊಂದು ಪ್ರಾಥಮಿಕ ಶಾಲೆಯಂತೆ ಇಂದು ದೇಶದಲ್ಲಿ ಖಾಸಗಿ ವಿವಿಗಳು ಅಣಬೆಯಂತೆ ರಾತ್ರೋರಾತ್ರಿ ಹುಟ್ಟಿಕೊಳ್ಳುತ್ತಿವೆ ಮತ್ತು ಇವುಗಳು ಹೇಗೋ ತಮ್ಮ ಆದಾಯದ ಮೂಲವನ್ನು ಕಂಡುಕೊಳ್ಳುತ್ತಿವೆ. ಇತ್ತೀಚಿನ ಒಂದು ಅಧ್ಯಯನದ ಪ್ರಕಾರ ದೇಶದ ಸರಾಸರಿ ಶೇ.43 ರಾಜಕಾರಣಿಗಳು ಖಾಸಗಿ ವಿವಿಗಳನ್ನು ನಡೆಸುತ್ತಿದ್ದಾರೆ ಎಂದರೆ ಇಲ್ಲಿನ ಲಾಭವನ್ನು ಊಹಿಸಿಕೊಳ್ಳಬಹುದು. ಆದರೆ ಸರಕಾರಿ ವಿವಿಗಳಿಗೆ ಇಂತಹ ಭಾಗ್ಯವಿಲ್ಲ. ಇಂದು ಹಲವಾರು ಸರಕಾರಿ ವಿವಿಗಳು ಗುಣಾತ್ಮಕ ಶಿಕ್ಷಣಕ್ಕೆ ಹೆಸರಾಗಿದ್ದರೂ ಸಾಕಷ್ಟು ಮೂಲಭೂತ ಸೌಲಭ್ಯಗಳಿಲ್ಲದ ಅವುಗಳು ನರಳುತ್ತಿವೆ. ಹಲವು ವಿವಿಗಳು ಕೆಲವು ವಿಭಾಗಗಳಿಗೆ ವಿದ್ಯಾರ್ಥಿಗಳ ಲಭ್ಯವಿಲ್ಲದೆ ವಿಭಾಗಗಳನ್ನು ಮುಚ್ಚುವ ಹಂತಕ್ಕೆ ಬಂದಿವೆ ಎಂದು ಇತ್ತೀಚಿನ ಯುಜಿಸಿ (2016) ವರದಿ ಹೇಳುತ್ತಿದೆ. ಇಂದು ಹೊರಬರುತ್ತಿರುವ ಎಂ.ಫಿಲ್, ಪಿಎಚ್.ಡಿ ಅಧ್ಯಯನ ವಿಷಯಗಳ ಮೇಲೆ ಸ್ವಲ್ಪ ಬೆಳಕು ಚೆಲ್ಲಿದರೆ ಸಾಕು ಇಲ್ಲಿ ನಡೆಯುತ್ತಿರುವ ಸಂಶೋಧನೆಯ ಗುಣಮಟ್ಟ ತಿಳಿದುಕೊಳ್ಳಲು ಸಾಧ್ಯ. ಪುಣ್ಯಕ್ಕೆ ಅದನ್ನು ಪ್ರಕಟಿಸುವ ಧೈರ್ಯ ಅವರು ಮಾಡುವುದಿಲ್ಲ.

ಅಷ್ಟರಮಟ್ಟಿಗೆ ಅವರ ಪುಕ್ಕಲತನವನ್ನು ಮೆಚ್ಚಿಕೊಳ್ಳಬೇಕು.! ಸರಕಾರ ನೀಡುತ್ತಿರುವ ಒಟ್ಟು ಅನುದಾನದಲ್ಲಿ ಸುಮಾರು 60 ಸಾವಿರ ಕೋಟಿ ರೂ. ಸರ್ವ ಶಿಕ್ಷಣ ಅಭಿಯಾನಕ್ಕೆ ವ್ಯಯವಾಗುತ್ತಿದೆ. ಅಂದರೆ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚಿನ ಹಣ ಮೀಸಲಿಡಲಾಗಿದೆ ಎಂದು ಅರ್ಥ. ಕೆಲವು ತಜ್ಞರು ಇದನ್ನು ಸಮರ್ಥಿಸಿಕೊಳ್ಳುತ್ತಾರೆ ಏಕೆಂದರೆ ಪ್ರಾಥಮಿಕ ಶಿಕ್ಷಣದಿಂದ ಬರುವ ಲಾಭ ಉನ್ನತ ಶಿಕ್ಷಣದಿಂದ ಬರುತ್ತಿಲ್ಲ! ಪ್ರತಿಯೊಬ್ಬರಿಗೂ ಕನಿಷ್ಠ ಪ್ರಾಥಮಿಕ ಶಿಕ್ಷಣ ನೀಡಿದರೆ ದೇಶ ಅಷ್ಟರಮಟ್ಟಿಗೆ ಸಾಕ್ಷರತೆ ಸಾಧಿಸಿದಂತೆ ಎಂಬುದು ಅವರ ವಾದ. ಇದು ಒಂದು ಕೋನದಲ್ಲಿ ಸರಿ ಎನಿಸಿದರೂ ವಿವಿಗಳ ಉನ್ನತ ಶಿಕ್ಷಣವನ್ನು ಕಡೆಗಣಿಸಿ ಮೂಲ ಶಿಕ್ಷಣ ಸುಧಾರಣೆಗೆ ಒತ್ತು ನೀಡುವುದು ಜಾಣತನದ ನಿರ್ಧಾರವಲ್ಲ ಎಂಬುದು ಕೆಲವು ತಜ್ಞರ ಅನಿಸಿಕೆ. ದೇಶದ ದೀರ್ಘಕಾಲೀನ ಯೋಜನೆ, ಆರ್ಥಿಕ ಬೆಳವಣಿಗೆ ಮತ್ತು ಹೊಸ ಆವಿಷ್ಕಾರ ವಿಚಾರಕ್ಕೆ ಬಂದರೆ ಉನ್ನತ ಶಿಕ್ಷಣಕ್ಕೂ ಸರಕಾರ ಸಾಕಷ್ಟು ಪ್ರಮಾಣದಲ್ಲಿ ಹಣಕಾಸಿನ ನೆರವು ನೀಡಬೇಕಾಗುತ್ತದೆ. ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ನೀಡುವುದಕ್ಕೆ ಸಮಾಜದ ಒತ್ತಡ ಹೆಚ್ಚಿದೆ ಆದರೆ ಉನ್ನತ ಶಿಕ್ಷಣಕ್ಕೆ ವಿಶೇಷವಾಗಿ ವಿವಿಗಳಿಗೆ ಹೆಚ್ಚಿನ ಅನುದಾನ ನೀಡಲು ಯಾವುದೇ ಗುಂಪುಗಳ ಒತ್ತಡ ಇಲ್ಲದಿರುವುದು ದುರದೃಷ್ಟಕರ.

ಖಾಸಗಿ ಕ್ಷೇತ್ರದ ಸಹಾಯವಿಲ್ಲದೆ ಸರಕಾರ ಒಂದೇ ಉನ್ನತ ಶಿಕ್ಷಣದಲ್ಲಿ ಕ್ರಾಂತಿಯನ್ನು ಉಂಟು ಮಾಡಲು ಎಂದಿಗೂ ಸಾಧ್ಯವಿಲ್ಲ. ಇಂದು ಕೆಲವೊಂದು ಖಾಸಗಿ ವಿವಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುತ್ತಮವಾದ ಹೆಗ್ಗಳಿಕೆಯನ್ನು ಉಂಟುಮಾಡಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧ್ದಿ ಹೊಂದಿವೆ. ಸಂಶೋಧನಾ ಕ್ಷೇತ್ರದಲ್ಲಿ ದೇಶಿಯ ವಿವಿಗಳಿಗಿಂತ ಹತ್ತಾರು ಪಟ್ಟು ಪ್ರಗತಿಯನ್ನು ಸಾಧಿಸಿವೆ ಮತ್ತು ದೇಶಕ್ಕೆ ಅತ್ಯುತ್ತಮವಾದ ಸಂಶೋಧಕರನ್ನು ಕೊಡುಗೆಯಾಗಿ ನೀಡಿದೆ. ಖಾಸಗಿ ವಿವಿಗಳು ಇಂದು ದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಹೊಸ ದಿಕ್ಕನ್ನು ತೋರಿಸಿದೆ ಎಂದರೆ ತಪ್ಪಾಗಲಾರದು. ಆದರೆ ಗುಣಾತ್ಮಕ ಶಿಕ್ಷಣದಲ್ಲಿ ಖಾಸಗಿ ವಿವಿಗಳು ರಾಜಿ ಮಾಡಿಕೊಳ್ಳುವುದನ್ನು ತಪ್ಪಿಸಿ ಯು.ಜಿ.ಸಿಯ ನಿಯಮಾವಳಿಯನ್ನು ಸ್ಪಷ್ಟವಾಗಿ ಪಾಲಿಸಿದರೆ ಖಾಸಗಿ ವಿವಿ.ಗಳು ಉನ್ನತ ಶಿಕ್ಷಣದಲ್ಲಿ ಮತ್ತಷ್ಟು ಪ್ರಗತಿಯ ಹಂತವನ್ನು ಮತ್ತು ದೇಶಕ್ಕೆ ಉತ್ತಮವಾದ ಕೊಡುಗೆಯನ್ನು ನೀಡಬಹುದು. ಖಾಸಗಿ ವಿವಿಗಳು ಉಳ್ಳವರ ಮಕ್ಕಳಿಗೆ ಮಾತ್ರ ಎಂಬ ಸಿದ್ಧಾಂತವನ್ನು ಕೈಬಿಡಬೇಕು. ಉನ್ನತ ಶಿಕ್ಷಣದಲ್ಲಿ ದೇಶ ಅಂತರ್‌ರಾಷ್ಟ್ರೀಯವಾಗಿ ಮನ್ನಣೆ ಗಳಿಸಲು ವಿವಿಗಳು ಅಗತ್ಯ. ಅದೇ ರೀತಿ ಸಾರ್ವಜನಿಕ ಹಣದಿಂದ ವಿವಿಗಳು ನಡೆಯುವುದರಿಂದ ಸಮಾಜ ಉಪಯುಕ್ತ ಸಂಶೋಧನೆಗೆ ಅದು ಹೆಚ್ಚಿನ ಮಹತ್ವ ನೀಡಬೇಕು.ಶೈಕ್ಷಣಿಕ ಉದ್ದೇಶಗಳಿಗಿಂತ ಇಂದು ರಾಜಕೀಯ ಕಾರಣಗಳಿಗಾಗಿಯೇ ಹೊಸ ರಾಜ್ಯ ವಿವಿಗಳು/ಕೇಂದ್ರೀಯ ವಿವಿಗಳು ರಾತ್ರೋರಾತ್ರಿ ಹುಟ್ಟಿಕೊಳ್ಳುತ್ತಿವೆ.

ಇತ್ತೀಚೆಗೆ ಅಮೆರಿಕದ ಸಂಸ್ಥೆಯೊಂದು ಬಿಡುಗಡೆ ಮಾಡಿದ ಅತ್ಯುನ್ನತ್ತ 200 ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಭಾರತದ ಯಾವುದೇ ವಿವಿಗಳಾಗಲಿ/ ಐಐಟಿಗಳಾಗಲಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ಕೇಂದ್ರದ ಬಜೆಟ್ ನಲ್ಲಿ ರಕ್ಷಣೆ ನಂತರ ಸಿಂಹಪಾಲು ಪಡೆಯುವ ಖಾತೆಯೇ ಶಿಕ್ಷಣ. ಆದರೂ ಸಹ ನಮ್ಮ ವಿಶ್ವವಿದ್ಯಾನಿಲಯಗಳು ಮೇಲಿನ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿಲ್ಲ ಎಂದರೆ ನಮ್ಮ ವಿಶ್ವವಿದ್ಯಾನಿಲಯಗಳ ಸ್ಥಿತಿಗತಿಗಳನ್ನು ಅವುಗಳಲ್ಲಿ ನಡೆಯುತ್ತಿರುವ ಕೆಟ್ಟ ರಾಜಕೀಯಗಳ ಬಗ್ಗೆ ನೀವೇ ಉಹಿಸಿಕೊಳ್ಳಿ. ಇನ್ನು ಸುಸ್ಥಿರ ಸಮಾಜದ ಅಭಿವೃದ್ಧಿಗೆ ಸುಸ್ಥಿರ ಸರಕಾರ ಮತ್ತು ರಾಜಕೀಯ ವ್ಯವಸ್ಥೆ ತುಂಬಾ ಅಗತ್ಯವಿದೆ. ಆದರೆ ರಾಜಕೀಯದಲ್ಲಿ ಹಾಸುಹೊಕ್ಕಾಗಿರುವ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಜಾತಿ ರಾಜಕೀಯದಿಂದ ಉನ್ನತ ಶಿಕ್ಷಣ ವ್ಯವಸ್ಥೆ ಅಧೋಗತಿಗೆ ಇಳಿದಿದೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಉನ್ನತ ಶಿಕ್ಷಣ ವ್ಯವಸ್ಥೆ ಸೆಣಸಬೇಕಾದರೆ ನಾವು ಅತ್ಯುನ್ನತ ಮಟ್ಟದ ಗುಣಾತ್ಮಕತೆಗೆ ಗಮನ ನೀಡಬೇಕಿದೆ. ಸಮಂಜಸವಾದ ಮೌಲ್ಯಮಾಪನ ಮತ್ತು ಅಕ್ರಿಡೇಷನ್ ವ್ಯವಸ್ಥೆಯನ್ನು ಪುನರ್ ರೂಪಿಸಬೇಕಿದೆ.

ಇಂದು ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಜ್ಞಾನದ ನಿರ್ವಹಣೆ ಎಂದು ಪರಿಗಣಿಸಬೇಕಿದೆ. ಕ್ರೋಡೀಕೃತ ವಿಧಾನ, ಬಹುಶಾಸ್ತ್ರೀಯ ಪಠ್ಯಕ್ರಮ ಮತ್ತು ಖಾಸಗಿ ಕ್ಷೇತ್ರಗಳೊಂದಿಗೆ ಸಂಪರ್ಕ ಜಾಲವನ್ನು ಬೆಳೆಸುವುದರ ಬಗ್ಗೆ ಉನ್ನತ ಶಿಕ್ಷಣ ಸಂಸ್ಥೆಗಳು ಚಿಂತಿಸಬೇಕಾಗಿದೆ. ವಿಶ್ವವಿದ್ಯಾನಿಲಯಗಳು ಜ್ಞಾನಾಧಾರಿತ ಕೇಂದ್ರಗಳಾಗಬೇಕಿದೆ. ದೇಶಿ ತಂತ್ರಜ್ಞಾನಕ್ಕೆ ಮಹತ್ವ ನೀಡಬೇಕಾಗಿದೆ. ಪಠ್ಯಕ್ರಮದ ರಚನೆಯನ್ನು ಉತ್ಕೃಷ್ಟ ತಜ್ಞರ ಸಮಿತಿ ರಚಿಸುವಂತೆ ನೋಡಿಕೊಳ್ಳಬೇಕಿದೆ. ಜ್ಞಾನ ಮತ್ತು ಕೌಶಲ್ಯತೆ ಎರಡನ್ನು ಒಟ್ಟಿಗೆ ನೀಡುವ ಅರ್ಥಪೂರ್ಣ ಪಠ್ಯಕ್ರಮದ ಅಗತ್ಯತೆ ಇದೆ. ನ್ಯಾಕ್ ಕಮಿಟಿಯನ್ನು ಸಂಪೂರ್ಣವಾಗಿ ಪುನರ್ ರೂಪಿಸಬೇಕಾಗಿದೆ. ಯುಜಿಸಿ, ಐಸಿಎಸ್‌ಎಸ್‌ಆರ್‌ನಂತಹ ಸಂಸ್ಥೆಗಳು ಬಹುಶಾಸ್ತ್ರೀಯ, ಅಂತರ್‌ಶಾಸ್ತ್ರೀಯ ವಿಷಯಗಳಲ್ಲಿನ ಸಂಶೋಧನೆಗಳಿಗೆ ಹೆಚ್ಚಿನ ಉತ್ತೇಜನ ನೀಡಬೇಕು. ಮುಖ್ಯವಾಗಿ ಸಮಾಜವಿಜ್ಞಾನ ಕಲಿಕೆ, ಬೋಧನೆ ಮತ್ತು ಸಂಶೋಧನೆಯ ವಿಧಾನವನ್ನು ಸಂಪೂರ್ಣವಾಗಿ ಪುನರ್ ರೂಪಿಸಬೇಕಾಗಿದೆ. ಕೇವಲ ಸಾಮರ್ಥ್ಯ ಮತ್ತು ಸಾಧನೆಯ ಆಧಾರದಮೇಲೆ ಭಡ್ತಿ ನೀಡಬೇಕಾಗಿದೆ. ನಳಂದ , ತಕ್ಷಶಿಲೆಯಅಂತಹ ವಿಶ್ವಪ್ರಸಿದ್ಧ ವಿಶ್ವವಿದ್ಯಾನಿಲಯಗಳನ್ನು ನೀಡಿದ ಭಾರತವು ಇಂದು ಉನ್ನತ ಶಿಕ್ಷಣದಲ್ಲಿ ಸಾಕಷ್ಟು ಹಿಂದೆ ಉಳಿದಿದೆ. ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ಕೆಲಸ ಮಾಡುತ್ತಿರುವ ಪ್ರಾಧ್ಯಾಪಕರು ಇದರ ಬಗ್ಗೆ ಚಿಂತಿಸಿ ಭಾರತದ ವಿಶ್ವವಿದ್ಯಾನಿಲಯಗಳು ಜಗತ್ತಿನ ಮುಂಚೂಣಿಗೆ ಬರಲು ಪ್ರಯತ್ನಿಸಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)