varthabharthiಕ್ರೀಡೆ

ಕೋವಿಡ್-19 ಸಂತ್ರಸ್ತರಿಗೆ 20 ಲಕ್ಷ ರೂ. ನಿಧಿ ಸಂಗ್ರಹಿಸಿದ ಭಾರತ ಮಹಿಳಾ ಹಾಕಿ ತಂಡ

ವಾರ್ತಾ ಭಾರತಿ : 5 May, 2020

ಬೆಂಗಳೂರು, ಮೇ 4: ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವುದಕ್ಕೆ ನೆರವಾಗಲು ಭಾರತೀಯ ಮಹಿಳಾ ಹಾಕಿ ತಂಡ 20 ಲಕ್ಷ ರೂ. ನಿಧಿ ಸಂಗ್ರಹಿಸಿದೆ.

ಭಾರತೀಯ ತಂಡ 18 ದಿನಗಳ ಫಿಟ್ನೆಸ್ ಚಾಲೆಂಜ್‌ನ ಮೂಲಕ ಈ ಹಣವನ್ನು ಸಂಗ್ರಹಿಸಿದೆ.ಮೇ 3ರಂದು ಮುಕ್ತಾಯವಾದ ಚಾಲೆಂಜ್‌ನಲ್ಲಿ ಹಾಕಿ ತಂಡ 20,01,130 ರೂ. ಸಂಗ್ರಹಿಸಿದೆ. ಈ ಹಣವನ್ನು ದಿಲ್ಲಿ ಮೂಲದ ಎನ್‌ಜಿಒ ಉದಯ ಪ್ರತಿಷ್ಠಾನಕ್ಕೆ ದೇಣಿಗೆ ನೀಡಲಾಗುತ್ತದೆ. ವಿವಿಧ ಸ್ಥಳಗಳಲ್ಲಿರುವ ರೋಗಿಗಳು, ವಲಸೆ ಕಾರ್ಮಿಕರು ಹಾಗೂ ಕೊಳೆಗೇರಿ ನಿವಾಸಿಗಳಿಗೆ ಮೂಲಭೂತ ಅಗತ್ಯತೆ ಪೂರೈಸಲು ಈ ನಿಧಿಯನ್ನು ಬಳಸಲಾಗುತ್ತದೆ.

‘‘ನಾವು ಸ್ವೀಕರಿಸಿದ ಪ್ರತಿಕ್ರಿಯೆ ಅದ್ಭುತವಾಗಿತ್ತು. ವಿಶ್ವದಾದ್ಯಂತವಿರುವ ಜನತೆ ಅದರಲ್ಲೂ ಮುಖ್ಯವಾಗಿ ಭಾರತೀಯ ಹಾಕಿ ಅಭಿಮಾನಿಗಳು ಚಾಲೆಂಜ್‌ನಲ್ಲಿ ಭಾಗವಹಿಸಿದ್ದರು ಹಾಗೂ ದೇಣಿಕೆಯನ್ನು ನೀಡಿದರು. ಭಾರತೀಯ ಮಹಿಳಾ ಹಾಕಿ ತಂಡದ ಪರವಾಗಿ ಬಡವರಿಗೆ ನೆರವಾಗುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸಲು ಬಯಸುವೆ’’ ಎಂದು ಭಾರತದ ನಾಯಕಿ ರಾಣಿ ರಾಂಪಾಲ್ ಹೇಳಿದ್ದಾರೆ.

ಪ್ರತಿದಿನ ಆಟಗಾರ್ತಿಯರು ಹೊಸ ಸವಾಲನ್ನು ನೀಡುತ್ತಿದ್ದರು. ಸಾಮಾಜಿಕ ಮಾಧ್ಯಮದಲ್ಲಿ 10 ಜನರನ್ನು ಟ್ಯಾಗ್ ಮಾಡಿ ಸವಾಲನ್ನು ಸ್ವೀಕರಿಸಲು ಹಾಗೂ ನಿಧಿ ಸಂಗ್ರಹಕ್ಕೆ 100 ರೂ. ನೀಡುವಂತೆ ಹೇಳಲಾಗುತ್ತಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)