varthabharthiವಿಶೇಷ-ವರದಿಗಳು

ಆರೋಗ್ಯ ಸೇತು ಆ್ಯಪ್ ಕುರಿತು ಕೇಂದ್ರಕ್ಕೆ ಆರು ಪ್ರಶ್ನೆಗಳು

ವಾರ್ತಾ ಭಾರತಿ : 5 May, 2020
ಅನುಜ್ ಶ್ರೀವಸ್, Thewire.in

ಕೊರೋನ ವೈರಸ್ ಸೋಂಕು ಹರಡುವಿಕೆಯನ್ನು ತಡೆಯಲು ಆರೋಗ್ಯ ಸೇತು ಆ್ಯಪ್ ಅನ್ನು ಡೌನ್‌ಲೋಡ್‌ಮಾಡಿಕೊಳ್ಳುವಂತೆ ಕೇಂದ್ರ ಸರಕಾರವು ಜನರನ್ನು ಉತ್ತೇಜಿಸುತ್ತಿದೆ, ಸರಕಾರಿ ನೌಕರರಿಗಂತೂ ಇದು ಕಡ್ಡಾಯವಾಗಿದೆ. ಈ ಆ್ಯಪ್ ವ್ಯಕ್ತಿಯ ಖಾಸಗಿತನವನ್ನು ಉಲ್ಲಂಘಿಸುತ್ತದೆ ಎಂದು ತಜ್ಞರು ಮತ್ತು ನಾಗರಿಕ ಹಕ್ಕುಗಳ ಪ್ರತಿಪಾದಕರು ಈಗಾಗಲೇ ಆರೋಪಿಸಿದ್ದಾರೆ.

ಲಾಕ್‌ಡೌನ್‌ನ ಕೆಲವು ನಿರ್ಬಂಧಗಳನ್ನು ಸಡಿಲಿಸಿರುವ ಸರಕಾರವು ಕೆಲಸಕ್ಕೆ ಹೋಗುವವರು ಈ ಆ್ಯಪ್‌ನ್ನು ಕಡ್ಡಾಯವಾಗಿ ಡೌನ್‌ಲೋಡ್ ಮಾಡಿಕೊಳ್ಳುವಂತೆ ಸೂಚಿಸಿದೆ.

ಆರೋಗ್ಯ ಸೇತು ಆ್ಯಪ್‌ನ ಬಳಕೆ ಮುಂದಿನ ಎರಡು ವರ್ಷಗಳ ಕಾಲ ಮುಂದುವರಿಯಬಹುದು ಎಂದು ಶನಿವಾರ ಘೋಷಿಸುವ ಮೂಲಕ ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಅವರು ವಿವಾದಕ್ಕೆ ತನ್ನದೊಂದಿಷ್ಟು ಕೊಡುಗೆಯನ್ನು ನೀಡಿದ್ದಾರೆ. ಜಾವಡೇಕರ್ ಹೇಳಿಕೆಯನ್ನು ತರಾಟೆಗೆತ್ತಿಕೊಂಡಿರುವ ಡಿಜಿಟಲ್ ಹಕ್ಕುಗಳ ತಜ್ಞರು, ಈ ಆ್ಯಪ್‌ನ್ನು ಬಳಸಿ ಬಳಕೆದಾರನ ಸಂಪರ್ಕಕ್ಕೆ ಬರುವ ವ್ಯಕ್ತಿಗಳಲ್ಲಿ ಕೊರೋನ ವೈರಸ್ ಸೋಂಕಿನ ಜಾಡು ಹಿಡಿಯುವ ಕಾರ್ಯಕ್ರಮಕ್ಕೆ ಸೂಕ್ತ ಕಾನೂನಾತ್ಮಕ ಬೆಂಬಲವಿಲ್ಲ ಎಂದು ಬೆಟ್ಟು ಮಾಡಿದ್ದಾರೆ.

ಕೊರೋನ ವೈರಸ್ ಯುಗದ ಹೊಸ ಬದುಕಿನಲ್ಲಿ ಈ ಆರೋಗ್ಯ ಸೇತು ಆ್ಯಪ್‌ನ್ನು ಸರಕಾರವು ಅನಿವಾರ್ಯಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಸುದ್ದಿ ಜಾಲತಾಣ ‘ದಿ ವೈರ್ ಡಾಟ್ ಇನ್’ ಚರ್ಚೆಗೆ ಅರ್ಹವಾಗಿರುವ ಆರು ಪ್ರಶ್ನೆಗಳನ್ನು ಮುಂದಿರಿಸಿದ್ದು ಸರಕಾರವು ಇದಕ್ಕೆ ಉತ್ತರಿಸಬೇಕಿದೆ.

*ಈ ಆ್ಯಪ್‌ನ್ನು ವಿನ್ಯಾಸಗೊಳಿಸಿದವರು ಯಾರು? ಅವರು ಸರಕಾರದೊಂದಿಗೆ ಮತ್ತು ಆ್ಯಪ್‌ನೊಂದಿಗೆ ಯಾವ ಸಂಬಂಧ ಹೊಂದಿದ್ದಾರೆ?

-ಎ.2ರಂದು ಬಿಡುಗಡೆಗೊಂಡಾಗಿನಿಂದಲೂ ಆರೋಗ್ಯ ಸೇತು ಆ್ಯಪ್‌ನ ಸೃಷ್ಟಿಯ ಬಗ್ಗೆ ಅನಗತ್ಯ ಗೋಪ್ಯತೆಯನ್ನು ಕಾಯ್ದುಕೊಂಡು ಬರಲಾಗಿದೆ. ‘ಇದೊಂದು ‘ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ)’ದ,ದೇಶದ ಯುವ ಪ್ರತಿಭೆಗಳು ಒಂದಾಗಿ ಜಾಗತಿಕ ಬಿಕ್ಕಟ್ಟಿಗೆ ಉತ್ತರಿಸಲು ಸಂಪನ್ಮೂಲಗಳು ಮತ್ತು ಪ್ರಯತ್ನಗಳನ್ನು ಕ್ರೋಢೀಕರಿಸಿರುವ ವಿಶಿಷ್ಟ ಉದಾಹರಣೆಯಾಗಿದೆ’ ಎಂದು ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ (ಪಿಐಬಿ) ಹೇಳಿಕೆಯಲ್ಲಿ ಬಣ್ಣಿಸಿದೆ. ಈ ಸಹಭಾಗಿತ್ವವು ಆ್ಯಪ್‌ನ ಕೆಲವೊಂದು ಕಾರ್ಯಾಚರಣೆಗಳ ನಿರ್ವಹಣೆಗೂ ವಿಸ್ತರಿಸಲ್ಪಟ್ಟಿದೆ ಎಂಬ ವರದಿಗಳು ಬರುತ್ತಿದ್ದು,ಇದು ಮಾಮೂಲು ಸರಕಾರಿ ಗುತ್ತಿಗೆಯಲ್ಲ ಎನ್ನುವುದು ಸ್ಪಷ್ಟವಾಗಿದೆ.

ಈ ವ್ಯವಸ್ಥೆಯು ಪಿಪಿಪಿಯ ಉತ್ತಮ ಉದಾಹರಣೆಯಾಗಿದ್ದರೆ, ಆ್ಯಪ್‌ನ್ನು ಸೃಷ್ಟಿಸುವಲ್ಲಿ ಪಾತ್ರವನ್ನು ಹೊಂದಿದ್ದ ಖಾಸಗಿ ತಜ್ಞರ ಹೆಸರುಗಳ ಪಟ್ಟಿಯನ್ನೇಕೆ ಬಿಡುಗಡೆಗೊಳಿಸುತ್ತಿಲ್ಲ? ಸಹಭಾಗಿತ್ವದ ನಿಬಂಧನೆಗಳು ಏನಾಗಿದ್ದವು? ಆ್ಯಪ್ ನಿರ್ವಹಿಸುವಲ್ಲಿ ಅಥವಾ ಭವಿಷ್ಯದ ಕಾರ್ಯತಂತ್ರದ ಕುರಿತು ಮಾಹಿತಿಗಳನ್ನು ಒದಗಿಸುವಲ್ಲಿ ಈ ಖಾಸಗಿ ಕ್ಷೇತ್ರದ ಪಾಲುದಾರರು ಯಾವ ಪಾತ್ರವನ್ನು ಹೊಂದಿದ್ದಾರೆ?

ಈ ಯೋಜನೆಯಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿರಬಹುದಾದ ಕೆಲವರು ನಮಗೆ ಗೊತ್ತು. ಈ ಜನರು ಆರೋಗ್ಯ ಸೇತು ಆ್ಯಪ್‌ನ್ನು ಸಮರ್ಥಿಸಿಕೊಳ್ಳಲು ಟಿವಿ ಚಾನೆಲ್‌ಗಳಲ್ಲಿ ಅಥವಾ ವೃತ್ತಪತ್ರಿಕೆಗಳ ವರದಿಗಳಲ್ಲಿ ಕಾಣಿಸಿಕೊಂಡಿದ್ದರು. ಇವರಲ್ಲಿ ಗೂಗಲ್ ಇಂಡಿಯಾದ ಮಾಜಿ ಅಧಿಕಾರಿ ಲಲಿತೇಶ ಕತ್ರಗಡ್ಡ ಮತ್ತು ಮೇಕ್‌ಮೈಟ್ರಿಪ್‌ನ ಸ್ಥಾಪಕ ದೀಪ್ ಕಾಲ್ರಾ ಸೇರಿದ್ದಾರೆ. ನೀತಿ ಆಯೋಗದ ಅರ್ನಾಬ್ ಕುಮಾರ್ ಮತ್ತು ಐಐಟಿ ಮದ್ರಾಸ್‌ನ ಪ್ರೊಫೆಸರ್ ವಿ.ಕಾಮಕೋಟಿ ಅವರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಇತರ ಪ್ರಮುಖ ವ್ಯಕ್ತಿಗಳಲ್ಲಿ ಸೇರಿದ್ದಾರೆ.

ಆ್ಯಪ್ ಅನ್ನು ಅಭಿವೃದ್ಧಿಗೊಳಿಸಿದ ಎಲ್ಲ ಜನರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಒದಗಿಸುವುದು ಈ ಕಾರ್ಯಕ್ರಮವನ್ನು ಸಾರ್ವಜನಿಕರಿಗೆ ಹೆಚ್ಚು ಉತ್ತರದಾಯಿಯನ್ನಾಗಿಸಲು ನೆರವಾಗಬಲ್ಲದು.

*ಆ್ಯಪ್ ಕೋಡ್‌ನ್ನೇಕೆ ಶೀಘ್ರವೇ ಬಹಿರಂಗಗೊಳಿಸುತ್ತಿಲ್ಲ?

ಸರಕಾರವು ಆರೋಗ್ಯ ಸೇತು ಆ್ಯಪ್‌ನ ಸೋರ್ಸ್ ಕೋಡ್ ಅನ್ನು ಸಾರ್ವಜನಿಕವಾಗಿ ಎಲ್ಲರಿಗೂ ಲಭ್ಯವಾಗಿಸಿದರೆ ಅದು ಥರ್ಡ್ ಪಾರ್ಟಿ ತಜ್ಞರ ಪರೀಶೀಲನೆಗೆ ಮುಕ್ತವಾಗಿರುವುದರಿಂದ ಪಾರದರ್ಶಕತೆಯು ಹೆಚ್ಚುತ್ತದೆ ಮತ್ತು ಸುರಕ್ಷತೆಯನ್ನು ಹೆಚ್ಚಿಸುತ್ತದೆ. ಸ್ವತಂತ್ರ ಆ್ಯಪ್ ಆಡಿಟ್‌ಗಳು ಆ್ಯಪ್‌ನಲ್ಲಿ ಏನಾದರೂ ದೋಷಗಳಿದ್ದರೆ ಪತ್ತೆ ಹಚ್ಚಲು ಮತ್ತು ಖಾಸಗಿತನದ ವಿಷಯದಲ್ಲಿ ಭರವಸೆಯನ್ನು ಒದಗಿಸಲು ನೆರವಾಗುತ್ತದೆ.

 ಸೋರ್ಸ್ ಕೋಡ್ ಅನ್ನು ಮುಕ್ತವಾಗಿ ಲಭ್ಯವಾಗಿಸುವುದರಿಂದ ಅದು ಸಮುದಾಯದ ಆಡಿಟ್‌ಗೆ ಒಳಪಡುತ್ತದೆ ಮತ್ತು ಇದರಿಂದ ಪಾರದರ್ಶಕತೆ ಮತ್ತು ಸುರಕ್ಷತೆ ಹೆಚ್ಚುತ್ತದೆ. ಆ್ಯಪ್ ಪ್ರಾಥಮಿಕವಾಗಿ ಬಳಕೆದಾರನ ಸೆಲ್‌ಫೋನ್‌ಗಳಿಂದ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸುತ್ತದೆ ಮತ್ತು ಸೆಲ್‌ಪೋನ್‌ಗಳು ಬಳಕೆದಾರನ, ಕೆಲವೊಮ್ಮೆ ಆತನ/ಆಕೆಯ ಸಂಪರ್ಕಗಳು ಮತ್ತು ಪರಿಚಿತರ ವೈಯಕ್ತಿಕ ಮಾಹಿತಿಗಳ ಭಂಡಾರಗಳಾಗಿರುತ್ತವೆ. ಇಂತಹ ಸನ್ನಿವೇಶದಲ್ಲಿ ಇಂತಹ ಆ್ಯಪ್‌ನ ಸೋರ್ಸ್ ಕೋಡ್‌ನ ಮೇಲೆ ಸ್ವಾಮ್ಯವನ್ನು ಹೊಂದಿರುವುದು ಉಚಿತವಲ್ಲ ಎಂದು ಸಾಫ್ಟ್‌ವೇರ್ ಲಾ ಫ್ರೀಡಂ ಸೆಂಟರ್ ಬೆಟ್ಟು ಮಾಡಿದೆ.

*ಆ್ಯಪ್‌ನ ಸೋರ್ಸ್ ಕೋಡ್ ಬಹಿರಂಗಗೊಳಿಸುವುದು ಕಡ್ಡಾಯವಾಗಬೇಕು ಎಂದು ವಾದಿಸಿರುವ ಐಐಟಿ ದಿಲ್ಲಿಯ ಪ್ರೊಫೆಸರ್ ಸುಭಾಷಿಸ್ ಬ್ಯಾನರ್ಜಿ ಅವರು,ನೀವು ಸಾರ್ವಜನಿಕ ಆ್ಯಪ್‌ವೊಂದನ್ನು ರೂಪಿಸಿರುವಾಗ ಅದು ಹಲವಾರು ಜನರ ಪರಿಶೀಲನೆಗೊಳಪಡಬೇಕು ಎಂದು ಹೇಳಿದ್ದಾರೆ.

 ಇದಕ್ಕೆ ಪ್ರತಿಕ್ರಿಯಿಸಿರುವ ನೀತಿ ಆಯೋಗದ ಅರ್ನಾಬ್ ಕುಮಾರ್ ಅವರು ‘ಉತ್ಪನ್ನದಲ್ಲಿ ಸ್ಥಿರತೆಯುಂಟಾದ’ ಕೂಡಲೇ ಆ್ಯಪ್‌ನ ಸೋರ್ಸ್ ಕೋಡ್‌ನ್ನು ಬಹಿರಂಗಗೊಳಿಸಲು ಅಭಿವೃದ್ಧಿ ತಂಡವು ಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.

ಆದರೆ ಗೃಹ ವ್ಯವಹಾರಗಳ ಸಚಿವಾಲಯವು ಕಚೇರಿಗಳ ಉದ್ಯೋಗಿಗಳಿಗೆ ಆರೋಗ್ಯ ಸೇತುವನ್ನು ಕಡ್ಡಾಯಗೊಳಿಸಿರುವುದರಿಂದ ಈ ಭರವಸೆಯನ್ನು ಕಾರ್ಯಗತಗೊಳಿಸಲು ಆದ್ಯತೆ ನೀಡಬೇಕಿದೆ ಎನ್ನುವುದು ಸ್ಪಷ್ಟವಾಗಿದೆ.

 * ಸರಕಾರವು ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವುದನ್ನು ಎಲ್ಲ ಕಚೇರಿ ಉದ್ಯೋಗಿಗಳಿಗೆ ಕಡ್ಡಾಯಗೊಳಿಸಿರುವಾಗ ಆ್ಯಪ್ ಏಕೆ ಬಳಕೆದಾರನ ಒಪ್ಪಿಗೆಯನ್ನು ಕೇಳುತ್ತದೆ? ಬೇರೆ ದಾರಿಯೇ ಇಲ್ಲದಾಗ ಆ್ಯಪ್‌ನಲ್ಲಿ ಬದಲಾವಣೆಗಳನ್ನು ಮಾಡುವಂತೆ ನಾವು ಸರಕಾರದ ಮೇಲೆ ಹೇಗೆ ಒತ್ತಡ ಹೇರಬಹುದು?... ಈ ಪ್ರಶ್ನೆಗಳನ್ನು ಮಾಡುತ್ತದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಇತ್ತೀಚಿನ ಟೀಕೆಯೊಂದಕ್ಕೆ ಉತ್ತರವಾಗಿ ಆಯುಷ್ಮಾನ್‌ ಭಾರತ ಯೋಜನೆಯಲ್ಲಿ ವಿಶೇಷ ಕರ್ತವ್ಯಾಧಿಕಾರಿಯಾಗಿರುವ ವರುಣ್ ಝವೇರಿ ಅವರು ‘ಮಾಹಿತಿಗಳನ್ನು ಒದಗಿಸಲು ಎಲ್ಲ ಬಳಕೆದಾರರು ಅನುಮತಿಯನ್ನು ನೀಡಬೇಕಿತ್ತು ’ಎಂದು ರಕ್ಷಣಾತ್ಮಕವಾಗಿ ಟ್ವೀಟಿಸಿದ್ದಾರೆ.

ಆದರೆ ಕೇಂದ್ರವೇ ಆ್ಯಪ್‌ನ್ನು ಕಡ್ಡಾಯಗೊಳಿಸಿರುವಾಗ ಡಿಜಿಟಲ್ ಖಾಸಗಿತನದ ಮೂಲಭೂತ ನೀತಿಯಾಗಿರುವ ಬಳಕೆದಾರನ ಒಪ್ಪಿಗೆಯು ಅರ್ಥವನ್ನು ಕಳೆದುಕೊಳ್ಳುತ್ತದೆ. ಕಚೇರಿ ಉದ್ಯೋಗಿಗಳು ಈ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳದಿದ್ದರೆ ಕ್ರಿಮಿನಲ್ ದಂಡನೆಯನ್ನು ಎದುರಿಸಬೇಕಾಗುತ್ತದೆ.

ಕೇಂದ್ರದ ಈ ಸಮಸ್ಯಾತ್ಮಕ ವಿಧಾನವು ಬಳಕೆದಾರನ ಡಿಜಿಟಲ್ ಹಕ್ಕುಗಳನ್ನು ಒಳಗೊಂಡಿರುವ ಹಲವಾರು ವಿಷಯಗಳಿಗೆ ಅನ್ವಯಿಸುತ್ತದೆ. ಉದಾಹರಣೆಗೆ ಆರೋಗ್ಯ ಸೇತುವಿನ ಸೇವಾ ನಿಬಂಧನೆಗಳು ಆ್ಯಪ್ ತಪ್ಪು ಮಾಹಿತಿಗಳನ್ನು ನೀಡಿದರೆ ಅಥವಾ ಬಳಕೆದಾರನ ಮಾಹಿತಿಗಳನ್ನು ಯಾರಾದರೂ ಅನಧಿಕೃತವಾಗಿ ಪಡೆದುಕೊಂಡರೆ ಅಥವಾ ಅವುಗಳನ್ನು ಪರಿಷ್ಕರಿಸಿದರೆ ಸರಕಾರದ ಹೊಣೆಗಾರಿಕೆಯನ್ನು ಸೀಮಿತಗೊಳಿಸಿವೆ.

ಸರಳವಾಗಿ ಹೇಳಬೇಕೆಂದರೆ ಈ ನಿಬಂಧನೆಗಳು ‘ನೀವು ಕೊರೋನ ವೈರಸ್ ಸೋಂಕಿನ ಅಪಾಯದಲ್ಲಿದ್ದೀರಿ’ ಎಂದು ಆ್ಯಪ್ ಸುಳ್ಳು ಹೇಳಿದಾಗ ಯಾವುದೇ ಹಾನಿಯುಂಟಾದ ಸಂದರ್ಭದಲ್ಲಿ ಸರಕಾರವನ್ನು ಎಲ್ಲ ಹೊಣೆಗಾರಿಕೆಯಿಂದ ಮುಕ್ತಗೊಳಿಸಿವೆ, ಇಷ್ಟೇ ಅಲ್ಲ,ನಿಮ್ಮ ಖಾಸಗಿ ಮಾಹಿತಿಗಳು ಸೋರಿಕೆಯಾದರೆ ಸರಕಾರಕ್ಕೆ ಯಾವುದೇ ಹೊಣೆಗಾರಿಕೆಯಿಲ್ಲ ಎನ್ನುವುದನ್ನೂ ಖಚಿತಪಡಿಸಿವೆ.

ಆರೋಗ್ಯ ಸೇತು ಆ್ಯಪ್ ಬಿಡುಗಡೆಗೊಂಡು ಹೆಚ್ಚು ಸಮಯವಾಗಿಲ್ಲ, ಅದು ಈಗಾಗಲೇ ಕನಿಷ್ಠ ಒಂದು ಮಹತ್ವದ ಸುರಕ್ಷತಾ ಸಮಸ್ಯೆಯನ್ನೆದುರಿಸಿದೆ. ಸ್ವಯಂ ಆರೋಗ್ಯ ಪರಿಶೀಲನೆ ಪ್ರಶ್ನಾವಳಿಯಲ್ಲಿನ ಲೋಪವೊಂದರ ಮೂಲಕ ಬಳಕೆದಾರರ ನಿಖರವಾದ ಲೊಕೇಷನ್ ಮಾಹಿತಿಗಳು ಗೂಗಲ್‌ಗೆ ಸೋರಿಕೆಯಾಗಿವೆ. ಬಳಕೆದಾರರು ಪ್ರಶ್ನಾವಳಿಯ ಭಾಗವಾಗಿರುವ ಯೂ ಟ್ಯೂಬ್ ಲಿಂಕ್‌ನ್ನು ಕ್ಲಿಕ್ಕಿಸಿದರೆ ಆ್ಯಪ್ ಬಳಕೆದಾರನ ಲೊಕೇಷನ್ ಮಾಹಿತಿಯನ್ನು ಗೂಗಲ್‌ಗೆ ಸೋರಿಕೆ ಮಾಡುತ್ತದೆ.

ಈವರೆಗೆ ಆ್ಯಪ್‌ನ್ನು ಬಳಸಿ ಎಷ್ಟು ಜನರು ಸ್ವಂತ ಆರೋಗ್ಯವನ್ನು ಪರಿಶೀಲಿಸಿಕೊಂಡಿದ್ದಾರೆ ಎನ್ನುವುದನ್ನು ಸರಕಾರವು ತನ್ನ ಅಧಿಸೂಚನೆಯಲ್ಲಿ ತಿಳಿಸಿಲ್ಲ, ಈ ಸಂಖ್ಯೆ ಸರಾಸರಿ ಓರ್ವ ಬಳಕೆದಾರನಿಗೆ ಒಂದಕ್ಕಿಂತ ಕಡಿಮೆಯಾಗಿದೆ ಎಂದಷ್ಟೇ ಅದು ಹೇಳಿದೆ.

 ವಿಪರ್ಯಾಸವೆಂದರೆ ಆಡಳಿತ ಬಿಜೆಪಿಯಿಂದ ತೀವ್ರ ಟೀಕೆಗೆ ಗುರಿಯಾಗಿರುವ ದಿ ನ್ಯೂಯಾರ್ಕ್ ಟೈಮ್ಸ್ ಈ ಖಾಸಗಿತನ ಉಲ್ಲಂಘನೆ ವಿಷಯವನ್ನು ಆ್ಯಪ್‌ನ ಅಭಿವೃದ್ಧಿ ತಂಡದ ಗಮನಕ್ಕೆ ತಂದಿತ್ತು. ಖುದ್ದು ಸರಕಾರವೇ ಟ್ವೀಟ್‌ನಲ್ಲಿ ಇದನ್ನು ಬಹಿರಂಗಗೊಳಿಸಿದೆ.

  ಬಳಕೆದಾರನ ಒಪ್ಪಿಗೆ, ನಿರ್ದಿಷ್ಟ ಶಾಸನಾತ್ಮಕ ಬೆಂಬಲ, ಪೈಪೋಟಿ(ಎದುರಾಳಿ ಆ್ಯಪ್‌ನ ರೂಪದಲ್ಲಿ), ಸಾರ್ವತ್ರಿಕ ಮಾಹಿತಿ ರಕ್ಷಣೆ ಕಾನೂನು ಇತ್ಯಾದಿ ಭದ್ರತಾ ಅಂಶಗಳು ಯಾವುದೇ ಆ್ಯಪ್‌ನ ಸುರಕ್ಷತೆ ಮತ್ತು ಗೋಪ್ಯತೆಯ ಪ್ರಜ್ಞೆಯನ್ನು ಹೆಚ್ಚಿಸುತ್ತವೆ. ಆದರೆ ಆರೋಗ್ಯ ಸೇತು ಆ್ಯಪ್‌ನ ವಿಷಯದಲ್ಲಿ ಇವು ಯಾವುದೂ ಇಲ್ಲವೇ ಇಲ್ಲ.

 ಸರಕಾರವು ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ ದಂಡನೆಯ ಬೆದರಿಕೆಯಡಿ ಜನರ ಮೇಲೆ ಒತ್ತಡ ಹೇರುತ್ತಿರುವಾಗ ಕೆಳಗೆ ಪಟ್ಟಿ ಮಾಡಲಾಗಿರುವ ಪ್ರಮುಖ ಬದಲಾವಣೆಗಳನ್ನು ಆ್ಯಪ್‌ನಲ್ಲಿ ತರುವಂತೆ ಬಳಕೆದಾರರು ಹೇಗೆ ಆಗ್ರಹಿಸಬೇಕು? ಇದು ಎಲ್ಲ ಆರೋಗ್ಯ ಸೇತು ಬಳಕೆದಾರರು ಸ್ವಯಂ ಕೇಳಿಕೊಳ್ಳಬೇಕಾದ ಪ್ರಶ್ನೆಯಾಗಿದೆ.

ಹೆಚ್ಚಿನ ಖಾಸಗಿತನವನ್ನು ಕಾಯ್ದುಕೊಳ್ಳಲು ಆ್ಯಪ್‌ನಲ್ಲಿ ತರಬಹುದಾದ ಬದಲಾವಣೆಗಳ ಬಗ್ಗೆ ತಜ್ಞರು ನೀಡಿರುವ ಕೆಲವು ಸಲಹೆಗಳು ಇಲ್ಲಿವೆ:

 ಡೈನಾಮಿಕ್ ಸುಡೋ ಐಡಿಯನ್ನು ಪರಿಚಯಿಸುವುದು: ಐಐಟಿ ಬಾಂಬೆಯ ಪ್ರೊಫೆಸರ್ ಅನುರಾಗ್ ಮೆಹ್ರಾ ಅವರು ಹೇಳಿರುವಂತೆ ನೋಂದಣಿ ಸಮಯದಲ್ಲಿ ಹೆಸರು,ವಯಸ್ಸು,ಲಿಂಗ ಮತ್ತು ಮೊಬೈಲ್ ಸಂಖ್ಯೆ ಈ ಎಲ್ಲ ಮಾಹಿತಿಗಳನ್ನು ಎನ್‌ಕ್ರಿಪ್ಟ್ ಅಥವಾ ಗೂಢ ಲಿಪೀಕರಣ ಮಾಡುವ ಮೂಲಕ ಈ ಆ್ಯಪ್ ಗೋಪ್ಯತೆಯ ರಕ್ಷಣೆಯನ್ನು ಖಚಿತ ಪಡಿಸುತ್ತದೆ ಮತ್ತು ಅದನ್ನು ವಿಶಿಷ್ಟ ಡಿಜಿಟಲ್ ಐಡಿ (ಡಿಐಡಿ)ಯೊಂದಿಗೆ ಜೋಡಣೆಗೊಳಿಸುತ್ತದೆ. ಸೋಂಕಿತ ವ್ಯಕ್ತಿಯು ಸಮೀಪದಲ್ಲಿದ್ದಾಗ ಫೋನ್‌ಗಳು ಡಿಐಡಿಗಳನ್ನು ಮಾತ್ರ ವಿನಿಮಯಿಸಿಕೊಳ್ಳುತ್ತವೆ. ಇದು ಸ್ಥಿರ ಐಡಿಯಾಗಿದ್ದು,ಗುರುತನ್ನು ಸುಲಭವಾಗಿ ಬಹಿರಂಗಗೊಳಿಸುತ್ತದೆ. ಅಂದರೆ ಗೂಢ ಲಿಪೀಕರಣದ ಒಂದು ಪದರ ಮಾತ್ರ ಇರುವುದರಿಂದ ಯಾರಾದರೂ ಡಿಐಡಿಯ ಅಳಿವಿಗೆ ಬಂದರೆ ಪೋನಿನ ಮಾಲಕನನ್ನು ಗುರುತಿಸುತ್ತದೆ.

 ಸಿಂಗಾಪುರದ ಟ್ರೇಸ್ ಟುಗೆದರ್ ಆ್ಯಪ್ ಡೈನಾಮಿಕ್ (ತಾತ್ಕಾಲಿಕ) ಐಡಿಗಳನ್ನು ಬಳಸುತ್ತಿದ್ದು,ಇದು ಭದ್ರತೆಯ ಹೆಚ್ಚುವರಿ ಪದರವನ್ನು ಒದಗಿಸುತ್ತದೆ. ಆದರೆ ಈ ಆ್ಯಪ್‌ನಲ್ಲಿ ಡೈನಾಮಿಕ್ ಐಡಿಗಳು ಸೆಂಟ್ರಲ್ ಸರ್ವರ್‌ನಿಂದ ಸೃಷ್ಟಿಸಲ್ಪಡುತ್ತವೆ ಮತ್ತು ಈ ಸೆಂಟ್ರಲ್ ಸರ್ವರ್ ಫೋನ್‌ನಲ್ಲಿಯ ಆ್ಯಪ್‌ನೊಂದಿಗೆ ಸಂಪರ್ಕದಲ್ಲಿರಬೇಕಾಗುತ್ತದೆ. ಫೋನ್‌ನಲ್ಲಿಯೇ ಡೈನಾಮಿಕ್ ಐಡಿಗಳನ್ನು ಸೃಷ್ಟಿಸುವುದು ಹೆಚ್ಚು ಸುರಕ್ಷಿತ ಮಾರ್ಗವಾಗುತ್ತದೆ ಮತ್ತು ಇದರಿಂದಾಗಿ ಸರ್ವರ್‌ನೊಂದಿಗೆ ಪದೇ ಪದೇ ಸಂಪರ್ಕದ ಅಗತ್ಯವಿರುವುದಿಲ್ಲ.

 ನೋಂದಣಿ ರದ್ದುಗೊಳಿಸುವಿಕೆ ಮತ್ತು ಮಾಹಿತಿ ಅಳಿಸುವಿಕೆ: ಸದ್ಯ ಆ್ಯಪ್ ಬಳಕೆದಾರರು ತಮ್ಮ ಖಾತೆಗಳ ನೋಂದಣಿಯನ್ನು ರದ್ದುಗೊಳಿಸಲು ಅಥವಾ ಮಾಹಿತಿಗಳನ್ನು ಅಳಿಸಲು ಅವಕಾಶವಿಲ್ಲ. ನಮ್ಮ ಫೋನ್‌ಗಳಲ್ಲಿಯ ಡಾಟಾಗಳನ್ನು ಪ್ರತಿ 30-45 ದಿನಗಳಲ್ಲಿ ಅಳಿಸುವ ಮೂಲಕ ಆ್ಯಪ್ ಸ್ವತಃ ಕಾರ್ಯ ನಿರ್ವಹಿಸುತ್ತದೆ ಎನ್ನುವುದು ನಮಗೆ ಗೊತ್ತು. ಆದರೆ ಅದಕ್ಕೂ ಮುನ್ನ ಆ್ಯಪ್‌ನ್ನು ಬಳಕೆದಾರನ ಫೋನಿನಿಂದ ತೆಗೆದುಹಾಕಿದರೆ? ಮತ್ತು ಆ್ಯಪ್ ಅನ್‌ಇನ್‌ಸ್ಟಾಲ್ ಆದಾಗ ನೋಂದಣಿ ಡಾಟಾ ಏನಾಗುತ್ತದೆ?

‘ಮಿಷನ್ ಕ್ರೀಪ್’ ಅನ್ನು ತಡೆಯುವುದು: ಆಧಾರ್ ಯೋಜನೆಯಂತೆ ಸೋಂಕಿತ ವ್ಯಕ್ತಿಯ ಜಾಡು ಹಿಡಿಯುವ ಮೂಲಉದ್ದೇಶಕ್ಕೆ ವಿಭಿನ್ನವಾಗಿ ಆರೊಗ್ಯ ಸೇತು ಆ್ಯಪ್‌ಗೆ ಹೊಸ ವಿಷಯಗಳನ್ನು ಸೇರಿಸುವ ಯೋಜನೆಗಳು ಈಗಾಗಲೇ ಸರಕಾರದ ಬಳಿಯಿವೆ. ಇ-ಪಾಸ್ ಸೌಲಭ್ಯ, ಟೆಲಿಮೆಡಿಸಿನ್ ಮತ್ತು ಇನ್ನೂ ಹಲವು ಇವುಗಳಲ್ಲಿ ಸೇರಿವೆ. ಇವುಗಳಲ್ಲಿ ಹೆಚ್ಚಿನವು ಯೋಜನೆಯ ವ್ಯಾಪ್ತಿಯನ್ನು ಹಿಗ್ಗಿಸುತ್ತವೆ, ಹೊಸ ಲೋಪಗಳಿಗೆ ಅವಕಾಶಗಳನ್ನು ಕಲ್ಪಿಸುತ್ತವೆ ಮತ್ತು ಇನ್ನಷ್ಟು ಸುರಕ್ಷಾ ಕ್ರಮಗಳು ಅಗತ್ಯವಾಗುತ್ತವೆ.

ಆರೋಗ್ಯ ಸೇತು ತನ್ನ ನಿಖರತೆಯ ಬಗ್ಗೆ ಹೇಳಿಕೊಳ್ಳುತ್ತಿಲ್ಲ, ಹೀಗಾಗಿ ನಿರ್ದಿಷ್ಟವಾಗಿ ಇ-ಪಾಸ್ ಸೇವೆಯು ಕಳವಳಕಾರಿಯಾಗಿದೆ. ವಾಸ್ತವದಲ್ಲಿ ಈಗಾಗಲೇ ಚರ್ಚಿಸಿರುವಂತೆ ಅದು ಯಾವುದೇ ತಪ್ಪುಗಳಿಗೆ ಹೊಣೆಗಾರಿಕೆಯಿಂದ ಸರಕಾರವನ್ನು ಮುಕ್ತಗೊಳಿಸುತ್ತದೆ.

*ಒಂದು ನಿರ್ದಿಷ್ಟ ಅವಧಿಯ ಬಳಿಕ ಆ್ಯಪ್‌ನ ಕಾರ್ಯಾಚರಣೆಗಳು ಮತ್ತು ಆದೇಶಗಳು ಸ್ಥಗಿತಗೊಳ್ಳುವ ‘ಸನ್‌ಸೆಟ್’ ಕ್ಲಾಜ್ ಅಥವಾ ಸ್ವಯಂ ಸಮಾಪನದ ನಿಯಮವಿದೆಯೇ?

ಆರೋಗ್ಯ ಸೇತು ಆ್ಯಪ್ ಅನ್ನು ನಿಷ್ಕ್ರಿಯಗೊಳಿಸುವ ಸಂಭಾವ್ಯ ಅಂತಿಮ ದಿನಾಂಕದ ಬಗ್ಗೆ ಹಲವಾರು ಖಾಸಗಿತನ ಸಂರಕ್ಷಣೆ ತಜ್ಞರು ಮತ್ತು ರಾಜಕಾರಣಿಗಳು ಸಹ ಕೇಳಿದ್ದಾರೆ. ಯಾವುದೇ ರೂಪದ ಸಾರ್ವಜನಿಕ ನಿಗಾವು,ಅದು ಎಷ್ಟೇ ಒಳ್ಳೆಯ ಉದ್ದೇಶವವನ್ನು ಹೊಂದಿರಲಿ ಅಥವಾ ಎಷ್ಟೇ ಎಚ್ಚರಿಕೆಯಿಂದ ಪರಿಗಣಿಸಲ್ಪಟ್ಟಿರಲಿ,ಅಂತ್ಯಗೊಳ್ಳುವ ಅಗತ್ಯವಿದೆ ಎನ್ನುವುದು ಇದರ ಹಿಂದಿನ ಪರಿಕಲ್ಪನೆಯಾಗಿದೆ. ಇಂತಹ ದಿನಾಂಕವು ಈ ಆರೋಗ್ಯ ಸೇತು ಆ್ಯಪ್ ಕೊರೋನ ವೈರಸ್ ಬಿಕ್ಕಟ್ಟು ಅಂತ್ಯಗೊಂಡ ಬಳಿಕವೂ ಮುಂದುವರಿಯುವುದಿಲ್ಲ ಎನ್ನುವುದನ್ನು ಖಚಿತಪಡಿಸುತ್ತದೆ.

ಎಲ್ಲ ಸಂಪರ್ಕ ಜಾಡು ಪತ್ತೆ ಆ್ಯಪ್‌ಗಳು ಖಚಿತವಾದ ಮುಕ್ತಾಯ ದಿನಾಂಕಗಳನ್ನು ಹೊಂದಿರಬೇಕು ಮತ್ತು ಡಾಟಾ ರಕ್ಷಣೆಯ ನೀತಿಗಳಿಗೆ ಬದ್ಧವಾಗಿರಬೇಕು ಎಂದು ಐರೋಪ್ಯ ಸಂಸತ್ತು ಇತ್ತೀಚಿಗೆ ಅಂಗೀಕರಿಸಿರುವ ನಿರ್ಣಯದಲ್ಲಿ ಹೇಳಲಾಗಿದೆ.

   ಮುಂದಿನ ಒಂದೆರಡು ವರ್ಷಗಳ ಕಾಲ ಆರೋಗ್ಯ ಸೇತು ಆ್ಯಪ್ ಅಗತ್ಯವಾಗಲಿದೆ ಎಂಬ ಜಾವಡೇಕರ್ ಅವರ ವಿವಾದಾತ್ಮಕ ಹೇಳಿಕೆಯ ಹಿನ್ನೆಲೆಯಲ್ಲಿ ಇದು ಮುಖ್ಯವಾಗಿದ್ದರೂ ಭಾರತವು ಎಂದು ಕೊರೋನ ವೈರಸ್ ಪಿಡುಗಿನಿಂದ ಮುಕ್ತವಾಗಲಿದೆ ಎನ್ನುವ ಬಗ್ಗೆ ನಮಗೇ ಕಿಂಚಿತ್ ಕಲ್ಪನೆಯಿಲ್ಲದಿರುವಾಗ ಆ್ಯಪ್ ಮುಗಿತಾಯದ ನಿರ್ದಿಷ್ಟ ದಿನಾಂಕವನ್ನು ನೀಡುವಂತೆ ಸರಕಾರವನ್ನು ಕೇಳುವುದು ಕಷ್ಟವಾಗುತ್ತದೆ. ಆ್ಯಪ್ ಕುರಿತು ಹಲವಾರು ಕಳವಳಗಳು ವ್ಯಕ್ತವಾಗಿರುವಾಗ ಮತ್ತು ವಿಶೇಷವಾಗಿ ಭಾರದಲ್ಲಿ ಇನ್ನೂ ಸಾರ್ವತ್ರಿಕ ಡಾಟಾ ರಕ್ಷಣೆ ಕಾನೂನು ಇಲ್ಲದಿರುವಾಗ ಆರೋಗ್ಯ ಸೇತು ಕಾರ್ಯಕ್ರಮಕ್ಕೆ ನ್ಯಾಯಾಂಗ ಉಸ್ತುವಾರಿ ಅಥವಾ ಶಾಸನಾತ್ಮಕ ಬೆಂಬಲ,ಹೀಗೆ ಏನಾದರೊಂದನ್ನು ಹೊಂದುವ ಬಗ್ಗೆ ಸರಕಾರವು ಪರಿಶೀಲಿಸುವುದು ವಿವೇಚನೆಯಾಗುತ್ತದೆ.

*ಸ್ಮಾರ್ಟ್‌ಫೋನ್ ಅಥವಾ ಯಾವುದೇ ಮೊಬೈಲ್ ಹೊಂದಿರದ ಜನರ ಕಥೆ ಏನು? ಇನ್ನು ಮುಂದೆ ಪ್ರತಿಯೊಬ್ಬ ವ್ಯಕ್ತಿಯೂ ಮೊಬೈಲ್ ಫೋನ್ ಹೊಂದಿರುವುದು ಕಡ್ಡಾಯವಾಗಲಿದೆಯೇ? ಫೋನ್‌ನ್ನು ಸದಾ ಕಾಲ ಆನ್ ಆಗಿರದೆ ಓಡಾಡುವುದು ಅಪರಾಧವಾಗಲಿದೆಯೇ?

ಗೃಹ ಸಚಿವಾಲಯದ ಇತ್ತೀಚಿನ ಆದೇಶದ ಅತ್ಯಂತ ಅಪಾಯಕಾರಿ ಭಾಗವು ಬಹುಶಃ ಅದನ್ನು ಹೇಗೆ ಅನುಷ್ಠಾನಿಸಲಾಗುತ್ತದೆ ಎನ್ನುವುದಾಗಿದೆ. ಮುಂದಿನ ಎರಡು ವಾರಗಳಲ್ಲಿ ಕಚೇರಿಗಳಿಗೆ ತೆರಳುವ ಎಲ್ಲ ಉದ್ಯೋಗಿಗಳೂ ಆರೋಗ್ಯ ಸೇತು ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆಯೇ ಎನ್ನುವುದನ್ನು ಪರಿಶೀಲಿಸುವುದು ಕಾನೂನು ಜಾರಿ ಸಂಸ್ಥೆಗಳಿಗೆ ಸಾಧ್ಯವಿದೆಯೇ? ಅಥವಾ ಅದು ಕಳಪೆಯಾಗಿ ರೂಪಿಸಲಾಗಿರುವ ಸರಕಾರದ ಇತರ ಹಲವಾರು ಕಾನೂನುಗಳಂತೆ ದುರ್ಬಲರ ವಿರುದ್ಧ ಬಲಾತ್ಕಾರ ಮತ್ತು ತಾರತಮ್ಯಕ್ಕೆ ಅವಕಾಶವಾಗಲಿದೆಯೇ?

 * ಆರೋಗ್ಯ ಸೇತು ಆ್ಯಪ್‌ನಲ್ಲಿಯ ನಮ್ಮ ವೈಯಕ್ತಿಕ ಮಾಹಿತಿಗಳನ್ನು ಬಳಸಿಕೊಳ್ಳಲು ಯಾರಿಗೆ ಅಧಿಕಾರ ನೀಡಲಾಗಿದೆ ಮತ್ತು ನಮ್ಮ ಡಾಟಾದ ಹೆಚ್ಚುವರಿ ಅಥವಾ ಅನಧಿಕೃತ ಬಳಕೆಯಾಗುವುದಿಲ್ಲ ಎನ್ನುವುದಕ್ಕೆ ಯಾವ ಖಾತರಿಯಿದೆ?

ಲೊಕೇಷನ್ ಮತ್ತು ದೈಹಿಕ ಸಂಪರ್ಕ ಸೇರಿದಂತೆ ವೈಯಕ್ತಿಕ ಮಾಹಿತಿಗಳು ಬಳಕೆದಾರರ ಫೋನ್‌ನಲ್ಲಿ ಇರುತ್ತವೆ ಮತ್ತು ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಸರಕಾರವು ನಿರ್ವಹಿಸುವ ಸರ್ವರ್‌ಗೆ ರವಾನೆಯಾಗುತ್ತವೆ ಎನ್ನುವುದು ನಮಗೆ ಗೊತ್ತು.

 ಡಾಟಾ ನ್ಯಾಷನಲ್ ಇನ್ಫಾರ್ಮಾಟಿಕ್ಸ್ ಸೆಂಟರ್ (ಎನ್‌ಐಸಿ)ನ ಸರ್ವರ್‌ಗೆ ವರ್ಗಾವಣೆಗೊಳ್ಳುವವರೆಗೆ ಅಂದರೆ ಕನಿಷ್ಠ ಎಪ್ರಿಲ್ ಮಧ್ಯದವರೆಗೆ ಅಮೆಝಾನ್ ವೆಬ್ ಸರ್ವಿಸಸ್‌ನ ಸರ್ವರ್‌ನಲ್ಲಿ ಸ್ಟೋರ್ ಆಗಿತ್ತು ಮತ್ತು ಇದನ್ನು ‘ತಾತ್ಕಾಲಿಕ ಕ್ರಮ’ ಎಂದು ಮಾಧ್ಯಮಗಳು ಬಣ್ಣಿಸಿದ್ದವು. ಸರ್ವರ್‌ಗಳು ಎನ್‌ಐಸಿ ಇಲ್ಲವಾದರೂ ಡಾಟಾ ಎನ್‌ಐಸಿಯ ನಿಯಂತ್ರಣದಲ್ಲಿ ಇರುತ್ತದೆ ಎಂದು ಕತ್ರಗಡ್ಡ ಅವರು ಕಳೆದ ವಾರ ಸಂದರ್ಶನವೊಂದರಲ್ಲಿ ಪ್ರಚಲಿತ ಸ್ಥಿತಿಯ ಬಗ್ಗೆ ಹೇಳಿದ್ದರು.

ಎಲ್ಲ ವೈಯಕ್ತಿಕ ಮಾಹಿತಿಗಳು ವಿಶಿಷ್ಟ ಡಿಜಿಟಲ್ ಐಡಿ (ಡಿಐಡಿ)ಯಾಗಿ ಪರಿವರ್ತನೆಗೊಳ್ಳುತ್ತವೆ ಮತ್ತು ಸರಕಾರಿ ಸರ್ವರ್‌ಗೆ ಅಪ್‌ಲೋಡ್ ಆಗುತ್ತದೆ ಎಂದು ಆ್ಯಪ್‌ನ ಗೋಪ್ಯತೆ ನೀತಿಯು ಹೇಳುತ್ತದೆ.

ಬಳಕೆದಾರರು ಕೋವಿಡ್-19 ಸೋಂಕಿಗೊಳಗಾಗಿರುವ ಸಾಧ್ಯತೆಯಿದೆ ಎಂದು ಸರಕಾರವು ಅವರಿಗೆ ತಿಳಿಸುವುದು ಅಗತ್ಯವಾದಾಗ ಅಥವಾ ಕೋವಿಡ್-19ಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಮತ್ತು ಆಡಳಿತಾತ್ಮಕ ಹಸ್ತಕ್ಷೇಪದ ಅಗತ್ಯವಿದೆ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡುವಾಗ ಡಿಐಡಿಯು ಅವರ ವೈಯಕ್ತಿಕ ಮಾಹಿತಿಗಳೊಂದಿಗೆ ಕೇವಲ ಸಹಸಂಬಂಧವನ್ನು ಹೊಂದಿರುತ್ತದೆ.

ಕೋವಿಡ್-19 ಸೋಂಕು ಪ್ರಸಾರವನ್ನು ನಿಲ್ಲಿಸಲು ಅಗತ್ಯವಾದ ಕಾರ್ಯವನ್ನು ಮಾಡಲು ಈ ಡಾಟಾಕ್ಕೆ ಕೈಹಚ್ಚಲು ಆರೋಗ್ಯ ಸಚಿವಾಲಯ ಅಥವಾ ಆಡಳಿತದಲ್ಲಿನ ಯಾರಿಗೆ ಅವಕಾಶವಿರುತ್ತದೆ ಎನ್ನುವುದನ್ನು ನಿಖರವಾಗಿ ಉಲ್ಲೇಖಿಸಿ ನೀತಿ ಸಾರಾಂಶ ಅಥವಾ ಶ್ವೇತಪತ್ರವನ್ನು ಸರಕಾರವು ಪ್ರಕಟಿಸಿದರೆ ಅದು ಡಿಜಿಟಲ್ ವಿಶ್ವಾಸ ಕೊರತೆಯನ್ನು ತುಂಬುವಲ್ಲಿ ನೆರವಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)