varthabharthi



ಗಲ್ಫ್ ಸುದ್ದಿ

ಬಿ.ಆರ್. ಶೆಟ್ಟಿಯವರ ಎನ್‌ಎಮ್‌ಸಿ ಹೆಲ್ತ್‌ನ ವಿತರಣಾ ಘಟಕದ 300 ಉದ್ಯೋಗಿಗಳ ವಜಾ

ವಾರ್ತಾ ಭಾರತಿ : 5 May, 2020

ದುಬೈ, ಮೇ 5: ಕರ್ನಾಟಕ ಕರಾವಳಿಯ ಉದ್ಯಮಿ ಬಿ.ಆರ್. ಶೆಟ್ಟಿ ಯುಎಇಯಲ್ಲಿ ನಡೆಸುತ್ತಿರುವ ಉದ್ಯಮ ಎನ್‌ಎಮ್‌ಸಿ ಹೆಲ್ತ್ ನ ಘಟಕವಾಗಿರುವ ಎನ್‌ಎಮ್‌ಸಿ ಟ್ರೇಡಿಂಗ್ 300ಕ್ಕೂ ಅಧಿಕ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿದೆ ಹಾಗೂ ಇನ್ನೂ ಹಲವಾರು ಮಂದಿಯನ್ನು ವಜಾಗೊಳಿಸುವ ಸಾಧ್ಯತೆಯಿದೆ.

ಬ್ರಿಟನ್ ಹೈಕೋರ್ಟ್‌ನಿಂದ ನೇಮಿಸಲ್ಪಟ್ಟಿರುವ ಅಡಳಿತಗಾರರು ಕಂಪೆನಿಯ ನಿಯಂತ್ರಣವನ್ನು ವಹಿಸಿಕೊಂಡ ಬಳಿಕ ಈ ಬೆಳವಣಿಗೆ ನಡೆದಿದೆ. ಎನ್‌ಎಮ್‌ಸಿ ಟ್ರೇಡ್ ಎನ್‌ಎಮ್‌ಸಿ ಹೆಲ್ತ್‌ನ ವೈದ್ಯಕೀಯ ಉಪಕರಣಗಳು ಮತ್ತು ಪರ್ಸನಲ್ ಕೇರ್ ಬ್ರಾಂಡ್‌ಗಳನ್ನು ವಿತರಿಸುವ ಜವಾಬ್ದಾರಿಯನ್ನು ಹೊತ್ತಿದೆ.

ಆಡಳಿತಗಾರರು ಬರುವ ಮೊದಲೇ, ಕಂಪೆನಿಯ ಸ್ವಲ್ಪ ಪ್ರಮಾಣದ ಸಾಲವನ್ನು ತೀರಿಸುವುದಕ್ಕಾಗಿ ಎನ್‌ಎಮ್‌ಸಿ ಟ್ರೇಡಿಂಗನ್ನು ಮಾರಾಟ ಮಾಡುವ ಪ್ರಸ್ತಾಪವಿತ್ತು ಎಂದು ಎನ್‌ಎಮ್‌ಸಿ ಹೆಲ್ತ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಈಗ ಆಡಳಿತಗಾರರು ಕಂಪೆನಿಯ ನಿಯಂತ್ರಣವನ್ನು ತೆಗೆದುಕೊಂಡಿದ್ದಾರಾದರೂ, ಮೂಲ ಯೋಜನೆಯಲ್ಲಿ ಹೆಚ್ಚಿನ ಬದಲಾವಣೆಯಾಗುವ ಸಾಧ್ಯತೆಯಿಲ್ಲ. ಅಗತ್ಯವೆಂದು ಕಂಡುಬರದ ಎಲ್ಲವನ್ನೂ ಮಾರಾಟ ಮಾಡಲಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಎನ್‌ಎಮ್‌ಸಿ ಟ್ರೇಡಿಂಗ್‌ನಲ್ಲಿ 1,500ಕ್ಕೂ ಅಧಿಕ ಸಿಬ್ಬಂದಿಯಿದ್ದರು.

ಆಡಳಿತಾಧಿಕಾರಿಯ ನಿಯಂತ್ರಣದಲ್ಲಿ

ಬ್ರಿಟನ್ ಹೈಕೋರ್ಟ್‌ನ ಆದೇಶದಂತೆ ಅಬುಧಾಬಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಎನ್‌ಎಮ್‌ಸಿ ಹೆಲ್ತ್‌ನ ಆಡಳಿತವನ್ನು ಎಪ್ರಿಲ್ 9ರಂದು ಆಡಳಿತಾಧಿಕಾರಿ ವಹಿಸಿಕೊಂಡಿದ್ದಾರೆ. ಕಂಪೆನಿಗೆ ಅತ್ಯಧಿಕ ಸಾಲವನ್ನು ನೀಡಿರುವ ಯುಎಇಯ ಅಬುಧಾಬಿ ಕಮರ್ಶಿಯಲ್ ಬ್ಯಾಂಕ್ (ಎಡಿಸಿಬಿ) ಸಲ್ಲಿಸಿದ ಮನವಿಯಂತೆ ಬ್ರಿಟನ್ ಹೈಕೋರ್ಟ್ ಈ ಆದೇಶವನ್ನು ನೀಡಿತ್ತು.

ಅಬುಧಾಬಿ ಕಮರ್ಶಿಯಲ್ ಬ್ಯಾಂಕ್ ಎನ್‌ಎಮ್‌ಸಿ ಹೆಲ್ತ್‌ಗೆ ನೀಡಿರುವ 3 ಬಿಲಿಯ ದಿರ್ಹಮ್ (ಸುಮಾರು 6,183 ಕೋಟಿ ರೂಪಾಯಿ)ಗೂ ಅಧಿಕ ಮೊತ್ತದ ಸಾಲ ವಸೂಲಾಗಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)