varthabharthiವಿಶೇಷ-ವರದಿಗಳು

ಕೊರೋನ ಹಾವಳಿಯಿಂದ ಡಿಜಿಟಲ್ ಪೇಮೆಂಟ್‌ಗಳಿಗೆ ಉತ್ತೇಜನ

ವಾರ್ತಾ ಭಾರತಿ : 5 May, 2020

ಕೊರೋನ ವೈರಸ್ ಸಾಂಕ್ರಾಮಿಕ ಪಿಡುಗು ವಿಶ್ವದ ಆರ್ಥಿಕತೆ ಮತ್ತು ಹಣಕಾಸು ಮಾರುಕಟ್ಟೆಗಳಿಗೆ ಬಹು ದೊಡ್ಡ ಬೆದರಿಕೆಯಾಗಿ ಪರಿಣಮಿಸಿದೆ. ಈ ಪಿಡುಗಿನ ವಿರುದ್ಧ ಇಡೀ ವಿಶ್ವವೇ ಹೋರಾಡುತ್ತಿದೆ.

ಕೊರೋನ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ವಿವಿಧ ಮುನ್ನೆಚ್ಚರಿಕೆ ಕ್ರಮಗಳ ಪೈಕಿ ಡಿಜಿಟಲ್ ಪಾವತಿ ವಿಧಾನಗಳ ಬಳಕೆಗೆ ಹೆಚ್ಚಿನ ಉತ್ತೇಜನ ದೊರೆಯುತ್ತಿದೆ. ಸಂಪರ್ಕರಹಿತ ವಹಿವಾಟುಗಳನ್ನು ನಡೆಸಲು ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಬಳಸುವಂತೆ ಆರ್‌ಬಿಐ ಕೂಡ ಜನರನ್ನು ಆಗ್ರಹಿಸಿದೆ.

ವಿಮಾನಯಾನ ಸಂಸ್ಥೆಗಳು, ಪ್ರಯಾಣ, ಚಿಲ್ಲರೆ ಕ್ಷೇತ್ರ, ಥಿಯೇಟರ್‌ಗಳು, ರೆಸ್ಟಾರಂಟ್‌ಗಳು ಮತ್ತು ಎಂಟರ್‌ಟೇನ್‌ಮೆಂಟ್ ಪಾರ್ಕ್‌ಗಳು ಕೋವಿಡ್-19ರ ನೇರ ಹೊಡೆತಕ್ಕೆ ಸಿಲುಕಿರುವುದರಿಂದ ಡಿಜಿಟಲ್ ಪಾವತಿ ಬಳಕೆಯು ಕಡಿಮೆಯಾಗಿದ್ದರೂ,ಕೆಲವು ಹೊಸ ಕ್ಷೇತ್ರಗಳು ತಲೆಯೆತ್ತಿವೆ. ಸಣ್ಣ ಕಿರಾಣಿ ಅಂಗಡಿಗಳು,ಓವರ್ ದಿ ಟಾಪ್ ಮಾಧ್ಯಮ ಸೇವೆ (ಒಟಿಟಿ),ಆನ್‌ಲೈನ್ ಗೇಮಿಂಗ್,ಇ-ಲರ್ನಿಂಗ್,ಎಟಿಎಂ ವಿಥ್‌ಡ್ರಾವಲ್‌ಗಳು ಮತ್ತು ಬ್ರಾಡ್‌ಬ್ಯಾಂಡ್ ಬಳಕೆ ಇವು ಡಿಜಿಟಲ್ ಬಳಕೆ ವಿಧಾನಗಳಿಗೆ ಉತ್ತೇಜನವನ್ನು ನೀಡುತ್ತಿವೆ.

ಈಗಿನ ಲಾಕ್‌ಡೌನ್ ಮತ್ತು ಕೊರೋನೋತ್ತರ ಸ್ಥಿತಿಯಲ್ಲಿಯೂ ನಾವು ಡಿಜಿಟಲ್ ಪಾವತಿ ವಿಧಾನಗಳನ್ನು ನಮ್ಮ ದಿನನಿತ್ಯದ ವ್ಯವಹಾರಗಳಲ್ಲಿ ಅಳವಡಿಸಿಕೊಳ್ಳಬೇಕಿದೆ. ಇಲ್ಲಿವೆ ಅಂತಹ ಕೆಲವು ಡಿಜಿಟಲ್ ಪಾವತಿ ವಿಧಾನಗಳು.....

* ಕ್ಯೂಆರ್ ಕೋಡ್

 ಕ್ವಿಕ್ ರಿಸ್ಪಾನ್ಸ್ (ಕ್ಯೂಆರ್) ಕೋಡ್ ಆಧರಿತ ಪಾವತಿಗಳು ಆಧುನಿಕ ಪೇಮೆಂಟ್ ಆ್ಯಪ್‌ಗಳು ಮತ್ತು ಸಾಧನಗಳ ಪೈಕಿ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. ಇಂಧನ,ದಿನಸಿ,ಆಹಾರ,ಪ್ರಯಾಣ ಮತ್ತು ಇತರ ಹಲವಾರು ಸೇವೆಗಳಿಗೆ ಪಾವತಿಸಲು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ ಸಾಕು. ಕ್ಯೂಆರ್ ಕೋಡ್‌ಗಳನ್ನು ಪೇಪರ್‌ನಿಂದ ಅಥವಾ ಸ್ಕ್ರೀನ್‌ನಿಂದ ಸ್ಕಾನ್ ಮಾಡಬಹುದು. ಇದು ದಿಢೀರ್ ಪಾವತಿ ಸೌಲಭ್ಯದೊಂದಿಗೆ ಲೋಪರಹಿತ ಸುರಕ್ಷತೆಯನ್ನೂ ಹೊಂದಿದೆ. ಗ್ರಾಹಕ ಕ್ಯೂಆರ್ ಕೋಡ್ ಮೂಲಕ ಹಣವನ್ನು ಪಾವತಿಸುವ ಬಯಕೆ ವ್ಯಕ್ತಪಡಿಸಿದಾಗ ವ್ಯಾಪಾರಿಯು ಟರ್ಮಿನಲ್‌ನಲ್ಲಿ ಕ್ಯೂಆರ್ ಕೋಡ್ ಅನ್ನು ಆಯ್ಕೆಮಾಡಿಕೊಂಡು ಬಿಲ್ ಮೊತ್ತವನ್ನು ನಮೂದಿಸಬೇಕು. ಇದು ಪಿಒಎಸ್ ಸ್ಕ್ರೀನ್‌ನಲ್ಲಿ ಡೈನಮಿಕ್ ಕ್ಯೂಆರ್ ಕೋಡ್ ಅನ್ನು ಸೃಷ್ಟಿಸುತ್ತದೆ ಮತ್ತು ಇದನ್ನು ಗ್ರಾಹಕ ಬಳಸುವ ಯಾವುದೇ ಮೊಬೈಲ್ ಆಧಾರಿತ ಕ್ಯೂಆರ್ ಆ್ಯಪ್‌ನಿಂದ ಸ್ಕಾನ್ ಮಾಡಬಹುದು. ವ್ಯಾಪಾರಿಗೆ ಪಿಒಎಸ್ ಟರ್ಮಿನಲ್‌ನಲ್ಲಿಹೂಡಿಕೆ ಸಾಧ್ಯವಿಲ್ಲದಿದ್ದರೆ ಆತ/ಆಕೆ ಸ್ಟಾಟಿಕ್/ಡೈನಮಿಕ್ ಕ್ಯೂಆರ್‌ಗಳನ್ನು ಸೃಷ್ಟಿಸಲು ಮೊಬೈಲ್ ಆಧಾರಿತ ಕ್ಯೂಆರ್ ಆ್ಯಪ್‌ನ್ನು ಬಳಸಬಹುದು. ಕ್ಯೂಆರ್ ವಹಿವಾಟುಗಳಲ್ಲಿಯ ತಪ್ಪುಗಳನ್ನು ಮತ್ತು ಯಾವುದೇ ವಹಿವಾಟು ಸಂಬಂಧಿ ಮಾಹಿತಿಗಳನ್ನು ನಮೂದಿಸುವ ಅಗತ್ಯವನ್ನು ತಗ್ಗಿಸುತ್ತದೆ.

* ಯುಪಿಐ

 ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಅಭಿವೃದ್ಧಿಗೊಳಿಸಿರುವ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ದಿಢೀರ್ ಪಾವತಿ ವ್ಯವಸ್ಥೆಯಾಗಿದೆ. ಗ್ರಾಹಕ ಯುಪಿಐ ಪಾವತಿ ವಿಧಾನವನ್ನು ಕೋರಿದಾಗ ವ್ಯಾಪಾರಿಯು ತನ್ನ ಪಿಒಎಸ್ ಟರ್ಮಿನಲ್‌ನಲ್ಲಿ ಯುಪಿಐ ಪೇಮೆಂಟ್ ಆಪ್ಶನ್‌ನ್ನು ಆಯ್ಕೆ ಮಾಡಿಕೊಂಡು ಬಿಲ್ ಮೊತ್ತವನ್ನು ನಮೂದಿಸಬೇಕಾಗುತ್ತದೆ. ಇದು ಪಿಒಎಸ್ ಸ್ಕ್ರೀನ್‌ನಲ್ಲಿ ಡೈನಮಿಕ್ ಕ್ಯೂಆರ್ ಕೋಡ್ ಅನ್ನು ಸೃಷ್ಟಿಸುತ್ತದೆ ಮತ್ತು ಇದನ್ನು ಗ್ರಾಹಕ ಬಳಸುವ ಯಾವುದೇ ಮೊಬೈಲ್ ಆಧಾರಿತ ಯುಪಿಐ ಆ್ಯಪ್‌ನಿಂದ ಸ್ಕಾನ್ ಮಾಡಬಹುದು.

* ಪೇಮೆಂಟ್ ಗೇಟ್‌ವೇ

 ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಒದಗಿಸುವ ಪೇಮೆಂಟ್ ಗೇಟ್‌ವೇ ವರ್ಚುವಲ್ ಟರ್ಮಿನಲ್ ಅಥವಾ ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿ ನಮೂದಿಸುವ ಕ್ರೆಡಿಟ್ ಕಾರ್ಡ್ ನಂಬರ್‌ಗಳಂತಹ ಸೂಕ್ಷ್ಮ ಮಾಹಿತಿಗಳು ಸುರಕ್ಷಿತವಾಗಿ ವಿವಿಧ ಚಾನೆಲ್‌ಗಳ ಮೂಲಕ ಹಾದು ಹೋಗುವಂತೆ ನೋಡಿಕೊಳ್ಳುತ್ತದೆ. ಕೋವಿಡ್-19 ಪಿಡುಗಿನಿಂದಾಗಿ ಜನರು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಬೇಕಾದ ಈ ಸಮಯದಲ್ಲಿ ದಿನಸಿ,ಮನೋರಂಜನೆ ಮತ್ತು ಆಹಾರಕ್ಕಾಗಿ ಇ-ಕಾಮರ್ಸ್ ವೆಬ್‌ಸೈಟ್‌ಗಳು ಮತ್ತು ಆ್ಯಪ್‌ಗಳಲ್ಲಿ ಬೇಡಿಕೆ ಸಲ್ಲಿಸುವುದು ಹೆಚ್ಚತೊಡಗಿದೆ. ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಇಂತಹ ಯಾವುದೇ ಸೇವೆಯನ್ನು ಪಡೆದುಕೊಳ್ಳುವ ವ್ಯಕ್ತಿ ಪೇಮೆಂಟ್ ಗೇಟ್‌ವೇ ಮೂಲಕ ಹಣವನ್ನು ಪಾವತಿಸಬಹುದು.

* ಸಂಪರ್ಕರಹಿತ ಹಣಪಾವತಿ

 ಪಿಒಎಸ್ ಟರ್ಮಿನಲ್‌ನಲ್ಲಿಯ ದಿ ನಿಯರ್ ಫೀಲ್ಡ್ ಕಮ್ಯುನಿಕೇಷನ್ ಸೌಲಭ್ಯವು ವ್ಯಾಪಾರಿಯ ಅಂಗಡಿಯಲ್ಲಿ ಖರೀದಿಗಾಗಿ ಆತನಿಗೆ ಕಾಂಟ್ಯಾಕ್ಟ್‌ಲೆಸ್ ಪೇಮೆಂಟ್ ಅಥವಾ ಸಂಪರ್ಕರಹಿತ ಹಣಪಾವತಿಯನ್ನು ಸುಲಭವಾಗಿಸಿದೆ. ಗ್ರಾಹಕರು ಕಾಂಟ್ಯಾಕ್ಟ್‌ಲೆಸ್ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳ ಮೂಲಕ ಅಥವಾ ಪಿಒಎಸ್ ಟರ್ಮಿನಲ್‌ನ ಮೇಲೆ ಸ್ಮಾರ್ಟ್ ಫೋನ್‌ಗಳನ್ನು ಟ್ಯಾಪ್ ಮಾಡುವ ಮೂಲಕ ಮೊಬೈಲ್ ಆ್ಯಪ್‌ನಲ್ಲಿಯ ಟ್ಯಾಪ್ ಆ್ಯಂಡ್ ಪೇ ಸೌಲಭ್ಯದ ಮೂಲಕ ಪಾವತಿಯನ್ನು ಮಾಡಬಹುದು.

* ಎಸ್‌ಎಂಎಸ್ ಆಧಾರಿತ ಹಣಪಾವತಿ

ವಿವಿಧ ಪಿಒಎಸ್ ಅಂಶಗಳ ಸುತ್ತ ಕಾರ್ಯಾಚರಿಸುವ ಮೊಬೈಲ್ ಪೇಮೆಂಟ್‌ಗಳ ವಿವಿಧ ವಿಧಗಳಿವೆ. ಎಸ್‌ಎಂಎಸ್ ಪೇಮೆಂಟ್‌ಗಳು ಗ್ರಾಹಕ ತನ್ನ ಖರೀದಿಗಳಿಗಾಗಿ ಅಥವಾ ಪಡೆದ ಸೇವೆಗಳಿಗಾಗಿ ವ್ಯಾಪಾರಿ ಕಳುಹಿಸಿದ ಎಸ್‌ಎಂಎಸ್ ಲಿಂಕ್‌ನ ಮೂಲಕ ಹಣವನ್ನು ಪಾವತಿಸುವ ವಿಧಾನವಾಗಿದೆ. ರೆಸ್ಟಾರೆಂಟ್‌ಗಳು ಮತ್ತು ಸಲೂನ್‌ಗಳಂತಹ,ಬುಕಿಂಗ್/ರಿಸರ್ವೇಷನ್‌ಗಾಗಿ ಮುಂಗಡ ಹಣವನ್ನು ಬಯಸುವ ಸೇವಾ ಉದ್ಯಮಗಳಲ್ಲಿ ಎಸ್‌ಎಂಎಸ್ ಆಧಾರಿತ ಪಾವತಿಗಳು ಅಧಿಕವಾಗಿವೆ.

* ಪ್ರಿಪೇಡ್ ಕಾರ್ಡ್‌ಗಳು

ಕ್ಲೋಸ್ಡ್-ಲೂಪ್ ಪ್ರಿಪೇಡ್ ಕಾರ್ಡ್‌ಗಳನ್ನು ಅವುಗಳನ್ನು ವಿತರಿಸಿದ ವ್ಯಾಪಾರಿಯ ಬಳಿ ಮಾತ್ರ ನಗದೀಕರಿಸಬಹುದು. ಇನ್ನೊಂದೆಡೆ ಸೆಮಿ-ಕ್ಲೋಸ್ಡ್ ಲೂಪ್ ಕಾರ್ಡ್ಸ್ ಅಥವಾ ರಿಸ್ಟ್ರಿಕ್ಟೆಡ್ ಓಪನ್-ಲೂಸ್ ಕಾರ್ಡ್‌ಗಳು ವಿವಿಧ ವ್ಯಾಪಾರಿಗಳ ಬಳಿ,ಆದರೆ ಶಾಪಿಂಗ್ ಸೆಂಟರ್‌ನೊಳಗೆ ಮಾತ್ರ ನಗದೀಕರಿಸಬಹುದಾದ ಶಾಪಿಂಗ್ ಸೆಂಟರ್ ಕಾರ್ಡ್‌ಗಳಂತಿರುತ್ತವೆ. ಈ ಕಾರ್ಡ್‌ಗಳನ್ನು ಟಾಪ್‌ಅಪ್/ವಿಥ್‌ಡ್ರಾವಲ್ ಉದ್ದೇಶಗಳಿಗಾಗಿ ಪಿಒಎಸ್ ಟರ್ಮಿನಲ್‌ನಲ್ಲಿ ಸ್ವೈಪ್ ಮಾಡಬಹುದು ಅಥವಾ ಇನ್ಸರ್ಟ್ ಮಾಡಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)